P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
34ನೇ ಅಧ್ಯಾಯ
- Verse 1: ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು I ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು II
- Verse 2: ಪ್ರಭುವಿನಲ್ಲಿದೆ ನನ್ನ ಮನದಭಿಮಾನ I ದೀನರಿದನು ಕೇಳಿ, ಪಡೆಯಲಿ ಸುಮ್ಮಾನ I
- Verse 3: ಬನ್ನಿ, ಕೊಂಡಾಡುವ ಪ್ರಭು ದೇವನನು II ಘನಪಡಿಸೋಣ ಅವನ ಶ್ರೀನಾಮವನು II
- Verse 4: ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು I ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು II
- Verse 5: ಆತನತ್ತ ತಿರುಗಿದ ಮುಖ ಅರಳುವುದು I ಲಜ್ಜೆಯಿಂದೆಂದಿಗು ಕುಂದಿಹೋಗದು II
- Verse 6: ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು I ಸರ್ವಾಪತ್ತಿನಿಂದವನು ಮುಕ್ತಗೊಂಡನು II
- Verse 7: ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು I ಕಾಯುವನು ಪ್ರಭುವಿನ ದೂತನೆ ಬಂದಿಳಿದು II
- Verse 8: ಸವಿದು ನೋಡು ಪ್ರಭುವಿನ ಮಾಧುರ್ಯವನು I ಆತನನು ಆಶ್ರಯಿಸಿಕೊಂಡವನು ಧನ್ಯನು II
- Verse 9: ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ I ಅಂಥವರಿಗಿರದು ಯಾವ ಕುಂದುಕೊರತೆಯ ಭೀತಿ II
- Verse 10: ಯುವ ಕೇಸರಿಗೆ ಇರಬಹುದು ಹಸಿವು, ದಾಹ I ಪ್ರಭುವನು ಅರಸುವವರಿಗಿರದು ಒಳಿತಿನ ಅಭಾವ II
- Verse 11: ಬನ್ನಿ ಮಿತ್ರರೇ, ಆಲಿಸಿರೀ ಮಾತನು I ಕಲಿಸುವೆನು ನಾ ನಿಮಗೆ ದೇವ ಭಯವನು II
- Verse 12: ಎಲೆ ಮಾನವ, ಬಲುದಿನ ಬಾಳಲು ಬಯಸುವೆಯಾ? I ಆಯುರಾರೋಗ್ಯ ಭಾಗ್ಯವನು ಆಶಿಸುವೆಯಾ? II
- Verse 13: ಕಾದಿಡು ನಾಲಿಗೆಯನು ಕೇಡನು ಆಡದಂತೆ I ಬಿಗಿಯಿಡು ತುಟಿಯನ್ನು ಕುಟಿಲವನು ನುಡಿಯದಂತೆ II
- Verse 14: ಬಿಡು ಕೆಟ್ಟದನು, ಮಾಡು ಒಳ್ಳಿತನು I ಹುಡುಕು ಶಾಂತಿಯನು, ಬೆನ್ನಟ್ಟು ಅದನು II
- Verse 15: ಸಜ್ಜನರನು ಪ್ರಭು ಕಟಾಕ್ಷಿಸುವನು I ಅವರ ಮೊರೆಗಾತ ಕಿವಿಗೊಡುವನು II
- Verse 16: ದುರ್ಜನರಿಗಾದರೋ ಪ್ರಭು ವಿಮುಖನು I ಅವರ ಹೆಸರನು ಧರೆಯಿಂದ ಅಳಿಸುವನು II
- Verse 17: ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ I ನೆರವೀವನವರ ಕಷ್ಟನಿವಾರಣೆಗೆ II
- Verse 18: ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ I ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ II
- Verse 19: ಸಜ್ಜನನಿಗೊದಗುವ ಸಂಕಟಗಳು ವಿಪರೀತ I ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ II
- Verse 20: ಕಾಪಾಡುವನು ಅವನೆಲಬುಗಳೆಲ್ಲವನ್ನೂ I ಮುರಿಯಬಿಡನು ಪ್ರಭು ಅವುಗಳಲ್ಲೊಂದನ್ನೂ II
- Verse 21: ದುರ್ಜನರೆಲ್ಲರೂ ತುತ್ತಾಗುವರು ತಮ್ಮ ಕೇಡಿಗೆ I ಸಜ್ಜನರ ಶತ್ರುಗಳು ಗುರಿಯಾಗುವರು ದಂಡನೆಗೆ II
- Verse 22: ತನ್ನ ದಾಸರನು ಉದ್ಧಾರಮಾಡದಿರನು ಪ್ರಭು I ತನ್ನ ಶರಣರೊಳೊಬ್ಬರನು ದಂಡಿಸನಾ ವಿಭು II