P. O. C ബൈബിള്
ಹೊಸ ಒಡಂಬಡಿಕೆ
ಮತ್ತಾಯ
26ನೇ ಅಧ್ಯಾಯ
- Verse 1: ಇದನ್ನೆಲ್ಲಾ ಬೋಧಿಸಿ ಆದಮೇಲೆ ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ,
- Verse 2: “ನಿಮಗೆ ಗೊತ್ತಿರುವ ಹಾಗೆ ಪಾಸ್ಕಹಬ್ಬಕ್ಕೆ ಇನ್ನು ಎರಡು ದಿನಗಳಿವೆ. ಆಗ ನರಪುತ್ರನನ್ನು ಶಿಲುಬೆಗೇರಿಸಲು ಹಿಡಿದೊಪ್ಪಿಸುವರು,” ಎಂದರು.
- Verse 3: ಇತ್ತ ಮುಖ್ಯಯಾಜಕರು ಮತ್ತು ಪ್ರಜಾಪ್ರಮುಖರು ‘ಕಾಯಫ’ ಎಂಬ ಪ್ರಧಾನ ಯಾಜಕನ ಭವನದಲ್ಲಿ ಒಟ್ಟುಗೂಡಿದರು.
- Verse 4: ಯೇಸುವನ್ನು ಉಪಾಯದಿಂದ ಹಿಡಿದು ಕೊಲ್ಲಿಸುವುದಕ್ಕೆ ಸಮಾಲೋಚಿಸಿಕೊಂಡರು.
- Verse 5: ಆದರೆ,, ‘ಹಬ್ಬದ ಸಂದರ್ಭದಲ್ಲಿ ನಾವು ಈ ಕಾರ್ಯವನ್ನು ಮಾಡಬಾರದು. ಏಕೆಂದರೆ ಜನರು ದಂಗೆಯೆದ್ದಾರು,’ ಎಂದೂ ಮಾತಾಡಿಕೊಂಡರು.
- Verse 6: ಅಂದು ಯೇಸು ಬೆಥಾನಿಯದಲ್ಲಿ ಕುಷ್ಠರೋಗಿ ಸಿಮೋನನ ಮನೆಯಲ್ಲಿದ್ದರು.
- Verse 7: ಆಗ ಮಹಿಳೆಯೊಬ್ಬಳು ಅಮೃತಶಿಲೆಯ ಭರಣಿಯ ತುಂಬ ಅತ್ಯಮೂಲ್ಯವಾದ ಸುಗಂಧತೈಲವನ್ನು ತೆಗೆದುಕೊಂಡು ಅಲ್ಲಿಗೆ ಬಂದಳು. ಊಟಕ್ಕೆ ಕುಳಿತಿದ್ದ ಯೇಸುವಿನ ತಲೆಯ ಮೇಲೆ ಆ ತೈಲವನ್ನು ಸುರಿದಳು.
- Verse 8: ಇದನ್ನು ಕಂಡ ಶಿಷ್ಯರು ಸಿಟ್ಟಿಗೆದ್ದರು. “ಏಕೆ ಇಷ್ಟೊಂದು ವ್ಯರ್ಥ?
- Verse 9: ಈ ತೈಲವನ್ನು ಅಧಿಕ ಬೆಲೆಗೆ ಮಾರಿ, ಬಂದ ಹಣವನ್ನು ಬಡವರಿಗೆ ಕೊಡಬಹುದಿತ್ತಲ್ಲಾ,” ಎಂದರು.
- Verse 10: ಇದನ್ನು ಅರಿತುಕೊಂಡ ಯೇಸು ಶಿಷ್ಯರಿಗೆ, “ಈ ಮಹಿಳೆಗೇಕೆ ಕಿರುಕುಳ ಕೊಡುತ್ತೀರಿ? ಈಕೆ ನನಗೊಂದು ಸತ್ಕಾರ್ಯವನ್ನೇ ಮಾಡಿದ್ದಾಳೆ.
- Verse 11: ಬಡಬಗ್ಗರು ನಿಮ್ಮ ಸಂಗಡ ಯಾವಾಗಲೂ ಇರುತ್ತಾರೆ. ಆದರೆ ನಾನು ನಿಮ್ಮ ಸಂಗಡ ಯಾವಾಗಲೂ ಇರುವುದಿಲ್ಲ.
- Verse 12: ಈಕೆ ಈ ತೈಲವನ್ನು ನನ್ನ ದೇಹದ ಮೇಲೆ ಸುರಿದು ನನ್ನ ಶವಸಂಸ್ಕಾರಕ್ಕೆ ಸಿದ್ಧಮಾಡಿದ್ದಾಳೆ.
- Verse 13: ಜಗತ್ತಿನಾದ್ಯಂತ, ಎಲ್ಲೆಲ್ಲಿ ಶುಭಸಂದೇಶ ಪ್ರಕಟವಾಗುವುದೋ ಅಲ್ಲೆಲ್ಲಾ ಈ ಸತ್ಕಾರ್ಯವನ್ನು ಈಕೆಯ ಸವಿನೆನಪಿಗಾಗಿ ಸಾರಲಾಗುವುದು. ಇದು ನಿಶ್ಚಯ,” ಎಂದರು.
- Verse 14: ಇದಾದ ಮೇಲೆ, ಹನ್ನೆರಡು ಮಂದಿ ಶಿಷ್ಯರಲ್ಲಿ ಇಸ್ಕರಿಯೋತಿನ ಯೂದ ಎಂಬಾತ ಮುಖ್ಯಯಾಜಕರ ಬಳಿಗೆ ಹೋದನು.
- Verse 15: “ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?” ಎಂದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ನಿಗದಿಮಾಡಿಕೊಟ್ಟರು.
- Verse 16: ಆ ಗಳಿಗೆಯಿಂದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯುತ್ತಾ ಇದ್ದನು.
- Verse 17: ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?” ಎಂದು ಕೇಳಿದರು.
- Verse 18: ಅದಕ್ಕೆ ಅವರು, “ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ. ‘ನನ್ನ ಕಾಲ ಸಮೀಪಿಸಿತು. ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’; ಇದನ್ನು ನಮ್ಮ ಗುರುವೇ ಹೇಳಿಕಳುಹಿಸಿದ್ದಾರೆ ಎಂದು ಅವನಿಗೆ ತಿಳಿಸಿರಿ,” ಎಂದರು.
- Verse 19: ಯೇಸು ಸೂಚಿಸಿದಂತೆಯೇ ಶಿಷ್ಯರು ಹೋಗಿ ಪಾಸ್ಕಭೋಜನವನ್ನು ತಯಾರಿಸಿದರು.
- Verse 20: ಸಂಜೆಯಾಯಿತು. ಯೇಸುಸ್ವಾಮಿ ಹನ್ನೆರಡುಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತರು.
- Verse 21: ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸು, “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದರು.
- Verse 22: ಶಿಷ್ಯರು ಬಹಳ ಕಳವಳಗೊಂಡರು. ಒಬ್ಬರಾದ ಮೇಲೊಬ್ಬರು, “ಸ್ವಾಮೀ, ನಾನೋ? ನಾನೋ?” ಎಂದು ಕೇಳತೊಡಗಿದರು.
- Verse 23: ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ ಉಣ್ಣುವವನೇ ನನಗೆ ದ್ರೋಹ ಬಗೆಯುತ್ತಾನೆ.
- Verse 24: ನರಪುತ್ರನೇನೋ ಪವಿತ್ರಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದರು.
- Verse 25: ಗುರುದ್ರೋಹಿಯಾದ ಯೂದನು ಆಗ, “ಗುರುವೇ, ಅವನು ನಾನಲ್ಲ ತಾನೇ?” ಎಂದನು. ಅದಕ್ಕೆ ಯೇಸು, “ಅದು ನಿನ್ನ ಬಾಯಿಂದಲೇ ಬಂದಿದೆ,” ಎಂದರು.
- Verse 26: ಅವರೆಲ್ಲರೂ ಊಟಮಾಡುತ್ತಿರುವಾಗ ಯೇಸುಸ್ವಾಮಿ ರೊಟ್ಟಿಯನ್ನು ತೆಗೆದುಕೊಂಡು ದೈವಸ್ತುತಿಮಾಡಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, “ಇದನ್ನು ತೆಗೆದುಕೊಂಡು ಭುಜಿಸಿರಿ, ಇದು ನನ್ನ ಶರೀರ,” ಎಂದರು.
- Verse 27: ಬಳಿಕ ಪಾನಪಾತ್ರೆಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಅದನ್ನು ಅವರಿಗೆ ಕೊಡುತ್ತಾ ಇಂತೆಂದರು: “ಇದರಲ್ಲಿ ಇರುವುದನ್ನು ಎಲ್ಲರೂ ಪಾನಮಾಡಿ;
- Verse 28: ಇದು ನನ್ನ ರಕ್ತ, ಸಮಸ್ತ ಜನರ ಪಾಪಕ್ಷಮೆಗಾಗಿ ಸುರಿಸಲಾಗುವ ಒಡಂಬಡಿಕೆಯ ರಕ್ತ.
- Verse 29: ನಾನು ನನ್ನ ಪಿತನ ಸಾಮ್ರಾಜ್ಯದಲ್ಲಿ ದ್ರಾಕ್ಷಾರಸ ನಿಮ್ಮ ಸಂಗಡ ಹೊಸದಾಗಿ ಕುಡಿಯುವ ದಿನದವರೆಗೂ ಅದನ್ನು ಇನ್ನು ಕುಡಿಯುವುದಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
- Verse 30: ಬಳಿಕ ಅವರೆಲ್ಲರು ಕೀರ್ತನೆ ಹಾಡಿ, ಓಲಿವ್ ಗುಡ್ಡಕ್ಕೆ ಹೊರಟರು.
- Verse 31: ಆಗ ಯೇಸು ತಮ್ಮ ಶಿಷ್ಯರಿಗೆ, “ ‘ಕುರಿಗಾಹಿಯನ್ನು ಕೊಲ್ಲುವೆನು ಕುರಿಗಳು ಚದರುವುವು,’ ಎಂದು ಪವಿತ್ರಗ್ರಂಥದಲ್ಲೇ ಬರೆದಿದೆ. ಅದರಂತೆಯೇ ನೀವೆಲ್ಲರೂ ಇದೇ ರಾತ್ರಿ ನನ್ನಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟುವಿರಿ.
- Verse 32: ನಾನಾದರೋ ಪುನರುತ್ಥಾನಹೊಂದಿ ನಿಮಗಿಂತ ಮುಂದಾಗಿ ಗಲಿಲೇಯಕ್ಕೆ ಹೋಗುವೆನು,” ಎಂದರು.
- Verse 33: ಇದನ್ನು ಕೇಳಿದ ಪೇತ್ರನು, “ಎಲ್ಲರು ತಮ್ಮಲ್ಲಿ ವಿಶ್ವಾಸಕಳೆದುಕೊಂಡು ಹಿಮ್ಮೆಟ್ಟಿದರೂ ನಾನು ಮಾತ್ರ ಎಂದಿಗೂ ಹಾಗೆ ಮಾಡುವುದಿಲ್ಲ,” ಎಂದು ಸಾರಿ ಹೇಳಿದನು.
- Verse 34: ಅದಕ್ಕೆ ಯೇಸು, “ಇದೇ ರಾತ್ರಿ ಕೋಳಿ ಕೂಗುವ ಮೊದಲೇ ‘ಆತನನ್ನು ನಾನರಿಯೆ’ ಎಂದು ನೀನು ಮೂರು ಬಾರಿ ನನ್ನನ್ನು ನಿರಾಕರಿಸುವೆ; ಇದು ಖಂಡಿತ,” ಎಂದರು.
- Verse 35: ಆದರೆ ಪೇತ್ರನು, “ನಾನು ತಮ್ಮೊಡನೆ ಸಾಯಬೇಕಾಗಿ ಬಂದರೂ ಸರಿಯೆ, ತಮ್ಮನ್ನು ಮಾತ್ರ ನಿರಾಕರಿಸೆನು,” ಎಂದು ನುಡಿದನು. ಅದರಂತೆಯೇ ಉಳಿದ ಶಿಷ್ಯರೂ ದನಿಗೂಡಿಸಿದರು.
- Verse 36: ಅನಂತರ ಯೇಸುಸ್ವಾಮಿ ಅವರೊಡನೆ ಗೆತ್ಸೆಮನೆ ಎಂಬ ತೋಪಿಗೆ ಬಂದರು. ಅಲ್ಲಿ ಶಿಷ್ಯರಿಗೆ, “ನಾನು ಅತ್ತ ಹೋಗಿ ಪ್ರಾರ್ಥನೆಮಾಡಿ ಬರುವವರೆಗೂ ನೀವು ಇಲ್ಲೇ ಕುಳಿತಿರಿ,” ಎಂದರು.
- Verse 37: ಬಳಿಕ ಪೇತ್ರನನ್ನೂ ಜೆಬೆದಾಯನ ಇಬ್ಬರು ಕುಮಾರರನ್ನೂ ತಮ್ಮೊಂದಿಗೆ ಕರೆದುಕೊಂಡು ಮುಂದಕ್ಕೆಹೋದರು. ಅಲ್ಲಿ ಸ್ವಾಮಿ ಚಿಂತಾಕ್ರಾಂತರಾದರು, ದುಃಖಭರಿತರಾದರು.
- Verse 38: “ನನ್ನ ಮನೋವೇದನೆ ಪ್ರಾಣಹಿಂಡುವಷ್ಟು ತೀವ್ರವಾಗಿದೆ. ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರಿ,” ಎಂದರು.
- Verse 39: ಅನಂತರ ಅವರು ಅಲ್ಲಿಂದ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ, ನೆಲದ ಮೇಲೆ ಅಧೋಮುಖವಾಗಿ ಬಿದ್ದು ಪ್ರಾರ್ಥನೆಮಾಡಿದರು. “ನನ್ನ ಪಿತನೇ, ಸಾಧ್ಯವಾದರೆ ಈ ಕಷ್ಟದ ಕೊಡವು ನನ್ನಿಂದ ದೂರವಾಗಲಿ, ಆದರೂ ನನ್ನ ಚಿತ್ತದಂತೆ ಅಲ್ಲ, ನಿಮ್ಮ ಚಿತ್ತದಂತೆಯೇ ಆಗಲಿ,” ಎಂದರು.
- Verse 40: ಅನಂತರ ಆ ಮೂವರು ಶಿಷ್ಯರ ಬಳಿಗೆ ಬಂದು, ಅವರು ನಿದ್ರಿಸುತ್ತಿರುವುದನ್ನು ಕಂಡರು. ಪೇತ್ರನನ್ನು ಉದ್ದೇಶಿಸಿ, “ಏನಿದು, ಒಂದು ಗಂಟೆಯಾದರೂ ನನ್ನೊಡನೆ ಎಚ್ಚರವಾಗಿರಲು ನಿಮ್ಮಿಂದ ಆಗದೇ ಹೋಯಿತೇ?
- Verse 41: ಪ್ರಲೋಭನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥನೆಮಾಡಿರಿ. ಆತ್ಮಕ್ಕೇನೊ ಆಸಕ್ತಿ ಇದೆ, ಆದರೆ ದೇಹಕ್ಕೆ ಶಕ್ತಿಸಾಲದು,” ಎಂದರು.
- Verse 42: ಎರಡನೆಯ ಬಾರಿ ಹಿಂದಕ್ಕೆ ಹೋಗಿ ಇಂತೆಂದು ಪ್ರಾರ್ಥನೆಮಾಡಿದರು: “ನನ್ನ ಪಿತನೇ, ನಾನು ಸೇವಿಸದ ಹೊರತು ಈ ಕಷ್ಟದ ಕೊಡ ನನ್ನಿಂದ ತೊಲಗದಾದರೆ ಅದು ನಿಮ್ಮ ಚಿತ್ತದಂತೆಯೇ ಆಗಲಿ,”
- Verse 43: ಯೇಸು ಮರಳಿ ಆ ಶಿಷ್ಯರ ಬಳಿಗೆ ಬಂದಾಗ ಅವರು ಇನ್ನೂ ನಿದ್ರಾವಸ್ಥೆಯಲ್ಲಿದ್ದರು. ಅವರ ಕಣ್ಣುಗಳು ಭಾರವಾಗಿ ಇದ್ದವು.
- Verse 44: ಪುನಃ ಅವರನ್ನು ಬಿಟ್ಟು ಹಿಂದಿರುಗಿ ಮೂರನೆಯ ಬಾರಿ ಅದೇ ಮಾತುಗಳನ್ನು ಹೇಳಿ ಪ್ರಾರ್ಥಿಸಿದರು.
- Verse 45: ಅದಾದ ಬಳಿಕ ಶಿಷ್ಯರನ್ನು ಸಮೀಪಿಸಿ, “ನೀವು ಇನ್ನೂ ನಿದ್ರಿಸಿ ವಿಶ್ರಮಿಸುತ್ತಾ ಇರುವಿರೋ? ಸಾಕು, ಸಮಯ ಸಮೀಪಿಸಿಬಿಟ್ಟಿತು. ನರಪುತ್ರನು ದುರ್ಜನರ ಕೈವಶವಾಗಲಿದ್ದಾನೆ.
- Verse 46: ಎದ್ದೇಳಿ, ಹೋಗೋಣ. ನನಗೆ ದ್ರೋಹ ಬಗೆಯುವವನು ಹತ್ತಿರವೇ ಇದ್ದಾನೆ, ನೋಡಿ,” ಎಂದರು.
- Verse 47: ಯೇಸುಸ್ವಾಮಿ ಇನ್ನೂ ಮಾತನಾಡುತ್ತಿದ್ದ ಹಾಗೆ, ಹನ್ನೆರಡುಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಅಲ್ಲಿಗೆ ಬಂದನು. ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದಿದ್ದ ಒಂದು ದೊಡ್ಡ ಗುಂಪು ಅವನೊಂದಿಗೆ ಇತ್ತು. ಮುಖ್ಯಯಾಜಕರೂ ಜನರ ಪ್ರಮುಖರೂ ಅವರನ್ನು ಕಳುಹಿಸಿದ್ದರು.
- Verse 48: ‘ನಾನು ಯಾರಿಗೆ ಮುದ್ದಿಡುತ್ತೇನೋ ಆತನೇ ಆ ವ್ಯಕ್ತಿ. ಆತನನ್ನು ಹಿಡಿದುಕೊಳ್ಳಿ,’ ಎಂದು ಆ ಗುರುದ್ರೋಹಿ ಅವರಿಗೆ ಮೊದಲೇ ಸೂಚನೆಕೊಟ್ಟಿದ್ದನು.
- Verse 49: ಅದರಂತೆಯೇ ಅವನು ಯೇಸುಸ್ವಾಮಿಯ ಸಮೀಪಕ್ಕೆ ನೇರವಾಗಿ ಬಂದು, “ಗುರುವೇ, ನಮಸ್ಕಾರ,” ಎಂದು ಹೇಳುತ್ತಾ ಅವರಿಗೆ ಮುದ್ದಿಟ್ಟನು.
- Verse 50: ಯೇಸು ಅವನಿಗೆ, “ಮಿತ್ರಾ, ನೀನು ಮಾಡಬಂದ ಕಾರ್ಯವನ್ನು ಮಾಡಿಮುಗಿಸು,” ಎಂದರು. ಆಗ ಆ ಜನರು ಹತ್ತಿರಕ್ಕೆ ಬಂದು, ಯೇಸುವನ್ನು ಹಿಡಿದು ಬಂಧಿಸಿದರು.
- Verse 51: ಕೂಡಲೆ ಯೇಸುವಿನ ಸಂಗಡ ಇದ್ದ ಒಬ್ಬನು ತನ್ನ ಖಡ್ಗವನ್ನು ಹಿರಿದು, ಪ್ರಧಾನಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿಬಿಟ್ಟನು.
- Verse 52: ಆಗ ಯೇಸು ಅವನಿಗೆ, “ನಿನ್ನ ಖಡ್ಗವನ್ನು ಒರೆಗೆ ಹಾಕು. ಖಡ್ಗ ಎತ್ತಿದವರೆಲ್ಲರೂ ಖಡ್ಗದಿಂದಲೇ ಹತರಾಗುವರು.
- Verse 53: ನಾನು ನನ್ನ ಪಿತನನ್ನು ಕೇಳಿಕೊಂಡರೆ ಅವರು ತಕ್ಷಣವೇ ಹನ್ನೆರಡು ದಳಗಳಿಗಿಂತಲೂ ಹೆಚ್ಚು ದೇವದೂತರನ್ನು ಕಳಿಸುವುದಿಲ್ಲವೆಂದುಕೊಂಡೆಯಾ?
- Verse 54: ಆದರೆ, ಈ ಪ್ರಕಾರವೇ ಆಗಬೇಕು ಎನ್ನುವ ಪವಿತ್ರಗ್ರಂಥದ ವಾಕ್ಯ ನೆರವೇರುವುದಾದರೂ ಹೇಗೆ?” ಎಂದರು.
- Verse 55: ಅದೇ ಸಂದರ್ಭದಲ್ಲಿ ಯೇಸುಸ್ವಾಮಿ ಜನರ ಗುಂಪನ್ನು ಉದ್ದೇಶಿಸಿ, “ದರೋಡೆಗಾರನನ್ನು ಹಿಡಿಯುವುದಕ್ಕೋ ಎಂಬಂತೆ ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದುಕೊಂಡು ನನ್ನನ್ನು ಬಂಧಿಸಲು ಬರಬೇಕಾಗಿತ್ತೆ? ನಾನು ಪ್ರತಿದಿನವೂ ಮಹಾದೇವಾಲಯದಲ್ಲಿ ಕುಳಿತು ಬೋಧನೆಮಾಡುತ್ತಾ ಇದ್ದೆ. ಆಗ ನೀವು ನನ್ನನ್ನು ಬಂಧಿಸಲಿಲ್ಲ.
- Verse 56: ಆದರೆ ಪವಿತ್ರಗ್ರಂಥದ ಪ್ರವಾದನೆಗಳು ಈಡೇರಲೆಂದೇ ಇದೆಲ್ಲಾ ಜರುಗಿದೆ,” ಎಂದರು. ಆಗ ಶಿಷ್ಯರೆಲ್ಲರೂ ಯೇಸುವನ್ನು ತೊರೆದು ಪಲಾಯನಮಾಡಿದರು.
- Verse 57: ಬಳಿಕ ಯೇಸುಸ್ವಾಮಿಯನ್ನು ಬಂಧಿಸಿದ್ದವರು ಅವರನ್ನು ಪ್ರಧಾನಯಾಜಕ ಕಾಯಫನ ಬಳಿಗೆ ಕರೆದೊಯ್ದರು.
- Verse 58: ಅಲ್ಲಿ ಧರ್ಮಶಾಸ್ತ್ರಿಗಳೂ ಪ್ರಮುಖರೂ ಸಭೆಸೇರಿದ್ದರು. ಪೇತ್ರನಾದರೋ ದೂರದಿಂದ ಯೇಸುವನ್ನು ಹಿಂಬಾಲಿಸುತ್ತಿದ್ದನು. ಅವನು ಪ್ರಧಾನಯಾಜಕನ ಭವನದವರೆಗೂ ಬಂದು, ಹೊರಾಂಗಣವನ್ನು ಹೊಕ್ಕು ಪಹರೆಯವರ ಜೊತೆ ಕುಳಿತುಕೊಂಡನು. ಇದೆಲ್ಲ ಹೇಗೆ ಕೊನೆಗೊಳ್ಳುವುದೆಂದು ನೋಡಬೇಕೆಂಬ ಉದ್ದೇಶ ಅವನದಾಗಿತ್ತು.
- Verse 59: ಇತ್ತ ಮುಖ್ಯಯಾಜಕರೂ ಉಚ್ಛನ್ಯಾಯಸಭೆಯ ಸದಸ್ಯರೆಲ್ಲರೂ ಯೇಸುವನ್ನು ಮರಣದಂಡನೆಗೆ ಗುರಿಪಡಿಸುವ ಸಲುವಾಗಿ ಸುಳ್ಳುಸಾಕ್ಷಿಯನ್ನು ಹುಡುಕುತ್ತಿದ್ದರು.
- Verse 60: ಹಲವಾರು ಸುಳ್ಳುಸಾಕ್ಷಿಗಳು ಮುಂದೆ ಬಂದರು. ಆದರೂ ಸರಿಯಾದ ಒಂದು ಸಾಕ್ಷ್ಯವೂ ಅವರಿಗೆ ದೊರಕಲಿಲ್ಲ. ಕಡೆಗೆ ಇಬ್ಬರು ಮುಂದೆ ಬಂದು,
- Verse 61: “ ‘ಮಹಾದೇವಾಲಯವನ್ನು ಕೆಡವಿಬಿಟ್ಟು ಅದನ್ನು ಮೂರು ದಿನಗಳಲ್ಲಿ ಮರಳಿ ಕಟ್ಟುವ ಶಕ್ತಿ ನನಗಿದೆ,’ ಎಂದು ಇವನು ಹೇಳಿದ್ದಾನೆ,” ಎಂದರು.
- Verse 62: ಆಗ ಪ್ರಧಾನಯಾಜಕರು ಎದ್ದುನಿಂತು ಯೇಸುವನ್ನು ನೋಡಿ, “ಈ ಜನರು ನಿನಗೆ ವಿರುದ್ಧ ತಂದಿರುವ ಆರೋಪಣೆಗಳನ್ನು ಕೇಳುತ್ತಿರುವೆಯಾ? ಇವುಗಳಿಗೆ ನಿನ್ನ ಉತ್ತರ ಏನು?” ಎಂದು ಪ್ರಶ್ನಿಸಿದರು.
- Verse 63: ಆದರೆ ಯೇಸು ಮೌನವಾಗಿದ್ದರು. “ಜೀವಂತ ದೇವರ ಮೇಲೆ ಆಣೆಯಿರಿಸಿ ನಾನು ನಿನ್ನನ್ನು ಕೇಳುತ್ತಿದ್ದೇನೆ, ‘ನೀನು ದೇವರ ಪುತ್ರ ಹಾಗೂ ಅಭಿಷಿಕ್ತನಾದ ಲೋಕೋದ್ಧಾರಕನೋ?’ ನಮಗೆ ಹೇಳು,” ಎಂದನು ಆ ಪ್ರಧಾನಯಾಜಕ.
- Verse 64: ಅದಕ್ಕೆ ಯೇಸು, “ಅದು ನಿಮ್ಮ ಬಾಯಿಂದಲೇ ಬಂದಿದೆ; ಮಾತ್ರವಲ್ಲ, ನಾನು ಹೇಳುವುದನ್ನು ಕೇಳಿ; ನರಪುತ್ರನು ಸರ್ವಶಕ್ತ ದೇವರ ಬಲಗಡೆ ಆಸೀನನಾಗಿರುವುದನ್ನೂ ಆಕಾಶದ ಮೇಘಗಳ ಮೇಲೆ ಬರುವುದನ್ನೂ ಇನ್ನು ಮುಂದಕ್ಕೆ ಕಾಣುವಿರಿ,” ಎಂದರು.
- Verse 65: ಇದನ್ನು ಕೇಳಿದ್ದೇ ಪ್ರಧಾನಯಾಜಕನು ತನ್ನ ಉಡುಪನ್ನು ಕೋಪದಿಂದ ಹರಿದುಕೊಂಡನು. “ಇವನು ದೇವದೂಷಣೆ ಆಡಿದ್ದಾನೆ. ಇನ್ನು ನಮಗೆ ಸಾಕ್ಷಿಗಳು ಏತಕ್ಕೆ?
- Verse 66: ಇವನಾಡಿದ ದೇವದೂಷಣೆಯನ್ನು ನೀವೇ ಕೇಳಿದ್ದೀರಿ. ಈಗ ನಿಮ್ಮ ತೀರ್ಮಾನ ಏನು?” ಎಂದು ಕೇಳಿದನು. ಅವರು, “ಇವನಿಗೆ ಮರಣದಂಡನೆ ಆಗಬೇಕು,” ಎಂದು ಉತ್ತರಕೊಟ್ಟರು.
- Verse 67: ಬಳಿಕ ಅವರು ಯೇಸುಸ್ವಾಮಿಯ ಮುಖದ ಮೇಲೆ ಉಗುಳಿದರು; ಅವರನ್ನು ಗುದ್ದಿದರು.
- Verse 68: ಕೆಲವರು ಅವರ ಕೆನ್ನೆಗೆ ಹೊಡೆದು, “ಎಲೈ ಕ್ರಿಸ್ತಾ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದಿಸಿ ಹೇಳು,” ಎಂದರು.
- Verse 69: ಇತ್ತ ಪೇತ್ರನು ಹೊರಾಂಗಣದಲ್ಲಿ ಕುಳಿತು ಇದ್ದನು. ದಾಸಿಯೊಬ್ಬಳು ಆತನ ಬಳಿಗೆ ಬಂದು, “ನೀನು ಸಹ ಗಲಿಲೇಯದ ಯೇಸುವಿನೊಂದಿಗೆ ಇದ್ದವನು,” ಎಂದಳು.
- Verse 70: “ನೀನು ಹೇಳುವುದು ಏನೆಂದು ನನಗೆ ತಿಳಿಯದು,” ಎಂದು ಪೇತ್ರನು ಎಲ್ಲರ ಮುಂದೆ ನಿರಾಕರಿಸಿದನು.
- Verse 71: ಆತ ಅಲ್ಲಿಂದ ಎದ್ದು ಹೆಬ್ಬಾಗಿಲ ಬಳಿ ಬಂದಾಗ ಇನ್ನೊಬ್ಬ ದಾಸಿ ಆತನನ್ನು ಕಂಡು, “ಈತ ನಜರೇತಿನ ಯೇಸುವಿನೊಂದಿಗೆ ಇದ್ದವನೇ,” ಎಂದು ಅಲ್ಲಿದ್ದವರಿಗೆ ತಿಳಿಸಿದಳು.
- Verse 72: ಪೇತ್ರನು, “ಆ ಮನುಷ್ಯ ಯಾರೋ ನಾನರಿಯೆ,” ಎಂದು ಆಣೆಯಿಟ್ಟು ಇನೊಮ್ಮೆ ನಿರಾಕರಿಸಿದನು.
- Verse 73: ಸ್ವಲ್ಪಹೊತ್ತಾದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನ ಹತ್ತಿರಕ್ಕೆ ಬಂದು, “ಖಂಡಿತವಾಗಿ ನೀನೂ ಅವರಲ್ಲಿ ಒಬ್ಬನು. ನೀನು ಮಾತನಾಡುವ ರೀತಿಯೇ ನಿನ್ನನ್ನು ತೋರಿಸಿಕೊಡುತ್ತದೆ,” ಎಂದು ಹೇಳಿದರು.
- Verse 74: ಆಗ ಪೇತ್ರನು ತನ್ನನ್ನೇ ಶಪಿಸಿಕೊಳ್ಳಲಾರಂಭಿಸಿ, “ಆ ಮನುಷ್ಯನನ್ನು ನಾನು ಖಂಡಿತವಾಗಿ ಅರಿಯೆನು,” ಎಂದು ಆಣೆಯಿಟ್ಟು ಹೇಳಿದನು.
- Verse 75: ಆ ಕ್ಷಣವೇ ಕೋಳಿಕೂಗಿತು. “ಕೋಳಿಕೂಗುವ ಮೊದಲೇ, ‘ಆತನನ್ನು ನಾನರಿಯೆ’ಎಂದು ನನ್ನನ್ನು ಮೂರುಬಾರಿ ನಿರಾಕರಿಸುವೆ,” ಎಂದ ಸ್ವಾಮಿಯ ನುಡಿ ಪೇತ್ರನ ನೆನಪಿಗೆ ಬಂದಿತು. ಆತನು ಅಲ್ಲಿಂದ ಹೊರಗೆ ಹೋಗಿ, ಬಹಳವಾಗಿ ವ್ಯಥೆಪಟ್ಟು ಅತ್ತನು.