P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
86ನೇ ಅಧ್ಯಾಯ
1 : ಹೇ ಪ್ರಭು, ನೀಡೆನಗೆ ಸದುತ್ತರವನು I ಕಿವಿಗೊಡು, ದೀನನು, ದಲಿತನು ನಾನು II
2 : ಕಾಪಾಡು ಪ್ರಭು, ನಾ ನಿನ್ನ ಭಕ್ತನು I ಉದ್ಧರಿಸು ನಿನ್ನ ನಂಬಿದ ದಾಸನನು II
3 : ನೀನೆನಗೆ ದೇವನು, ಕರುಣಿಸೆನ್ನನು I ದಿನವೆಲ್ಲ ಪ್ರಭು, ನಿನಗೆ ಮೊರೆಯಿಡುವೆನು II
4 : ನಿನ್ನ ದಾಸನಿಗೆ ನೀಡು ಮನದಾನಂದವನು I ನಿನಗೆ ಅಭಿಮುಖವಾಗಿಸಿರುವೆ ಎನ್ನಾತ್ಮವನು II
5 : ಪ್ರಭು, ನೀನು ದಯಾವಂತನು, ಕ್ಷಮಿಸುವವನು I ಮೊರೆಯಿಡುವವರಿಗೆ ನೀನು ಕೃಪಾಪೂರ್ಣನು II
6 : ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ I ನನ್ನ ವಿಜ್ಞಾಪನೆಗಳ ಕೋರಿಕೆಗೆ II
7 : ಸಂಕಟಬಂದಾಗ ನಿನಗೆ ಮೊರೆಯಿಡುವೆ I ಸದುತ್ತರ ಪಾಲಿಸುವೆಯೆಂದು ನಂಬಿರುವೆ II
8 : ದೇವರುಗಳಲಿ ಪ್ರಭು, ನಿನ್ನಂಥವನಿಲ್ಲ I ನಿನ್ನ ಮಹತ್ಕಾರ್ಯಗಳಿಗೆ ಸಾಟಿಯೇ ಇಲ್ಲ II
9 : ಬರುವುವು ನೀನುಂಟುಮಾಡಿದ ಸಕಲ ಜನಾಂಗಗಳು I ನಿನ್ನ ನಾಮವನು ಘನಪಡಿಸಲು, ನಿನಗೆ ಅಡ್ಡಬೀಳಲು II
10 : ಪ್ರಭು, ನೀನೊಬ್ಬನೇ ದೇವನು I ಅದ್ಭುತಶಾಲಿ, ಮಹೋನ್ನತನು II
11 : ನಿನ್ನ ಸತ್ಯಪಥದಲಿ ನಾ ನಡೆವಂತೆ I ಬೋಧಿಸೆನಗೆ ಪ್ರಭು, ನಿನ್ನ ಮಾರ್ಗವನು II ನಿನ್ನ ನಾಮದಲಿ ಭಯಭಕ್ತಿಯಿರುವಂತೆ I ಅನುಗ್ರಹಿಸೆನಗೆ ನೀ ಏಕಾಗ್ರತೆಯನು II
12 : ಮಾಡುವೆ ದೇವಾ, ನಿನ್ನ ಗುಣಗಾನವನು ಶ್ರದ್ಧೆಯಿಂದ I ಘನಪಡಿಸುವೆ ಸ್ವಾಮಿ, ನಿನ್ನ ಶ್ರೀನಾಮವನು ಅನವರತ II
13 : ನೀನೆನಗೆ ತೋರಿಸಿರುವ ಕರುಣೆ ಮಹತ್ತರವಾದುದಯ್ಯಾ I ಪಾತಾಳದಿಂದ ನನ್ನ ಪ್ರಾಣವನು ಉಳಿಸಿದೆಯಯ್ಯಾ II
14 : ಗರ್ವಿಗಳೆದ್ದಿಹರು ದೇವಾ, ನನ್ನ ವಿರುದ್ಧವಾಗಿ I ನನ್ನ ಪ್ರಾಣಕೆ ಕಾದಿಹರು ಕ್ರೂರಿಗಳು ಗುಂಪಾಗಿ I ಕಾಣುತ್ತಿಹರವರು ನಿನ್ನನು ಪ್ರಭು, ಅಲಕ್ಷ್ಯವಾಗಿ II
15 : ಪ್ರಭು, ನೀ ದಯಾಳು, ದೇವಾ ನೀ ಕರುಣಾಮೂರ್ತಿ I ಸಹನಶೀಲನು, ಸತ್ಯಸ್ವರೂಪಿ, ಪ್ರೇಮಮೂರ್ತಿ II
16 : ಕಟಾಕ್ಷವಿಟ್ಟು ಕರುಣಿಸೆನ್ನನು I ನೀಡು ನಿನ್ನ ದಾಸನಿಗೆ ಬಲವನು I ರಕ್ಷಿಸು ನಿನ್ನ ದಾಸಿಯ ಮಗನನು II
17 : ನಿನ್ನ ನೆರವು, ಸಾಂತ್ವನ, ನನಗಿದೆಯೆಂದು I ನೀಡೊಂದು ಪ್ರಭು, ಶುಭಸೂಚನೆಯನು I ಅದನೋಡಿ ಶತ್ರು ಪಡಲಿ ಲಜ್ಜೆಯನು II