ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
43ನೇ ಅಧ್ಯಾಯ
- Verse 1: ಆಮೇಲೆ ಆ ಪುರುಷ ನನ್ನನ್ನು ಪೂರ್ವದ ಬಾಗಿಲಿಗೆ ಬರಮಾಡಿದನು.
- Verse 2: ಆಗ ಇಗೋ, ಇಸ್ರಯೇಲಿನ ದೇವರ ತೇಜಸ್ಸು ಪೂರ್ವಮಾರ್ಗವಾಗಿ ಬಂದಿತು. ಅವರ ಧ್ವನಿ ಜಲಪ್ರವಾಹದ ಘೋಷದಂತಿತ್ತು. ಅವರ ತೇಜಸ್ಸಿನಿಂದ ಭೂಮಿ ಬೆಳಗಿತು.
- Verse 3: ಮೊದಲು ನನಗೆ ಕಂಡುಬಂದ ತೇಜಸ್ಸಿನಂತೆ ಅದು ಕಾಣಿಸಿತು. ಪಟ್ಟಣವನ್ನು ಹಾಳುಮಾಡಲು ನಾನು ಬಂದಾಗ ಎಂಥದನ್ನು ಕಂಡೆನೋ ಅಂಥದನ್ನೇ ಕಂಡೆನು. ಕೆಬಾರ್ ನದಿಯ ಹತ್ತಿರ ನನಗಾದ ಅದ್ಭುತ ದರ್ಶನದಂಥ ದರ್ಶನ ಈಗಲೂ ನನಗಾಯಿತು; ಅದನ್ನು ನೋಡಿ ಅಡ್ಡಬಿದ್ದೆ.
- Verse 4: ಆಗ ಸರ್ವೇಶ್ವರನ ತೇಜಸ್ಸು ಪೂರ್ವಬಾಗಿಲ ಮಾರ್ಗವಾಗಿ ದೇವಸ್ಥಾನವನ್ನು ಪ್ರವೇಶಿಸಿತು.
- Verse 5: ದೇವರಾತ್ಮ ನನ್ನನ್ನು ಎತ್ತಿ ಒಳಗಿನ ಪ್ರಾಕಾರಕ್ಕೆ ತಂದಿತು. ಆಗ ಏನಾಶ್ಚರ್ಯ! ಸರ್ವೇಶ್ವರನ ತೇಜಸ್ಸು ದೇವಸ್ಥಾನವನ್ನು ತುಂಬಿಕೊಂಡಿತ್ತು.
- Verse 6: ದೇವಸ್ಥಾನದೊಳಗಿಂದ ನನ್ನನ್ನು ಸಂಬೋಧಿಸಿ ನುಡಿಯುವವನ ಶಬ್ದ ನನ್ನ ಕಿವಿಗೆ ಬಿದ್ದಿತು; ಆ ಪುರುಷ ನನ್ನ ಪಕ್ಕದಲ್ಲೇ ನಿಂತಿದ್ದನು.
- Verse 7: ನುಡಿಯುವಾತನು ನನಗೆ ಹೀಗೆ ಹೇಳಿದನು: “ನರಪುತ್ರನೇ, ಇದು ನನ್ನ ಸಿಂಹಾಸನಸ್ಥಾನ, ನನ್ನ ಪಾದಸನ್ನಿಧಿ. ಇಲ್ಲಿ ನಾನು ಇಸ್ರಯೇಲರ ಮಧ್ಯೆ ಸದಾ ವಾಸಿಸುವೆನು. ಇಸ್ರಯೇಲ್ ವಂಶದವರಾಗಲಿ ಅವರ ಅರಸರಾಗಲಿ, ತಮ್ಮ ದೇವದ್ರೋಹದಿಂದ, ಗತಿಸಿದ ಅರಸರ ಶವಗಳಿಂದ ಹಾಗು
- Verse 8: ನನ್ನ ಹೊಸ್ತಲನಿಲವುಗಳ ಪಕ್ಕದಲ್ಲಿ ತಮ್ಮ ಹೊಸ್ತಲುನಿಲವುಗಳನ್ನು ಹಾಕಿಕೊಂಡು, ನನ್ನ ಮನೆಗೂ ತಮ್ಮ ಮನೆಗೂ ಒಂದೇ ಗೋಡೆಯಾಗುವಂತೆ ಮಾಡಿಕೊಳ್ಳುವುದರಿಂದ ಇನ್ನು ನನ್ನ ಪವಿತ್ರನಾಮವನ್ನು ಅಶುದ್ಧಗೊಳಿಸರು. ಹೌದು, ಹಿಂದೆ ತಾವು ನಡೆಸಿದ ದುರಾಚಾರಗಳಿಂದ ನನ್ನ ಪವಿತ್ರನಾಮವನ್ನು ಹೊಲೆಗೆಡಿಸಿದರು; ಆದಕಾರಣ ನಾನು ಕೋಪಗೊಂಡು ಅವರನ್ನು ನಾಶಮಾಡಿದೆ.
- Verse 9: ಈಗಲಾದರೂ ತಮ್ಮ ದೇವದ್ರೋಹವನ್ನು ಮತ್ತು ಅರಸರ ಶವಗಳನ್ನು ನನಗೆ ದೂರಮಾಡಲಿ; ಆಗ ನಾನು ಅವರ ಮಧ್ಯೆ ಸದಾ ವಾಸಿಸುವೆನು.
- Verse 10: “ನರಪುತ್ರನೇ, ಇಸ್ರಯೇಲ್ ವಂಶದವರು ತಮ್ಮ ಅಪರಾಧಗಳ ನಿಮಿತ್ತ ನಾಚಿಕೆಪಡುವಂತೆ ದೇವಾಲಯವನ್ನು ಅವರಿಗೆ ತೋರಿಸು; ಅವರು ಅದನ್ನು ಅಳತೆಮಾಡಲಿ.
- Verse 11: ತಾವು ನಡೆಸಿದ ದುಷ್ಕೃತ್ಯಗಳಿಗೆಲ್ಲಾ ನಾಚಿಕೆಪಟ್ಟರೆ, ನೀನು ದೇವಸ್ಥಾನದ ರೂಪ, ಅದರ ವ್ಯವಸ್ಥೆ, ಗಮನಾಗಮನ ನಿಯಮಗಳು, ಸಕಲ ರಚನಾ ವಿಧಾನಗಳು, ಸಮಸ್ತ ವಿಧಿಗಳು, ಸರ್ವನಿರ್ಮಾಣ ರೀತಿಗಳು, ಎಲ್ಲ ಕಟ್ಟಳೆಗಳು ಇವೆಲ್ಲವನ್ನು ಅವರಿಗೆ ತಿಳಿಸಿ, ಅವರು ಅದರ ಪೂರ್ಣಕ್ರಮವನ್ನೂ ಎಲ್ಲ ವಿಧಿಗಳನ್ನೂ ಅನುಸರಿಸಿ ಕೈಗೊಳ್ಳುವಂತೆ ಅವರ ಕಣ್ಣೆದುರಿಗೆ ಬರೆ.
- Verse 12: ಇದೇ ದೇವಸ್ಥಾನದ ನಿಯಮ. ಪರ್ವತಾಗ್ರದಲ್ಲಿನ ಅದರ ಪ್ರದೇಶವೆಲ್ಲ ಸುತ್ತುಮುತ್ತಲು ಅತಿಪರಿಶುದ್ಧವಾಗಿರಬೇಕು. ಇಗೋ, ದೇವಸ್ಥಾನದ ನಿಯಮ ಇದೇ.”
- Verse 13: ಬಲಿಪೀಠವು ಮೀಟರ್ ಅಳತೆಯ ಪ್ರಕಾರ ಹೀಗಿರಬೇಕು. ಕೆಳಭಾಗದ ಎತ್ತರ ಐವತ್ತು ಸೆಂಟಿಮೀಟರ್, ಮೇಲಿನ ಬಿಡುವಿನ ಅಗಲವು ಸುತ್ತಲೂ ಐವತ್ತು ಸೆಂಟಿಮೀಟರ್, ಬಿಡುವಿನ ತುದಿಯಲ್ಲಿ ಸುತ್ತಣ ದಿಂಡಿನ ಅಗಲವು ಇಪ್ಪತ್ತೈದು ಸೆಂಟಿಮೀಟರ್; ಇದೇ ಬಲಿವೇದಿಕೆಯ ಪೀಠ.
- Verse 14: ನೆಲದ ಮೇಲೆ ಅಂದರೆ, ಕೆಳಭಾಗದ ಮೇಲೆ ಕೆಳಗಣ ಅಂತಸ್ತಿನ ಎತ್ತರವು ಒಂದು ಮೀಟರ್, ಅದರ ಮೇಲಣ ಬಿಡುವಿನ ಅಗಲವು ಐವತ್ತು ಸೆಂಟಿಮೀಟರ್, ಆ ಚಿಕ್ಕ ಅಂತಸ್ತಿನ ಮೇಲೆ ದೊಡ್ಡ ಅಂತಸ್ತಿನ ಎತ್ತರವು ಎರಡು ಮೀಟರ್; ಮೇಲಿನ ಬಿಡುವಿನ ಅಗಲವು ಐವತ್ತು ಸೆಂಟಿಮೀಟರ್.
- Verse 15: ಹೋಮಕುಂಡದ ಅಂತಸ್ತಿನ ಎತ್ತರವು ಎರಡು ಮೀಟರ್; ಆ ಹೋಮಕುಂಡದ ಮೇಲ್ಗಡೆಯಲ್ಲಿ ನಾಲ್ಕು ಕೊಂಬುಗಳು ಇರಬೇಕು.
- Verse 16: ಹೋಮಕುಂಡವು ಆರು ಮೀಟರ್ ಉದ್ದ, ಆರು ಮೀಟರ್ ಅಗಲ ಚಚ್ಚೌಕವಾಗಿರಬೇಕು.
- Verse 17: ದೊಡ್ಡ ಅಂತಸ್ತು ಏಳು ಮೀಟರ್ ಉದ್ದವಾಗಿಯೂ ಏಳು ಮೀಟರ್ ಅಗಲವಾಗಿಯೂ ನಾಲ್ಕು ಪಾರ್ಶ್ವಗಳಲ್ಲಿ ಸಮವಾಗಿರಬೇಕು. ಸುತ್ತಣ ದಿಂಡಿನ ಅಗಲವು ಇಪ್ಪತ್ತೈದು ಸೆಂಟಿಮೀಟರ್; ಕೆಳಭಾಗದ ಸುತ್ತಣ ಅಂಚಿನ ಅಗಲವು ಐವತ್ತು ಸೆಂಟಿಮೀಟರ್; ಸೋಪಾನವು ಮೂಡಲಿಗೆ ಅಭಿಮುಖವಾಗಿರಬೇಕು.
- Verse 18: ಆಗ ಆ ಪುರುಷ ನನಗೆ ಹೀಗೆ ಹೇಳಿದನು: “ನರಪುತ್ರನೇ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ದಹನಬಲಿಗೂ, ರಕ್ತವೆರಚುವ ಸಂಸ್ಕಾರಕ್ಕೂ ಬಲಿಪೀಠವನ್ನು ನಿರ್ಮಿಸುವಾಗ ಈ ವಿಧಿಗಳನ್ನು ಕೈಗೊಳ್ಳಬೇಕು.
- Verse 19: ಲೇವಿಯರೂ, ಚಾದೋಕನ ಸಂತಾನದವರೂ ನನ್ನ ಸನ್ನಿಧಿಸೇವಕರೂ ಆದ ಯಾಜಕರಿಗೆ ನೀನು ಒಂದು ಹೋರಿಯನ್ನು ದೋಷಪರಿಹಾರಕ ಬಲಿಗಾಗಿ ಕೊಡು. ಇದು ಸರ್ವೇಶ್ವರನಾದ ದೇವರ ನುಡಿ.
- Verse 20: ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಬಲಿಪೀಠದ ನಾಲ್ಕು ಕೊಂಬುಗಳಿಗೆ, ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೆ ಹಾಗು ಸುತ್ತಣ ದಿಂಡಿಗೆ ಹಚ್ಚಿ ಬಲಿಪೀಠದ ದೋಷವನ್ನು ಪರಿಹರಿಸಿ, ಅದನ್ನು ಶುದ್ಧಿಮಾಡು.
- Verse 21: ದೋಷಪರಿಹಾರಕ ಬಲಿಗಾಗಿ ವಧಿತವಾದ ಹೋರಿಯನ್ನು ಒಪ್ಪಿಸಿದಾಗ ಪವಿತ್ರಾಲಯದ ಹೊರಗೆ, ದೇವಸ್ಥಾನಕ್ಕೆ ಸಂಬಂಧಪಟ್ಟ ಗೊತ್ತಾದ ಸ್ಥಳದಲ್ಲಿ, ಅದನ್ನು ಸುಡಬೇಕು.
- Verse 22: ಎರಡನೆಯ ದಿನದಲ್ಲಿ, ಕಳಂಕರಹಿತವಾದ ಹೋತವನ್ನು ದೋಷಪರಿಹಾರಕ ಬಲಿಗಾಗಿ ಅರ್ಪಿಸು; ಹೋರಿಯಿಂದ ಬಲಿಪೀಠವನ್ನು ಶುದ್ಧಿಮಾಡಿದಂತೆ ಹೋತದಿಂದಲೂ ಶುದ್ಧಿಮಾಡತಕ್ಕದ್ದು.
- Verse 23: ನೀನು ಬಲಿಪೀಠದ ಶುದ್ಧೀಕಾರ್ಯವನ್ನು ಪೂರೈಸಿದ ಮೇಲೆ ಕಳಂಕರಹಿತವಾದ ಹೋರಿಯನ್ನೂ ಹಿಂಡಿನಿಂದ ತಂದ ಕಳಂಕರಹಿತ ಟಗರನ್ನೂ ಅರ್ಪಿಸು.
- Verse 24: ನೀನು ಅವುಗಳನ್ನು ಸರ್ವೇಶ್ವರನಿಗೆ ಸಮರ್ಪಿಸಿದಾಗ ಯಾಜಕರು ಅವುಗಳ ಮೇಲೆ ಉಪ್ಪನ್ನು ಚೆಲ್ಲಿ, ಸರ್ವೇಶ್ವರನಿಗಾಗಿ ದಹನಬಲಿ ಒಪ್ಪಿಸಬೇಕು.
- Verse 25: ಏಳು ದಿವಸ ನೀನು ದಿನದಿನವೂ ದೋಷಪರಿಹಾರಕ್ಕಾಗಿ ಒಂದೊಂದು ಹೋತವನ್ನು ಅರ್ಪಿಸು; ಯಾಜಕರು ಸಹ ಕಳಂಕರಹಿತವಾದ ಹೋರಿಯನ್ನೂ ಹಿಂಡಿನಿಂದ ತಂದ ಕಳಂಕರಹಿತವಾದ ಟಗರನ್ನೂ ಅರ್ಪಿಸಲಿ;
- Verse 26: ಹೀಗೆ ಏಳು ದಿವಸ ಬಲಿಪೀಠದ ದೋಷವನ್ನು ಪರಿಹರಿಸುತ್ತಾ, ಅದನ್ನು ಶುದ್ಧಿಮಾಡಿ ಪ್ರತಿಷ್ಠಿಸಬೇಕು.
- Verse 27: ಏಳು ದಿನಗಳ ಕಾರ್ಯವನ್ನು ಮುಗಿಸಿದ ಬಳಿಕ, ಎಂಟನೆಯ ದಿನದಲ್ಲಿಯೂ ಮುಂದೆಯೂ ಯಾಜಕರು ಬಲಿಪೀಠದ ಮೇಲೆ ನಿಮ್ಮ ಪರವಾಗಿ ದಹನಬಲಿಗಳನ್ನೂ ಶಾಂತಿಸಮಾಧಾನ ಬಲಿಗಳನ್ನೂ ಅರ್ಪಿಸಬೇಕು; ಆಗ ನಾನು ನಿಮಗೆ ಪ್ರಸನ್ನನಾಗುವೆನು; ಇದು ಸರ್ವೇಶ್ವರನಾದ ದೇವರ ನುಡಿ.”