ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
38ನೇ ಅಧ್ಯಾಯ
- Verse 1: ಕೋಪದಿಂದೆನ್ನ ಪ್ರಭು, ಬೈಯಬೇಡ I ರೋಷದಿಂದೆನ್ನನು ದಂಡಿಸಲು ಬೇಡ II
- Verse 2: ನಿನ್ನ ಬಾಣಗಳು ನಾಟಿವೆ ನನ್ನೊಳಗೆ I ನಿನ್ನ ಹಸ್ತವು ಎರಗಿದೆ ನನ್ನ ಮೇಲೆ II
- Verse 3: ನನ್ನ ದೇಹದಲ್ಲಿಲ್ಲ ಸೌಖ್ಯ ನಿನ್ನ ಕೋಪದ ನಿಮಿತ್ತ I ನನ್ನೆಲುಬಿನಲ್ಲಿಲ್ಲ ಕ್ಷೇಮ ನನ್ನ ಪಾಪದ ಪ್ರಯುಕ್ತ II
- Verse 4: ಮುಳುಗಿಸಿಬಿಟ್ಟಿವೆ ನನ್ನ ಅಪರಾಧಗಳೆನ್ನನು I ಅಮುಕಿಬಿಟ್ಟಿವೆ ಹೊರಲಾರದ ಹೊರೆಯಂತೆನ್ನನು II
- Verse 5: ಕೀವು ಸೋರಿ ನಾರುತ್ತಿವೆ ನನ್ನ ಪಾಪದ ಗಾಯಗಳು I ಇದಕ್ಕೆಲ್ಲ ಕಾರಣವು ನನ್ನ ಮೂರ್ಖತನವು II
- Verse 6: ಬಾಗಿ ಕುಗ್ಗಿಹೋಗಿರುವೆ ಪ್ರಭು ಬಹಳವಾಗಿ I ದಿನವೆಲ್ಲ ಅಲೆಯುತ್ತಿರುವೆ ದುಃಖಭರಿತನಾಗಿ II
- Verse 7: ಉರಿಬಡಿದಂತಿದೆ ಎನ್ನ ಸೊಂಟಕೆ I ಆರೋಗ್ಯವಿಲ್ಲದಿದೆ ದೇಹಕೆ II
- Verse 8: ಜೋಮು ಹಿಡಿದಂತಿದೆ, ಜೀವ ಹಿಂಡಿದಂತಿದೆ I ಹೃದಯವೇದನೆಯಿಂದ ನರಳಾಡುತ್ತಿರುವೆ II
- Verse 9: ನನ್ನ ಗೋಳಾಟ ಪ್ರಭು, ನಿನಗೆ ಗೊತ್ತಿದೆಯಯ್ಯಾ I ನನ್ನ ಮನದಾಸೆ ನಿನಗೆ ಬಯಲಾಗಿದೆಯಯ್ಯಾ II
- Verse 10: ಬಡಿದುಕೊಳ್ಳುತಿದೆ ಹೃದಯ, ಹುದುಗಿಹೋಗಿದೆ ಚೇತನ I ಮಬ್ಬಾಗಿ ಹೋಗಿದೆ ನನ್ನೆರಡು ನಯನಸಾಧನ II
- Verse 11: ನನ್ನ ಜಾಡ್ಯ ನೋಡಿ ದೂರ ಸರಿದರು ನೆಂಟರಿಷ್ಟರು I ಬಳಿಬಾರದೆ ಅಲ್ಲೇ ನಿಂತರು ಬಂಧು ಬಳಗದವರು II
- Verse 12: ಉರಲನೊಡ್ಡಿಹರು ನನ್ನ ಪ್ರಾಣಹಂತಕರು I ನಿರ್ಧರಿಸಿಹರು ವಿನಾಶವನ್ನು ಕೇಡು ಬಗೆವವರು I ಕುತಂತ್ರವ ಮಾಡುವರು ಸತತ ಮೋಸಗಾರರು II
- Verse 13: ನಾನಂತು ಕೇಳದಿದ್ದೆ ಕಿವುಡನಂತೆ I ಮರು ಉತ್ತರಿಸದೆ ಮೌನವಿದ್ದೆ ಮೂಕನಂತೆ II
- Verse 14: ಅಹುದಹುದು ಕಿವಿ ಕೇಳಿಸದವನಂತಿದ್ದೆ I ಪ್ರತ್ಯುತ್ತರ ಕೊಡಲಾಗದವನಂತಿದ್ದೆ II
- Verse 15: ನಿನಗಾಗಿ ಪ್ರಭು, ಕಾದಿರುವೆನಯ್ಯಾ I ನನಗಾಗಿ ನೀ ಉತ್ತರಿಸೋ, ದೇವಾ II
- Verse 16: ಶತ್ರುಗಳು ಹರ್ಷಿಸಬಾರದು ನನ್ನ ವಿಷಯದಲಿ I ಹಿಗ್ಗಬಾರದವರು ನಾ ಜಾರಿ ಬಿದ್ದಲ್ಲಿ II
- Verse 17: ಇಗೋ, ನಾನೆಡವಿ ಬೀಳಲಿರುವೆ I ಆಪತ್ತಿಗಾಗಿ ಸಂಕಟಪಡುತ್ತಿರುವೆ II
- Verse 18: ನಾನಪರಾಧಿಯೆಂದು ನಿವೇದಿಸುವೆ I ಪಾಪಕ್ಕಾಗಿ ಪಶ್ಚಾತ್ತಾಪ ಪಡುವೆ II
- Verse 19: ಬಲಿಷ್ಠ ವೈರಿಗಳು ವಿರೋಧಿಸುತಿಹರು ನಿಷ್ಕಾರಣವಾಗಿ I ಶತ್ರುಗಳನೇಕರು ದ್ವೇಷಿಸುತಿಹರು ಅನ್ಯಾಯವಾಗಿ II
- Verse 20: ಎಸಗಿಹರು ಉಪಕಾರಕೆ ಪ್ರತಿಯಾಗಿ ಅಪಕಾರ I ಎದುರಿಸುತಿಹರೀಗ ನಾ ಹಿಡಿದಿರುವ ಸನ್ಮಾರ್ಗ II
- Verse 21: ಹೇ ಪ್ರಭು, ನನ್ನ ಕೈ ಬಿಡಬೇಡಯ್ಯಾ I ದೇವಾ, ನನಗೆ ದೂರವಾಗಬೇಡಯ್ಯಾ II
- Verse 22: ಓ ಪ್ರಭುವೇ, ನನ್ನುದ್ಧಾರಕನೆ, I ನನಗೆ ನೆರವಾಗಲು ಬಾ ಬೇಗನೆ II