ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
35ನೇ ಅಧ್ಯಾಯ
1 : ನನ್ನೊಡನೆ ವ್ಯಾಜ್ಯ ಮಾಡುವವರೊಡನೆ ವ್ಯಾಜ್ಯ ಮಾಡು I ನನ್ನೊಡನೆ ಕದನ ಮಾಡುವವರೊಡನೆ ಪ್ರಭು, ಕದನ ಮಾಡು
2 : ಖಡ್ಗ ಗುರಾಣಿಗಳನು ಧರಿಸಿಕೊ I ನನಗೆ ರಕ್ಷಣೆಯಾಗಿ ನಿಂತುಕೊ II
3 : ತಡೆ ನೀನು ಬಿಲ್ಲು ಬರ್ಜಿಯಿಂದ ಬೆನ್ನಟ್ಟಿಬರುವ ವೈರಿಯನು I ನೀಡೆನ್ನ ಮನಕೆ, ನೀನೆ ರಕ್ಷಕನೆಂಬ ಅಭಯವನು II
4 : ನನ್ನ ಕೊಲೆಗೆ ಯತ್ನಿಸುವವನು ತಲೆ ತಗ್ಗಿಸಲಿ ನಿರಾಶೆಗೊಂಡು I ನನಗೆ ಕೇಡನು ಮಾಡುವವರು ಓಡಿಹೋಗಲಿ ಗಲಿಬಿಲಿಗೊಂಡು II
5 : ಬಿರುಗಾಳಿಗೆ ತರಗೆಲೆಯಂತೆ ತೂರಿಹೋಗಲಿ I ಪ್ರಭುವಿನ ದೂತನವರನು ಬೆನ್ನಟ್ಟಿ ಹೋಗಲಿ II
6 : ಇಳಿಜಾರು, ಕಾರಿರುಳು ಇರುವ ಹಾದಿಯಲಿ I ಪ್ರಭುವಿನ ದೂತನವರನು ಓಡಿಸಿಬಿಡಲಿ II
7 : ನಿಷ್ಕಾರಣ ಕೊಲೆಮಾಡಲೆನ್ನ ಬಲೆಯೊಡ್ಡಿಹರು I ಆ ಕಾರಣ ಪ್ರಾಣ ತೆಗೆಯಲು ಗುಂಡಿ ತೋಡಿಹರು II
8 : ಒಡ್ಡಿದ ಬಲೆಯಲಿ ಒಡ್ಡಿದವನೇ ಪಟಕ್ಕನೆ ಸಿಕ್ಕಿಬೀಳಲಿ I ತೋಡಿದ ಗುಣಿಯಲಿ ತೋಡಿದವನೇ ತಟಕ್ಕನೆ ಬಿದ್ದುಹೋಗಲಿ II
9 : ಆಗೆನ್ನ ಮನವು ಆನಂದಗೊಳ್ಳುವುದು ಪ್ರಭುವಿನಲಿ I ಆಹ್ಲಾದಗೊಳ್ಳುವುದು ಆತನಿತ್ತಾ ರಕ್ಷಣೆಯಲಿ II
10 : “ಬಿಡಿಸಿದೆ ಬಡವನನು ದರೋಡೆಗಾರರಿಂದ I ರಕ್ಷಿಸಿದೆ ದುರ್ಬಲನನು ಬಲಾಢ್ಯರಿಂದ I ಹೇ ಪ್ರಭು, ನಿನಗೆ ಸಮಾನರಾರೆಂದು” I ಹೊಗಳುವುವು ನನ್ನೆಲುಬುಗಳೊಂದೊಂದು II
11 : ಸುಳ್ಳುಸಾಕ್ಷಿಗಳೆದ್ದಿಹರು ನನಗೆ ವಿರುದ್ಧ I ಹೊರಿಸುತಿಹರು ನನಗೇ ತಿಳಿಯದ ಅಪರಾಧ II
12 : ಎಸಗುತಿಹರು ಉಪಕಾರಕೆ ಅಪಕಾರ I ಮಾಡಿಹರೆನ್ನನು ನಿರ್ಗತಿಕ ಪಿಂಜಾರ II
13 : ಅವರು ಅಸ್ವಸ್ಥರಾಗಿರಲು ಶೋಕವಸ್ತ್ರಧಾರಿಯಾದೆ I ತಲೆಬಾಗಿ ಜಪಿಸಿದೆ, ನಾ ಮನನೊಂದು ಉಪವಾಸವಿದ್ದೆ II
14 : ಶೋಕತಪ್ತನಾದೆ ಗೆಳೆಯನಿಗೊ ಬಳಗದವನಿಗೊ ಎಂಬಂತೆ I ಅತ್ತು ಪ್ರಲಾಪಿಸಿದೆ ತಾಯನು ಕಳೆದುಕೊಂಡ ತಬ್ಬಲಿಯಂತೆ II
15 : ನನಗೆ ಆಪತ್ತೊದಗಲದೊ ಸಂತೋಷಿಸಿದರು ಸಭೆಗೂಡಿ I ಸೂರೆಮಾಡಿದರು ತಿರುತಿರುಗಿ ಆ ಭ್ರಷ್ಟರೊಟ್ಟುಗೂಡಿ II
16 : ಅಣಕಿಸಿ ಹಾಸ್ಯಮಾಡಿದರು ಕೀಟಲೆಗಾರರಂತೆ I ಕಟಕಟನೆ ಹಲ್ಲುಕಡಿದರು ಕಡುಕೋಪಿಗಳಂತೆ II
17 : ಇನ್ನೆಷ್ಟರವರೆಗೆ ಪ್ರಭು, ನೀ ಸುಮ್ಮನಿರುವೆ ನೋಡುತ? I ಬಿಡಿಸೆನ್ನ ಹಾವಳಿಯಿಂದ, ಸಿಂಹಗಳ ಬಾಯಿಂದ II
18 : ಮಹಾಸಭೆಯಲ್ಲಾಗ ನಿನ್ನನು ಕೊಂಡಾಡುವೆ I ಬಹುಜನರ ಮುಂದೆ ನಿನ್ನ ಗುಣಗಾನ ಮಾಡುವೆ II
19 : ಕಳ್ಳ ವೈರಿಗಳೆನ್ನ ನೋಡಿ ಹಿಗ್ಗಲು ಬಿಡಬೇಡ I ಈ ಕಾರಣ ಶತ್ರುಗಳು ಕಣ್ಣು ಮಿಟುಕಿಸುವುದು ಬೇಡ II
20 : ಸಮಾಧಾನಕರವಲ್ಲ ಅವರಾಡುವ ನುಡಿಗಳು I ಮುಗ್ಧನಾಡಿಗರನು ಮೋಸಗೊಳಿಸುವಾ ಮಾತುಗಳು II
21 : ಎನ್ನೀ ಪರಿಸ್ಥಿತಿಯನು ಕಂಡು ಅವರು ಬಾಯಿ ಕಿಸಿದು I ನುಡಿದರು, “ಆಹಾ! ಕಣ್ಣಾರೆ ಕಂಡೆವಲ್ಲಾ” ಎಂದು II
22 : ನೀನೇ ನೋಡಿರುವೆ ಪ್ರಭು, ಇನ್ನು ಸುಮ್ಮನಿರಬೇಡ I ನನ್ನೊಡೆಯಾ, ನನಗಿನ್ನಾದರು ದೂರವಾಗಿರಬೇಡ II
23 : ನನ್ನ ನ್ಯಾಯವನು ನಿರ್ಣಯಿಸು ದೇವಾ ಎಚ್ಚೆತ್ತು I ನನ್ನ ವಿವಾದವನು ವಿಚಾರಿಸು ಪ್ರಭು ನೀನೆದ್ದು ನಿಂತು II
24 : ಹೇ, ದೇವಾ, ನಿನ್ನ ನೀತಿಗನುಸಾರ ತೀರ್ಪುಕೊಡು I ಶತ್ರುಗಳೆನ್ನ ವಿಷಯದಲ್ಲಿ ಹರ್ಷಗೊಳ್ಳದಂತೆ ಮಾಡು II
25 : ತಮ್ಮಾಸೆ ಕೈಗೂಡಿತೆನಲು ಅವರಿಗಿರಬಾರದು ಅವಕಾಶ I ಅವನನು ಕಬಳಿಸಿಬಿಟ್ಟೆವು ಎಂದು ಕೊಚ್ಚಿಕೊಳ್ಳುವ ಸಂತೋಷ II
26 : ನನಗಾದ ಕೇಡನು ನೋಡಿ ಹಿಗ್ಗುವವರಿಗಾಗಲಿ ಸಿಗ್ಗು I ನನ್ನನು ಕುಗ್ಗಿಸಿ ಮೆರೆವವರನು ಮುಚ್ಚಲಿ ಲಜ್ಜೆಯ ಮುಸುಕು II
27 : ನನಗೆ ನ್ಯಾಯ ಬಯಸುವವರು ನಲಿದು ಮಾಡಲಿ ಜಯಕಾರ I “ದಾಸನ ಹಿತೈಷಿ ಪ್ರಭುಗೆ, ಜೈ” ಎಂಬ ನಿರಂತರ ಪ್ರಚಾರ II
28 : ಆಗೆನ್ನ ಜಿಹ್ವೆ ಸಾರುವುದು ನಿನ್ನ ನೀತಿಯನು I ದಿನವೆಲ್ಲಾ ವರ್ಣಿಸುವುದು ನಿನ್ನ ಕೀರ್ತಿಯನು II