ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
81ನೇ ಅಧ್ಯಾಯ
- Verse 1: ಹಾಡಿರಿ ಶುಭಗೀತೆಯನು ಬಲಪ್ರದನಾದ ದೇವನಿಗೆ I ಮಾಡಿರಿ ಜಯಜಯಕಾರವನು ಯಕೋಬ ಕುಲದೇವನಿಗೆ II
- Verse 2: ಆರಂಭಿಸಿ ಸಂಗೀತವನು, ಬಾರಿಸಿ ಮೃದಂಗವನು I ನುಡಿಸಿರಿ ಮಧುರ ವೀಣೆಯನು, ಸ್ವರಮಂಡಲವನು II
- Verse 3: ಊದಿರಿ ಕೊಂಬನು ಅಮವಾಸ್ಯೆಯಲಿ I ಉತ್ಸವದಿನವಾದ ಪೂರ್ಣಿಮೆಯಲಿ II
- Verse 4: ದೇವರಿತ್ತ ನಿಯಮವದು ಯಕೋಬ್ಯರಿಗೆ I ಕೊಟ್ಟಕಟ್ಟಳೆಯದು ಇಸ್ರಯೇಲರಿಗೆ II
- Verse 5: ಈಜಿಪ್ಟರಿಗೆದುರಾಗಿ ತೆರಳಿದಂದು I ಜೋಸೆಪ್ಯರಿಗಾತ ವಿಧಿಸಿದಾಜ್ಞೆಯದು II
- Verse 6: ಅಪರಿಚಿತ ವಾಣಿಯೊಂದು ನುಡಿಯಿತೀ ಮಾತನು : I “ತಪ್ಪಿಸಿದೆ ನಾನು ಹೆಗಲಮೇಲೆ ನೀ ಹೊರೆಹೊರುವುದನು I ಬಿಡುಗಡೆ ಮಾಡಿದೆ ಗೂಡೆಯೆತ್ತುವ ಕೈಗಳನು II
- Verse 7: “ಸಂಕಟದಲಿ ಮೊರೆಯಿಟ್ಟಾಗ ವಿಮೋಚಿಸಿದೆ ನಿನ್ನನು I ಗುಡುಗುವ ಮೇಘದಿಂದ ಕೊಟ್ಟೆ ನಿನಗೆ ಸದುತ್ತರವನು I ಮೆರೀಬಾ ಪ್ರವಾಹಗಳ ಬಳಿ ಪರೀಕ್ಷಿಸಿದೆ ನಿನ್ನನು, II
- Verse 8: “ನನ್ನ ಜನರೇ, ಕಿವಿಗೊಡಿ ನನ್ನ ಬುದ್ಧಿಮಾತಿಗೆ I ಹಾಗೆ ಮಾಡಿದರೆ ಇಸ್ರಯೇಲರೆ, ಹಿತ ನಿಮಗೆ, II
- Verse 9: “ಇರಬಾರದು ಅನ್ಯದೇವತೆಗಳು ನಿಮ್ಮಲಿ I ಪರದೇವತೆಗಳ ಪೂಜೆ ಕೂಡದು ನಿಮ್ಮಲಿ, II
- Verse 10: “ಈಜಿಪ್ಟಿನಿಂದ ನಿಮ್ಮನು ಕರೆತಂದ ಸ್ವಾಮಿ ದೇವನು ನಾನು I ತೆರೆಯಿರಿ ನಿಮ್ಮ ಬಾಯನು, ತುಂಬಿಸಿ ತೃಪ್ತಿಪಡಿಸುವೆ ನಾನದನು II
- Verse 11: “ಆದರೆ ಕೇಳಲಿಲ್ಲಾ ಜನತೆ ನನ್ನ ಮಾತುಗಳನು I ತೋರಲಿಲ್ಲ ಇಸ್ರಯೇಲರು ನನಗೆ ವಿಧೇಯತೆಯನು, II
- Verse 12: “ಎಂತಲೇ ಕೈಬಿಟ್ಟೆ ಅವರನು ಹಟಮಾರಿಗಳೆಂದು I ತಮಗಿಷ್ಟಬಂದಂತೆಯೆ ನಡೆದುಕೊಳ್ಳಲಿಯೆಂದು, II
- Verse 13: “ಒಳಿತಾಗಿರುತ್ತಿತ್ತು ನನ್ನ ಜನರು ನನಗೆ ಕಿವಿಗೊಟ್ಟಿದ್ದರೆ I ಮೇಲಾಗಿರುತ್ತಿತ್ತು ಇಸ್ರಯೇಲರು ನನ್ನ ಹಾದಿ ಹಿಡಿದಿದ್ದರೆ, II
- Verse 14: “ಅಡಗಿಸುತ್ತಿದ್ದೆ ಅವರ ಶತ್ರುಗಳನು ಸುಲಭವಾಗಿ I ಸದೆಬಡಿಯುತ್ತಿದ್ದೆ ಅವರ ವೈರಿಗಳನು ಸರಿಯಾಗಿ, II
- Verse 15: “ಮುದುರಿಕೊಳ್ಳುತ್ತಿದ್ದರಾ ಎದುರಾಳಿಗಳು ಅವರ ಮುಂದೆ I ಅಳಿಯದೆ ಉಳಿದುಕೊಳ್ಳುತ್ತಿತ್ತು ಅವರಿಗಾದ ದಂಡನೆ ಮುಗಿವಿಲ್ಲದೆ, II
- Verse 16: “ನಿಮಗಾದರೋ ಬಡಿಸುತ್ತಿದ್ದೆ ಅತ್ಯುತ್ತಮ ಗೋದಿಯನು I ಉಣಿಸುತ್ತಿದ್ದೆ ನಾ ನಿಮಗೆ ಬೆಟ್ಟದ ಜೇನುತುಪ್ಪವನು” II