ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
25ನೇ ಅಧ್ಯಾಯ
- Verse 1: ಎತ್ತಿರುವೆ ಪ್ರಭೂ, ಹೃನ್ಮನಗಳನು ನಿನ್ನತ್ತ I ಇಟ್ಟಿರುವೆ ಭರವಸೆ ನಿನ್ನಲೆ ದೇವಾ ಸನ್ನುತ II
- Verse 2: ಶತ್ರುಗಾಗದಿರಲಿ ಸಡಗರ I ನನಗೊದಗದಿರಲಿ ಮುಜುಗರ II
- Verse 3: ಆಗಲಿ ಆಶಾಭಂಗ ನಿನ್ನೆದುರಾಳಿಗಳಿಗೆ I ಹಾಗಾಗದಿರಲಿ ನಿನ್ನ ನಿರೀಕ್ಷಿಸುವವರಿಗೆ II
- Verse 4: ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು I ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು II
- Verse 5: ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ I ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ II
- Verse 6: ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು I ಆದಿಯಿಂದ ನೀ ತೋರಿದಚಲ ಪ್ರೀತಿಯನು II
- Verse 7: ಯೌವನದೆನ್ನ ಪಾಪಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ I ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ II
- Verse 8: ಸತ್ಯಸ್ವರೂಪನು, ದಯಾವಂತನು ಪ್ರಭು I ದಾರಿತಪ್ಪಿದವರಿಗೆ ಬೋಧಕನು ವಿಭು II
- Verse 9: ದೀನರನು ನಡೆಸುವನು ತನ್ನ ವಿಧಿಗನುಸಾರ I ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ II
- Verse 10: ಪ್ರಭುವಿನೊಪ್ಪಂದಗಳ ಪಾಲಕರಿಗೆ ಆತನ ಮಾರ್ಗಗಳು ಸನ್ನುತ I ಆತನ ವಿಧಿ ನಿಬಂಧನೆಗಳ ಪರಿಪಾಲಕರಿಗೆ ಅವುಗಳು ಸುಪ್ರೀತ II
- Verse 11: ನಿನ್ನ ನಾಮದ ನಿಮಿತ್ತ ನನ್ನನು ಈಕ್ಷಿಸು I ಎನ್ನ ಘೋರ ಪಾಪವನು ಪ್ರಭು ಕ್ಷಮಿಸು II
- Verse 12: ಪ್ರಭುವಿನ ಭಯಭಕುತಿಯುಳ್ಳವನಿಗೆ I ಲಭಿಪುದು ಖಚಿತ ಋಜುಮಾರ್ಗದ ಕಲಿಕೆ II
- Verse 13: ಬಾಳುವನಂಥವನು ಸುಖಸೌಭಾಗ್ಯದಿಂದ I ಬದುಕುವುದವನ ಸಂತತಿ ನಾಡಿನೊಡೆತನದಿಂದ II
- Verse 14: ಪ್ರಭುವಿನ ಮೈತ್ರಿ, ಭಯಭಕುತಿಯುಳ್ಳವರಿಗೆ I ಅಂಥವರಿಗೆ ವ್ಯಕ್ತ, ಆತನ ಒಡಂಬಡಿಕೆ II
- Verse 15: ತಿರುಗಿದೆ ಎನ್ನ ನಯನ ಪ್ರಭುವಿನತ್ತ I ಉರುಲಿಂದ ಕಾಲನು ಕಳಚಿದನಾತ II
- Verse 16: ಒಬ್ಬೊಂಟಿಗನಾದೆ, ಸಿಕ್ಕಿಕೊಂಡೆ ಸಂಕಟಕೆ I ಕಟಾಕ್ಷಿಸೋ ಪ್ರಭು, ಕರುಣೆತೋರೋ ತಬ್ಬಲಿಗೆ II
- Verse 17: ನಿವಾರಿಸೆನ್ನ ಮನಕ್ಲೇಶವನು I ಪರಿಹರಿಸೆನ್ನ ದುಃಖದುಗುಡವನು II
- Verse 18: ನೋಡೆನ್ನ ಬಾಧೆ ಬವಣೆಗಳನು I ತೊಡೆದು ಹಾಕೆನ್ನ ಪಾಪಗಳನು II
- Verse 19: ಶತ್ರುಗಳಿಹರು ನೋಡು ಸಹಸ್ರಾರು I ಕ್ರೋಧದಿಂದೆನ್ನ ಹಗೆ ಮಾಡುತಿಹರು II
- Verse 20: ಕಾಪಾಡು ಪ್ರಭು, ರಕ್ಷಿಸೆನ್ನ ಪ್ರಾಣವನು I ನಿರಾಶೆಗೊಳಿಸಬೇಡ, ಶರಣಾಗತನು ನಾನು II
- Verse 21: ನಿರ್ದೋಷ, ನಿಷ್ಕಪಟ ನಡತೆ ನನಗೆ ರಕ್ಷೆ I ನೀನೆ ಪ್ರಭು ನನಗಿರುವ ದೃಢ ನಿರೀಕ್ಷೆ II
- Verse 22: ಉದ್ಧರಿಸು ದೇವಾ, ಇಸ್ರಯೇಲರನು I ಸಮಸ್ತ ಬೇನೆ ಬವಣೆಗಳಿಂದವರನು II