P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
57ನೇ ಅಧ್ಯಾಯ
1 : “ಕರುಣಿಸೆನ್ನನು, ಕರುಣಿಸು, ದೇವನೇ I ನನ್ನಾತ್ಮದ ಆಸರೆಯು ನೀನೇ II ನನ್ನ ಗಂಡಾಂತರವು ನೀಗುವ ಪರಿಯಂತ I ನಿನ್ನ ರೆಕ್ಕೆಗಳಡಿ ನಾನಿರುವೆ ಸುರಕ್ಷಿತ II
2 : ನನ್ನ ಕಾರ್ಯವನು ಕೈಗೂಡಿಸುವ ದೇವನಿಗೆ I ನಾ ಮೊರೆಯಿಡುವೆ ಪರಾತ್ಪರನಾದಾ ಕರ್ತನಿಗೆ II
3 : ಆತ ನೆರವಾಗುವನೆನಗೆ ಪರಲೋಕದಿಂದ I ತಪ್ಪಿಸುವನು ನನ್ನನು ಬೆನ್ನಟ್ಟಿ ಬರುವವರಿಂದ II ತೋರ್ಪಡಿಸುವನು ಸತ್ಯತೆಯನು I ತನ್ನ ಅಚಲ ಪ್ರೀತಿಯನಾ ದೇವನು II
4 : ಸಿಕ್ಕಿಕೊಂಡಿರುವೆ ನರಭಕ್ಷಕ ಸಿಂಹಗಳ ನಡುವೆ I ಅವುಗಳ ಹಲ್ಲುಗಳೊ ಭರ್ಜಿಬಾಣಗಳಂತಿವೆ I ನಾಲಿಗೆಗಳು ಹದವಾದ ಕತ್ತಿ ಕಠಾರಿಗಳಂತಿವೆ II
5 : ಮೇಲಣ ಲೋಕದಲಿ ಮೆರೆಯಲಿ ದೇವಾ, ನಿನ್ನ ಹಿರಿಮೆ I ಭೂಮಂಡಲದಲಿ ಹಬ್ಬಿ ಹರಡಲಿ ನಿನ್ನಾ ಮಹಿಮೆ II
6 : ಕಂಟಕ ಬಂದಿದೆ ನನ್ನ ಪ್ರಾಣಕೆ I ಹಾಕಿಹರು ಕಾಲಿಗೆ ಜೀರುಗುಣಿಕೆ II ತೋಡಿಹರು ಗುಂಡಿಯನು ನಾ ನಡೆವ ದಾರಿಯಲೆ I ತಾವೆ ತಟಕ್ಕನೆ ಬಿದ್ದುಹೋದರು ಅದರಲೆ II
7 : ಸ್ಥಿರವಿದೆ ದೇವಾ, ಸುಸ್ಥಿರವಿದೆ ನನ್ನ ಮನ I ಹಾಡುತ ಪಾಡುತ ನಾ ರಚಿಸುವೆ ಗಾಯನ II
8 : ಚೇತನಗೊಳ್ಳು ಮನವೇ, ಚೇತನಗೊಳ್ಳು I ಎಚ್ಚರಗೊಳ್ಳಲಿ ವೀಣೆ ತಂಬೂರಿಗಳು I ಎಬ್ಬಿಸಿ ರವಿಯನು ಪ್ರಾತಃಕಾಲದೊಳು II
9 : ನಿನ್ನ ಸ್ತುತಿಸುವೆನು ಪ್ರಭು ಜನಾಂಗಗಳ ಮುಂದೆ I ಸಂಕೀರ್ತಿಸುವೆನು ನಿನ್ನನು ರಾಷ್ಟ್ರಗಳ ಮಧ್ಯೆ II
10 : ನಿನ್ನಚಲ ಪ್ರೀತಿ ಮುಟ್ಟುತ್ತಿದೆ ಗಗನಮಂಡಲವನು I ನಿನ್ನ ಸತ್ಯಸಂಧತೆ ತಾಕುತ್ತಿದೆ ಮೇಘಮಂಡಲವನು II
11 : ಮೇಲಣ ಲೋಕದಲಿ ಮೆರೆಯಲಿ ದೇವಾ, ನಿನ್ನ ಹಿರಿಮೆ I ಭೂಮಂಡಲದಲಿ ಹಬ್ಬಿ ಹರಡಲಿ ನಿನ್ನಾ ಮಹಿಮೆ II