ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
69ನೇ ಅಧ್ಯಾಯ
- Verse 1: ಒಡನೆ ಕೈ ನೀಡಿ ಕಾಪಾಡು ದೇವಾ I ಕುತ್ತಿಗೆಗೆ ಬಂದಿದೆ ತುಂಬು ಪ್ರವಾಹ II
- Verse 2: ಮುಳುಗುತಿಹೆನು ಕಳ್ಳುಸುಬಿನಲಿ; ಕಾಲೂರಲೆನಗೆ ನೆಲವಿಲ್ಲ I ಸಿಕ್ಕಿಹೆನು ಆಳ ಮಡುವಿನಲ್ಲಿ, ಹುಚ್ಚುಹೊಳೆ ಕೊಚ್ಚುತ್ತಿದೆಯಲ್ಲಾ II
- Verse 3: ಕಾಯ್ದು ಕಾಯ್ದು ಕಣ್ಣು ಗುಳಿಬಿದ್ದಿದೆ ದೇವಾ, ನಿನಗಾಗಿ I ಗಂಟಲು ಒಣಗಿದೆ, ಜೀವ ಸೊರಗಿದೆ, ನಿನ್ನ ಕೂಗಿ ಕೂಗಿ II
- Verse 4: ತಲೆ ಕೂದಲಿಗಿಂತ ಮಿಗಿಲಿಹರು ನಿಷ್ಕಾರಣ ದ್ವೇಷಿಗಳು I ಬಲಿಷ್ಟರಿಹರು ನನ್ನ ಕೊಲೆಗಡುಕರು, ನಿರ್ನಿಮಿತ್ತ ಶತ್ರುಗಳು I ಕಳ್ಳನಾನಲ್ಲನಾದರೂ ದಂಡಕೋರುತಿಹರು ವೈರಿಗಳು II
- Verse 5: ನನ್ನ ಮೂರ್ಖತನವನು ದೇವಾ, ನೀ ಬಲ್ಲೆಯಯ್ಯಾ I ನನ್ನಪರಾಧಗಳು ನಿನಗೆ ಮರೆಯಾಗಿಲ್ಲವಯ್ಯಾ II
- Verse 6: ಪ್ರಭು ಸೇನಾಧೀಶ್ವರಾ, I ನನ್ನಿಂದ ನಿರಾಶೆಯಾಗದಿರಲಿ, ನಿನ್ನ ನಂಬಿದವರಿಗೆ II ಇಸ್ರಯೇಲರ ದೇವಾ I ನನ್ನಿಂದ ನಿಂದೆಯಾಗದಿರಲಿ ನಿನ್ನ ದರ್ಶನಾರ್ಥಿಗಳಿಗೆ II
- Verse 7: ನಿನಗಾಗಿಯೇ ನಾ ನಿಂದೆಗೊಳಗಾದೆನಯ್ಯಾ I ನಾಚಿಕೆಯಿಂದಲೆ ಮುಖ ಮುಚ್ಚಿಕೊಂಡೆನಯ್ಯಾ II
- Verse 8: ನನ್ನವರಿಗೇ ನಾನನ್ಯನಾದೆನಯ್ಯಾ I ಒಡ ಹುಟ್ಟಿದವರಿಗೇ ಹೊರಗಿನವನಾದೆನಯ್ಯಾ II
- Verse 9: ಅಗ್ನಿಯಂತೆನ್ನ ದಹಿಸುತ್ತಿದೆ ನಿನ್ನಾಲಯದಭಿಮಾನ I ಎನ್ನ ಮೇಲೆರಗಿದೆ ನಿನ್ನ ಕಡುದ್ರೋಹಿಗಳ ದೂಷಣ II
- Verse 10: ಅತ್ತತ್ತು ನಾ ಒಪ್ಪೊತ್ತಿದ್ದುದೆಲ್ಲಾ I ಚುಚ್ಚುಮಾತಿಗೆ ಕಾರಣವಾಯಿತಲ್ಲಾ II
- Verse 11: ಗೋಣಿತಟ್ಟನು ನಾನುಟ್ಟುಕೊಂಡೆನಯ್ಯಾ I ಅಣಕ ಅವಹೇಳನಕೆ ಗುರಿಯಾದೆನಯ್ಯಾ II
- Verse 12: ಊರ ಬಾಗಿಲಲಿ ಕೂರುವವರ ಹರಟೆಗೆ ಕಾರಣನಾದೆನಯ್ಯಾ I ಸಾರಾಯಿ ಮದ್ಯಸಾರ ಕುಡಿವವರ ಪದ್ಯವಸ್ತುವಾದೆನಯ್ಯಾ II
- Verse 13: ಪ್ರಸನ್ನಕಾಲದಲ್ಲಿ ಪ್ರಭು, ನಾ ಮೊರೆಯಿಡುತ್ತಿರುವೆ ನಿನಗೆ I ಪ್ರೀತಿಮಯ ದೇವಾ, ಜೀವೋದ್ಧಾರಕ, ಸದುತ್ತರ ನೀಡೆನಗೆ II
- Verse 14: ಕಳ್ಳುಸುಬಿನಲಿ ನಾನಿಳಿದು ಹೋಗದಂತೆ ಸೆಳೆದುಕೊ I ಪೊಳ್ಳು ದುರುಳರ ಮಡುವಿನಲಿ ನಾ ಮುಳುಗದಂತೆ ಎಳೆದುಕೊ II
- Verse 15: ಹುಚ್ಚು ಹೊಳೆಯು ಎನ್ನ ಕೊಚ್ಚದಿರಲಯ್ಯಾ I ಮಡುವು ಎನ್ನ ಸೆಳೆದುಕೊಳ್ಳದಿರಲಯ್ಯಾ I ಪಾತಾಳವೆನ್ನನು ನುಂಗದಿರಲಯ್ಯಾ II
- Verse 16: ಆಲಿಸೆನ್ನ ಪ್ರಭು, ನಿನ್ನ ಪ್ರೀತಿ ಸುಮಧುರ I ಕಟಾಕ್ಷಿಸೆನ್ನನು ದೇವಾ, ಕರುಣಾಸಾಗರ II
- Verse 17: ನಿನ್ನ ದಾಸನಿಗೆ ವಿಮುಖನಾಗಬೇಡಯ್ಯಾ I ಆಪತ್ತಿನಲ್ಲಿರುವೆ, ತಡಮಾಡಬೇಡಯ್ಯಾ II
- Verse 18: ಹತ್ತಿರ ಬಂದೆನ್ನ ಉದ್ಧರಿಸಯ್ಯಾ I ಶತ್ರುಗಳ ಕೈಯಿಂದ ರಕ್ಷಿಸಯ್ಯಾ II
- Verse 19: ನನಗಾದ ನಿಂದೆ, ಅಪಮಾನ, ಲಜ್ಜೆ ನಿನಗೆ ತಿಳಿದಿದೆಯಯ್ಯಾ I ನನ್ನ ವೈರಿ ವಿರೋಧಿಗಳು ನಿನಗೆ ಮರೆಯಾಗಿಲ್ಲವಯ್ಯಾ II
- Verse 20: ನಿಂದೆಯಿಂದ ಮನನೊಂದು ಹತಾಶನಾಗಿರುವೆನಯ್ಯಾ I ಹಾತೊರೆದರೂ ದಯೆತೋರುವನಾರೂ ಸಿಗಲಿಲ್ಲ I ಅರಸಿದರೂ ಸಾಂತ್ವನನೀಡುವವನು ದೊರಕಲಿಲ್ಲ II
- Verse 21: ಹಸಿದ ನನಗೆ ವಿಷಬೆರೆತ ಆಹಾರವಿತ್ತರಯ್ಯಾ I ಬಾಯಾರಿದೆನಗೆ ಕಹಿ ಕಾಡಿಯನು ಕೊಟ್ಟರಯ್ಯಾ II
- Verse 22: ಅವರಿಗೆ ಬಡಿಸಿದ ಊಟವೇ ಅವರಿಗೆ ಉರುಲಾಗಲಿ I ಅವರ ಹಬ್ಬದೌತಣವೇ ಅವರಿಗೆ ಬೋನಾಗಲಿ II
- Verse 23: ಅವರ ಕಣ್ಣು ಮಬ್ಬಾಗಿ ಕಾಣದೆಹೋಗಲಿ I ಅವರ ಸೊಂಟ ಬಿಡುವಿಲ್ಲದೆ ನಡುಗುತ್ತಿರಲಿ II
- Verse 24: ನಿನ್ನ ರೌದ್ರ ಅವರ ಮೇಲೆರಗಲಿ I ನಿನ್ನ ಕೋಪಾಗ್ನಿ ಅವರನು ದಹಿಸಲಿ II
- Verse 25: ಅವರ ಪಾಳೆಯ ಹಾಳು ಬೀಳಲಿ I ಅವರ ಗುಡಾರ ಬಿಕೋ ಎನಿಸಲಿ II
- Verse 26: ನೀ ಗಾಯಪಡಿಸಿದವರನು ಪೀಡಿಸುತಿಹರು I ಗಾಯದ ಮೇಲೆ ಬರೆಯೆಳೆಯುತಿಹರು II
- Verse 27: ದಂಡನೆ ಮೇಲೆ ದಂಡನೆಯನು ಅವರಿಗೆ ವಿಧಿಸು I ಅವರು ನಿರಪರಾಧಿಗಳೆಂಬುದನು ತಪ್ಪಿಸು II
- Verse 28: ಉಳಿಸಬೇಡವರನು ಜೀವಬಾಧ್ಯರ ಪಟ್ಟಿಯಲಿ I ಸೇರಿಸಬೇಡವರನು ಸಜ್ಜನರ ಸಂಖ್ಯೆಯಲಿ II
- Verse 29: ದೇವಾ, ನಾ ನೊಂದುಬೆಂದಿಹೆನಯ್ಯಾ I ಉದ್ಧರಿಸಿ ನನ್ನನು ಕಾಪಾಡಯ್ಯಾ II
- Verse 30: ಸಂಕೀರ್ತಿಸುವೆನು ದೇವರ ಶ್ರೀನಾಮವನು I ಕೃತಜ್ಞತೆಯಿಂದಾತನನು ಕೊಂಡಾಡುವೆನು II
- Verse 31: ಸ್ವಾಮಿ ದೇವನಿಗಿದುವೇ ಸುಪ್ರೀತಿ I ಕೊಂಬುಗೊರಸುಳ್ಳ ಗೂಳಿಬಲಿಗಿಂತ II
- Verse 32: ಇದನರಿತು ದೀನದಲಿತರು ಆನಂದಗೊಳ್ಳಲಿ I ದೇವನನು ಅರಸುವವರು ಪುನಶ್ಚೇತನಗೊಳ್ಳಲಿ II
- Verse 33: ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು I ಸೆರೆಯಲ್ಲಿಹ ತನ್ನವರನು ತಿರಸ್ಕರಿಸನು II
- Verse 34: ಭೂಮ್ಯಾಕಾಶಗಳು ಆತನನು ಕೊಂಡಾಡಲಿ I ಸಾಗರಗಳು, ಜಲಚರಗಳು ಆತನನು ಭಜಿಸಲಿ II
- Verse 35: ರಕ್ಷಿಸುವನು ದೇವನು ಆ ಸಿಯೋನ್ ಪಟ್ಟಣವನು I ಕಟ್ಟಿಸುವನು ಯೆಹೂದ ನಾಡಿನ ನಗರಗಳನು I ಸ್ವಂತವಾಗಿರಿಸಿಕೊಂಬರು ಆತನ ಪ್ರಜೆ ಅದನು II
- Verse 36: ಅವರ ವಂಶಜರೇ ಬಾಧ್ಯಸ್ಥರಾಗುವರದಕೆ I ದೇವರನಾಮ ಪ್ರಿಯರೇ ನಿವಾಸಿಗಳು ಅದಕೆ II