ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಎಜ್ರನು
8ನೇ ಅಧ್ಯಾಯ
- Verse 1: ಅರ್ತಷಸ್ತನ ಆಳ್ವಿಕೆಯಲ್ಲಿ ನನ್ನೊಂದಿಗೆ ಬಾಬಿಲೋನಿನಿಂದ ಹೊರಟ ಗೋತ್ರಪ್ರಧಾನರ ಮತ್ತು ಅವರ ಸಂತಾನದವರ ವಿವರ ಹೀಗಿದೆ:
- Verse 2: ಫೀನೆಹಾಸನ ಸಂತಾನದವರಲ್ಲಿ ಗೇರ್ಷೋಮ್; ಈತಾಮಾರನ ಸಂತಾನದವರಲ್ಲಿ ದಾನಿಯೇಲ್;
- Verse 3: ದಾವೀದನ ಸಂತಾನದವರಲ್ಲಿ ಶೆಕನ್ಯನ ಮೊಮ್ಮಗನಾದ ಹಟ್ಟೂಷ್; ಪರೋಷಿನವರಲ್ಲಿ ಜೆಕರ್ಯ ಮತ್ತು ಅವನೊಡನೆ ಅವನ ವಂಶಕ್ಕೆ ಸೇರಿದ 150 ಮಂದಿ ಗಂಡಸರು;
- Verse 4: ಪಹತ್ ಮೋವಾಬಿನವರಲ್ಲಿ ಜೆರಹ್ಯನರ ಮಗ ಎಲ್ಯೆ ಹೋವೇನ್ಯೆಯ ಮತ್ತು ಅವನೊಡನೆ 200 ಮಂದಿ ಗಂಡಸರು;
- Verse 5: ಜತ್ತೂವಿನವರಲ್ಲಿ ಯಹಜೀಯೇಲನ ಮಗ ಶೆಕನ್ಯನು ಮತ್ತು ಅವನೊಡನೆ 300 ಮಂದಿ ಗಂಡಸರು;
- Verse 6: ಆದೀನನವರಲ್ಲಿ ಯೋನಾತಾನನ ಮಗ ಎಬೆದನು ಮತ್ತು ಅವನೊಡನೆ 50 ಮಂದಿ ಗಂಡಸರು;
- Verse 7: ಎಲಾಮಿನವರಲ್ಲಿ ಅತಲ್ಯನ ಮಗ ಯೆಶಾಯನ ಮತ್ತು ಅವನೊಡನೆ 70 ಮಂದಿ ಗಂಡಸರು;
- Verse 8: ಶೆಫಟ್ಯನವರಲ್ಲಿ ಮೀಕಾಯೇಲನ ಮಗ ಜೆಬದ್ಯನು ಮತ್ತು ಅವನೊಡನೆ 10 ಮಂದಿ ಗಂಡಸರು;
- Verse 9: ಯೋವಾಬನವರಲ್ಲಿ ಯೆಹೀಯೇಲನ ಮಗ ಓಬದ್ಯನು ಮತ್ತು ಅವನೊಡನೆ 218 ಮಂದಿ ಗಂಡಸರು;
- Verse 10: ಬಾನೀಯವರಲ್ಲಿ ಯೋಸಿಫ್ಯನ ಮಗ ಶೆಲೋಮೀತನು ಮತ್ತು ಅವನೊಡನೆ 160 ಮಂದಿ ಗಂಡಸರು;
- Verse 11: ಬೇಬೈಯವರಲ್ಲಿ ಬೇಬೈಯ ಮಗ ಜೆಕರ್ಯನು ಮತ್ತು ಅವನೊಡನೆ 28 ಮಂದಿ ಗಂಡಸರು;
- Verse 12: ಅಜ್ಗಾದನವರಲ್ಲಿ ಹಕ್ಕಾಟಾನನ ಮಗ ಯೋಹಾನಾನನು ಮತ್ತು ಅವನೊಡನೆ 110 ಮಂದಿ ಗಂಡಸರು;
- Verse 13: ಅದೋನೀಕಾಮಿನವರಲ್ಲಿ ಕಡೆಯವರಾದ ಎಲೀಫೆಟ್, ಎಟ್ಮೀಯೇಲ್, ಶೆಮಾಯ ಎಂಬ ಹೆಸರುಳ್ಳವರು ಮತ್ತು ಅವರೊಡನೆ 60 ಮಂದಿ ಗಂಡಸರು;
- Verse 14: ಬಿಗ್ವೈಯವರಲ್ಲಿ ಜಕ್ಕೂರನ ಮಗ ಊತೈಯ ಮತ್ತು ಅವನೊಡನೆ 70 ಮಂದಿ ಗಂಡಸರು;
- Verse 15: ಅಹವಾ ಪ್ರಾಂತ್ಯದ ಕಡೆಗೆ ಹರಿಯುವ ನದಿಯ ಬಳಿಯಲ್ಲಿ ನಾನು ಇವರನ್ನು ಒಂದುಗೂಡಿಸಿದೆ. ಅಲ್ಲಿ ಮೂರು ದಿನ ಪಾಳೆಯ ಮಾಡಿಕೊಂಡ ಮೇಲೆ ನನ್ನೊಡನೆ ಜನಸಾಮಾನ್ಯರು ಹಾಗು ಯಾಜಕರು ಬಂದಿದ್ದರಾದರೂ ಲೇವಿಯರಲ್ಲಿ ಯಾರೂ ಬರದೆ ಇದ್ದುದು ಕಂಡುಬಂದಿತು.
- Verse 16: ಆದುದರಿಂದ ಮುಖ್ಯಸ್ಥರಾದ ಎಲೀಯೇಜೆರ್, ಅರೀಯೇಲ್, ಶೆಮಾಯ, ಎಲ್ನಾತಾನ್, ಯಾರೀಬ್, ಎಲ್ನಾತಾನ್, ನಾತಾನ್, ಜೆಕರ್ಯ, ಮೆಷುಲ್ಲಾಮ್ ಇವರನ್ನೂ
- Verse 17: ಪಂಡಿತರಾದ ಯೋಯಾರೀಬ್, ಎಲ್ನಾತಾನ್ ಇವರನ್ನೂ ಕರೆಯಿಸಿದೆ; ಕಾಸಿಫ್ಯ ಊರಿನ ಮುಖ್ಯಸ್ಥನಾದ ಇದ್ದೋವಿನ ಬಳಿಗೆ ಹೋಗಬೇಕೆಂದು ಅಪ್ಪಣೆಮಾಡಿದೆ; ನಮ್ಮ ಬಳಿಗೆ ದೇವಾಲಯ ಸೇವಕರನ್ನು ಕಳುಹಿಸುವ ಹಾಗೆ ಅವರು ಇದ್ದೋವಿಗೂ ಕಾಸಿಫ್ಯ ಊರಿನಲ್ಲಿ ವಾಸಿಸುತ್ತಿದ್ದ ಅವನ ಸಹೋದರರಾದ ದೇವಸ್ಥಾನ ಪರಿಚಾರಕ ವರ್ಗದವರಿಗೂ ಹೇಳತಕ್ಕ ಮಾತುಗಳನ್ನು ಹೇಳಿಕೊಟ್ಟೆ. ಆ ಊರಿನವರು ಪರಿಚಾರಕ ವರ್ಗದವರಾಗಿದ್ದರು.
- Verse 18: ನಮ್ಮ ದೇವರ ಕೃಪಾಹಸ್ತ ನಮ್ಮ ಮೇಲೆ ಇದ್ದುದರಿಂದ ಅವರು ಇಸ್ರಯೇಲನ ಮಗ ಲೇವಿಯ ಕುಲದ ಮಹ್ಲೀ ಸಂತಾನದವರಲ್ಲಿ ಈಸ್ಸೆಕೆಲನನ್ನು, ಶೇರೇಬ್ಯನನ್ನು, ಅವನ ಪುತ್ರ ಭ್ರಾತೃಗಳಲ್ಲಿ ಹದಿನೆಂಟು ಮಂದಿಯನ್ನು,
- Verse 19: ಮೆರಾರೀಯರಲ್ಲಿ ಹಷಭ್ಯನನ್ನು, ಅವನೊಡನೆ ಯೆಶಾಯನನ್ನು, ಅವರ ಪುತ್ರಭ್ರಾತೃಗಳಲ್ಲಿ ಇಪ್ಪತ್ತು ಮಂದಿಯನ್ನು,
- Verse 20: ಹಾಗು ದಾವೀದನೂ ಅವನ ಸರದಾರರೂ ಲೇವಿಯರ ಸಹಾಯಕ್ಕಾಗಿ ಕೊಟ್ಟ ದೇವಸ್ಥಾನ ಪರಿಚಾರಕರಲ್ಲಿ ಇನ್ನೂರ ಇಪ್ಪತ್ತು ಮಂದಿಯನ್ನು ನಮ್ಮ ಬಳಿಗೆ ಕರೆದುಕೊಂಡು ಬಂದರು. ಇವರೆಲ್ಲರ ಹೆಸರುಗಳು ಪಟ್ಟಿಯಲ್ಲಿದ್ದವು.
- Verse 21: ಆಮೇಲೆ ಆ ಅಹವಾ ನದಿಯ ಬಳಿಯಲ್ಲಿ, ನಾವು ಉಪವಾಸದಿಂದಿದ್ದು ನಮ್ಮ ದೇವರ ಮುಂದೆ ನಮ್ಮನ್ನೇ ತಗ್ಗಿಸಿಕೊಂಡು, ನಮಗೂ ನಮ್ಮ ಮನೆಯವರಿಗೂ ನಮ್ಮ ಎಲ್ಲ ಆಸ್ತಿಗೂ ಪ್ರಯಾಣದಲ್ಲಿ ಶುಭವನ್ನು ಕೋರಬೇಕೆಂದು ಪ್ರಕಟಿಸಿದೆ.
- Verse 22: ನಮ್ಮ ದೇವರ ಕೃಪಾಹಸ್ತ ಅವರ ಎಲ್ಲ ಶರಣಾರ್ಥಿಗಳ ಮೇಲಿತ್ತು. ನಮ್ಮ ದೇವರನ್ನು ತೊರೆದುಬಿಟ್ಟವರೆಲ್ಲರು ಅವರ ಪ್ರಬಲವಾದ ರೌದ್ರಕ್ಕೆ ಗುರಿಯಾಗುವರು ಎಂದು ನಾವು ಅರಸನ ಮುಂದೆ ಹೇಳಿದ್ದೆವು. ಆದುದರಿಂದ ದಾರಿಯಲ್ಲಿ ನಮ್ಮನ್ನು ಶತ್ರುಗಳಿಂದ ರಕ್ಷಿಸುವುದಕ್ಕಾಗಿ ಸೈನ್ಯವನ್ನಾಗಲಿ, ಅಶ್ವಬಲವನ್ನಾಗಲಿ ಕೇಳಿಕೊಳ್ಳುವುದಕ್ಕೆ ನಾನು ನಾಚಿಕೊಂಡಿದ್ದೆ.
- Verse 23: ನಾವು ಈ ಕಾರಣ ಉಪವಾಸಮಾಡಿ ದೇವರನ್ನು ಪ್ರಾರ್ಥಿಸಿದೆವು; ಅವರು ನಮಗೆ ಪ್ರಸನ್ನರಾದರು.
- Verse 24: ಅನಂತರ ನಾನು ಯಾಜಕರ ಮುಖ್ಯಸ್ಥರಿಂದ ಶೇರೇಬ್ಯನನ್ನೂ ಹಷಬ್ಯನನ್ನೂ ಇವರ ಸಹೋದರರಲ್ಲಿ ಹತ್ತು ಮಂದಿಯನ್ನೂ ಆರಿಸಿಕೊಂಡೆ.
- Verse 25: ಅರಸನಿಂದಲು, ಅವನ ಮಂತ್ರಿಗಳಿಂದಲು, ಪದಾಧಿಕಾರಿಗಳಿಂದಲು, ಅಲ್ಲಿದ್ದ ಎಲ್ಲ ಇಸ್ರಯೇಲರಿಂದಲು ನಮ್ಮ ದೇವರ ಆಲಯಕ್ಕೆ ಕಾಣಿಕೆಯಾಗಿ ಕೊಡಲಾಗಿದ್ದ ಬೆಳ್ಳಿಬಂಗಾರವನ್ನು ಹಾಗು ಸಾಮಾಗ್ರಿಗಳನ್ನು ತೂಕಮಾಡಿ ಅವರಿಗೆ ಒಪ್ಪಿಸಿದೆ.
- Verse 26: ಅವರ ಕೈಗೆ ಕೊಟ್ಟ ಸಾಮಾನುಗಳ ತೂಕ: ಬೆಳ್ಳಿ 22 ಮೆಟ್ರಿಕ್ ಟನ್; ಬೆಳ್ಳಿಯ ನೂರು ಸಾಮಾಗ್ರಿಗಳ ತೂಕ 70 ಕಿಲೋಗ್ರಾಂ; ಬಂಗಾರ 3400 ಕಿಲೋಗ್ರಾಂ.
- Verse 27: ಬಂಗಾರದ ಇಪ್ಪತ್ತು ಬಟ್ಟಲುಗಳು ಪ್ರತಿಯೊಂದೂ 8:4 ಕಿಲೋಗ್ರಾಂ; ಇವುಗಳಲ್ಲದೆ ಶ್ರೇಷ್ಠವಾದ ಕಂಚಿನ ಎರಡು ಪಾತ್ರೆಗಳಿದ್ದವು. ಅವು ಬಂಗಾರದಷ್ಟು ಬೆಲೆಯುಳ್ಳವುಗಳು.
- Verse 28: ನಾನು ಅವರಿಗೆ, ‘ನೀವು ಸರ್ವೇಶ್ವರನ ಸ್ವಕೀಯರು; ಆ ಪಾತ್ರೆಗಳು ಕೂಡ ದೇವರ ವಸ್ತುಗಳು; ಆ ಬೆಳ್ಳಿಬಂಗಾರ ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರನಿಗೆ ಸಮರ್ಪಿತವಾದ ಕಾಣಿಕೆ.
- Verse 29: ಆದುದರಿಂದ ನೀವು ಜಾಗರೂಕರಾಗಿ ಇದ್ದು ಜೆರುಸಲೇಮಿನಲ್ಲಿರುವ ಯಾಜಕರ ಮತ್ತು ಲೇವಿಯರ ಮುಖ್ಯಸ್ಥರ ಮುಂದೆ ಹಾಗು ಇಸ್ರಯೇಲ್ ಗೋತ್ರಪ್ರಧಾನರ ಮುಂದೆ ಇವುಗಳನ್ನು ತೂಕಮಾಡಿ ಸರ್ವೇಶ್ವರನ ಆಲಯದ ಕೊಠಡಿಗಳಲ್ಲಿಡುವವರೆಗೂ ಎಚ್ಚರಿಕೆಯಿಂದ ನೋಡಿಕೊಳ್ಳಿ’ ಎಂದು ಹೇಳಿದೆ.
- Verse 30: ಆ ಯಾಜಕರು ಹಾಗು ಲೇವಿಯರು ಜೆರುಸಲೇಮಿನ ದೇವಾಲಯಕ್ಕೆ ತಲುಪಿಸುವ ಉದ್ದೇಶದಿಂದ ಆ ಬೆಳ್ಳಿಬಂಗಾರವನ್ನೂ ಉಪಕರಣಗಳನ್ನೂ ತೂಕಮಾಡಿಸಿ ತಮ್ಮ ವಶದಲ್ಲಿ ಇಟ್ಟುಕೊಂಡರು.
- Verse 31: ನಾವು ಮೊದಲನೆಯ ತಿಂಗಳಿನ ಹನ್ನೆರಡನೆಯ ದಿನದಲ್ಲಿ ಅಹವಾ ನದಿಯನ್ನು ಬಿಟ್ಟು ಜೆರುಸಲೇಮಿಗೆ ಹೊರಟೆವು. ನಮ್ಮ ದೇವರ ಕೃಪಾಹಸ್ತ ನಮ್ಮನ್ನು ಪಾಲಿಸುತ್ತಾ ಇತ್ತು. ಶತ್ರುಗಳ ಹಾಗು ದಾರಿಯಲ್ಲಿ ಹೊಂಚುಹಾಕುವವರ ಕೈಗೆ ಸಿಕ್ಕದಂತೆ ಅವರು ನಮ್ಮನ್ನು ಪಾರುಮಾಡಿದರು.
- Verse 32: ನಾವು ಜೆರುಸಲೇಮನ್ನು ಸೇರಿ ಮೂರು ದಿವಸ ವಿಶ್ರಮಸಿಕೊಂಡೆವು.
- Verse 33: ನಾಲ್ಕನೆಯ ದಿನ ನಮ್ಮ ದೇವರ ಆಲಯದಲ್ಲಿ ಊರೀಯನ ಮಗ ಮೆರೇಮೋತ್ ಎಂಬ ಯಾಜಕನಿಗೆ ಬೆಳ್ಳಿಬಂಗಾರವನ್ನೂ ಉಪಕರಣಗಳನ್ನೂ ತೂಕಮಾಡಿ ಒಂದೊಂದಾಗಿ ಎಣಿಸಿ ಕೊಟ್ಟೆವು. ಫೀನೆಹಾಸನ ವಂಶದವನಾದ ಎಲ್ಲಾಜಾರ್, ಯೇಷೂವನ ಮಗ ಯೋಜಾಬಾದ್, ಬಿನ್ನೂಯನ ಮಗ ನೋವದ್ಯ ಎಂಬ ಲೇವಿಯರು ಅವನ ಜೊತೆಯಲ್ಲಿದ್ದರು.
- Verse 34: ಎಲ್ಲವುಗಳ ತೂಕ ತಕ್ಷಣವೇ ಲಿಖಿತವಾಯಿತು.
- Verse 35: ದೇಶಾಂತರದ ಸೆರೆಯಿಂದ ಮರಳಿ ಬಂದವರು ಇಸ್ರಯೇಲ್ ದೇವರಿಗೆ ತೊಂಬತ್ತಾರು ಟಗರುಗಳನ್ನು, ಎಪ್ಪತ್ತೇಳು ಕುರಿಮರಿಗಳನ್ನು, ಸಮಸ್ತ ಇಸ್ರಯೇಲರ ಪರವಾಗಿ ಹನ್ನೆರಡು ಹೋರಿಗಳನ್ನು ಹಾಗು ದೋಷಪರಿಹಾರಾರ್ಥವಾಗಿ ಹನ್ನೆರಡು ಹೋತಗಳನ್ನು ದಹನಬಲಿಗಾಗಿ ಸಮರ್ಪಿಸಿದರು. ಅಂತೆಯೇ ಇವೆಲ್ಲವೂ ಸರ್ವೇಶ್ವರನಿಗೆ ದಹನಬಲಿಯಾಗಿ ಸಮರ್ಪಿತವಾದುವು.
- Verse 36: ಆಮೇಲೆ ಅವರು ರಾಜಶಾಸನವನ್ನು ರಾಜೋದ್ಯೋಗಸ್ಥರಿಗೂ ನದಿಯಾಚೆಯ ರಾಜ್ಯಪಾಲರಿಗೂ ಒಪ್ಪಿಸಿದರು. ಅಂದಿನಿಂದ ಆ ಅಧಿಕಾರಿಗಳು ಜನರಿಗೂ ದೇವಾಲಯಕ್ಕೂ ಸಹಾಯಮಾಡಿದರು.