పరిశుద్ధ గ్రంథము
ಹಳೆಯ ಒಡಂಬಡಿಕೆ
2 ಅರಸುಗಳು
24ನೇ ಅಧ್ಯಾಯ
1 : ಯೆಹೋಯಾಕೀಮನು ಅವನಿಗೆ ಅಧೀನನಾಗಿ ಮೂರು ವರ್ಷಗಳಾದ ನಂತರ ಅವನಿಗೆ ವಿರುದ್ಧ ದಂಗೆಯೆದ್ದನು.
2 : ಸರ್ವೇಶ್ವರ, ತನ್ನ ದಾಸರಾದ ಪ್ರವಾದಿಗಳ ಮುಖಾಂತರ ಮುಂತಿಳಿಸಿದ ಪ್ರಕಾರ ಜುದೇಯ ರಾಜ್ಯವನ್ನು ಹಾಳುಮಾಡುವುದಕ್ಕಾಗಿ ಬಾಬಿಲೋನಿಯ, ಸಿರಿಯ, ಮೋಬಾವ, ಅಮ್ಮೋನ್ ದೇಶೀಯರಾದ ಸುಲಿಗೆಗಾರರನ್ನು ಕಳುಹಿಸಿದರು.
3 : ನಿರಪರಾಧಿಗಳ ಹತ್ಯೆಯಿಂದ ಜೆರುಸಲೇಮನ್ನು ರಕ್ತಮಯವಾಗಿಸಿದ್ದ ಮನಸ್ಸೆಯ ದುಷ್ಕೃತ್ಯಗಳನ್ನು ಸರ್ವೇಶ್ವರ ಕ್ಷಮಿಸದೆ ಹೋದರು;
4 : ಅವುಗಳಿಗಾಗಿ ಯೆಹೂದ್ಯರನ್ನು ತನ್ನ ಸನ್ನಿಧಿಯಿಂದ ತೆಗೆದುಹಾಕಬೇಕೆಂದಿದ್ದುದರಿಂದ ಸರ್ವೇಶ್ವರನ ಅಪ್ಪಣೆಯ ಪ್ರಕಾರ ಈ ಶಿಕ್ಷೆ ಅವರಿಗೆ ವಿಧಿಸಲಾಯಿತು.
5 : ಯೆಹೋಯಾಕೀಮನ ಉಳಿದ ಚರಿತ್ರೆ ಹಾಗು ಕಾರ್ಯಕಲಾಪಗಳು ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ.
6 : ಅವನು ಮೃತನಾಗಿ ಪಿತೃಗಳ ಬಳಿ ಸೇರಿದನು. ಅವನ ಸ್ಥಾನದಲ್ಲಿ ಅವನ ಮಗ ಯೆಹೋಯಾಖೀನನು ಅರಸನಾದನು.
7 : ಬಾಬಿಲೋನಿನ ಅರಸನು ಈಜಿಪ್ಟಿನ ಪ್ರವಾಹಕ್ಕೂ ಯೂಫ್ರಟಿಸ್ ನದಿಗೂ ಮಧ್ಯದಲ್ಲಿದ್ದ ಈಜಿಪ್ಟ್ ರಾಜನ ಎಲ್ಲಾ ದೇಶವನ್ನು ಸ್ವಾಧೀನ ಮಾಡಿಕೊಂಡನು. ಅಂದಿನಿಂದ ಈಜಿಪ್ಟಿನ ಅರಸನು ತನ್ನ ದೇಶದಿಂದ ಈಚೆಗೆ ಬರಲೇ ಇಲ್ಲ.
8 : ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು ಜೆರುಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಜೆರುಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ ಎಂಬಾಕೆ ಇವನ ತಾಯಿ.
9 : ಇವನು ತನ್ನ ತಂದೆಯಂತೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು.
10 : ಅವನ ಕಾಲದಲ್ಲಿ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಸೈನ್ಯದವರು ಜೆರುಸಲೇಮಿಗೆ ದಂಡೆತ್ತಿ ಬಂದು ಅದಕ್ಕೆ ಮುತ್ತಿಗೆ ಹಾಕಿದರು.
11 : ಅಷ್ಟರಲ್ಲಿ ನೆಬೂಕದ್ನೆಚ್ಚರನೂ ಬಂದನು.
12 : ಆಗ ಜುದೇಯದ ಅರಸ ಯೆಹೋಯಾಖೀನನು, ತನ್ನ ತಾಯಿ, ಪರಿವಾರದವರು, ಸೇನಾಪತಿಗಳು, ಕಂಚುಕಿಗಳು ಇವರೊಡನೆ ಅವನ ಬಳಿಗೆ ಹೋದನು. ಅವನು ಇವನನ್ನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಸೆರೆಹಿಡಿದನು.
13 : ಇದಲ್ಲದೆ, ಸರ್ವೇಶ್ವರ ಮುಂತಿಳಿಸಿದ ಪ್ರಕಾರ, ಅವನು ಸರ್ವೇಶ್ವರನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿದ್ದ ದ್ರವ್ಯವನ್ನೆಲ್ಲಾ ದೋಚಿಕೊಂಡು ಹೋದನು. ಇಸ್ರಯೇಲರ ಅರಸನಾದ ಸೊಲೊಮೋನನು ಸರ್ವೇಶ್ವರನ ಆಲಯಕ್ಕಾಗಿ ಮಾಡಿಸಿದ್ದ ಬಂಗಾರದ ಎಲ್ಲಾ ಆಭರಣಗಳನ್ನು ಮುರಿದುಬಿಟ್ಟನು.
14 : ಜೆರುಸಲೇಮಿನಲ್ಲಿದ್ದ ಎಲ್ಲಾ ಪದಾಧಿಕಾರಿಗಳನ್ನೂ ಯೋಧರನ್ನೂ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಒಟ್ಟಾರೆ ಹತ್ತು ಸಾವಿರ ಜನರನ್ನು ಸೆರೆಗೊಯ್ದನು. ನಾಡಿನ ಜನರಲ್ಲಿ ಕೇವಲ ಬಡವರನ್ನು ಹೊರತಾಗಿ ಬೇರೆ ಯಾರನ್ನೂ ಬಿಡಲಿಲ್ಲ.
15 : ಅವನು ಯೆಹೋಯಾಖೀನನ್ನೂ ಅವನ ತಾಯಿ, ಹೆಂಡತಿಯರು, ಕಂಚುಕಿಗಳನ್ನೂ ನಾಡಿನ ಪ್ರಧಾನ ಪುರುಷರು ಇವರನ್ನೂ,
16 : ಏಳು ಸಾವಿರ ಮಂದಿ ಯೋಧರನ್ನೂ ಸಾವಿರ ಮಂದಿ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಜೆರುಸಲೇಮಿನಿಂದ ಬಾಬಿಲೋನಿಗೆ ಒಯ್ದನು. ಅವರೆಲ್ಲರು ಪುಷ್ಟರೂ ರಣವೀರರೂ ಆಗಿದ್ದರು.
17 : ಬಾಬಿಲೋನಿನ ಅರಸನು ಯೆಹೋಯಾಖೀನನಿಗೆ ಬದಲಾಗಿ ಅವನ ಚಿಕ್ಕಪ್ಪನಾದ ಮತ್ತನ್ಯ ಎಂಬುವನನ್ನು ಅರಸನನ್ನಾಗಿ ನೇಮಿಸಿ ಅವನಿಗೆ ‘ಚಿದ್ಕೀಯ’ ಎಂಬ ಹೆಸರಿಟ್ಟನು.
18 : ಚಿದ್ಕೀಯನು ಇಪ್ಪತ್ತೊಂದು ವರ್ಷ ತುಂಬಿದ ಮೇಲೆ ಅರಸನಾಗಿ ಜೆರುಸಲೇಮನ್ನು ಹನ್ನೊಂದು ವರ್ಷ ಆಳಿದನು. ಅವನ ತಾಯಿ ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್ ಎಂಬಾಕೆ.
19 : ಚಿದ್ಕೀಯನು ಯೆಹೋಯಾಕೀಮನಂತೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾಗಿ ಇದ್ದನು.
20 : ಸರ್ವೇಶ್ವರಸ್ವಾಮಿ ಬಹಳ ಕೋಪಗೊಂಡು ಜೆರುಸಲೇಮಿನವರ ಮೇಲೂ ಬೇರೆ ಎಲ್ಲ ಯೆಹೂದ್ಯರ ಮೇಲೂ ಇದನ್ನೆಲ್ಲ ಬರಮಾಡಿ, ಕಡೆಗೆ ಅವರನ್ನು ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟರು.