पवित्र बाइबिल
ಹಳೆಯ ಒಡಂಬಡಿಕೆ
ಆದಿಕಾಂಡ
22ನೇ ಅಧ್ಯಾಯ
- Verse 1: ಈ ಘಟನೆಗಳಾದ ಬಳಿಕ ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕೋಸ್ಕರ, “ಅಬ್ರಹಾಮನೇ,” ಎಂದು ಕರೆದರು. ಅವನು “ಇಗೋ, ಸಿದ್ಧನಿದ್ದೇನೆ” ಎಂದನು.
- Verse 2: ಆಗ ದೇವರು, “ನಿನಗೆ ಒಬ್ಬನೇ ಒಬ್ಬನೂ ಮುದ್ದುಮಗನೂ ಆದ ಇಸಾಕನನ್ನು ಕರೆದುಕೊಂಡು ಮೊರೀಯ ಪ್ರಾಂತಕ್ಕೆ ಹೋಗು. ಅಲ್ಲಿ ನಾನು ತೋರಿಸುವ ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು” ಎಂದರು.
- Verse 3: ಅಬ್ರಹಾಮನು ಮುಂಜಾನೆಯೇ ಎದ್ದು ತನ್ನ ಹೇಸರಗತ್ತೆಗೆ ತಡಿಹಾಕಿಸಿ ಹೋಮಬಲಿಗೆ ಬೇಕಾದ ಕಟ್ಟಿಗೆಯನ್ನು ಸಿಗಿದು ಸಿದ್ಧಮಾಡಿಕೊಂಡು ಸೇವಕರಿಬ್ಬರನ್ನು ಹಾಗೂ ತನ್ನ ಮಗ ಇಸಾಕನನ್ನು ಕರೆದುಕೊಂಡು ದೇವರು ಹೇಳಿದ ಸ್ಥಳಕ್ಕೆ ಹೊರಟನು.
- Verse 4: ಮೂರನೆಯ ದಿನ ಅಬ್ರಹಾಮನು ಕಣ್ಣೆತ್ತಿ ನೋಡಿದಾಗ ದೂರದಲ್ಲಿ ಆ ಸ್ಥಳ ಕಾಣಿಸಿತು.
- Verse 5: ಅವನು ತನ್ನ ಸೇವಕರಿಗೆ, “ನೀವು ಇಲ್ಲೇ ಕತ್ತೆಯನ್ನು ನೋಡಿಕೊಂಡಿರಿ; ನಾನೂ ನನ್ನ ಮಗನೂ ಅಲ್ಲಿಗೆ ಹೋಗಿ ದೇವಾರಾಧನೆ ಮಾಡಿಕೊಂಡು ಪುನಃ ಇಲ್ಲಗೆ ಬರುತ್ತೇವೆ,” ಎಂದು ಹೇಳಿದನು.
- Verse 6: ಅಬ್ರಹಾಮನು ದಹನಬಲಿಗೆ ಬೇಕಾದ ಕಟ್ಟಿಗೆಯನ್ನು ತನ್ನ ಮಗ ಇಸಾಕನ ಮೇಲೆ ಹೊರಿಸಿದನು; ಬೆಂಕಿಯನ್ನು ಹಾಗೂ ಕತ್ತಿಯನ್ನು ತನ್ನ ಕೈಯಲ್ಲೇ ತೆಗೆದುಕೊಂಡನು. ಇಬ್ಬರೂ ಅಲ್ಲಿಂದ ಮುಂದಕ್ಕೆ ಹೊರಟರು.
- Verse 7: ಹೋಗುತ್ತಾ ಇದ್ದಾಗ ಇಸಾಕನು ತಂದೆ ಅಬ್ರಹಾಮನನ್ನು, “ಅಪ್ಪಾ” ಎಂದು ಕರೆದ; “ಏನು ಮಗನೇ?” ಎಂದ ಅಬ್ರಹಾಮ. ಇಸಾಕನು, “ಬೆಂಕಿ-ಕಟ್ಟಿಗೆಯೇನೋ ಇದೆ; ಆದರೆ ದಹನಬಲಿಗೆ ಬೇಕಾದ ಕುರಿಮರಿ ಎಲ್ಲಿ?” ಎಂದು ಕೇಳಿದ.
- Verse 8: ಅದಕ್ಕೆ ಅಬ್ರಹಾಮನು, “ಬಲಿಗೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುತ್ತಾರೆ, ಮಗನೇ,” ಎಂದು ಉತ್ತರಕೊಟ್ಟ. ಅವರಿಬ್ಬರೂ ಹಾಗೇ ಮುಂದಕ್ಕೆ ಸಾಗಿದರು.
- Verse 9: ದೇವರು ಹೇಳಿದ ಸ್ಥಳಕ್ಕೆ ಬಂದು ಸೇರಿದಾಗ ಅಬ್ರಹಾಮನು ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿದ. ಕಟ್ಟಿಗೆಯನ್ನು ಅದರ ಮೇಲೆ ಒಟ್ಟಿ, ಮಗ ಇಸಾಕನ ಕೈಕಾಲುಗಳನ್ನು ಬಿಗಿದು, ಕಟ್ಟಿಗೆಗಳ ಮೇಲೆ ಅವನನ್ನು ಕೆಡವಿದ.
- Verse 10: ಬಳಿಕ ಮಗನನ್ನು ವಧಿಸಲು ಕೈಚಾಚಿ ಕತ್ತಿಯನ್ನು ಎತ್ತಿದ.
- Verse 11: ಆದರೆ ಸರ್ವೇಶ್ವರನ ದೂತನು ಆಕಾಶದಿಂದ, "ಅಬ್ರಹಾಮನೇ, ಹೇ ಅಬ್ರಹಾಮನೇ" ಎಂದು ಕರೆದನು. ಅದಕ್ಕೆ ಅಬ್ರಹಾಮನು, “ಇಗೋ ಸಿದ್ಧನಿದ್ದೇನೆ” ಎಂದ.
- Verse 12: ದೂತನು ಅವನಿಗೆ, "ಹುಡುಗನ ಮೇಲೆ ಕೈಯೆತ್ತಬೇಡ; ಅವನಿಗೆ ಯಾವ ಹಾನಿಯನ್ನೂ ಮಾಡಬೇಡ; ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಬಲಿಕೊಡಲು ಹಿಂತೆಗೆಯಲಿಲ್ಲ; ಎಂತಲೇ, ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂದು ಈಗ ನನಗೆ ಚೆನ್ನಾಗಿ ಗೊತ್ತಾಯಿತು,” ಎಂದು ಹೇಳಿದನು.
- Verse 13: ಅಬ್ರಹಾಮನು ಕಣ್ಣೆತ್ತಿ ನೋಡಿದ. ತನ್ನ ಹಿಂದುಗಡೆ ಒಂದು ಟಗರು ಪೊದೆಯಲ್ಲಿ ಕೊಂಬುಗಳಿಂದ ಸಿಕ್ಕಿಕೊಂಡಿತ್ತು. ಅವನು ಹೋಗಿ ಅದನ್ನು ಹಿಡಿದು ತಂದು ತನ್ನ ಮಗನಿಗೆ ಬದಲಾಗಿ ಅದನ್ನು ದಹನಬಲಿಯನ್ನಾಗಿ ಅರ್ಪಿಸಿದ.
- Verse 14: ಆ ಸ್ಥಳಕ್ಕೆ “ಯೆಹೋವ ಯೀರೆ" ಎಂದು ಹೆಸರಿಟ್ಟ.
- Verse 15: “ಬೆಟ್ಟದ ಮೇಲೆ ಸರ್ವೇಶ್ವರ ಸ್ವಾಮಿಯೇ ಒದಗಿಸುತ್ತಾರೆ” ಎಂಬ ಹೇಳಿಕೆ ಇಂದಿಗೂ ರೂಢಿಯಲ್ಲಿದೆ. ಸರ್ವೇಶ್ವರ ಸ್ವಾಮಿಯ ದೂತನು ಆಕಾಶದಿಂದ ಮತ್ತೊಮ್ಮೆ ಅಬ್ರಹಾಮನನ್ನು ಕರೆದು,
- Verse 16: “ಸರ್ವೇಶ್ವರನ ವಾಕ್ಯವನ್ನು ಕೇಳು; ನೀನು ನಿನ್ನ ಒಬ್ಬನೇ ಮಗನನ್ನು ಬಲಿಕೊಡಲು ಹಿಂತೆಗೆಯದೆ ಹೋದುದರಿಂದ ನಾನು ನಿನ್ನನ್ನು ತಪ್ಪದೆ ಆಶೀರ್ವದಿಸುತ್ತೇನೆ;
- Verse 17: ನಿನ್ನ ಸಂತತಿಯನ್ನು ಹೆಚ್ಚಿಸಿಯೇ ಹೆಚ್ಚಿಸುತ್ತೇನೆ; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದ ಮರಳಿನಂತೆಯೂ ಅಸಂಖ್ಯವಾಗಿ ಮಾಡುತ್ತೇನೆ. ಅವರು ಶತ್ರುಗಳ ಪಟ್ಟಣಗಳನ್ನು ಸ್ವಾಧೀನಪಡಿಸಿಕೊಳ್ಳುವರು.
- Verse 18: ನೀನು ನನ್ನ ಮಾತನ್ನು ಕೇಳಿದ್ದರಿಂದ ವಿಶ್ವದ ಎಲ್ಲ ರಾಷ್ಟ್ರಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವುದು ಎಂಬುದಾಗಿ ಸರ್ವೇಶ್ವರನೇ ಆಣೆಯಿಟ್ಟು ಹೇಳಿದ್ದಾರೆ,” ಎಂದನು.
- Verse 19: ತರುವಾಯ ಅಬ್ರಹಾಮನು ತನ್ನ ಸೇವಕರ ಬಳಿಗೆ ಮರಳಿ ಬಂದನು. ಅವರೆಲ್ಲರೂ ಜೊತೆಯಾಗಿ ಬೇರ್ಷೆಬಕ್ಕೆ ಹೋದರು. ಅಲ್ಲೇ ಅಬ್ರಹಾಮನು ವಾಸಮಾಡುತ್ತಿದ್ದನು.
- Verse 20: ಕೆಲವು ಕಾಲವಾದ ಮೇಲೆ ಅಬ್ರಹಾಮನಿಗೆ ತನ್ನ ತಮ್ಮನಾದ ನಾಹೋರನಿಗೆ ಮಿಲ್ಕಳಿಂದ ಮಕ್ಕಳಾದುವೆಂಬ ಸಮಾಚಾರ ಮುಟ್ಟಿತು.
- Verse 21: ಅವರುಗಳ ಹೆಸರು ಇವು - ಚೊಚ್ಚಲವಾದ ಊಚ್, ಇವನ ತಮ್ಮ ಬೂಚ್, (ಆರಾಮನ ತಂದೆಯಾದ) ಕೆಮೂವೇಲ್,
- Verse 22: ಕೆಸೆದ್, ಹಜೋ, ಪಿಲ್ದಾಷ್, ಇದ್ಲಾಫ್ ಮತ್ತು ಬೆತೂವೇಲ್.
- Verse 23: ಬೆತೂವೇಲನು ರೆಬೆಕ್ಕಳ ತಂದೆ. ಈ ಎಂಟುಮಂದಿಯನ್ನು ಮಿಲ್ಕಳು ಅಬ್ರಹಾಮನ ತಮ್ಮನಾದ ನಾಹೋರನಿಗೆ ಹೆತ್ತಳು.
- Verse 24: ಇದೂ ಅಲ್ಲದೆ ಅವನ ಉಪಪತ್ನಿಯಾದ ರೂಮಳೆಂಬವಳು ಟೆಬಹ, ಗಹಮ್, ತಹಷ್, ಮಾಕಾ ಎಂಬುವರನ್ನು ಹೆತ್ತಳು.