ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಲೂಕ
22ನೇ ಅಧ್ಯಾಯ
- Verse 1: ಪಾಸ್ಕಮಹೋತ್ಸವವು ಸಮೀಪಿಸುತ್ತಿತ್ತು. ಅದು ಹುಳಿರಹಿತ ರೊಟ್ಟಿಯನ್ನು ಭುಜಿಸುವ ಹಬ್ಬ.
- Verse 2: ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಯೇಸುಸ್ವಾಮಿಯನ್ನು ಕೊಲ್ಲಿಸಲು ಆಲೋಚನೆ ಮಾಡುತ್ತಿದ್ದರು; ಜನರ ಭಯ ಅವರಿಗೆ ಇದ್ದುದರಿಂದ ಅದಕ್ಕೆ ಗುಟ್ಟಾದ ಮಾರ್ಗವನ್ನು ಹುಡುಕುತ್ತಿದ್ದರು.
- Verse 3: ಅಷ್ಟರಲ್ಲಿ ಯೇಸುವಿನ ಹನ್ನೆರಡುಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದನು ಸೈತಾನನಿಗೆ ವಶನಾದನು.
- Verse 4: ಆ ಯೂದನು ಮುಖ್ಯಯಾಜಕರ ಬಳಿಗೆ ಹಾಗೂ ಮಹಾದೇವಾಲಯದ ಪಹರೆಯ ದಳಪತಿಗಳ ಬಳಿಗೆ ಹೋಗಿ, ಯೇಸುವನ್ನು ಅವರಿಗೆ ಹಿಡಿದುಕೊಡುವ ವಿಧಾನವನ್ನು ಕುರಿತು ಸಮಾಲೋಚಿಸಿದನು.
- Verse 5: ಇದರಿಂದ ಅವರಿಗೆ ಅತ್ಯಾನಂದವಾಯಿತು. ಅವರು ಹಣಕೊಡುವುದಾಗಿ ವಾಗ್ದಾನ ಮಾಡಿದರು.
- Verse 6: ಅವನೂ ಸಮ್ಮತಿಸಿ, ಜನಜಂಗುಳಿ ಇಲ್ಲದ ಸಂದರ್ಭದಲ್ಲಿ ಯೇಸುವನ್ನು ಹಿಡಿದು ಒಪ್ಪಿಸಲು ಸಮಯ ಕಾಯುತ್ತಾ ಇದ್ದನು.
- Verse 7: ಹುಳಿರಹಿತ ರೊಟ್ಟಿಯ ಹಬ್ಬ ಆರಂಭವಾಯಿತು. ಪಾಸ್ಕ ಕುರಿಮರಿಯನ್ನು ಕೊಯ್ಯಬೇಕಾದ ದಿನವು ಬಂದಿತು.
- Verse 8: ಆದುದರಿಂದ ಯೇಸುಸ್ವಾಮಿ ತಮ್ಮ ಶಿಷ್ಯರಾದ ಪೇತ್ರ ಹಾಗೂ ಯೊವಾನ್ನನನ್ನು ಕರೆದು, “ಹೋಗಿ, ಪಾಸ್ಕಭೋಜನ ಸಿದ್ಧಮಾಡಿರಿ,” ಎಂದರು.
- Verse 9: “ಎಲ್ಲಿ ಸಿದ್ಧಪಡಿಸಬೇಕು?” ಎಂದು ಅವರು ಕೇಳಿದಾಗ,
- Verse 10: “ನೀವು ಪಟ್ಟಣವನ್ನು ಪ್ರವೇಶಿಸುವಾಗ ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬನನ್ನು ಎದುರುಗೊಳ್ಳುವಿರಿ. ಅವನನ್ನು ಹಿಂಬಾಲಿಸಿ, ಅವನು ಹೋಗುವ ಮನೆಗೆ ಹೋಗಿರಿ.
- Verse 11: ಆ ಮನೆಯ ಯಜಮಾನನಿಗೆ, ‘ನನ್ನ ಶಿಷ್ಯರ ಜೊತೆಯಲ್ಲಿ ಪಾಸ್ಕಭೋಜನ ಮಾಡಲು ಕೊಠಡಿ ಎಲ್ಲಿ, ಎಂದು ನಿಮ್ಮನ್ನು ವಿಚಾರಿಸಲು ನಮ್ಮ ಗುರು ಹೇಳಿದ್ದಾರೆ,’ ಎನ್ನಿ.
- Verse 12: ಅವನು ಮೇಲ್ಮಾಳಿಗೆಯಲ್ಲಿ ವಿಶಾಲವಾದ ಹಾಗೂ ಸುಸಜ್ಜಿತವಾದ ಕೊಠಡಿಯೊಂದನ್ನು ತೋರಿಸುವನು. ಅಲ್ಲಿ ಸಿದ್ಧಮಾಡಿ,” ಎಂದರು.
- Verse 13: ಅಂತೆಯೇ ಶಿಷ್ಯರಿಬ್ಬರು ಹೋಗಿ ಯೇಸು ತಮಗೆ ಹೇಳಿದ ಪ್ರಕಾರ ಎಲ್ಲವೂ ವ್ಯವಸ್ಥಿತವಾಗಿರುವುದನ್ನು ಕಂಡು ಪಾಸ್ಕಭೋಜನವನ್ನು ತಯಾರಿಸಿದರು.
- Verse 14: ನಿಶ್ಚಿತ ಸಮಯ ಬಂದಾಗ ಯೇಸುಸ್ವಾಮಿ ಶಿಷ್ಯರ ಸಮೇತ ಊಟಕ್ಕೆ ಕುಳಿತರು.
- Verse 15: ಆಗ ಅವರು ಶಿಷ್ಯರಿಗೆ, “ನಾನು ಯಾತನೆಯನ್ನು ಅನುಭವಿಸುವುದಕ್ಕೆ ಮುಂಚೆ ನಿಮ್ಮೊಡನೆ ಈ ಪಾಸ್ಕಭೋಜನವನ್ನು ಮಾಡಲು ಬಹಳ ಅಪೇಕ್ಷೆಯಿಂದ ಎದುರುನೋಡುತ್ತಿದ್ದೆನು.
- Verse 16: ದೇವರ ಸಾಮ್ರಾಜ್ಯದಲ್ಲಿ ಇದು ಪೂರ್ಣ ಅರ್ಥವನ್ನು ಪಡೆಯುವ ತನಕ ನಾನಿದನ್ನು ಇನ್ನು ಭುಜಿಸುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
- Verse 17: ಅನಂತರ ಯೇಸು ಪಾನಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, “ಇದನ್ನು ತೆಗೆದುಕೊಂಡು ನಿಮ್ಮಲ್ಲಿ ಹಂಚಿಕೊಳ್ಳಿರಿ;
- Verse 18: ದೇವರ ಸಾಮ್ರಾಜ್ಯವು ಬರುವ ತನಕ ಇನ್ನು ನಾನು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ ಎಂದು ನಿಮಗೆ ಹೇಳುತ್ತೇನೆ,” ಎಂದರು.
- Verse 19: ಬಳಿಕ ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, “ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ನನ್ನ ಸ್ಮರಣೆಗಾಗಿ ಇದನ್ನು ಮಾಡಿರಿ,” ಎಂದರು.
- Verse 20: ಅಂತೆಯೇ, ಊಟವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗಾಗಿ ಸುರಿಸಲಾಗುವ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ.”
- Verse 21: “ಆದರೆ ಇಗೋ, ನನಗೆ ದ್ರೋಹ ಬಗೆಯುವವನು ನನ್ನೊಂದಿಗೆ ಇದೇ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾನೆ.
- Verse 22: ನರಪುತ್ರನೇನೋ ದೈವೇಚ್ಛೆಯ ಪ್ರಕಾರ ಹೊರಟು ಹೋಗುತ್ತಾನೆ; ಆದರೆ ಆತನಿಗೆ ದ್ರೋಹಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ!” ಎಂದರು.
- Verse 23: ಇದನ್ನು ಕೇಳಿದ ಶಿಷ್ಯರು ಇಂಥ ದುಷ್ಕೃತ್ಯಮಾಡುವವನು ತಮ್ಮಲ್ಲಿ ಯಾರಿರಬಹುದೆಂದು ಒಬ್ಬರನ್ನೊಬ್ಬರು ವಿಚಾರಿಸತೊಡಗಿದರು.
- Verse 24: ತಮ್ಮಲ್ಲಿ ಅತಿ ಶ್ರೇಷ್ಠನು ಯಾರು ಎಂಬ ವಾದವಿವಾದವು ಶಿಷ್ಯರಲ್ಲಿ ಎದ್ದಿತು.
- Verse 25: ಆಗ ಯೇಸುಸ್ವಾಮಿ, “ಲೌಕಿಕ ರಾಜರು ತಮ್ಮ ಪ್ರಜೆಗಳ ಮೇಲೆ ದೊರೆತನ ಮಾಡುತ್ತಾರೆ; ಅಧಿಕಾರ ನಡೆಸುವವರು ಧರ್ಮಿಷ್ಠರೆನಿಸಿಕೊಳ್ಳುತ್ತಾರೆ.
- Verse 26: ಆದರೆ ನೀವು ಹಾಗಾಗಬಾರದು; ನಿಮ್ಮಲ್ಲಿ ಅತಿ ದೊಡ್ಡವನು ಅತಿ ಚಿಕ್ಕವನಂತಾಗಬೇಕು.
- Verse 27: ಈ ಇಬ್ಬರಲ್ಲಿ ದೊಡ್ಡವನು ಯಾರು - ಊಟ ಮಾಡುವವನೋ? ಊಟ ಬಡಿಸುವವನೋ? ಖಂಡಿತವಾಗಿ ಊಟ ಮಾಡುವವನು. ಆದರೂ ಊಟ ಬಡಿಸುವ ಊಳಿಗದವನಂತೆ ನಾನು ನಿಮ್ಮ ನಡುವೆ ಇದ್ದೇನೆ.
- Verse 28: “ನನ್ನ ಶೋಧನೆ-ವೇದನೆಗಳಲ್ಲಿ ನನ್ನನ್ನು ಬಿಟ್ಟಗಲದೆ ಇದ್ದವರು ನೀವು.
- Verse 29: ನನ್ನ ಪಿತನು ನನಗೆ ರಾಜ್ಯಾಧಿಕಾರವನ್ನು ವಹಿಸಿರುವಂತೆ ನಾನೂ ನಿಮಗೆ ವಹಿಸುತ್ತೇನೆ.
- Verse 30: ನನ್ನ ಸಾಮ್ರಾಜ್ಯದಲ್ಲಿ ನನ್ನ ಸಂಗಡ ಊಟ ಮಾಡುವಿರಿ. ಪಾನ ಮಾಡುವಿರಿ, ಮಾತ್ರವಲ್ಲ ಇಸ್ರಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಸಿಂಹಾಸನಗಳ ಮೇಲೆ ಆಸೀನರಾಗುವಿರಿ.
- Verse 31: “ಸಿಮೋನನೇ, ಸಿಮೋನನೇ, ಕೇಳು: ಗೋದಿಯನ್ನು ತೂರುವಂತೆ ಸೈತಾನನು ನಿಮ್ಮೆಲ್ಲರನ್ನೂ ಶೋಧಿಸಲು ಅಪ್ಪಣೆ ಕೇಳಿಕೊಂಡಿದ್ದಾನೆ.
- Verse 32: ಆದರೆ, ನಾನು ನಿನ್ನ ವಿಶ್ವಾಸವು ಕುಂದದಂತೆ ನಿನಗಾಗಿ ಪ್ರಾರ್ಥನೆ ಮಾಡಿದ್ದೇನೆ. ನೀನು ಪರಿವರ್ತನೆ ಹೊಂದಿದ ನಂತರ ನಿನ್ನ ಸಹೋದರರನ್ನು ದೃಢಪಡಿಸು,” ಎಂದರು.
- Verse 33: ಅದಕ್ಕೆ ಪೇತ್ರನು, “ಗುರುದೇವಾ, ನಿಮ್ಮ ಸಂಗಡ ಸೆರೆಗೆ ಹೋಗುವುದಕ್ಕೂ ಸಾಯುವುದಕ್ಕೂ ಸಿದ್ಧನಿದ್ದೇನೆ,” ಎಂದನು.
- Verse 34: ಆಗ ಯೇಸು, “ಪೇತ್ರನೇ, ಇಂದು ಕೋಳಿಕೂಗುವ ಮೊದಲೇ ನನ್ನನ್ನು ಅರಿಯೆನೆಂದು ನೀನು ಮೂರು ಬಾರಿ ಬೊಂಕುವೆ, ಇದು ಖಂಡಿತ,” ಎಂದರು.
- Verse 35: ಬಳಿಕ ಯೇಸುಸ್ವಾಮಿ, “ನಾನು ನಿಮ್ಮನ್ನು ಬುತ್ತಿ, ಜೋಳಿಗೆ, ಜೋಡು ಒಂದೂ ಇಲ್ಲದೆ ಕಳಿಸಿದಾಗ ನಿಮಗೇನಾದರೂ ಕೊರತೆ ಆಯಿತೇ?” ಎಂದು ಶಿಷ್ಯರನ್ನು ಕೇಳಿದರು. ಅದಕ್ಕೆ ಅವರು, “ಇಲ್ಲ,” ಎಂದು ಉತ್ತರಕೊಟ್ಟರು.
- Verse 36: “ಆದರೆ ಈಗ ಬುತ್ತಿಯಿರುವವನು ಅದನ್ನು ತೆಗೆದುಕೊಳ್ಳಲಿ; ಜೋಳಿಗೆಯಿರುವವನು ಹಾಗೆಯೇ ಮಾಡಲಿ; ಮತ್ತು ಕತ್ತಿಯಿಲ್ಲದವನು ತನ್ನ ಹೊದಿಕೆಯನ್ನು ಮಾರಿ ಒಂದನ್ನು ಕೊಂಡುಕೊಳ್ಳಲಿ.
- Verse 37: ಏಕೆಂದರೆ, ‘ಪಾತಕರಲ್ಲಿ ಒಬ್ಬನಂತೆ ಪರಿಗಣಿತನಾದನು,’ ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯ ನನ್ನಲ್ಲಿ ನೆರವೇರಬೇಕಾದುದು ಅಗತ್ಯ; ನನಗೆ ಸಂಬಂಧಪಟ್ಟಿದ್ದೆಲ್ಲಾ ಸಮಾಪ್ತಿಗೊಳ್ಳಲಿದೆ,” ಎಂದರು.
- Verse 38: “ಗುರುವೇ, ಇಗೋ ಇಲ್ಲಿ ಎರಡು ಕತ್ತಿಗಳಿವೆ,” ಎಂದು ಶಿಷ್ಯರು ಹೇಳಲು ಯೇಸು, “ಅಷ್ಟು ಸಾಕು,” ಎಂದರು.
- Verse 39: ಯೇಸುಸ್ವಾಮಿ ಅಲ್ಲಿಂದ ಹೊರಟು ವಾಡಿಕೆಯ ಪ್ರಕಾರ ಓಲಿವ್ ತೋಪಿನ ಗುಡ್ಡಕ್ಕೆ ಹೋದರು. ಶಿಷ್ಯರು ಅವರ ಹಿಂದೆ ಹೋದರು.
- Verse 40: ಕ್ಲುಪ್ತಸ್ಥಳಕ್ಕೆ ಬಂದಾಗ ಯೇಸು ಅವರಿಗೆ, “ಪ್ರಲೋಭನೆಗೆ ಒಳಗಾಗದಂತೆ ಪ್ರಾರ್ಥನೆಮಾಡಿರಿ,” ಎಂದು ಹೇಳಿ,
- Verse 41: ಒಂದು ಕಲ್ಲೆಸೆತದಷ್ಟು ದೂರ ಹೋಗಿ, ಮೊಣಕಾಲೂರಿ ಪ್ರಾರ್ಥನೆಮಾಡುತ್ತಾ,
- Verse 42: “ಓ ಪಿತನೇ, ನಿಮಗೆ ಇಷ್ಟವಾದರೆ ಈ ಕಷ್ಟದ ಕೊಡವನ್ನು ನನ್ನಿಂದ ತೊಲಗಿಸಿರಿ. ಆದರೂ ನನ್ನ ಚಿತ್ತವಲ್ಲ, ನಿಮ್ಮ ಚಿತ್ತವೇ ನೆರವೇರಲಿ,” ಎಂದರು.
- Verse 43: ಆಗ ಸ್ವರ್ಗದಿಂದ ದೂತನೊಬ್ಬನು ಯೇಸುವಿಗೆ ಪ್ರತ್ಯಕ್ಷವಾಗಿ ಅವರನ್ನು ಸಶಕ್ತರನ್ನಾಗಿ ಮಾಡಿದನು.
- Verse 44: ಕಡುಯಾತನೆಯಲ್ಲಿದ್ದ ಅವರು ಇನ್ನೂ ಶ್ರದ್ಧೆಯಿಂದ ಪ್ರಾರ್ಥಿಸಿದರು. ಅವರ ಬೆವರು ರಕ್ತದ ಹನಿಯಂತೆ ತೊಟ್ಟುತೊಟ್ಟಾಗಿ ನೆಲದ ಮೇಲೆ ಬೀಳುತ್ತಿತ್ತು.
- Verse 45: ಯೇಸು ಪ್ರಾರ್ಥನೆಯಿಂದ ಎದ್ದು ಶಿಷ್ಯರ ಬಳಿಗೆ ಬಂದರು. ಶಿಷ್ಯರಾದರೋ ದುಃಖದಿಂದ ಬಳಲಿ ನಿದ್ರಿಸುತ್ತಿದ್ದರು.
- Verse 46: ಇದನ್ನು ಕಂಡು, “ನೀವು ನಿದ್ರಿಸುತ್ತೀರೇನು? ಎದ್ದು, ನೀವು ಪ್ರಲೋಭನೆಗೆ ಒಳಗಾಗದಂತೆ ಪ್ರಾರ್ಥನೆಮಾಡಿ,” ಎಂದರು.
- Verse 47: ಯೇಸುಸ್ವಾಮಿ ಇನ್ನೂ ಮಾತನಾಡುತ್ತಿದ್ದ ಹಾಗೆ ಜನರ ಗುಂಪೊಂದು ಕಾಣಿಸಿಕೊಂಡಿತು. ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದನು ಅವರಿಗೆ ಮುಂದಾಳಾಗಿ ಬಂದಿದ್ದನು. ಅವನು ಯೇಸುವಿಗೆ ಮುದ್ದಿಡಲು ಹತ್ತಿರ ಬಂದಾಗ,
- Verse 48: ಯೇಸು, “ಯೂದಾ, ಮುದ್ದಿಟ್ಟು ನರಪುತ್ರನನ್ನು ತೋರಿಸಿಕೊಡುವೆಯಾ?” ಎಂದರು.
- Verse 49: ಸುತ್ತಲಿದ್ದ ಶಿಷ್ಯರು ಮುಂದೇನಾಗುವುದೆಂದು ಅರಿತುಕೊಂಡು, “ಗುರುವೇ, ಕತ್ತಿಯಿಂದ ಕಡಿಯೋಣವೇ,” ಎಂದರು.
- Verse 50: ತಕ್ಷಣವೇ ಅವರಲ್ಲಿ ಒಬ್ಬನು ಪ್ರಧಾನಯಾಜಕನ ಆಳನ್ನು ಹೊಡೆದು ಅವನ ಬಲಕಿವಿಯನ್ನು ಕತ್ತರಿಸಿಬಿಟ್ಟನು.
- Verse 51: ಆಗ ಯೇಸು, “ಸಾಕು ನಿಲ್ಲಿಸು,” ಎಂದು ಹೇಳಿ ಅವನ ಕಿವಿಯನ್ನು ಮುಟ್ಟಿ ಗುಣಪಡಿಸಿದರು.
- Verse 52: ಅನಂತರ ಯೇಸು ತಮ್ಮನ್ನು ಹಿಡಿಯುವುದಕ್ಕೆ ಬಂದಿದ್ದ ಮುಖ್ಯಯಾಜಕರನ್ನೂ ದೇವಾಲಯದ ಪಹರೆಯ ದಳಪತಿಗಳನ್ನೂ ಪ್ರಮುಖರನ್ನೂ ನೋಡಿ, “ದರೋಡೆಗಾರನನ್ನು ಹಿಡಿಯುವುದಕ್ಕೆ ಬಂದಂತೆ ಖಡ್ಗಗಳನ್ನು ಮತ್ತು ಲಾಠಿಗಳನ್ನು ತೆಗೆದುಕೊಂಡು ಬಂದಿರುವಿರೋ?
- Verse 53: ನಾನು ಪ್ರತಿದಿನವೂ ಮಹಾದೇವಾಲಯದಲ್ಲಿ ನಿಮ್ಮ ನಡುವೆಯೇ ಇದ್ದೆ. ಆಗ ನೀವು ನನ್ನ ಮೇಲೆ ಕೈಮಾಡಲಿಲ್ಲ; ಆದರೆ ಇದು ನಿಮ್ಮ ಕಾಲ; ಅಂಧಕಾರ ದೊರೆತನ ಮಾಡುವ ಕರಾಳಕಾಲ,” ಎಂದರು.
- Verse 54: ಅನಂತರ ಅವರು ಯೇಸುಸ್ವಾಮಿಯನ್ನು ಬಂಧಿಸಿ ಪ್ರಧಾನಯಾಜಕನ ಭವನಕ್ಕೆ ಕರೆದುಕೊಂಡು ಹೋದರು. ದೂರದಿಂದ ಪೇತ್ರನು ಹಿಂದೆಹಿಂದೆಯೇ ಹೋದನು.
- Verse 55: ಭವನದ ಹೊರಾಂಗಣದ ನಡುವೆ ಬೆಂಕಿಮಾಡಿ ಅದರ ಸುತ್ತಲೂ ಅವರೆಲ್ಲರು ಕುಳಿತುಕೊಂಡಾಗ, ಪೇತ್ರನು ಅವರ ಸಂಗಡ ಸೇರಿ ಕುಳಿತುಕೊಂಡನು.
- Verse 56: ಬೆಂಕಿಯ ಬೆಳಕಿನಲ್ಲಿ ಕುಳಿತಿದ್ದ ಆತನನ್ನು ದಾಸಿಯೊಬ್ಬಳು ದೃಷ್ಟಿಸಿ ನೋಡಿ, “ಇವನು ಕೂಡ ಯೇಸುವಿನ ಸಂಗಡ ಇದ್ದವನು,” ಎಂದಳು.
- Verse 57: ಅದಕ್ಕೆ ಆತ, “ಅವನಾರೋ ನಾನರಿಯೆನಮ್ಮಾ,” ಎಂದು ನಿರಾಕರಿಸಿದನು.
- Verse 58: ಸ್ವಲ್ಪಹೊತ್ತಾದ ಮೇಲೆ ಇನ್ನೊಬ್ಬನು ಆತನನ್ನು ಕಂಡು, “ನೀನು ಕೂಡ ಅವರಲ್ಲಿ ಒಬ್ಬನು,” ಎನ್ನಲು ಪೇತ್ರನು, “ಇಲ್ಲಪ್ಪಾ, ನಾನಲ್ಲ,” ಎಂದುಬಿಟ್ಟನು.
- Verse 59: ಸುಮಾರು ಒಂದು ಗಂಟೆಕಾಲ ಕಳೆದ ಮೇಲೆ ಮತ್ತೊಬ್ಬನು, “ಖಂಡಿತವಾಗಿ ಇವನು ಕೂಡ ಯೇಸುವಿನ ಸಂಗಡ ಇದ್ದವನು. ಏಕೆಂದರೆ, ಇವನೂ ಗಲಿಲೇಯದವನೇ,” ಎಂದು ಒತ್ತಿ ಹೇಳಿದನು.
- Verse 60: ಅದಕ್ಕೆ ಪೇತ್ರನು, “ನೀನು ಏನು ಹೇಳುತ್ತೀಯೋ ನನಗೆ ಅರ್ಥವಾಗುವುದಿಲ್ಲ,” ಎಂದನು. ಆಕ್ಷಣವೇ, ಅವನು ಇನ್ನೂ ಮಾತನಾಡುತ್ತಿರುವಾಗಲೇ, ಕೋಳಿ ಕೂಗಿತು.
- Verse 61: ಆಗ ಪ್ರಭು ಯೇಸು ಹಿಂದಿರುಗಿ ಪೇತ್ರನನ್ನು ದಿಟ್ಟಿಸಿ ನೋಡಿದರು. “ಈ ದಿನ ಕೋಳಿ ಕೂಗುವ ಮೊದಲೇ, ‘ನಾನು ಆತನನ್ನು ಅರಿಯೆನು,’ ಎಂದು ನನ್ನನ್ನು ಮೂರು ಬಾರಿ ನಿರಾಕರಿಸುವೆ,” ಎಂದು ಯೇಸು ನುಡಿದಿದ್ದ ಮಾತುಗಳು ಪೇತ್ರನ ನೆನಪಿಗೆ ಬಂದುವು.
- Verse 62: ಅವನು ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.
- Verse 63: ಯೇಸುಸ್ವಾಮಿಯನ್ನು ಬಂಧಿಸಿ ಹಿಡಿದುಕೊಂಡಿದ್ದವರು ಅವರನ್ನು ಅಣಕಿಸಿದರು, ಹೊಡೆದರು.
- Verse 64: ಕಣ್ಣಿಗೆ ಬಟ್ಟೆ ಕಟ್ಟಿ, “ನಿನ್ನನ್ನು ಹೊಡೆದವರಾರು? ಪ್ರವಾದಿಸು,” ಎಂದು ಕೇಳುತ್ತಿದ್ದರು.
- Verse 65: ಹಲವಾರು ವಿಧದಲ್ಲಿ ಅವರನ್ನು ದೂಷಿಸಿ ನಿಂದಿಸುತ್ತಿದ್ದರು.
- Verse 66: ಅಷ್ಟರಲ್ಲಿ ಬೆಳಗಾಯಿತು. ಪ್ರಜಾಪ್ರಮುಖರೂ ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಸಭೆ ಸೇರಿದರು. ಯೇಸುವನ್ನು ತಂದು ನ್ಯಾಯಸಭೆಯ ಮುಂದೆ ನಿಲ್ಲಿಸಿದರು.
- Verse 67: “ನೀನು ಅಭಿಷಿಕ್ತನಾದ ಲೋಕೋದ್ಧಾರಕನಾಗಿದ್ದರೆ ನಮಗೆ ಹೇಳು,” ಎಂದು ವಿಚಾರಿಸಿದರು. ಆಗ ಯೇಸು, “ನಾನು ಹೇಳಿದರೆ ನೀವು ನನ್ನನ್ನು ನಂಬುವುದಿಲ್ಲ.
- Verse 68: ನಾನೇ ಪ್ರಶ್ನೆಹಾಕಿದರೆ ನೀವು ನನಗೆ ಉತ್ತರಕೊಡುವುದೂ ಇಲ್ಲ.
- Verse 69: ಇನ್ನು ಮುಂದೆ ನರಪುತ್ರನು ಸರ್ವಶಕ್ತ ದೇವರ ಬಲಗಡೆ ಆಸೀನನಾಗಿರುವನು,” ಎಂದರು.
- Verse 70: ಅದಕ್ಕೆ ಅವರೆಲ್ಲರೂ, “ಹಾಗಾದರೆ, ನೀನು ದೇವರ ಪುತ್ರನೋ?’ ಎಂದು ಕೇಳಿದರು. “ನಾನು ಆತನೇ ಎಂದು ನೀವೇ ಹೇಳುತ್ತಿದ್ದೀರಿ,” ಎಂದು ಯೇಸು ಉತ್ತರಕೊಡಲು ಅವರು,
- Verse 71: “ಇನ್ನೇನು ಸಾಕ್ಷಿ ಬೇಕು? ನಾವೇ ಇವನ ಬಾಯಿಂದ ಕೇಳಿದೆವಲ್ಲಾ,” ಎಂದರು.