P. O. C ബൈബിള്
ಹಳೆಯ ಒಡಂಬಡಿಕೆ
ದಾನಿಯೇಲನು
12ನೇ ಅಧ್ಯಾಯ
1 : “ಆ ಕಾಲದಲ್ಲಿ ನಿನ್ನ ಜನರ ಪಕ್ಷ ವಹಿಸುವ ಮಹಾದೂತನಾದ ಮಿಕಾಯೇಲನು ಕಾಣಿಸಿಕೊಳ್ಳುವನು. ಮೊತ್ತಮೊದಲು, ಮಾನವ ಜನಾಂಗ ಉಂಟಾದಂದಿನಿಂದ ಅಂದಿನವರೆಗೆ ಸಂಭವಿಸದ ಘೋರ ಸಂಕಟ ಉಂಟಾಗುವುದು. ಆಗ ನಿನ್ನ ಜನರಲ್ಲಿ ಯಾರ ಯಾರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಇರುವುದೋ ಅವರೆಲ್ಲರು ಜೀವೋದ್ಧಾರವನ್ನು ಪಡೆಯುವರು.
2 : ಸತ್ತು ಧೂಳಿ ಮಣ್ಣಿನಲ್ಲಿ ‘ದೀರ್ಘನಿದ್ರೆ’ಮಾಡುತ್ತಿರುವ ಅನೇಕರು ಏಳುವರು. ಎಚ್ಚೆತ್ತವರಲ್ಲಿ ಕೆಲವರು ನಿತ್ಯಜೀವವನ್ನು ಅನುಭವಿಸುವರು; ಕೆಲವರು ತಿರಸ್ಕೃತರಾಗಿ ನಿತ್ಯ ನಿಂದನೆಗೆ ಗುರಿಯಾಗುವರು.
3 : ಬುದ್ಧಿವಂತರು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಕ್ಕೂ ನಕ್ಷತ್ರಗಳಂತೆ ಹೊಳೆಯುವರು.
4 : “ದಾನಿಯೇಲನೇ, ನೀನು ಈ ಮಾತುಗಳನ್ನು ಮುಚ್ಚಿಡು; ಇವುಗಳನ್ನು ಬರೆಯುವ ಗ್ರಂಥಕ್ಕೆ ಮುದ್ರೆಹಾಕು; ಅಂತ್ಯಕಾಲದವರೆಗೆ ಮರೆಯಾಗಿರಲಿ. ಬಹುಜನರು ಅತ್ತಿತ್ತ ಅಲೆದಾಡುವರು (ಸತ್ಯಕ್ಕಾಗಿ). ಅಧರ್ಮ ಹೆಚ್ಚುತ್ತಿರುವುದು.”
5 : ಕೂಡಲೆ ದಾನಿಯೇಲನಾದ ನಾನು ಮತ್ತೆ ಇಬ್ಬರು ವ್ಯಕ್ತಿಗಳನ್ನು ಕಂಡೆ. ಅವರಲ್ಲಿ ಒಬ್ಬನು ನದಿಯ ಈ ದಡದಲ್ಲಿ, ಇನ್ನೊಬ್ಬನು ಆ ದಡದಲ್ಲಿ ನಿಂತಿದ್ದರು.
6 : ಇವರಲ್ಲಿ ಒಬ್ಬನು, ನದಿಯ ನೀರಿನ ಮೇಲ್ಗಡೆ ನಾರಿನ ಹೊದಿಕೆಯನ್ನು ಹೊದ್ದು ನಿಂತಿದ್ದ ದೂತನನ್ನು ನೋಡಿ, “ಈ ಆಶ್ಚರ್ಯಕಾರ್ಯಗಳು ನೆರವೇರಲು ಎಷ್ಟುಕಾಲ ಹಿಡಿಯುವುದು?” ಎಂದು ಕೇಳಿದನು.
7 : ಆ ದೂತ ಎಡಬಲಗೈಗಳನ್ನು ಆಕಾಶದ ಕಡೆಗೆ ಎತ್ತಿಕೊಂಡು, “ಶಾಶ್ವತ ಜೀವಸ್ವರೂಪನಾಣೆ, ಒಂದು ಯುಗ, ಎರಡು ಯುಗ, ಮತ್ತು ಅರ್ಧ ಯುಗ ಕಳೆಯಬೇಕು. ದೇವಜನರಿಗಾಗುವ ಹಿಂಸೆಬಾಧೆಗಳು ಸಂಪೂರ್ಣವಾಗಿ ನಿಂತಮೇಲೆ ಈ ಕಾರ್ಯಗಳೆಲ್ಲ ಮುಕ್ತಾಯವಾಗುವುವು,” ಎಂಬುದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು.
8 : ನನಗೆ ಅದು ಕೇಳಿಸಿತ್ತಾದರೂ ಅರ್ಥವಾಗಲಿಲ್ಲ. ಆಗ ನಾನು, “ಎನ್ನೊಡೆಯಾ, ಈ ಕಾರ್ಯಗಳ ಪರಿಣಾಮವೇನು?” ಎಂದು ಪ್ರಶ್ನೆಮಾಡಿದೆ.
9 : ಅವನು, “ದಾನಿಯೇಲನೇ ಹೋಗು; ಈ ಮಾತುಗಳು ಅಂತ್ಯಕಾಲದವರೆಗೂ ಮುಚ್ಚಲ್ಪಟ್ಟು ಮುದ್ರಿತವಾಗಿವೆ.
10 : ಅನೇಕರು ತಮ್ಮನ್ನು ಶುದ್ಧೀಕರಿಸಿ, ಶುಭ್ರಮಾಡಿಕೊಂಡು ಶೋಧಿತರಾಗುವರು. ದುಷ್ಟರು ದುಷ್ಟರಾಗಿಯೇ ನಡೆಯುವರು. ಅವರಲ್ಲಿ ಯಾರಿಗೂ ವಿವೇಕವಿರದು. ಬುದ್ಧಿವಂತರಿಗೆ ವಿವೇಕವಿರುವುದು.
11 : ಅನುದಿನದ ಬಲಿ ನಿಂತುಹೋಗುವುದು. ‘ವಿನಾಶಕರ ವಿಕಟ ಮೂರ್ತಿ’ ಪ್ರತಿಷ್ಠಿತವಾದ ಮೇಲೆ 1290 ದಿನಗಳು ಕಳೆಯಬೇಕು.
12 : 1335 ದಿನಗಳ ಮಟ್ಟಿಗೆ ವಿಶ್ವಾಸದಿಂದ ಕಾದಿರುವವರು ಧನ್ಯರು!
13 : ನೀನು ಹೋಗಿ ಅಂತ್ಯದವರೆಗೆ ವಿಶ್ವಾಸದಿಂದಿರು. ನೀನು ‘ದೀರ್ಘನಿದ್ರೆ’ಯನ್ನು ಹೊಂದಿ, ನಿನಗೆ ನಿರ್ಧರಿಸಲಾದ ಸ್ಥಾನವನ್ನು ಪಡೆಯಲು ಯುಗಸಮಾಪ್ತಿಯಲ್ಲಿ ಎದ್ದುಬರುವೆ,” ಎಂದು ಹೇಳಿದನು.