P. O. C ബൈബിള്
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
23ನೇ ಅಧ್ಯಾಯ
- Verse 1: ಆಗ ಯೋಬನು
- Verse 2: “ನನ್ನ ದುಃಖಪ್ರಲಾಪ ಈಗಲೂ ಕಟುವಾಗಿದೆ ನಾನು ನಿಟ್ಟುಸಿರಿಡುವಾಗಲೂ ದೇವರ ಹಸ್ತ ಭಾರವಾಗಿದೆ.
- Verse 3: ಆಹಾ! ಆತನ ದರ್ಶನ ನನಗೆ ದೊರಕುವುದೆಲ್ಲಿ? ನಾನು ಸೇರಬಹುದಿತ್ತಲ್ಲಾ ಆತನ ಸನ್ನಿಧಿಯಲ್ಲಿ!
- Verse 4: ನನ್ನ ನ್ಯಾಯವನ್ನು ಆತನ ಮುಂದೆ ವಿವರಿಸಬಹುದಿತ್ತು ಬಾಯ್ತುಂಬಾ ಆತನೊಡನೆ ವಾದಿಸಬಹುದಿತ್ತು.
- Verse 5: ಆತನ ಹೇಳಿಕೆಗಳನ್ನು ವಿವೇಚಿಸಬಹುದಿತ್ತು ಆತನ ಪ್ರತ್ಯುತ್ತರಗಳನ್ನು ತಿಳಿದುಕೊಳ್ಳಬಹುದಾಗಿತ್ತು.
- Verse 6: ಆತ ನನ್ನೊಡನೆ ವ್ಯಾಜ್ಯವಾಡುವನೋ ಶಕ್ತಿಸಾಮರ್ಥ್ಯದಿಂದ? ಇಲ್ಲ, ಆಲಿಸುವನು ನನ್ನ ವಿಜ್ಞಾಪನೆಯನು ಗಮನದಿಂದ.
- Verse 7: ಅಲ್ಲಿ ಸಜ್ಜನನಿಗೆ ಮಾತ್ರ ವಾದಿಸಲು ಸಾಧ್ಯ. ನಿತ್ಯವಾದ ಬಿಡುಗಡೆ ಆ ನ್ಯಾಯಾಧೀಶನಿಂದ ನನಗೆ ಲಭ್ಯ.
- Verse 8: ಮುಂದೆ ಹೋದರೂ ದೇವರು ನನಗೆ ಕಾಣಸಿಗನಯ್ಯಾ ಹಿಂದೆ ಬಂದರೂ ಆತ ನನಗೆ ಕಾಣಸಿಗುವುದಿಲ್ಲವಯ್ಯಾ!
- Verse 9: ಎಡಗಡೆ ಹುಡುಕಿದರೂ ನೋಡಲಾಗದಯ್ಯಾ ಬಲಗಡೆ ತಿರುಗಿದರೂ ಗೋಚರವಾಗದಯ್ಯಾ!
- Verse 10: ಆತನಾದರೊ ಬಲ್ಲ ನಾನು ಹಿಡಿವ ದಾರಿಯನು ಆತ ನನ್ನನು ಶೋಧಿಸಿದರೆ ಚೊಕ್ಕ ಬಂಗಾರವಾಗುವೆನು.
- Verse 11: ಆತನ ಹೆಜ್ಜೆಯ ಜಾಡಿನಲ್ಲೆ ನಾನು ಕಾಲಿಟ್ಟೆ ಓರೆಯಾಗದೆ ಆತನ ದಾರಿಯನ್ನೇ ಹಿಡಿದೆ.
- Verse 12: ನಾ ಬಿಟ್ಟಗಲಲಿಲ್ಲ ಆತನ ತುಟಿಯಿಂದ ಹೊರಟ ಆಜ್ಞೆಗಳನು ನನ್ನೆದೆಯಲಿ ನಿಧಿಯಾಗಿಟ್ಟೆ ಆತನ ಬಾಯಿಂದ ಬಂದ ಮಾತುಗಳನ್ನು.
- Verse 13: ಆತನದು ಏಕಚಿತ್ತ; ಅದನು ಬದಲಾಯಿಸಲಸಾಧ್ಯ ಆತ ಬಯಸಿದ್ದೆ ಸಿದ್ಧಿಯಾದಕಾರ್ಯ.
- Verse 14: ನನಗೆ ವಿಧಿತವಾದುವುಗಳನೆ ಕಾರ್ಯಗೊಳಿಸುತ್ತಾನೆ ಈ ಪರಿಯ ಹಲವಾರು ಯೋಜನೆಗಳು ಆತನಲ್ಲಿವೆ.
- Verse 15: ಈ ಕಾರಣ ಆತನ ಸನ್ನಿಧಿಯಲಿ ನಾನು ಅಂಜುಬುರುಕ ಇದನ್ನು ನೆನೆದು ಮನದಲಿ ನಾನು ಭಯಪೀಡಿತ.
- Verse 16: ದೇವರೇ ನನ್ನ ಶಕ್ತಿಯನು ಕುಂದಿಸಿಹನು ಸರ್ವಶಕ್ತ ನನ್ನನು ಆತಂಕಗೊಳಿಸಿಹನು.
- Verse 17: ನನ್ನ ವಿನಾಶಕ್ಕೆ ಈ ಅಂಧಕಾರವು ನಿಮಿತ್ತವಲ್ಲ ನನ್ನ ಮುಖಕ್ಕೆ ಕವಿದಿರುವ ಈ ಕಾರ್ಗತ್ತಲು ಕಾರಣವಲ್ಲ.