पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
42ನೇ ಅಧ್ಯಾಯ
- Verse 1: ಬಾಯಾರಿದ ಜಿಂಕೆ ಹಾತೊರೆಯುವಂತೆ ತೊರೆಗಾಗಿ I ದಣಿದೆನ್ನ ಮನ ದೇವಾ, ಹಂಬಲಿಸುತಿದೆ ನಿನಗಾಗಿ II
- Verse 2: ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ I ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ? II
- Verse 3: “ಎಲ್ಲಿ? ನಿನ್ನ ದೇವನೆಲ್ಲಿ?” ಎಂದು ಜನ ಜರೆಯುತಿರಲು I ಕಂಬನಿಯೆ ನನಗನ್ನಪಾನವಾಗಿಹುದು ಹಗಲಿರುಳು II
- Verse 4: ಜನಸಮೂಹದೊಡನೆ ನಾ ಜಯಜಯಕಾರ ಮಾಡುತ I ಸ್ತುತಿಗೀತೆಗಳ ಹಾಡುತ, ತೀರ್ಥಯಾತ್ರೆ ಗೈಯುತ I ದೇಗುಲಕೆ ತೆರಳಿದಾ ಸವಿನೆನಪು ಮನಕರಗಿಪುದು ನಿರುತ II
- Verse 5: ಎನ್ನ ಮನವೆ, ಚಿಂತಿಸುವೆಯೇಕೆ? I ವ್ಯಥೆಪಡುವುದೇಕೆ? ದೇವನಲ್ಲಿಡು ನಂಬಿಕೆ I ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ, ಪರಮಾತ್ಮ ಆತನೆನಗೆ II
- Verse 6: ನನಗಾಗುತ್ತದೆ ನಿನ್ನ ಸ್ಮರಣೆ ಮನ ಕುಗ್ಗಿದಾಗ I ಜೋರ್ದನ್, ಹೆರ್ಮನ್ ನಾಡಿಂದ, ಮೀಸಾರ್ ಗುಡ್ಡೆಯಿಂದ II
- Verse 7: ನಿನ್ನ ಜಲಪಾತಗಳ ಘನನಿನಾದ, ಮಡುವು ಮಡುವನು ಕರೆದಂತಿದೆ I ನಿನ್ನಲೆಗಳು, ಎಲ್ಲ ತರಂಗಗಳು ತಲೆಯ ಮೇಲೆ ಹಾದು ಹೋದಂತಿವೆ II
- Verse 8: ಹಗಲಲಿ ಪ್ರೀತಿಯನುಗ್ರಹಿಸಲಿ ದೇವನೆನಗೆ I ಇರುಳಲಿ ಎನ್ನಯ ಬಾಯಲ್ಲಿರಲಿ ಆತನ ಗೀತೆ I ಪ್ರಾರ್ಥನೆ ಸಲ್ಲಲಿ ಎನ್ನ ಜೀವಾಧಾರ ದೇವಗೆ II
- Verse 9: ಶರಣ ದೇವನಿಗೆ “ದೇವಾ, ನನ್ನನೇಕೆ ಮರೆತೆ? I ನಾನಲೆಯಬೇಕೆ ಶತ್ರುಬಾಧೆಪೀಡಿತನಾಗಿ ಭಿಕಾರಿಯಂತೆ?” II
- Verse 10: “ನಿನ್ನ ದೇವನೆಲ್ಲಿ?” ಎಂದು ವಿರೋಧಿಗಳು ಸತತ ಹಂಗಿಸುವಾಗ I ನನ್ನೆಲುಬುಗಳು ಮುರಿದಂತಾಗುತ್ತದೆ ಆ ಜರೆಯ ಕೇಳಿದಾಗ II
- Verse 11: ಎನ್ನ ಮನವೆ, ಚಿಂತಿಸುವೆಯೇಕೆ? ವ್ಯಥೆಪಡುವುದೇಕೆ? ದೇವನಲ್ಲಿಡು ನಂಬಿಕೆ I ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ, ಪರಮಾತ್ಮ ಆತನೆನಗೆ II