ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
90ನೇ ಅಧ್ಯಾಯ
- Verse 1: ಪ್ರಭೂ, ತಲತಲಾಂತರಕ್ಕೆ I ಶ್ರೀನಿವಾಸ ನೀನೆಮಗೆ II
- Verse 2: ಬೆಟ್ಟಗಳು ಹುಟ್ಟುವುದಕೆ ಮುಂಚಿನಿಂದ I ಭೂದೇಶಗಳು ಆಗುವುದಕೆ ಮೊದಲಿಂದ I ನೀನೆಮಗೆ ದೇವರು ಯುಗಯುಗಗಳಿಂದ II
- Verse 3: ಇಳೆಯ ಮಾನವರನು ನೀ ಮಣ್ಣುಪಾಲಾಗಿಸುತಿಹೆ I ‘ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿ’ ಎನ್ನುತಿಹೆ II
- Verse 4: ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ I ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ II
- Verse 5: ಮನುಜರು ನೀ ಹರಿದೋಡಿಸುವ ಹೊಯಿಲು I ಇರುಳಿನ ಕನಸು, ಹಗಲಿನ ಗರಿಹುಲ್ಲು II
- Verse 6: ಚಿಗುರಿ ಹೂಬಿಡುವುದದು ಬೆಳಗಿನಲಿ I ಸೊರಗಿ ತರಗಾಗುವುದು ಬೈಗಿನಲಿ II
- Verse 7: ಇಲ್ಲವಾಗುವೆವು ನಿನ್ನ ಕೋಪದಿಂದ I ತಲ್ಲಣಗೊಳ್ವೆವು ನಿನ್ನ ರೌದ್ರದಿಂದ II
- Verse 8: ನಿನ್ನ ನೋಟಕೆ ಮರೆಯಾಗಿಲ್ಲ ನಮ್ಮ ಪಾಪದೋಷಗಳು I ನಿನ್ನ ಮುಖಕಾಂತಿಗೆ ಬಟ್ಟಬಯಲಾಗಿವೆ ಗುಪ್ತಾಪರಾಧಗಳು II
- Verse 9: ನಿನ್ನ ಕನಲಿನಲೇ ಕಳೆದಿವೆ ನಮ್ಮ ದಿನಗಳು I ನಿಟ್ಟುಸಿರಿನಂತೆ ಮುಗಿವುದೆಮ್ಮ ಬದುಕುಬಾಳು II
- Verse 10: ನಮ್ಮ ಆಯುಷ್ಕಾಲ ಎಪ್ಪತ್ತು ವರುಷ I ಹೆಚ್ಚಾಗಿದ್ದರೆ ಬಲ, ಎಂಬತ್ತು ವರುಷ II
- Verse 11: ನಿನ್ನ ಕೋಪದಾ ಪ್ರತಾಪವನು ಬಲ್ಲವನಾರು? I ಭಯಂಕರ ರೌದ್ರವನು ಅನುಭವಿಸುವವರಾರು? II
- Verse 12: ಜೀವನಾವಧಿಯನು ಲೆಕ್ಕಿಸುವುದನು ನಮಗೆ ಕಲಿಸು I ಈ ಪರಿಜ್ಞಾನವುಳ್ಳಂಥ ಹೃದಯವನು ನೀ ಕರುಣಿಸು II
- Verse 13: ಪ್ರಭು, ತಿರುಗಿ ಬಾ, ಕೋಪವೆಷ್ಟರ ತನಕ? I ನಿನ್ನೀ ಸೇವಕರ ಮೇಲಿರಲಿ ಮರುಕ II
- Verse 14: ಉದಯದಲೆ ತೋಯಿಸೆಮ್ಮನು ನಿನ್ನ ಕೃಪೆಯಿಂದ I ಹರ್ಷಿಸಿ ಆನಂದಿಸುವೆವು ಆಗ ದಿನವಾದ್ಯಂತ II
- Verse 15: ಸುಖಪಡಿಸೆಮ್ಮನು ನೀ ಕಷ್ಟಪಡಿಸಿದಷ್ಟು ಕಾಲ I ಕೆಡುಕನ್ನು ನಾವು ಅನುಭವಿಸಿದಷ್ಟು ವರ್ಷಕಾಲ II
- Verse 16: ಪ್ರಕಟವಾಗಲಿ ನಿನ್ನ ರಕ್ಷಾಕಾರ್ಯ ಭಕ್ತರಿಗೆ I ನಿನ್ನ ಮಹಿಮಾಶಕ್ತಿ ಅವರ ಸಂತಾನಕೆ II
- Verse 17: ಸ್ವಾಮಿದೇವರ ಆಶೀರ್ವಾದ ನಮ್ಮ ಮೇಲಿರಲಿ I ನಾವು ಕೈಗೊಳ್ಳುವ ಕಾರ್ಯಗಳು ಸಫಲವಾಗಲಿ I ಅಹುದು, ನಮ್ಮ ಕಾರ್ಯಗಳೆಲ್ಲಾ ಸಫಲವಾಗಲಿ II