ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
85ನೇ ಅಧ್ಯಾಯ
- Verse 1: ಪ್ರಭೂ, ತೋರಿಸಿದೆ ಕರುಣೆ ನಿನ್ನ ನಾಡಿಗೆ I ಮರಳಿಸಿದೆ ಸುಕ್ಷೇಮವನು ಯಕೋಬ್ಯರಿಗೆ II
- Verse 2: ಮನ್ನಿಸಿದೆ ನಿನ್ನ ಪ್ರಜೆಯ ದ್ರೋಹವನು I ಕ್ಷಮಿಸಿದೆ ನೀ ಅವರ ಪಾಪಗಳೆಲ್ಲವನು II
- Verse 3: ತೊರೆದುಬಿಟ್ಟೆ ಸ್ವಾಮೀ, ನಿನ್ನ ರೋಷವನು I ಆರಿಸಿಬಿಟ್ಟೆ ನಿನ್ನ ಕೋಪಾಗ್ನಿಯನು II
- Verse 4: ಪುನಶ್ಚೇತನಗೊಳಿಸೆಮ್ಮನು ದೇವ, ಉದ್ಧಾರಕ I ತೊರೆದುಬಿಡು ನಮ್ಮ ಬಗ್ಗೆ ನಿನಗಿರುವ ಸಿಟ್ಟುಸಿಡುಕ II
- Verse 5: ಸದಾಕಾಲಕೂ ನಮ್ಮ ಮೇಲೆ ಸಿಟ್ಟಾಗಿರುವೆಯಾ? ತಲತಲಾಂತರಗಳಿಗೂ ಕೋಪವನು ಬೆಳೆಸುವೆಯಾ?
- Verse 6: ನವಜೀವವನು ತುಂಬಿಸಲಾರೆಯಾ ನಮ್ಮಲಿ? I ಆಗ ನಿನ್ನ ಜನರು ಆನಂದಿಸುವರು ನಿನ್ನಲಿ II
- Verse 7: ತೋರಿಸೆಮಗೆ ಪ್ರಭು ಕರುಣೆಯನು I ಅನುಗ್ರಹಿಸೆಮಗೆ ರಕ್ಷಣೆಯನು II
- Verse 8: ನಾ ಕೇಳುತ್ತಿರುವೆನು, ಪ್ರಭು ಹೇಳುವುದನು I ತನ್ನ ಜನರಿಗಾತ ನುಡಿವುದು ಶಾಂತಿಯನು I ಇನ್ನಾದರು ತೊರೆಯೋಣ ಮೂರ್ಖತೆಯನು II
- Verse 9: ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ I ಇದರಿಂದಾತನ ಮಹಿಮೆ ನಾಡಿಲ್ಲಿರುವುದು ನಿರುತ II
- Verse 10: ಪ್ರೀತಿಯೂ ಸತ್ಯವೂ ಒಂದನ್ನೊಂದು ಕೂಡಿರುವುವು I ನೀತಿಯೂ ಶಾಂತಿಯೂ ಒಂದನ್ನೊಂದು ಚುಂಬಿಸುವುವು II
- Verse 11: ಸತ್ಯತೆಯು ಹುಟ್ಟುವುದು ಭೂಮಿಯಿಂದ I ನೀತಿಯು ದೃಷ್ಟಿಸುವುದು ಗಗನದಿಂದ II
- Verse 12: ಪ್ರಭು ಕೊಟ್ಟೇ ತೀರುವನು ಒಳಿತನು I ನಮ್ಮ ನಾಡು ನೀಡುವುದು ಬೆಳೆಯನು II
- Verse 13: ನಡೆವುದು ಪ್ರಭುವಿನ ಮುಂದೆ ನೀತಿ I ಮಾಡುವುದು ಆತನ ಹೆಜ್ಜೆಗೆ ಹಾದಿ II