P. O. C ബൈബിള്
ಹಳೆಯ ಒಡಂಬಡಿಕೆ
2 ಪೂರ್ವಕಾಲದ ಇತಿಹಾಸ
17ನೇ ಅಧ್ಯಾಯ
- Verse 1: ಆಸನಿಗೆ ಅನಂತರ ಅವನ ಮಗ ಯೇಹೋಷಾಫಾಟನು ಅರಸನಾದನು. ಇಸ್ರಯೇಲರಿಂದ ಅಪಾಯವಾಗದಂತೆ ಇವನು ತನ್ನನ್ನೇ ಭದ್ರಪಡಿಸಿಕೊಂಡನು.
- Verse 2: ಜುದೇಯದ ಕೋಟೆಕೊತ್ತಲುಗಳುಳ್ಳ ಎಲ್ಲ ಪಟ್ಟಣಗಳಲ್ಲೂ ಸೈನ್ಯವನ್ನಿರಿಸಿದನು. ಜುದೇಯ ನಾಡಿನಲ್ಲೂ ಹಾಗೂ ತನ್ನ ತಂದೆ ಆಸನು ಕಿತ್ತುಕೊಂಡಿದ್ದ ಎಫ್ರಯಿಮರ ಪಟ್ಟಣಗಳಲ್ಲೂ ಅಧಿಕಾರಿಗಳನ್ನು ನೇಮಿಸಿದನು.
- Verse 3: ಬಾಳ್ದೇವರುಗಳನ್ನು ಅವಲಂಬಿಸದೆ, ತನ್ನ ಪೂರ್ವಿಕನಾದ ದಾವೀದನ ಮೊದಲನೇ ನಡತೆಯ ಪ್ರಕಾರ ಇವನು ನಡೆಯುತ್ತಿದ್ದುದರಿಂದ ಸರ್ವೇಶ್ವರ ಇವನ ಸಂಗಡ ಇದ್ದರು.
- Verse 4: ಇವನು ಇಸ್ರಯೇಲರಂತೆ ನಡೆಯದೆ, ತನ್ನ ಪಿತೃವಿನ ದೇವರಲ್ಲಿ ಭಕ್ತಿಯಿಟ್ಟು ಅವರ ಆಜ್ಞೆಗಳನ್ನು ಅನುಸರಿಸಿದನು.
- Verse 5: ಆದುದರಿಂದ ಸರ್ವೇಶ್ವರ ಇವನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿದರು; ಯೆಹೂದ್ಯರೆಲ್ಲರೂ ಯೆಹೋಷಾಫಾಟನಿಗೆ ಕಾಣಿಕೆ ಕೊಡುತ್ತಿದ್ದುದರಿಂದ ಇವನ ಧನಘನತೆಗಳು ಹೆಚ್ಚಾದವು.
- Verse 6: ಇವನು ಸರ್ವೇಶ್ವರನ ಮಾರ್ಗದಲ್ಲಿ ನಡೆದು, ಧೈರ್ಯದಿಂದ ಜುದೇಯ ನಾಡಿನಲ್ಲಿದ್ದ ಪೂಜಾಸ್ಥಳಗಳನ್ನೂ ಆಶೇರ ವಿಗ್ರಹಸ್ತಂಭಗಳನ್ನೂ ತೆಗೆದುಹಾಕಿಸಿದನು.
- Verse 7: ಇವನು ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ತನ್ನ ಸರದಾರರಾದ ಬೆನ್ಹೈಲ್, ಓಬದ್ಯ, ಜೆಕರ್ಯ, ನೆತನೇಲ್, ಮೀಕಾಯ ಇವರನ್ನೂ
- Verse 8: ಇವರ ಜೊತೆಯಲ್ಲಿ ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್, ಶೆಮೀರಾಮೋತ್, ಯೆಹೋನಾತಾನ್, ಅದೋನೀಯ, ಟೋಬೀಯ, ಟೋಬದೋನೀಯ ಎಂಬ ಲೇವಿಯರನ್ನೂ ಎಲೀಷಾಮಾ, ಯೆಹೋರಾಮ್ ಎಂಬ ಯಾಜಕರನ್ನೂ ಧರ್ಮೋಪದೇಶ ಮಾಡುವುದಕ್ಕಾಗಿ ಜುದೇಯ ನಾಡಿನ ಪಟ್ಟಣಗಳಿಗೆ ಕಳುಹಿಸಿದನು.
- Verse 9: ಇವರು ಸರ್ವೇಶ್ವರನ ಧರ್ಮಶಾಸ್ತ್ರವನ್ನು ತೆಗೆದುಕೊಂಡು ಜುದೇಯ ನಾಡಿನಲ್ಲೆಲ್ಲಾ ಸಂಚಾರಮಾಡಿ ಜನರಿಗೆ ಬೋಧಿಸಿದರು.
- Verse 10: ಜುದೇಯದ ಸುತ್ತಲಿನ ದೇಶಗಳ ರಾಜ್ಯಗಳವರೆಗೆ ಸರ್ವೇಶ್ವರನ ಭಯವಿತ್ತು. ಆದುದರಿಂದ ಅವರು ಯೆಹೋಷಾಫಾಟನೊಡನೆ ಯುದ್ಧಕ್ಕೆ ಬರಲಿಲ್ಲ.
- Verse 11: ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಯನ್ನೂ ಕಪ್ಪವನ್ನಾಗಿ ಬೆಳ್ಳಿಯನ್ನೂ ತಂದುಕೊಡುತ್ತಿದ್ದರು. ಅರೇಬಿಯರು ತಮ್ಮ ಪಶುಪ್ರಾಣಿಗಳಲ್ಲಿ ಏಳು ಸಾವಿರದ ಏಳುನೂರು ಟಗರುಗಳನ್ನೂ ಏಳು ಸಾವಿರದ ಏಳುನೂರು ಹೋತಗಳನ್ನೂ ಕೊಡುತ್ತಿದ್ದರು.
- Verse 12: ಹೀಗೆ ಯೆಹೋಷಾಫಾಟನು ಅತ್ಯಧಿಕವಾಗಿ ಅಭಿವೃದ್ಧಿಹೊಂದಿ ಜುದೇಯ ನಾಡಿನಲ್ಲಿ ಕೋಟೆಗಳನ್ನು ಮತ್ತು ಉಗ್ರಾಣದ ಪಟ್ಟಣಗಳನ್ನು ಕಟ್ಟಿಸಿದನು.
- Verse 13: ಜುದೇಯದ ಪಟ್ಟಣಗಳಲ್ಲಿ ದವಸಧಾನ್ಯಗಳ ದೊಡ್ಡ ಮಳಿಗೆಯಿತ್ತು. ಜೆರುಸಲೇಮಿನಲ್ಲಿ ರಣವೀರರಾದ ಯೋಧರು ಇದ್ದರು:
- Verse 14: ಗೋತ್ರಗಳ ಪ್ರಕಾರ ಲೆಕ್ಕಿತರಾದ ಈ ಸೇನಾನಾಯಕರ ಕ್ರಮಬದ್ಧ ಪಟ್ಟಿಯಿದು; ಅದ್ನ - ಇವನು ಯೆಹೂದ್ಯರಲ್ಲಿ ಮೂರು ಲಕ್ಷಮಂದಿ ರಣವೀರರ ಅಧಿಪತಿ;
- Verse 15: ಯೆಹೋಹಾನಾನ್ - ಇವನು ಎರಡು ಲಕ್ಷದ ಎಂಬತ್ತು ಸಾವಿರ ಮಂದಿ ರಣವೀರರ ಅಧಿಪತಿ;
- Verse 16: ಅಮಸ್ಯ - ಜಿಕ್ರಿಯ ಮಗನಾದ ಇವನು ಎರಡು ಲಕ್ಷ ಮಂದಿ ರಣವೀರರೊಡನೆ ಸ್ವೇಚ್ಛೆಯಿಂದ ತನ್ನನ್ನೇ ಸರ್ವೇಶ್ವರನಿಗೆ ಪ್ರತಿಷ್ಠಿಸಿಕೊಂಡಿದ್ದನು;
- Verse 17: ಎಲ್ಯಾದ - ಇವನು ಬೆನ್ಯಾಮೀನರಲ್ಲಿ ಬಿಲ್ಲುಗುರಾಣಿಗಳನ್ನು ಹಿಡಿದುಕೊಂಡ ಎರಡು ಲಕ್ಷ ಸೈನಿಕರ ನಾಯಕ ಹಾಗೂ ರಣವೀರ;
- Verse 18: ಯೆಹೋಜಾಬಾದ್ - ಇವನು ಒಂದು ಲಕ್ಷ ಎಂಬತ್ತು ಸಾವಿರ ಮಂದಿ ಯುದ್ಧಸನ್ನದ್ಧರ ನಾಯಕ.
- Verse 19: ಅರಸನಿಗೆ ತನ್ನ ಸನ್ನಿಧಿಯಲ್ಲಿ ಸೇವೆಮಾಡುತ್ತಿದ್ದ ಈ ಯೋಧರಲ್ಲದೆ ಕೋಟೆಕೊತ್ತಲಗಳಿದ್ದ ಬೇರೆ ಪಟ್ಟಣಗಳಲ್ಲಿಯೂ ಸೈನಿಕರಾಗಿ ಇದ್ದರು.