ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಸಮುವೇಲನು
8ನೇ ಅಧ್ಯಾಯ
- Verse 1: ಸಮುವೇಲನು ಮುದುಕನಾದ ಮೇಲೆ ತನ್ನ ಮಕ್ಕಳನ್ನು ಇಸ್ರಯೇಲರಿಗೆ ನ್ಯಾಯಸ್ಥಾಪಕರನ್ನಾಗಿ ಮಾಡಿದನು.
- Verse 2: ಅವನ ಹಿರಿಯ ಮಗನ ಹೆಸರು ಯೋವೇಲ್, ಎರಡನೇ ಮಗನ ಹೆಸರು ಅಬೀಯ; ಇವರ ನ್ಯಾಯಾಸನವು ಬೇರ್ಷೆಬದಲ್ಲಿತ್ತು.
- Verse 3: ಇವರು ತಂದೆಯ ಮಾರ್ಗದಲ್ಲಿ ನಡೆಯದೆ ದ್ರವ್ಯಾಶೆಯಿಂದ ಲಂಚ ತೆಗೆದುಕೊಂಡು ನ್ಯಾಯವಿರುದ್ಧವಾದ ತೀರ್ಪು ಮಾಡುತ್ತಿದ್ದರು.
- Verse 4: ಆದುದರಿಂದ ಇಸ್ರಯೇಲರ ಹಿರಿಯರೆಲ್ಲರೂ ಕೂಡಿ ರಾಮಾದಲ್ಲಿದ್ದ ಸಮುವೇಲನ ಬಳಿಗೆ ಬಂದು,
- Verse 5: “ತಾವಂತೂ ಮುದುಕರಾದಿರಿ; ನಿಮ್ಮ ಮಕ್ಕಳು ನಿಮ್ಮ ಮಾರ್ಗದಲ್ಲಿ ನಡೆಯುವುದಿಲ್ಲ. ಆದುದರಿಂದ ಬೇರೆ ಎಲ್ಲ ಜನಾಂಗಗಳಿಗಿರುವಂತೆ ನಮಗೂ ಒಬ್ಬ ಅರಸನನ್ನು ನೇಮಿಸಿ; ಅವನೇ ನಮ್ಮ ನ್ಯಾಯಸ್ಥಾಪಕನಾಗಿರಲಿ,” ಎಂದರು.
- Verse 6: ‘ನ್ಯಾಯಸ್ಥಾಪನೆಗಾಗಿ ನಮಗೊಬ್ಬ ಅರಸನನ್ನು ನೇಮಿಸಿಕೊಡಿ’ ಎಂಬ ಮಾತಿಗೆ ಸಮುವೇಲನು ದುಃಖಪಟ್ಟನು. ಸರ್ವೇಶ್ವರನನ್ನು ಪ್ರಾರ್ಥಿಸಿದನು.
- Verse 7: ಸರ್ವೇಶ್ವರ ಅವನಿಗೆ, “ಜನರು ಹೇಳಿದಂತೆಯೇ ಮಾಡು; ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳ್ವಿಕೆ ಬೇಡವೆನ್ನುತ್ತಾರೆ.
- Verse 8: ನಾನು ಅವರನ್ನು ಈಜಿಪ್ಟಿನಿಂದ ಬಿಡಿಸಿದೆ. ಅಂದಿನಿಂದ ಇಂದಿನವರೆಗೂ ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಪೂಜಿಸಿದರು. ನನಗೆ ಹೇಗೆ ಮಾಡಿದರೋ ಹಾಗೆಯೇ ನಿನಗೂ ಮಾಡುತ್ತಾರೆ.
- Verse 9: ನೀನು ಈಗ ಅವರು ಕೇಳಿಕೊಂಡಂತೆ ಮಾಡು; ಆದರೆ ಅವರ ಮೇಲೆ ರಾಜರಿಗಿರುವ ಅಧಿಕಾರ ಎಷ್ಟು ಘನವಾದುದೆಂಬುದನ್ನು ಅವರಿಗೆ ತಿಳಿಸಿ ಎಚ್ಚರಿಸದೆ ಇರಬೇಡ,” ಎಂದು ಹೇಳಿದರು.
- Verse 10: ಸಮುವೇಲನು ಅರಸಬೇಕೆಂದು ಕೋರಿದ ಜನರಿಗೆ,
- Verse 11: ಸರ್ವೇಶ್ವರನ ಮಾತುಗಳನ್ನೆಲ್ಲಾ ತಿಳಿಸಿದನು. “ಅರಸನ ಅಧಿಕಾರ ಎಷ್ಟೆಂದು ಕೇಳಿರಿ; ಅವನು ನಿಮ್ಮ ಮಕ್ಕಳನ್ನು ತೆಗೆದುಕೊಂಡು ತನ್ನ ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಮಾಡಿಕೊಳ್ಳುವನು; ಅವರು ಅವರ ರಥಗಳ ಮುಂದೆ ಓಡಬೇಕಾಗುವುದು.
- Verse 12: ಕೆಲವರನ್ನು ಸಹಸ್ರಾಧಿಪತಿಗಳನ್ನಾಗಿಯೂ ಕೆಲವರನ್ನು ಪಂಚಾಶದಾಧಿಪತಿಗಳನ್ನಾಗಿಯೂ ನೇಮಿಸುವನು. ಇನ್ನು ಕೆಲವರು ಅವನ ಭೂಮಿಯನ್ನು ಉಳುವವರೂ, ಪೈರನ್ನು ಕೊಯ್ಯುವವರೂ, ಯುದ್ಧಾಯುಧ, ರಥಸಾಮಗ್ರಿಗಳನ್ನು ಮಾಡುವವರೂ ಆಗಬೇಕು.
- Verse 13: ಇದಲ್ಲದೆ ಅವನು ನಿಮ್ಮ ಹೆಣ್ಣು ಮಕ್ಕಳನ್ನು ಪರಿಮಳದ್ರವ್ಯ ಮಾಡುವುದಕ್ಕೂ, ಅಡಿಗೆ ಮಾಡುವುದಕ್ಕೂ, ರೊಟ್ಟಿ ಸುಡುವುದಕ್ಕೂ ನೇಮಿಸಿಕೊಳ್ಳುವನು.
- Verse 14: ನಿಮ್ಮ ಉತ್ತಮವಾದ ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ಎಣ್ಣೆ ಮರದ ತೋಪುಗಳನ್ನೂ ಕಿತ್ತುಕೊಂಡು ತನ್ನ ಸೇವಕರಿಗೆ ಕೊಡುವನು.
- Verse 15: ನಿಮ್ಮ ಧಾನ್ಯದ್ರಾಕ್ಷಿಗಳಲ್ಲಿ ದಶಮಾಂಶವನ್ನು ತೆಗೆದುಕೊಂಡು ತನ್ನ ಅಧಿಕಾರಿಗಳಿಗೂ ಪರಿವಾರದವರಿಗೂ ಕೊಡುವನು.
- Verse 16: ನಿಮ್ಮ ದಾಸದಾಸಿಯರನ್ನು ಹಾಗು ಉತ್ತಮವಾದ ಎತ್ತುಕತ್ತೆಗಳನ್ನು ತನಗಾಗಿ ದುಡಿಸಿಕೊಳ್ಳುವನು.
- Verse 17: ಕುರಿಹಿಂಡುಗಳಲ್ಲೂ ಹತ್ತರಲ್ಲೊಂದು ಭಾಗವನ್ನು ತೆಗೆದುಕೊಳ್ಳುವನು; ನೀವೂ ಅವನಿಗೆ ಗುಲಾಮರಾಗಿರಬೇಕು.
- Verse 18: ಆಗ, ನೀವು ಆರಿಸಿಕೊಂಡ ಅರಸನ ನಿಮಿತ್ತ, ಆ ದಿನದಲ್ಲಿ ಬೇಸತ್ತು ಸರ್ವೇಶ್ವರನಿಗೆ ಮೊರೆಯಿಡುವಿರಿ; ಆಗ ಅವರು ನಿಮ್ಮನ್ನು ಲಕ್ಷಿಸುವುದಿಲ್ಲ,” ಎಂದನು.
- Verse 19: ಹೀಗೆ ಸಮುವೇಲನು ಎಷ್ಟು ಹೇಳಿದರೂ ಜನರು ಕೇಳದೆ ಹೋದರು. “ಅದಿರಲಿ; ನಮಗೆ ಅರಸನನ್ನು ಕೊಡು; ನಾವು ಇತರ ಜನಾಂಗಗಳಂತೆ ಆಗಬೇಕು.
- Verse 20: ನಮ್ಮ ನ್ಯಾಯಗಳನ್ನು ತೀರಿಸಿ, ನಮಗೆ ಮುಂದಾಗಿ ಹೊರಟು, ನಮ್ಮ ಪರವಾಗಿ ಯುದ್ಧಮಾಡುವ ಒಬ್ಬ ಅರಸನು ಬೇಕು,” ಎಂದು ಹೇಳಿದರು.
- Verse 21: ಸಮುವೇಲನು ಜನರ ಈ ಎಲ್ಲ ಮಾತುಗಳನ್ನು ಸರ್ವೇಶ್ವರನಿಗೆ ತಿಳಿಸಿದನು.
- Verse 22: ಸರ್ವೇಶ್ವರ ಅವನಿಗೆ, “ಅವರ ಇಷ್ಟದಂತೆ ಅವರಿಗೊಬ್ಬ ಅರಸನನ್ನು ನೇಮಿಸು,” ಎಂದರು. ಆಗ ಸಮುವೇಲನು ಇಸ್ರಯೇಲರಿಗೆ, “ನಿಮ್ಮ ನಿಮ್ಮ ಊರುಗಳಿಗೆ ಹೋಗಿರಿ,” ಎಂದು ಅಪ್ಪಣೆಕೊಟ್ಟನು.