வேதாகமம்
ಹೊಸ ಒಡಂಬಡಿಕೆ
2 ತಿಮೊಥೇಯನಿಗೆ
3ನೇ ಅಧ್ಯಾಯ
- Verse 1: ಅಂತಿಮ ದಿನಗಳು ಕಷ್ಟಕರವಾದ ಕಾಲವಾಗಿರುತ್ತದೆಂಬುದನ್ನು ಜ್ಞಾಪಕದಲ್ಲಿಡು.
- Verse 2: ಜನರು ಸ್ವಾರ್ಥಚಿಂತಕರೂ ಲೋಭಿಗಳೂ ಅಹಂಕಾರಿಗಳೂ ಬಡಾಯಿಕೋರರೂ ದೇವದೂಷಕರೂ ಹೆತ್ತವರಿಗೆ ಅವಿಧೇಯರೂ ಕೃತಘ್ನರೂ ಭಕ್ತಿಹೀನರೂ ಆಗುವರು.
- Verse 3: ಅವರು ಮಮತೆ ಇಲ್ಲದವರೂ ಸಮಾಧಾನ ಸಹಿಸದವರೂ ಚಾಡಿಕೋರರೂ ಸ್ವೇಚ್ಛಾವರ್ತಿಗಳೂ ಕ್ರೂರಿಗಳೂ ಒಳಿತನ್ನು ದ್ವೇಷಿಸುವವರೂ ಆಗುವರು.
- Verse 4: ನಂಬಿಕೆದ್ರೋಹಿಗಳೂ ದುಡುಕುವವರೂ ಮಹಾಗರ್ವಿಗಳೂ ಆಗುವರು. ದೇವರನ್ನು ಅರಸದೆ ಭೋಗಗಳನ್ನೇ ಬಯಸುವರು.
- Verse 5: ಅವರು ಭಕ್ತಿಯ ವೇಷ ಧರಿಸಿದ್ದರೂ ಅದರ ನಿಜವಾದ ಶಕ್ತಿಯನ್ನು ಅಲ್ಲಗಳೆಯುವರು. ಇಂಥವರ ಸಹವಾಸ ನಿನಗೆ ಬೇಡ.
- Verse 6: ಇವರಲ್ಲಿ ಕೆಲವರು ಮನೆಮನೆಗಳಿಗೆ ನುಸಳಿ ನಾನಾ ಪಾಪಗಳಿಂದಲೂ ಕಾಮನೆಗಳಿಂದಲೂ ಕೂಡಿರುವ ಮತಿಗೆಟ್ಟ ಮಹಿಳೆಯರನ್ನು ವಶಪಡಿಸಿಕೊಳ್ಳುವರು.
- Verse 7: ಆ ಮಹಿಳೆಯರಾದರೋ ಯಾರಿಗೆ ಬೇಕಾದರೂ ಕಿವಿಗೊಡುವರು. ಸತ್ಯವನ್ನು ಮಾತ್ರ ಮನಗಾಣರು.
- Verse 8: ಯನ್ನ ಮತ್ತು ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆ, ಇವರು ಸತ್ಯವನ್ನು ಪ್ರತಿಭಟಿಸುತ್ತಾರೆ.
- Verse 9: ದುರ್ಮತಿಗಳೂ ವಿಶ್ವಾಸಭ್ರಷ್ಟರೂ ಆಗಿದ್ದಾರೆ. ಆದರೆ ಅವರ ಮೂರ್ಖತನ ದೀರ್ಘಕಾಲ ಬಾಳದು. ಯನ್ನ ಮತ್ತು ಯಂಬ್ರಳ ದೋಷದಂತೆ ಅದು ಸರ್ವರಿಗೂ ಬಟ್ಟಬಯಲಾಗುತ್ತದೆ.
- Verse 10: ನೀನಾದರೋ ನನ್ನ ಬೋಧನೆ, ನಡತೆ ಹಾಗೂ ಧ್ಯೇಯಗಳನ್ನು ಅರಿತಿರುವೆ. ನನ್ನ ವಿಶ್ವಾಸ, ಸಹಿಷ್ಣುತೆ ಮತ್ತು ಸೈರಣೆ ನಿನಗೆ ತಿಳಿದಿದೆ.
- Verse 11: ನಾನು ಅನುಭವಿಸಿದ ಹಿಂಸೆನೋವುಗಳ ಮತ್ತು ಕಷ್ಟದುಃಖಗಳ ಕುರಿತು ಕೇಳಿರುವೆ. ಅಂತಿಯೋಕ್ಯ, ಇಕೋನಿಯ ಮತ್ತು ಲುಸ್ತ್ರ ಪಟ್ಟಣಗಳಲ್ಲಿ ನಾನು ಎಂಥ ಕ್ರೂರವಾದ ಹಿಂಸೆ ಅನುಭವಿಸಿದೆನೆಂಬುದು ನಿನಗೆ ತಿಳಿಯದ ವಿಷಯವೇನೂ ಅಲ್ಲ. ಆದರೆ ಪ್ರಭು ನನ್ನನ್ನು ಇವೆಲ್ಲವುಗಳಿಂದ ಪಾರುಮಾಡಿದರು.
- Verse 12: ಕ್ರಿಸ್ತಯೇಸುವಿನ ಅನುಯಾಯಿಯಾಗಿ ಭಕ್ತಿಯಿಂದ ಬಾಳಲು ಆಶಿಸುವ ಪ್ರತಿಯೊಬ್ಬನೂ ಹಿಂಸೆಗೊಳಗಾಗುತ್ತಾನೆ.
- Verse 13: ದುಷ್ಕರ್ಮಿಗಳು ಮತ್ತು ದುರ್ಬೋಧಕರು ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ದಿನೇದಿನೇ ಅಧೋಗತಿಗಿಳಿಯುತ್ತಾರೆ.
- Verse 14: ನೀನಾದರೋ ನಿನಗೆ ಬೋಧಿಸಲಾಗಿರುವ ಹಾಗೂ ನೀನು ದೃಢವಾಗಿ ನಂಬಿರುವ ಸತ್ಯಗಳನ್ನು ಅನುಸರಿಸು.
- Verse 15: ನಿನ್ನ ಬೋಧಕರು ಯಾರೆಂಬುದು ನಿನಗೆ ಗೊತ್ತಿದೆ. ಚಿಕ್ಕಂದಿನಿಂದಲೇ ನೀನು ಪವಿತ್ರಗ್ರಂಥವನ್ನು ಪರಿಚಯಮಾಡಿಕೊಂಡಿರುವೆ. ಯೇಸುಕ್ರಿಸ್ತರನ್ನು ವಿಶ್ವಾಸಿಸುವುದರ ಮೂಲಕ ಜೀವೋದ್ಧಾರವನ್ನು ಪಡೆಯಬಹುದೆಂಬ ಜ್ಞಾನವು ಲಭಿಸುವುದು ಆ ಪವಿತ್ರಗ್ರಂಥದಿಂದಲೇ.
- Verse 16: ಪವಿತ್ರಗ್ರಂಥ ದೈವಪ್ರೇರಣೆಯಿಂದ ರಚಿತವಾದುದು. ಆದ್ದರಿಂದ ಅದು ಪ್ರಬೋಧನೆಗೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಉಪಯುಕ್ತವಾಗಿದೆ.
- Verse 17: ಅದರ ಮೂಲಕ ದೈವಭಕ್ತರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು.