P. O. C ബൈബിള്
ಹಳೆಯ ಒಡಂಬಡಿಕೆ
ಆದಿಕಾಂಡ
28ನೇ ಅಧ್ಯಾಯ
- Verse 1: ಆಗ ಇಸಾಕನು ಯಕೋಬನನ್ನು ಕರೆದು, “ನೀನು ಕಾನಾನ್ಯರ ಹೆಣ್ಣನ್ನು ಮದುವೆಮಾಡಿಕೊಳ್ಳಬೇಡ;
- Verse 2: ಮೆಸಪೊಟೇಮಿಯಾ ನಾಡಿನಲ್ಲಿರುವ ನಿನ್ನ ತಾತ ಬೆತೂವೇಲನ ಮನೆಗೆ ಹೊರಟುಹೋಗು. ಅಲ್ಲಿ ನಿನ್ನ ಸೋದರಮಾವನಾದ ಲಾಬಾನನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊ,” ಎಂದು ಅಪ್ಪಣೆ ಮಾಡಿದನು.
- Verse 3: “ಸರ್ವಶಕ್ತ ದೇವರು ನಿನ್ನನ್ನು ಆಶೀರ್ವದಿಸಲಿ; ನಿನಗೆ ಬಹಳ ಸಂತತಿಯನ್ನು ಕೊಡಲಿ; ನಿನ್ನಿಂದ ಅನೇಕ ಜನಾಂಗಗಳು ಹುಟ್ಟುವಂತೆ ಅನುಗ್ರಹಿಸಲಿ;
- Verse 4: ದೇವರು ಅಬ್ರಹಾಮನಿಗೆ ಕೊಟ್ಟ ಆಶೀರ್ವಾದವನ್ನು ನಿನಗೂ ನಿನ್ನ ಸಂತತಿಗೂ ಕೊಡಲಿ; ನೀನು ಪ್ರವಾಸಿಯಾಗಿರುವ ಈ ನಾಡನ್ನು, ಅಂದರೆ ಅಬ್ರಹಾಮನಿಗೆ ದೇವರು ವಾಗ್ದಾನಮಾಡಿದ್ದ ಈ ನಾಡನ್ನು, ನೀನು ಸ್ವಂತ ಸೊತ್ತಾಗಿಸಿಕೊಳ್ಳುವಂತಾಗಲಿ!” ಎಂದು ಹರಸಿ ಕಳುಹಿಸಿಬಿಟ್ಟನು.
- Verse 5: ಯಕೋಬನು ಮೆಸಪೊಟೇಮಿಯಗೆ ಹೊರಟು, ಅರಾಮ್ಯನಾದ ಬೆತೂವೇಲನ ಮಗನೂ ಮತ್ತು ಯಕೋಬ ಹಾಗು ಏಸಾವನಿಗೆ ತಾಯಿಯಾದ ರೆಬೆಕ್ಕಳಿಗೆ ಅಣ್ಣನೂ ಆಗಿದ್ದ ಲಾಬಾನನ ಬಳಿಗೆ ಹೋದನು.
- Verse 6: ಇಸಾಕನು ಯಕೋಬನನ್ನು ಹರಸಿ ಮೆಸಪೊಟೇಮಿಯಾದಲ್ಲಿ ಹೆಣ್ಣನ್ನು ತೆಗೆದುಕೊಳ್ಳುವುದಕ್ಕಾಗಿ ಕಳುಹಿಸಿದ್ದು, ಹರಸುವಾಗ ಕಾನಾನ್ಯರ ಹೆಣ್ಣನ್ನು ತೆಗೆದುಕೊಳ್ಳಬಾರದೆಂದು ಅಪ್ಪಣೆಮಾಡಿದ್ದು,
- Verse 7: ಹಾಗೂ ಯಕೋಬನು ತನ್ನ ತಂದೆ ತಾಯಿಗಳು ಹೇಳಿದಂತೆ ಮೆಸಪೊಟೇಮಿಯಗೆ ಹೋದದ್ದು - ಇದೆಲ್ಲವನ್ನು ಇತ್ತ ಏಸಾವನು ತಿಳಿದುಕೊಂಡನು.
- Verse 8: ಕಾನಾನ್ಯರ ಹೆಣ್ಣುಗಳು ತನ್ನ ತಂದೆ ಇಸಾಕನಿಗೆ ಹಿಡಿಸಲಿಲ್ಲ ಎಂಬುದನ್ನು ಅರಿತುಕೊಂಡ ಅವನು
- Verse 9: ತನಗೆ ಈಗಾಗಲೇ ಇದ್ದ ಹೆಂಡತಿಯರ ಜೊತೆಗೆ ಅಬ್ರಹಾಮನ ಮಗನಾದ ಇಷ್ಮಾಯೇಲನ ಬಳಿಗೆ ಹೋಗಿ, ಅವನ ಮಗಳೂ ನೆಬಾಯೋತನ ತಂಗಿಯೂ ಆಗಿದ್ದ ಮಹಲತ್ ಎಂಬಾಕೆಯನ್ನು ಮದುವೆಮಾಡಿಕೊಂಡನು.
- Verse 10: ಯಕೋಬನು ಖಾರಾನಿಗೆ ಹೋಗಬೇಕೆಂದು ಬೇರ್ಷೆಬದಿಂದ ಹೊರಟನು.
- Verse 11: ಪ್ರಯಾಣಮಾಡುತ್ತಾ ಅವನು ಒಂದು ಸ್ಥಳಕ್ಕೆ ಬಂದು ಸೇರಿದನು. ಹೊತ್ತು ಮುಳುಗಿದ್ದ ಕಾರಣ ಆ ರಾತ್ರಿ ಅಲ್ಲಿಯೇ ಇಳಿದುಕೊಂಡನು. ಅಲ್ಲಿದ್ದ ಕಲ್ಲುಗಳಲ್ಲಿ ಒಂದು ಕಲ್ಲನ್ನು ತಲೆದಿಂಬಾಗಿ ಇಟ್ಟುಕೊಂಡು ಆ ಸ್ಥಳದಲ್ಲೇ ಮಲಗಿಕೊಂಡನು.
- Verse 12: ಆ ರಾತ್ರಿ ಅವನಿಗೆ ಒಂದು ಕನಸು ಬಿತ್ತು, ಆ ಕನಸಿನಲ್ಲಿ ಒಂದು ನಿಚ್ಚಣಿಗೆ ನೆಲದ ಮೆಲೆ ನಿಂತಿತ್ತು; ಅದರ ತುದಿ ಆಕಾಶವನ್ನು ಮುಟ್ಟಿತ್ತು. ಅದರ ಮೇಲೆ ದೇವದೂತರು ಹತ್ತುತ್ತಾ ಇಳಿಯುತ್ತಾ ಇದ್ದರು.
- Verse 13: ಇದಲ್ಲದೆ, ಸರ್ವೇಶ್ವರಸ್ವಾಮಿ ಅವನ ಬಳಿಯಲ್ಲೇ ನಿಂತು, “ನಿನ್ನ ತಂದೆಯೂ ಅಬ್ರಹಾಮನ ದೇವರೂ ಇಸಾಕನ ದೇವರೂ ಆಗಿರುವ ಸರ್ವೇಶ್ವರ ನಾನೇ. ನೀನು ಮಲಗಿಕೊಂಡಿರುವ ಈ ನಾಡನ್ನು ನಿನಗೂ ನಿನ್ನ ಸಂತತಿಗೂ ಕೊಡುತ್ತೇನೆ.
- Verse 14: ನಿನ್ನ ಸಂತತಿ ಭೂಮಿಯ ಧೂಳಿನಂತೆ ಅಸಂಖ್ಯ ಆಗುವುದು; ನೀನು ಪೂರ್ವಪಶ್ಚಿಮ - ದಕ್ಷಿಣೋತ್ತರ ದಿಕ್ಕುಗಳಿಗೆ ಹರಡಿಕೊಳ್ಳುವೆ. ನಿನ್ನ ಮುಖಾಂತರ ಹಾಗೂ ನಿನ್ನ ಸಂತತಿಯ ಮುಖಾಂತರ ಜಗದ ಎಲ್ಲ ರಾಷ್ಟ್ರಗಳೂ ಆಶೀರ್ವಾದ ಪಡೆಯುವುವು.
- Verse 15: ಗಮನಿಸು, ನಾನು ನಿನ್ನೊಂದಿಗೆ ಇರುತ್ತೇನೆ. ನೀನು ಎಲ್ಲಿಗೆ ಹೋದರೂ ನಿನ್ನನ್ನು ಕಾಪಾಡಿ ಈ ನಾಡಿಗೆ ಮರಳಿ ಬರಮಾಡುತ್ತೇನೆ. ನಾನು ನಿನಗೆ ಹೇಳಿದ್ದನ್ನೆಲ್ಲ ನೆರವೇರಿಸದೆ ಬಿಡುವುದಿಲ್ಲ,” ಎಂದರು.
- Verse 16: ಯಕೋಬನು ನಿದ್ರೆಯಿಂದ ಎಚ್ಚೆತ್ತನು. "ನಿಶ್ಚಯವಾಗಿ ಸರ್ವೇಶ್ವರ ಈ ಸ್ಥಳದಲ್ಲಿದ್ದಾರೆ; ಇದು ನನಗೆ ತಿಳಿಯದೆಹೋಯಿತು!” ಎಂದುಕೊಂಡನು;
- Verse 17: ಅಲ್ಲದೆ ಭಯಭಕ್ತಿಯಿಂದ, “ಇದು ಮಹಾಗಂಭೀರವಾದ ಸ್ಥಳ; ದೇವರ ಸ್ಥಾನವೇ ಹೊರತು ಬೇರೆಯಲ್ಲ, ಇದು ಪರಲೋಕದ ಬಾಗಿಲು!” ಎಂದನು.
- Verse 18: ಯಕೋಬನು ಬೆಳಗಿನ ಜಾವದಲ್ಲಿ ಎದ್ದು ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಆ ಕಲ್ಲನ್ನು ಸ್ಮಾರಕಸ್ತಂಭವಾಗಿ ನೆಟ್ಟನು. ಅದರ ಮೇಲೆ ಎಣ್ಣೆ ಹೊಯ್ದು ಅಭ್ಯಂಗಿಸಿದನು.
- Verse 19: ‘ಲೂಜ್’ ಎಂದು ಹೆಸರು ಪಡೆದಿದ್ದ ಆ ಊರಿಗೆ ‘ಬೇತೇಲ್’ ಎಂದು ನಾಮಕರಣ ಮಾಡಿದನು.
- Verse 20: ಅದೂ ಅಲ್ಲದೆ ಅವನು ಹೀಗೆಂದು ಹರಕೆ ಮಾಡಿಕೊಂಡನು; “ದೇವರು ನನ್ನ ಸಂಗಡವಿದ್ದು ನಾನು ಕೈಗೊಂಡ ಪ್ರಯಾಣದಲ್ಲಿ ನನ್ನನ್ನು ಕಾಪಾಡಿ, ಹೊಟ್ಟೆಗೆ ಊಟವನ್ನೂ ಮೈಗೆ ಬಟ್ಟೆಯನ್ನೂ ಕೊಟ್ಟು,
- Verse 21: ನನ್ನ ತಂದೆಯ ಮನೆಗೆ ಸುರಕ್ಷಿತವಾಗಿ ಮರಳಿ ಬರಮಾಡಿದರೆ ಸರ್ವೇಶ್ವರಸ್ವಾಮಿಯೇ ನನಗೆ ದೇವರು ಆಗುವರು.
- Verse 22: ನಾನು ಸ್ಮಾರಕಸ್ತಂಭವಾಗಿ ನೆಟ್ಟಿರುವ ಈ ಕಲ್ಲು ದೇವರ ಮನೆಯಾಗುವುದು; ಅದು ಮಾತ್ರವಲ್ಲ, ನೀವು ನನಗೆ ಕೊಡುವ ಎಲ್ಲ ಆಸ್ತಿಪಾಸ್ತಿಯಲ್ಲಿ ಹತ್ತರಲ್ಲಿ ಒಂದು ಪಾಲನ್ನು ನಿಮಗೆ ಸಮರ್ಪಿಸುತ್ತೇನೆಂದು ಮಾತುಕೊಡುತ್ತೇನೆ.”