పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
46ನೇ ಅಧ್ಯಾಯ
- Verse 1: ದೇವರೆಮಗೆ ಆಶ್ರಯ ದುರ್ಗ I ಸಂಕಟದಲಿ ಸಿದ್ಧ ಸಹಾಯಕ II
- Verse 2: ಕಡಲಲ್ಲಿ ಗುಡ್ಡಗಳು ಮುಳುಗಿದರೂ ದಿಗಿಲಿಲ್ಲ I ಪೊಡವಿ ಕಂಪಿಸಿದರು ನಮಗೇನು ಭಯವಿಲ್ಲ II
- Verse 3: ಸಮುದ್ರ ಭೋರ್ಗರೆದರೇನು? ನೊರೆಕಾರಿದರೇನು? I ಅದರೊಡನೆ ಪರ್ವತಗಳು ಅಲುಗಾಡಿದರೇನು? II ನಮ್ಮ ಕಡೆಗಿರುವನು ಸೇನಾಧೀಶ್ವರ ಪ್ರಭುವು I ಯಕೋಬ ಕುಲದೇವನು ನಮಗಾಶ್ರಯ ದುರ್ಗವು II
- Verse 4: ನದಿಯೊಂದು ಆನಂದಗೊಳಿಸುವುದು ದೇವನಗರವನು I ಪುನೀತಗೊಳಿಸುವುದು ಪರಾತ್ಪರನ ನಿವಾಸವನು II
- Verse 5: ದೇವನಿರುವನಾ ನಗರ ಮಧ್ಯೆ, ಅಳಿವಿಲ್ಲ ಅದಕೆ I ಉದಯಕಾಲದಲೆ ದೇವ ಬರುವನು ಅದರ ಸಹಾಯಕೆ II
- Verse 6: ನಡುಗಿದವು ರಾಷ್ಟ್ರಗಳು, ಉಡುಗಿದವು ರಾಜ್ಯಗಳು I ದೇವರ ಗರ್ಜನೆಗೆ ಕರಗಿತು ಧರೆಯೆಲ್ಲವು II
- Verse 7: ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು I ಯಕೋಬ ಕುಲದೇವರು ನಮಗಾಶ್ರಯ ದುರ್ಗವು II
- Verse 8: ಪ್ರಭುವಿನ ಕಾರ್ಯಗಳ ನೋಡಬನ್ನಿ I ಇಳೆಯೊಳಗೆಸಗಿದ ಪವಾಡಗಳನು ನೋಡಿ II
- Verse 9: ಜಗದೆಲ್ಲೆಡೆ ಕದನ ಕಾಳಗ ನಿಲ್ಲಿಸಿಹನು I ಬಿಲ್ಲು ಭಲ್ಲೆಗಳನು ಮುರಿದು ಹಾಕಿದನು I ರಥಗಳನು ಬೆಂಕಿಯಿಂದ ಸುಟ್ಟುಹಾಕಿದನು II
- Verse 10: ‘ಶಾಂತರಾಗಿರಿ, ತಿಳಿಯಿರಿ ನಾನು ದೇವನೆಂದು I ಜನಕ್ಕೂ ಜನಾಂಗಕ್ಕೂ ನಾನಧಿಪತಿಯೆಂದು’ II
- Verse 11: ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು I ಯಕೋಬ ಕುಲದೇವರು ನಮಗಾಶ್ರಯ ದೇವರು II