पवित्र बाइबिल
ಹಳೆಯ ಒಡಂಬಡಿಕೆ
ಯೋವೇಲ
3ನೇ ಅಧ್ಯಾಯ
- Verse 1: ಸರ್ವೇಶ್ವರಸ್ವಾಮಿಯ ನುಡಿಯಿದು: “ಆ ದಿನಗಳಲ್ಲಿ ಜುದೇಯ ಹಾಗೂ ಜೆರುಸಲೇಮಿನ ಸಿರಿಸಂಪತ್ತನ್ನು ಮರಳಿ ಕೊಡುವೆನು.
- Verse 2: ಎಲ್ಲಾ ರಾಷ್ಟ್ರಗಳನ್ನು ನ್ಯಾಯತೀರ್ಪಿನ ಜೊಸೆಫಾತ್ ಕಣಿವೆಗೆ ಬರಮಾಡುವೆನು. ನನ್ನ ಪ್ರಜೆಯೂ ಸ್ವಜನರೂ ಆದ ಇಸ್ರಯೇಲರಿಗೆ ಅವರು ಮಾಡಿದ ಹಿಂಸೆಗಾಗಿ ನ್ಯಾಯಕೇಳುವೆನು. ಅವರು ನನ್ನ ಪ್ರಜೆಯನ್ನು ದೇಶವಿದೇಶಗಳಿಗೆ ಚದರಿಸಿದ್ದಾರೆ. ನನ್ನ ನಾಡನ್ನು ಹಂಚಿಕೊಂಡಿದ್ದಾರೆ.
- Verse 3: ನನ್ನ ಜನರಿಗಾಗಿ ಚೀಟುಹಾಕಿದ್ದಾರೆ. ವೇಶ್ಯಾಚಾರಕ್ಕಾಗಿ, ಮದ್ಯಪಾನಕ್ಕಾಗಿ, ಗಂಡುಮಕ್ಕಳನ್ನೂ ಹೆಣ್ಣುಮಕ್ಕಳನ್ನೂ ಮಾರಾಟ ಮಾಡಿದ್ದಾರೆ.
- Verse 4: “ಟೈರ್, ಸಿದೋನ್ ಮತ್ತು ಫಿಲಿಷ್ಟಿಯ ಪ್ರಾಂತ್ಯಗಳೇ, ನನ್ನ ಮೇಲೆ ನಿಮಗಿರುವ ದೂರು ಯಾವುದು? ನನಗೆ ಪ್ರತೀಕಾರ ಮಾಡಬೇಕೆಂದಿರುವಿರೋ? ಹಾಗೇನಾದರೂ ಮಾಡಿದ್ದೇ ಆದರೆ, ನೀವು ಮಾಡಿದ ಕೇಡನ್ನು ತಡಮಾಡದೆ ನಿಮ್ಮ ತಲೆಗೇ ತರುವೆನು.
- Verse 5: ನನ್ನ ಬೆಳ್ಳಿಬಂಗಾರಗಳನ್ನು ಅತ್ಯಮೂಲ್ಯವಾದ ಬೊಕ್ಕಸಗಳನ್ನು ದೋಚಿಕೊಂಡು ನಿಮ್ಮ ದೇವಾಲಯಗಳಿಗೆ ಕೊಂಡೊಯ್ದಿದ್ದೀರಿ.
- Verse 6: ಜುದೇಯ ಮತ್ತು ಜೆರುಸಲೇಮಿನ ಜನರನ್ನು ಗ್ರೀಕರಿಗೆ ಮಾರಿಬಿಟ್ಟಿದ್ದೀರಿ; ಅವರನ್ನು ತಾಯ್ನಾಡಿನಿಂದ ದೂರಮಾಡಿದ್ದೀರಿ.
- Verse 7: ಇಂತಿರಲು, ನೀವು ಅವರನ್ನು ಮಾರಿದ ಊರುಗಳಿಂದ ದಂಗೆಯೆದ್ದು ಹೊರಬರುವಂತೆ ಅವರನ್ನು ಹುರಿದುಂಬಿಸುವೆನು. ನೀವು ಮಾಡಿದ ಕೇಡನ್ನು ನಿಮ್ಮ ತಲೆಗೇ ತರುವೆನು.
- Verse 8: ನಿಮ್ಮ ಪುತ್ರಪುತ್ರಿಯರನ್ನು ಯೆಹೂದ್ಯರಿಗೆ ಮಾರುವೆನು, ಅವರು ಆ ಮಕ್ಕಳನ್ನು ದೂರದಲ್ಲಿರುವ ಶೆಬದವರಿಗೆ ಮಾರಿಬಿಡುವರು. ಸರ್ವೇಶ್ವರನಾದ ನನ್ನ ನುಡಿಯಿದು.”
- Verse 9: “ರಾಷ್ಟ್ರಗಳಿಗೆ ಹೀಗೆ ಪ್ರಕಟಿಸಿರಿ: ರಾಷ್ಟ್ರಗಳೇ, ಯುದ್ಧಸನ್ನದ್ಧರಾಗಿರಿ. ಶೂರರನ್ನು ಎಚ್ಚರಗೊಳಿಸಿರಿ; ಯೋಧರೆಲ್ಲರೂ ಒಟ್ಟುಗೂಡಲಿ; ಯುದ್ಧಕ್ಕೆ ಹೊರಡಲಿ.
- Verse 10: ನಿಮ್ಮ ನೇಗಿಲುಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನಾಗಿ ಮಾಡಿರಿ; ಕುಡುಗೋಲುಗಳನ್ನು ಭರ್ಜಿಗಳನ್ನಾಗಿ ಮಾರ್ಪಡಿಸಿರಿ; ಬಲಹೀನನು ಸಹ ಬಲಾಢ್ಯನಂತೆ ಯುದ್ಧಕ್ಕೆ ನಿಂತುಕೊಳ್ಳಲಿ.
- Verse 11: ಸುತ್ತಮುತ್ತಲಿನ ರಾಷ್ಟ್ರಗಳೇ, ನೀವೆಲ್ಲರೂ ತ್ವರೆಮಾಡಿ ಕೂಡಿಬನ್ನಿ,” ಸರ್ವೇಶ್ವರ, ನಿಮ್ಮ ಯೋಧರನ್ನು ರಣರಂಗಕ್ಕೆ ಇಳಿಸಿರಿ.
- Verse 12: “ರಾಷ್ಟ್ರಗಳು ಎಚ್ಚೆತ್ತು ಸರ್ವೇಶ್ವರಸ್ವಾಮಿಯ ನ್ಯಾಯತೀರ್ಪಿನ ಕಣಿವೆಗೆ ಇಳಿಯಲಿ. ಸುತ್ತಮುತ್ತ ನೆರೆದಿರುವ ರಾಷ್ಟ್ರಗಳಿಗೆ ನ್ಯಾಯತೀರಿಸಲು ಅಲ್ಲಿ ನಾನು ಆಸೀನನಾಗಿರುವೆನು.
- Verse 13: ಸ್ವಾಮಿಯ ಶೂರರೇ, ಕುಡುಗೋಲನ್ನು ಹಾಕಿರಿ; ಫಲ ಪಕ್ವವಾಗಿದೆ. ಬನ್ನಿ, ದ್ರಾಕ್ಷಿಯನ್ನು ತುಳಿಯಿರಿ; ಆಲೆಯು ಭರ್ತಿಯಾಗಿದೆ, ತೊಟ್ಟಿಗಳು ತುಂಬಿತುಳುಕುತ್ತಿವೆ; ರಾಷ್ಟ್ರಗಳ ದುಷ್ಟತನವು ಮಿತಿಮೀರಿದೆ.
- Verse 14: “ಇಗೋ, ನ್ಯಾಯತೀರ್ಪಿನ ಕಣಿವೆಯಲ್ಲಿ ತಂಡೋಪತಂಡವಾದ ಜನಸ್ತೋಮ! ತೀರ್ಪಿನ ಕಣಿವೆಯಲ್ಲಿರುವವರಿಗೆ ಸರ್ವೇಶ್ವರನ ದಿನ ಸನ್ನಿಹಿತ!
- Verse 15: ಸೂರ್ಯಚಂದ್ರಗಳು ಮಂಕಾಗುತ್ತವೆ. ನಕ್ಷತ್ರಗಳು ಕಾಂತಿಗುಂದುತ್ತವೆ.
- Verse 16: ಸ್ವಾಮಿ ಸಿಯೋನಿನಿಂದ ಗರ್ಜಿಸುತ್ತಾರೆ, ಜೆರುಸಲೇಮಿನಿಂದ ಅವರ ಧ್ವನಿ ಮೊಳಗುತ್ತದೆ. ಭೂಮ್ಯಾಕಾಶಗಳು ನಡುಗುತ್ತವೆ. ಆದರೂ ಸರ್ವೇಶ್ವರ ತಮ್ಮ ಜನರಿಗೆ ಆಶ್ರಯ; ಇಸ್ರಯೇಲರಿಗೆ ರಕ್ಷಣಾ ದುರ್ಗ.
- Verse 17: “ಇಸ್ರಯೇಲರೇ, ಕೇಳಿ, ಪವಿತ್ರಪರ್ವತವಾದ ಸಿಯೋನಿನಲ್ಲಿ ನೆಲೆಯಾಗಿರುವ ನಿಮ್ಮ ಸರ್ವೇಶ್ವರಸ್ವಾಮಿ ದೇವರು ನಾನೇ ಎಂದು ಆಗ ನಿಮಗೆ ಮನದಟ್ಟಾಗುವುದು. ಜೆರುಸಲೇಮ್ ಪುಣ್ಯಕ್ಷೇತ್ರವೆನಿಸಿಕೊಳ್ಳುವುದು. ಪರಕೀಯರು ಅದನ್ನೆಂದಿಗೂ ಆಕ್ರಮಿಸರು.
- Verse 18: ಆ ದಿನಗಳಲ್ಲಿ ಬೆಟ್ಟಗುಡ್ಡಗಳಿಂದ ದ್ರಾಕ್ಷಾರಸ ಮತ್ತು ಹಾಲುತುಪ್ಪ ಹರಿಯುವುದು. ಜುದೇಯ ನಾಡಿನ ಹಳ್ಳಕೊಳ್ಳಗಳು ನೀರಿನಿಂದ ತುಂಬಿರುವುವು. ದೇವಾಲಯದಿಂದ ನೀರು ಚಿಮ್ಮಿಬಂದು ಆಕಾಚಿಯದ ಹಳ್ಳವನ್ನು ತಂಪಾಗಿಸುವುದು.
- Verse 19: “ಈಜಿಪ್ಟ್ ಪಾಳುಬೀಳುವುದು, ಎದೋಮ್ ಬೆಂಗಾಡಾಗುವುದು. ಕಾರಣ, ಈ ಎರಡು ಪಟ್ಟಣದವರು ಜುದೇಯ ನಾಡಿನ ಮೇಲೆ ಧಾಳಿಮಾಡಿದ್ದಾರೆ. ನಿರ್ದೋಷಿಗಳ ರಕ್ತವನ್ನು ಸುರಿಸಿದ್ದಾರೆ.
- Verse 20: ಹತರಾದವರು ನಿರ್ದೋಷಿಗಳೆಂದು ನಿರ್ಣಯಿಸುವೆನು. ಕೊಲೆಪಾತಕರನ್ನು ದಂಡಿಸಿಯೇ ತೀರುವೆನು.
- Verse 21: ಆದರೆ ಜುದೇಯ ನಾಡು, ಜೆರುಸಲೇಮ್ ನಗರ ಜನಭರಿತವಾಗಿ ಇರುವುದು. ಸರ್ವೇಶ್ವರಸ್ವಾಮಿಯಾದ ನಾನು ಸಿಯೋನ್ ಪರ್ವತದಲ್ಲಿ ನೆಲೆಯಾಗಿರುವೆನು.”