పరిశుద్ధ గ్రంథము
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
20ನೇ ಅಧ್ಯಾಯ
- Verse 1: ದ್ರಾಕ್ಷಾರಸದಿಂದ ನಗೆಯಾಟ, ಮಧ್ಯದಿಂದ ಕೂಗಾಟ; ಇವುಗಳಿಂದ ತೂರಾಟಕ್ಕೆ ತುತ್ತಾಗುವವನು ಜ್ಞಾನಿಯಲ್ಲ.
- Verse 2: ರಾಜನು ಗರ್ಜಿಸುವ ಸಿಂಹದಂತೆ ಭಯಂಕರನು; ಅವನನ್ನು ಕೆಣಕುವವನು ಪ್ರಾಣಕ್ಕೆ ಅಪಾಯ ತಂದುಕೊಳ್ವನು.
- Verse 3: ಕಲಹಕ್ಕೆ ದೂರವಿರುವವನು ಮಾನಕ್ಕೆ ಯೋಗ್ಯನು; ಕಲಹಕ್ಕೆ ಕೈಹಾಕುವ ಪ್ರತಿಯೊಬ್ಬನು ಮೂರ್ಖನು.
- Verse 4: ಮೈಗಳ್ಳನು ಮಳೆಗಾಲದಲ್ಲೂ ಹೊಲ ಉಳಲಾರನು; ಸುಗ್ಗಿಕಾಲದಲ್ಲಿ ಅಂಗಲಾಚಿದರೂ ಅವನಿಗೆ ಬೆಳೆಸಿಗಲಾರದು.
- Verse 5: ಮಾನವನ ಅಂತರಾಲೋಚನೆಗಳು ಆಳವಾದ ಜಲನಿಧಿ; ವಿವೇಕಿಯಾದ ವ್ಯಕ್ತಿ ಅದನ್ನು ಹೊರ ತೆಗೆಯಬಲ್ಲ ಸೇದಿ.
- Verse 6: ಸ್ನೇಹಿತರೆಂದು ಹೇಳಿಕೊಳ್ಳುವವರು ಬಹುಮಂದಿ; ಆದರೆ ನಂಬಿಗಸ್ತ ಸ್ನೇಹಿತನು ಸಿಗುವುದೆಲ್ಲಿ?
- Verse 7: ನಿರ್ದೋಷಿಗಳಾಗಿ ನಡೆಯುತ್ತಾರೆ ನೀತಿವಂತರು; ಅವರು ಗತಿಸಿದ ಮೇಲೂ ಅವರ ಸಂತತಿಯವರು ಭಾಗ್ಯವಂತರು.
- Verse 8: ರಾಜನು ನ್ಯಾಯಾಸನದ ಮೇಲೆ ವಿರಾಜಿಸುವಾಗ ಕೆಟ್ಟತನವನ್ನು ತೂರಿಬಿಡುವನು ದೃಷ್ಟಿಯಿಂದ.
- Verse 9: “ಹೃದಯವನ್ನು ಪರಿಶುದ್ಧವಾಗಿ ಇಟ್ಟುಕೊಂಡಿದ್ದೇನೆ; ಪಾಪವಿಮುಕ್ತನಾಗಿ ಪವಿತ್ರನಾಗಿದ್ದೇನೆ” ಎಂದು ಹೇಳಬಲ್ಲವನಾರು?
- Verse 10: ಕಳ್ಳ ಕಲ್ಲುತೂಕಗಳನ್ನೂ ಕಳ್ಳ ಅಳತೆಪಾತ್ರೆಗಳನ್ನೂ ಬಳಸುವವರನ್ನು ಕಂಡರೆ ಸರ್ವೇಶ್ವರನಿಗೆ ಅಸಹ್ಯ.
- Verse 11: ಹುಡುಗನಾದರೂ ನಡತೆಯಲ್ಲೇ ತೋರ್ಪಡಿಸಿಕೊಳ್ಳುವನು ತನ್ನ ಗುಣ ಶುದ್ಧವೋ, ಸತ್ಯವೋ ಎಂಬುದನ್ನು.
- Verse 12: ಕೇಳುವ ಕಿವಿ, ನೋಡುವ ಕಣ್ಣು ಇವೆರಡನ್ನು ಉಂಟುಮಾಡಿದವ ಸರ್ವೇಶ್ವರ.
- Verse 13: ನಿದ್ದೆಯಲ್ಲೆ ನಿರತನಾಗಿರಬೇಡ, ಬಡವನಾಗಿ ಬಿಡುವೆ. ಕಣ್ಣು ತೆರೆದು ದುಡಿ, ಹೊಟ್ಟೆತುಂಬ ಊಟ ಪಡೆವೆ.
- Verse 14: ಕೊಳ್ಳುವಾಗ ‘ಅದು ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲ’ ಅನ್ನುತ್ತಾನೆ; ಕೊಂಡಾದ ಮೇಲೆ ಮಾಡಿದ ಚೌಕಾಶಿಗಾಗಿ ಹೆಚ್ಚಳ ಪಡುತ್ತಾನೆ.
- Verse 15: ಹೊನ್ನು ಉಂಟು, ಹವಳದ ರಾಶಿ ಉಂಟು; ಆದರೆ ತಿಳುವಳಿಕೆಯುಳ್ಳ ತುಟಿಗಳು ಬೆಲೆಮೀರಿದ ಆಭರಣಗಳು.
- Verse 16: ಅಪರಿಚಿತನಿಗೆ ಹೊಣೆಯಾದವನ ಬಟ್ಟೆ ಕಿತ್ತುಕೊ; ಅಪರಿಚಿತಳಿಗೆ ಹೊಣೆ ನಿಲ್ಲುವವನನ್ನೆ ಒತ್ತೆ ಇಟ್ಟುಕೊ.
- Verse 17: ವಂಚಿಸಿ ಪಡೆದ ಊಟ ಬಲು ರುಚಿ; ಆಮೇಲೆ ಬಾಯಿ ತುಂಬ ಕಲ್ಲುಜಲ್ಲಿ.
- Verse 18: ಉದ್ದೇಶಗಳು ಕೈಗೂಡುವುವು ಹಿತಾಲೋಚನೆಯಿಂದ; ಬುದ್ಧಿವಂತರ ಆಲೋಚನೆ ಕೇಳದೆ ಹೂಡಬೇಡ ಯುದ್ಧ.
- Verse 19: ಗುಟ್ಟನ್ನು ರಟ್ಟು ಮಾಡದಿರನು ಚಾಡಿಕೋರ; ತುಟಿ ಬಿಗಿಹಿಡಿಯದವನ ಗೊಡವೆ ನಿನಗೆ ಬೇಡ.
- Verse 20: ಹೆತ್ತವರನ್ನು ಶಪಿಸುವವನ ದೀಪ ಕಾರಿರುಳಲ್ಲೆ ಆರಿಹೋಗುವುದು ಖಚಿತ.
- Verse 21: ಬೇಗಬೇಗನೆ ಬಾಚಿಕೊಂಡ ಮೊದಲ ಸೊತ್ತು, ಕೊನೆಯಲ್ಲಿ ಕಳೆದುಹೋಗುವುದು ನಿಶ್ಚಿತ.
- Verse 22: “ಕೇಡಿಗೆ ಕೇಡು” ಎಂದು ಮುಯ್ಯಿತೀರಿಸುವುದು ಬೇಡ; ಸರ್ವೇಶ್ವರನಲ್ಲಿ ಭರವಸೆಯಿಡು, ಆತ ನಿನ್ನ ಕೈಬಿಡ.
- Verse 23: ತಾರತಮ್ಯದ ತೂಕದ ಕಲ್ಲು ಸರ್ವೇಶ್ವರನಿಗೆ ಅಸಹ್ಯ; ಮೋಸದ ತಕ್ಕಡಿಯನ್ನು ಬಳಸುವುದು ಸರಿಯಲ್ಲ.
- Verse 24: ಮಾನವನ ಸ್ಥಿತಿಗತಿ ಸರ್ವೇಶ್ವರನ ಏರ್ಪಾಡು; ಮನುಷ್ಯ ತನ್ನ ಮಾರ್ಗವನ್ನು ತಾನೇ ಹೇಗೆ ತಿಳಿದಾನು?
- Verse 25: ದುಡುಕಿ ದೇವರಿಗೆ ಮುಡಿಪುಕಟ್ಟುವುದು, ಹರಕೆ ಹೊತ್ತ ಮೇಲೆ ವಿಚಾರಮಾಡುವುದು, ಉರುಳಿಗೆ ಸಿಕ್ಕಿಕೊಂಡಂತೆ ಆಗುವುದು.
- Verse 26: ಜ್ಞಾನಿಯಾದ ಅರಸ ಚದರಿಸಿಬಿಡುವನು ದುಷ್ಟರನ್ನು; ಅವರ ಮೇಲೆ ಉರುಳಿಸುವನು ಕಣದ ಗುಂಡನ್ನು.
- Verse 27: ಮನುಷ್ಯನ ಆತ್ಮ ಸರ್ವೇಶ್ವರನು ಕೊಟ್ಟ ದೀಪ; ಅಂತರಂಗವನ್ನೆಲ್ಲ ಶೋಧಿಸಬಲ್ಲದು ಅದರ ಪ್ರಕಾಶ.
- Verse 28: ಪ್ರೀತಿಸತ್ಯತೆಗಳು ರಾಜನನ್ನು ಕಾಪಾಡುವ ಕವಚ; ಕರುಣೆಯೇ ಅವನ ಸಿಂಹಾಸನಕ್ಕೆ ಸ್ಥಿರಾಧಾರ.
- Verse 29: ಯುವಕರಿಗೆ ಬಲವೆ ಭೂಷಣ; ಮುದುಕರಿಗೆ ನರೆಯೆ ಕಿರೀಟ.
- Verse 30: ಗಾಯಗೊಳಿಸುವ ಏಟು ಕೆಟ್ಟದ್ದನ್ನು ತೊಳೆಯಬಲ್ಲ ಮದ್ದು; ಅಂತರಂಗವನ್ನೂ ಮುಟ್ಟಬಲ್ಲದು ಆ ಪೆಟ್ಟು.