पवित्र बाइबिल
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
39ನೇ ಅಧ್ಯಾಯ
- Verse 1: “ಕಾಡುಮೇಕೆ ಈಯುವ ವೇಳೆಯನು ತಿಳಿದಿರುವೆಯಾ? ಹುಲ್ಲೆಗಳ ಹೆರಿಗೆಯನು ಗ್ರಹಿಸಿರುವೆಯಾ?
- Verse 2: ಎಣಿಸಿರುವೆಯಾ ಅವು ಗರ್ಭಹೊರುವ ತಿಂಗಳನು? ಗೊತ್ತುಹಚ್ಚಿರುವೆಯಾ ಅವು ಈಯುವ ವೇಳೆಯನು?
- Verse 3: ಅವು ಬಗ್ಗಿ ಮರಿಹಾಕುತ್ತವೆ ಒಡನೆಯೆ ವೇದನೆಯನು ಮರೆತುಬಿಡುತ್ತವೆ.
- Verse 4: ಅವುಗಳ ಮರಿಗಳು ಪುಷ್ಟಿಯಾಗಿ ಬಯಲಿನಲ್ಲಿ ಬೆಳೆಯುತ್ತವೆ ತಾಯಿಯನ್ನು ಅಗಲಿದ ಬಳಿಕ ಅವು ಮರಳಿ ಬರುವುದಿಲ್ಲ.
- Verse 5: ಕಾಡುಕತ್ತೆಗೆ ಸ್ವಾತಂತ್ರ್ಯವನು ಕೊಟ್ಟವರಾರು? ಅದರ ಕಟ್ಟನು ಬಿಚ್ಚಿದವರಾರು?
- Verse 6: ಅದಕ್ಕೆ ಅಡವಿಯನೆ ಮನೆಯನ್ನಾಗಿಸಿದವನು ನಾನು ಸವಳುಬಯಲನೇ ಅದರ ನಿವಾಸವಾಗಿಸಿದವನು ನಾನು.
- Verse 7: ಅದು ಧಿಕ್ಕರಿಸುತ್ತದೆ ಊರಗದ್ದಲವನು ಅದು ಕೇಳಿದ್ದಿಲ್ಲ ಓಡಿಸುವವನ ಕೂಗನು.
- Verse 8: ಎತ್ತರವಾದ ಬೆಟ್ಟಗಳೇ ಅದರ ಕಾವಲು ಹಸಿರೆಲ್ಲಿದ್ದರೂ ಅದುವೆ ಅದರಸುವ ಮೇವು.
- Verse 9: ಕಾಡುಕೋಣ ಒಪ್ಪಿದೆಯೇ ನಿನಗೆ ಸೇವೆಮಾಡಲು? ನಿನ್ನ ಗೋದಲಿಯ ಹತ್ತಿರವೇ ತಂಗಿರಲು?
- Verse 10: ಕಟ್ಟಬಲ್ಲೆಯಾ ಅದನು ಹಗ್ಗದಿಂದ ನೇಗಿಲ ಸಾಲಿಗೆ ಕುಂಟೆ ಎಳೆಯಲು ಅದು ನಿನ್ನ ಹಿಂದೆ?
- Verse 11: ಬಲವಿದೆಯೆಂದು ಅದರಲಿ ನಂಬಿಕೆಯಿಡುವೆಯಾ? ಬಲಿಷ್ಠಕಾರ್ಯಗಳನು ಅದಕ್ಕೆ ಒಪ್ಪಿಸಿಬಿಡುವೆಯಾ?
- Verse 12: ಬೆಳೆಯನು ಅದು ನಿನಗೆ ಹೊತ್ತು ತರುವುದೆಂದು ನಂಬುವೆಯಾ? ಕಣದಲಿ ನಿನಗೆ ಕಾಳನು ಕೂಡಿಸುವುದೆಂಬ ನಂಬಿಕೆ ನಿನಗಿದೆಯಾ?
- Verse 13: ಉಷ್ಟ್ರಪಕ್ಷಿ ಲವಲವಿಕೆಯಿಂದ ರೆಕ್ಕೆಬಡಿಯುತ್ತದೆ ಆದರೆ ಪ್ರೀತಿವ್ಯಾಮೋಹವಿದೆಯೆ ಅದರ ರೆಕ್ಕೆ ಗರಿಗಳಿಗೆ?
- Verse 14: ಮೊಟ್ಟೆಗಳನು ಭೂಮಿಯ ಮೇಲೆ ಬಿಟ್ಟುಬಿಡುವಾ ಪಕ್ಷಿ, ಕೇವಲ ಧೂಳಿನಿಂದ ಅವಕ್ಕೆ ಕಾವು ಕೊಡುತ್ತದೆ, ಅಲ್ಲವೆ?
- Verse 15: ಆ ಮೊಟ್ಟೆಗಳನು ಜನರು ಕಾಲಿನಿಂದ ಮೆಟ್ಟಿಯಾರು ಕಾಡುಮೃಗ ಅವುಗಳನು ತುಳಿದೀತು ಎಂಬ ಯೋಚನೆ ಅದನು ಕಾಡದು.
- Verse 16: ತನ್ನ ಮರಿ ತನ್ನದೇ ಅಲ್ಲ ಎಂಬಷ್ಟು ಕ್ರೂರತೆ ಅದರದು ತನ್ನ ಹೆರಿಗೆ ನಿಷ್ಫಲವಾಯಿತೆಂಬ ಸಂಕಟ ಅದಕ್ಕಿರದು.
- Verse 17: ಅದಕ್ಕೆ ನಾನು ಕೊಡಲಿಲ್ಲ ಜ್ಞಾನವನು ದಯಪಾಲಿಸಲಿಲ್ಲ ಗ್ರಹಿಕೆಯನು.
- Verse 18: ಆದರೂ ಅದು ರೆಕ್ಕೆ ಬಡಿದು ದೌಡಾಯಿಸುವಾಗಲಂತು ಕುದುರೆ ರಾಹುತರನೂ ಅಣಕಿಸಬಲ್ಲದು.
- Verse 19: ಕುದುರೆಗೆ ಶಕ್ತಿಕೊಟ್ಟವನು ನೀನೋ? ಅದರ ಕೊರಳಿಗೆ ಜುಟ್ಟುಗುಡುಗನ್ನು ಕಟ್ಟಿದವನು ನೀನೋ?
- Verse 20: ಮಿಡತೆಯ ಹಾಗೆ ಅದು ಜಿಗಿಯಮಾಡಿದವನು ನೀನೋ? ಅದರ ಕೆನೆತದ ಪ್ರಭಾವ ಭೀತಿಯನು ತರುತ್ತದೆ, ನೋಡು!
- Verse 21: ನೆಲವನು ಕೆರೆಯುತ್ತಾ, ತನ್ನ ಶಕ್ತಿಗಾಗಿ ಹಿಗ್ಗುತ್ತಾ ಸನ್ನದ್ಧ ಸೈನ್ಯವನು ಇದಿರಿಸುತ್ತಾ ನುಗ್ಗುತ್ತದೆ ನೋಡು!
- Verse 22: ಖಡ್ಗಕ್ಕೆ ಹಿಂದೆಗೆಯದೆ, ಕಳವಳಗೊಳ್ಳದೆ ಭಯಭೀತಿಗೆ ಹೆದರದೆ ನಗುತ್ತದೆ!
- Verse 23: ಅದರ ಮೇಲಿನ ಬತ್ತಳಿಕೆ ಜಣಜಣಿಸುತ್ತದೆ ಈಟಿ ಭರ್ಜಿಗಳು ಥಳಥಳಿಸುತ್ತವೆ.
- Verse 24: ಕಹಳೆಯ ನಾದಕೇಳಿ ನಿಲ್ಲದದು ಸುಮ್ಮನೆ ಉದ್ರೇಕಗೊಂಡು ದೌಡಾಯಿಸುತ್ತದೆ ವೇಗವನೇ ನುಂಗುವಂತೆ.
- Verse 25: ರಣಕಹಳೆ ಮೊಳಗಿದಾಗಲೆ ಕೆನೆಯುತ್ತದೆ ಕಾಳಗ, ಆರ್ಭಟ, ದಳಪತಿಗಳ ಗರ್ಜನೆ ಇವುಗಳನ್ನೆಲ್ಲಾ ದೂರದಿಂದಲೆ ಮೂಸುತ್ತದೆ.
- Verse 26: ಗಿಡುಗವು ರೆಕ್ಕೆ ಹರಡುವುದನು ದಕ್ಷಿಣದಿಕ್ಕಿಗೆ ಹಾರಿ ವಲಸೆಹೋಗುವುದನು ನಿನ್ನಿಂದ ಕಲಿತದೆಂತು?
- Verse 27: ರಣಹದ್ದಿಗೆ ನಿನ್ನಪ್ಪಣೆ ಬೇಕೋ ಮೇಲೆ ಹಾರುವುದಕೆ? ನಿನ್ನ ಸಮ್ಮತಿ ಬೇಕೋ ಉನ್ನತ ಸ್ಥಳದಲ್ಲಿ ಗೂಡು ಕಟ್ಟುವುದಕೆ?
- Verse 28: ಅದು ವಾಸಮಾಡುತ್ತದೆ ಕಲ್ಲು ಬಂಡೆ ಮೇಲೆ ಅದು ತಂಗುತ್ತದೆ ಶಿಲಾಶಿಖರದ ದುರ್ಗದೊಳಗೆ.
- Verse 29: ಬೇಟೆಯನು ನೋಡುತ್ತದೆ ಅಲ್ಲಿಂದಲೆ ಅದನ್ನು ಕಂಡು ಹಿಡಿಯುತ್ತದೆ ದೂರದಿಂದಲೆ.
- Verse 30: ಹೆಣ ಬಿದ್ದಲ್ಲಿ ರಣಹದ್ದು ಅದರ ಮರಿಗಳೂ ಹೀರುತ್ತವೆ ರಕ್ತವನು.”