P. O. C ബൈബിള്
ಹಳೆಯ ಒಡಂಬಡಿಕೆ
ವಿಮೋಚನಕಾಂಡ
17ನೇ ಅಧ್ಯಾಯ
- Verse 1: ಇಸ್ರಯೇಲರು ಸರ್ವೇಶ್ವರನ ಅಪ್ಪಣೆಯ ಪ್ರಕಾರ ಸೀನ್ ಎಂಬ ಮರುಭೂಮಿಯಿಂದ ಹೊರಟು ಮುಂದಕ್ಕೆ ಪ್ರಯಾಣ ಮಾಡಿ ರೆಫೀದೀಮಿನಲ್ಲಿ ಇಳಿದುಕೊಂಡರು.
- Verse 2: ಅಲ್ಲಿ ಕುಡಿಯುವುದಕ್ಕೆ ನೀರಿರಲಿಲ್ಲ. ಜನರು ಮೋಶೆಯ ಸಂಗಡ ಜಗಳವಾಡುತ್ತಾ, “ನಮಗೆ ಕುಡಿಯುವುದಕ್ಕೆ ನೀರು ತೋರಿಸಬೇಕು,” ಎಂದು ಹೇಳಿದರು. ಆಗ ಮೋಶೆ, “ನೀವು ನನ್ನ ಸಂಗಡ ವಾದಿಸುವುದೇಕೆ? ಸರ್ವೇಶ್ವರನನ್ನು ಏಕೆ ಪರೀಕ್ಷಿಸುತ್ತೀರಿ?” ಎಂದನು.
- Verse 3: ಅಲ್ಲಿ ಜನರು ನೀರಿಲ್ಲದೆ ಬಾಯಾರಿಕೆಯ ಬೇಸರದಿಂದ ಮೋಶೆಯ ವಿರುದ್ಧ ಗೊಣಗುಟ್ಟಿದರು. “ನೀನು ನಮ್ಮನ್ನು, ನಮ್ಮ ಮಕ್ಕಳನ್ನು ಹಾಗು ದನಕರುಗಳನ್ನು ಈಜಿಪ್ಟಿನಿಂದ ಕರೆದು ತಂದದ್ದು ಏಕೆ? ನೀರಿಲ್ಲದೆ ಸಾಯಿಸುವುದಕ್ಕೋ?” ಎಂದು ದೂರಿದರು.
- Verse 4: ಆಗ ಮೋಶೆ ಸರ್ವೇಶ್ವರನಿಗೆ ಮೊರೆಯಿಟ್ಟನು, “ಈ ಜನರಿಗಾಗಿ ನಾನೇನು ಮಾಡಲಿ? ಅವರು ನನ್ನನ್ನು ಕಲ್ಲೆಸೆದು ಕೊಲ್ಲುವಂತಿದ್ದಾರೆ” ಎಂದು ಪ್ರಾರ್ಥಿಸಿದನು.
- Verse 5: ಅದಕ್ಕೆ ಸರ್ವೇಶ್ವರ, “ನೀನು ನೈಲ್ ನದಿಯನ್ನು ಹೊಡೆದ ಕೋಲನ್ನು ಕೈಯಲ್ಲಿ ಹಿಡಿದುಕೊಂಡು, ಇಸ್ರಯೇಲರ ಹಿರಿಯರಲ್ಲಿ ಕೆಲವರನ್ನು ಕರೆದುಕೊಂಡು, ನಾನು ತೋರಿಸುವ ಸ್ಥಳಕ್ಕೆ ಜನರ ಮುಂದೆ ಹೋಗು.
- Verse 6: ಅಲ್ಲೇ ಹೋರೇಬಿನಲ್ಲಿರುವ ಬಂಡೆಯೊಂದರ ಮೇಲೆ ನಾನೇ ನಿನ್ನ ಮುಂದೆ ನಿಲ್ಲುವೆನು. ಆ ಬಂಡೆಯನ್ನು ನೀನು ಹೊಡೆ. ಆಗ ಅದರಿಂದ ನೀರು ಹೊರಡುವುದು; ಜನರು ಕುಡಿಯಲಿ,” ಎಂದು ಅಪ್ಪಣೆಕೊಟ್ಟರು. ಹಾಗೆಯೇ ಮೋಶೆ ಇಸ್ರಯೇಲರ ಹಿರಿಯರ ಕಣ್ಣೆದುರಿನಲ್ಲೆ ಮಾಡಿದನು.
- Verse 7: ಸರ್ವೇಶ್ವರ ಸ್ವಾಮಿ ತಮ್ಮ ಮಧ್ಯೆ ಇದ್ದಾರೋ ಇಲ್ಲವೋ ಎಂದು ಇಸ್ರಯೇಲರು ಅಲ್ಲಿ ಪರೀಕ್ಷಿಸಿದ್ದರಿಂದ ಮೋಶೆ ಆ ಸ್ಥಳಕ್ಕೆ ‘ಮಸ್ಸಾ’ ಎಂತಲೂ ಜನರು ತನ್ನೊಡನೆ ವಾಗ್ವಾದ ಮಾಡಿದ್ದರಿಂದ ‘ಮೆರೀಬಾ’ ಎಂತಲೂ ಹೆಸರಿಟ್ಟನು.
- Verse 8: ಅಮಾಲೇಕ್ಯರು ರೆಫೀದೀಮಿನಲ್ಲಿ ಇಸ್ರಯೇಲರ ಮೇಲೆ ಯುದ್ಧಮಾಡುವುದಕ್ಕೆ ಬಂದರು.
- Verse 9: ‘ಮೋಶೆ ಯೆಹೋಶುವನಿಗೆ, “ನೀನು ಯೋಧರನ್ನು ಆರಿಸಿಕೊಂಡು ನಾಳೆ ನಮ್ಮ ಪರವಾಗಿ ಹೊರಟು ಅಮಾಲೇಕ್ಯರೊಡನೆ ಯುದ್ಧಮಾಡು. ನಾನು ದೇವದಂಡವನ್ನು ಕೈಯಲ್ಲಿ ಹಿಡಿದುಕೊಂಡು ಗುಡ್ಡದ ತುದಿಯಲ್ಲಿ ನಿಂತುಕೊಳ್ಳುವೆನು,” ಎಂದು ಹೇಳಿದನು.
- Verse 10: ಮೋಶೆಯ ಅಪ್ಪಣೆಯ ಮೇರೆಗೆ ಯೆಹೋಶುವನು ಅಮಾಲೇಕ್ಯರ ಸಂಗಡ ಯುದ್ಧಮಾಡಲು ಹೊರಟನು. ಮೋಶೆ, ಆರೋನ ಹಾಗು ಹೂರ ಈ ಮೂವರು ಗುಡ್ಡದ ತುದಿಗೆ ಏರಿದರು.
- Verse 11: ಮೋಶೆ ತನ್ನ ಕೈಗಳನ್ನು ಮೇಲಕ್ಕೆ ಎತ್ತಿರುವಾಗಲೆಲ್ಲಾ ಇಸ್ರಯೇಲರು ಜಯಶೀಲರಾಗುತ್ತಿದ್ದರು, ಇಳಿಸುವಾಗಲೆಲ್ಲಾ ಅಮಾಲೇಕ್ಯರು ಜಯಶೀಲರಾಗುತ್ತಿದ್ದರು.
- Verse 12: ಹೀಗಿರಲು ಮೋಶೆಯ ಕೈಗಳು ಆಯಾಸಗೊಳ್ಳುತ್ತಿದ್ದುದರಿಂದ ಆರೋನ ಮತ್ತು ಹೂರನು ಒಂದು ಕಲ್ಲನ್ನು ತಂದಿಟ್ಟು ಅದರ ಮೇಲೆ ಮೋಶೆಯನ್ನು ಕುಳ್ಳಿರಿಸಿದರು. ಅಲ್ಲದೆ ಬಲಗಡೆ ಒಬ್ಬನು ಎಡಗಡೆ ಒಬ್ಬನು ನಿಂತು ಅವನ ಕೈಗಳಿಗೆ ಆಧಾರಕೊಟ್ಟರು. ಈ ರೀತಿಯಾಗಿ ಅವನ ಕೈಗಳು ಹೊತ್ತು ಮುಳುಗುವ ತನಕ ಇಳಿಯದೆ ನಿಂತೇ ಇರುವಂತೆ ಮಾಡಿದರು.
- Verse 13: ಹೀಗೆ ಯೆಹೋಶುವನು ಅಮಾಲೇಕ್ಯರ ಯೋಧರನ್ನು ಕತ್ತಿಗೆ ತುತ್ತಾಗಿಸಿ ಅವರನ್ನು ಸೋಲಿಸಿದನು.
- Verse 14: ಆಗ ಸರ್ವೇಶ್ವರ, “ಭೂಮಿಯ ಮೇಲೆ ಅಮಾಲೇಕ್ಯರ ಹೆಸರೇ ಇಲ್ಲದಂತೆ ಮಾಡುವೆನು ಎಂಬ ಈ ಮಾತನ್ನು ಜ್ಞಾಪಕಾರ್ಥವಾಗಿ ಪುಸ್ತಕದಲ್ಲಿ ಬರೆ ಮತ್ತು ಯೆಹೋಶುವನಿಗೆ ಮನದಟ್ಟಾಗುವಂತೆ ಮಾಡು” ಎಂದು ಮೋಶೆಗೆ ಹೇಳಿದರು.
- Verse 15: ಆ ಸ್ಥಳದಲ್ಲಿ ಮೋಶೆ ಒಂದು ಬಲಿಪೀಠವನ್ನು ಕಟ್ಟಿಸಿ ಅದಕ್ಕೆ, ‘ಯಾವ್ವೆನಿಸ್ಸಿ’ ಎಂದು ಹೆಸರಿಟ್ಟನು.
- Verse 16: ಅಲ್ಲದೆ, “ಸರ್ವೇಶ್ವರನ ಪತಾಕೆಯನ್ನು ಎತ್ತಿಹಿಡಿಯಿರಿ. ಅಮಾಲೇಕ್ಯರ ಮೇಲೆ ಸರ್ವೇಶ್ವರನಿಗೆ ತಲತಲಾಂತರಕ್ಕೂ ಯುದ್ಧವಿರುವುದು,” ಎಂದು ಹೇಳಿದನು.