ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
33ನೇ ಅಧ್ಯಾಯ
- Verse 1: ಮೋಶೆ ಮತ್ತು ಆರೋನರ ಮುಂದಾಳತ್ವದಲ್ಲಿ ಈಜಿಪ್ಟ್ ದೇಶದಿಂದ ಸೈನ್ಯ ಸೈನ್ಯವಾಗಿ ಹೊರಟ ಇಸ್ರಯೇಲರ ಪಯಣದ ವಿವರ:
- Verse 2: ಇಸ್ರಯೇಲರು ತಮ್ಮ ಪ್ರಯಾಣಗಳಲ್ಲಿ ತಂಗಿದ್ದ ಸ್ಥಳಗಳ ಹೆಸರುಗಳನ್ನು ಮೋಶೆ ಸರ್ವೇಶ್ವರನ ಅಪ್ಪಣೆಯನ್ನು ಪಡೆದು ಬರೆದಿಟ್ಟನು.
- Verse 3: ಮೊದಲನೆಯ ತಿಂಗಳಿನ ಹದಿನೈದನೆಯ ದಿನ, ಅಂದರೆ ಪಾಸ್ಕಹಬ್ಬದ ಮರುದಿನ, ಇಸ್ರಯೇಲರು ಈಜಿಪ್ಟರ ಎದುರಿನಲ್ಲೇ ಅಟ್ಟಹಾಸದಿಂದ ರಮ್ಸೇಸಿನಿಂದ ಹೊರಟರು.
- Verse 4: ಆ ಕಾಲದಲ್ಲಿ ಸರ್ವೇಶ್ವರ ಸ್ವಾಮಿ ಈಜಿಪ್ಟರ ದೇವತೆಗಳನ್ನು ದಂಡಿಸಿ ಈಜಿಪ್ಟರ ಚೊಚ್ಚಲು ಮಕ್ಕಳನ್ನು ಸಂಹರಿಸಿದ್ದರು. ಆ ಮಕ್ಕಳ ಶವಗಳನ್ನು ಸಮಾಧಿ ಮಾಡಲಾಗುತ್ತಿತ್ತು.
- Verse 5: ಇಸ್ರಯೇಲರು ರಮ್ಸೇಸಿನಿಂದ ಹೊರಟು ಸುಕ್ಕೋತಿನಲ್ಲಿ ಇಳಿದುಕೊಂಡರು.
- Verse 6: ಸುಕ್ಕೋತಿನಿಂದ ಹೊರಟು ಮರುಭೂಮಿಯ ಅಂಚಿನಲ್ಲಿರುವ ಏತಾಮಿನಲ್ಲಿ ಇಳಿದುಕೊಂಡರು.
- Verse 7: ಏತಾಮಿನಿಂದ ಹೊರಟು ಬಾಳ್ಚೆಪೋನಿಗೆ ಎದುರಿಗಿರುವ ಪೀಹಹೀರೋತಿಗೆ ತಿರುಗಿಕೊಂಡು ಮಿಗ್ದೋಲಿನ ಮೂಡಲಲ್ಲಿ ಇಳಿದುಕೊಂಡರು.
- Verse 8: ಅಲ್ಲಿಂದ ಹೊರಟು ಸಮುದ್ರದ ಮಧ್ಯದಲ್ಲೇ ನಡೆದು ಮರುಭೂಮಿಗೆ ಬಂದರು. ಏತಾಮಿನ ಮರುಭೂಮಿಯಲ್ಲಿ ಮೂರು ದಿನ ಪ್ರಯಾಣ ಮಾಡಿ ಮಾರಾ ಎಂಬ ಸ್ಥಳದಲ್ಲಿ ಇಳಿದುಕೊಂಡರು.
- Verse 9: ಮಾರಾದಿಂದ ಹೊರಟು ಏಲೀಮಿಗೆ ಬಂದರು. ಅಲ್ಲಿ ಹನ್ನೆರಡು ನೀರಿನ ಒರತೆಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದುದರಿಂದ ಅಲ್ಲಿ ಇಳಿದುಕೊಂಡರು.
- Verse 10: ಏಲೀಮಿನಿಂದ ಹೊರಟು ಕೆಂಪು ಸಮುದ್ರದ ದಡದಲ್ಲಿ ಇಳಿದುಕೊಂಡರು.
- Verse 11: ಅಲ್ಲಿಂದ ಹೊರಟು ಸೀನ್ ಮರುಭೂಮಿಯಲ್ಲೂ,
- Verse 12: ಅಲ್ಲಿಂದ ದೊಷ್ಕದಲ್ಲೂ,
- Verse 13: ಅನಂತರ ಅಲೂಷಿನಲ್ಲೂ ಇಳಿದುಕೊಂಡರು.
- Verse 14: ಅಲೂಷಿನಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಅಲ್ಲಿ ಅವರಿಗೆ ಕುಡಿಯುವುದಕ್ಕೆ ನೀರು ಸಿಕ್ಕಲಿಲ್ಲ.
- Verse 15: ರೆಫೀದೀಮಿನಿಂದ ಹೊರಟು ಸೀನಾಯಿ ಮರುಭೂಮಿಯಲ್ಲೂ
- Verse 16: ಅಲ್ಲಿಂದ ಹೊರಟು ಕಿಬ್ರೋತ್ ಹತಾವಾದಲ್ಲೂ
- Verse 17: ಕಿಬ್ರೋತ್ ಹತಾವಾದಿಂದ ಹಚೆರೋತಿನಲ್ಲೂ
- Verse 18: ಹಚೆರೋತಿನಿಂದ ರಿತ್ಮದಲ್ಲೂ
- Verse 19: ರಿತ್ಮದಿಂದ ರಿಮ್ಮೋನ್ ಪೆರೆಚಿನಲ್ಲೂ
- Verse 20: ರಿಮ್ಮೋನ್ ಪೆರೆಚಿನಿಂದ ಲಿಬ್ನದಲ್ಲೂ
- Verse 21: ಲಿಬ್ನದಿಂದ ರಿಸ್ಸದಲ್ಲೂ
- Verse 22: ರಿಸ್ಸದಿಂದ ಕೆಹೇಲಾತದಲ್ಲೂ
- Verse 23: ಕೆಹೇಲಾತದಿಂದ ಶೆಫೆರ್ ಬೆಟ್ಟದಲ್ಲೂ
- Verse 24: ಅಲ್ಲಿಂದ ಹರಾದದಲ್ಲೂ
- Verse 25: ಹರಾದದಿಂದ ಹೊರಟು ಮಖೇಲೋತಿನಲ್ಲೂ ಇಳಿದುಕೊಂಡರು.
- Verse 26: ಮಖೇಲೋತಿನಿಂದ ಹೊರಟು ತಹತಿನಲ್ಲೂ
- Verse 27: ತಹತಿನಿಂದ ತೆರಹದಲ್ಲೂ
- Verse 28: ತೆರಹದಿಂದ ಮಿತ್ಕದಲ್ಲೂ
- Verse 29: ಮಿತ್ಕದಿಂದ ಹಷ್ಮೋನದಲ್ಲೂ
- Verse 30: ಹಷ್ಮೋನದಿಂದ ಮೋಸೇರೋತಿನಲ್ಲೂ
- Verse 31: ಮೋಸೇರೋತಿನಿಂದ ಬೆನೇಯಾಕಾನಿನಲ್ಲೂ
- Verse 32: ಬೆನೇಯಾಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲೂ
- Verse 33: ಹೋರ್ಹಗಿದ್ಗಾದಿನಿಂದ ಯೋಟ್ಬಾತದಲ್ಲೂ
- Verse 34: ಯೋಟ್ಬಾತದಿಂದ ಅಬ್ರೋನದಲ್ಲೂ
- Verse 35: ಅಬ್ರೋನದಿಂದ ಎಚ್ಯೋನ್ ಗೆಬೆರಿನಲ್ಲೂ
- Verse 36: ಎಚ್ಯೋನ್ ಗೆಬೆರಿನಿಂದ ಹೊರಟು ಚಿನ್ ಮರುಭೂಮಿಯಲ್ಲಿ ಇಳಿದುಕೊಂಡರು. ಅದೇ ಕಾದೇಶ್.
- Verse 37: ಕಾದೇಶಿನಿಂದ ಹೊರಟು ಎದೋಮ್ಯರ ನಾಡಿನ ಅಂಚಿನಲ್ಲಿರುವ ಹೋರ್ ಬೆಟ್ಟದ ಬಳಿಯಲ್ಲಿ ಇಳಿದುಕೊಂಡರು.
- Verse 38: ಮಹಾಯಾಜಕ ಆರೋನನು ಸರ್ವೇಶ್ವರನಿಂದ ಅಪ್ಪಣೆಯನ್ನು ಪಡೆದು ಆ ಹೋರ್ ಬೆಟ್ಟವನ್ನು ಹತ್ತಿ ಅಲ್ಲೇ ಪ್ರಾಣಬಿಟ್ಟನು. ಇಸ್ರಯೇಲರು ಈಜಿಪ್ಟಿನಿಂದ ಹೊರಟ ನಾಲ್ವತ್ತನೆಯ ವರ್ಷದ ಐದನೆಯ ತಿಂಗಳಿನ ಮೊದಲನೆಯ ದಿನ ಅದಾಗಿತ್ತು.
- Verse 39: ಆರೋನನು ಅಲ್ಲಿ ಸತ್ತಾಗ ಅವನಿಗೆ ನೂರಿಪ್ಪತ್ತು ವರ್ಷ ವಯಸ್ಸಾಗಿತ್ತು.
- Verse 40: ಇಸ್ರಯೇಲರು ಬರುತ್ತಾರೆಂಬ ವಾರ್ತೆ ಕಾನಾನ್ ನಾಡಿನ ದಕ್ಷಿಣಪ್ರಾಂತ್ಯದಲ್ಲಿ ವಾಸ ಆಗಿದ್ದ ಕಾನಾನ್ಯನಾದ ಅರಾದ್ ಪಟ್ಟಣದ ಅರಸನಿಗೆ ಮುಟ್ಟಿತು.
- Verse 41: ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಚೆಲ್ಮೋನದಲ್ಲಿ ಇಳಿದುಕೊಂಡರು.
- Verse 42: ಚೆಲ್ಮೋನದಿಂದ ಪೂನೋನಿನಲ್ಲೂ
- Verse 43: ಪೂನೋನಿನಿಂದ ಓಬೋತಿನಲ್ಲೂ
- Verse 44: ಓಬೋತಿನಿಂದ ಮೋವಾಬ್ಯರ ಸರಹದ್ದಿನಲ್ಲಿರುವ ಜೋರ್ಡನ್ ನದಿಯ ಆಚೆಯಿರುವ ಇಯ್ಯೀಮಿನಲ್ಲಿ ಇಳಿದುಕೊಂಡರು.
- Verse 45: ಇಯ್ಯೀಮಿನಿಂದ ಹೊರಟು ದೀಬೋನ್ ಗಾದಿನಲ್ಲೂ
- Verse 46: ದೀಬೋನ್ ಗಾದಿನಿಂದ ಅಲ್ಮೋನ್ ದಿಬ್ಲಾತಯಿಮಿನಲ್ಲೂ
- Verse 47: ಅಲ್ಲಿಂದ ಹೊರಟು ಅಬಾರೀಮ್ ಬೆಟ್ಟಗಳಲ್ಲಿರುವ ನೇಬೋವಿನ ಮೂಡಣದಲ್ಲಿ ಇಳಿದುಕೊಂಡರು.
- Verse 48: ಅಬಾರೀಮ್ ಬೆಟ್ಟಗಳಿಂದ ಹೊರಟು ಜೆರಿಕೋ ಪಟ್ಟಣದ ಹತ್ತಿರ ಜೋರ್ಡನ್ ನದಿಯ ತೀರದಲ್ಲಿ ಮೋವಾಬ್ಯರ ಮೈದಾನದಲ್ಲಿ ಇಳಿದುಕೊಂಡರು.
- Verse 49: ಅವರು ಮೋವಾಬ್ಯರ ಮೈದಾನದಲ್ಲಿ ಬೇತ್ ಯೆಷೀಮೋತಿನಿಂದ ಆಬೇಲ್ ಶಿಟ್ಟೀಮಿನವರೆಗೂ ಜೋರ್ಡನ್ ನದಿಯ ತೀರದಲ್ಲಿ ಇಳಿದುಕೊಂಡರು.
- Verse 50: ಜೋರ್ಡನ್ ನದಿಯ ತೀರದಲ್ಲಿ ಜೆರಿಕೋ ಪಟ್ಟಣದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಸರ್ವೇಶ್ವರ ಸ್ವಾಮಿ ಮೋಶೆಗೆ ಹೇಳಿದ್ದು ಏನೆಂದರೆ:
- Verse 51: “ಇಸ್ರಯೇಲರಿಗೆ ಹೀಗೆಂದು ಆಜ್ಞಾಪಿಸು - ‘ನೀವು ಜೋರ್ಡನ್ ನದಿಯನ್ನು ದಾಟಿ ಕಾನಾನ್ ನಾಡನ್ನು ಸೇರಿದಾಗ
- Verse 52: ಆ ನಾಡಿನ ನಿವಾಸಿಗಳನ್ನೆಲ್ಲಾ ಹೊರಡಿಸಿಬಿಡಿ. ಅವರ ವಿಚಿತ್ರ ಕಲ್ಲುಗಳನ್ನು ಹಾಗು ಲೋಹವಿಗ್ರಹಗಳನ್ನು ನಾಶಮಾಡಿ ಅವರ ಪೂಜಾಸ್ಥಳಗಳನ್ನು ಹಾಳುಮಾಡಬೇಕು.
- Verse 53: ನಾನು ಆ ನಾಡನ್ನು ನಿಮಗೆ ಸ್ವಂತ ನಾಡಾಗಲೆಂದು ಕೊಟ್ಟಿದ್ದೇನೆ. ಆದ್ದರಿಂದ ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲೇ ವಾಸಮಾಡಿ.
- Verse 54: ಚೀಟು ಹಾಕಿ ಅದನ್ನು ನಿಮ್ಮ ನಿಮ್ಮ ಕುಟುಂಬಗಳಿಗೆ ಹಂಚಿಕೊಳ್ಳಿ. ಹೆಚ್ಚು ಮಂದಿಯುಳ್ಳ ಕುಟುಂಬಕ್ಕೆ ಹೆಚ್ಚಾಗಿಯೂ ಕಡಿಮೆಯಾದ ಕುಟುಂಬಕ್ಕೆ ಕಡಿಮೆಯಾಗಿಯೂ ಆಸ್ತಿ ದೊರಕಬೇಕು. ಒಂದೊಂದು ಕುಟುಂಬದ ಚೀಟು ಯಾವ ಯಾವ ಸ್ಥಳವನ್ನು ಸೂಚಿಸುವುದೋ ಅಲ್ಲೇ ಆ ಕುಟುಂಬದ ಸೊತ್ತಿರಬೇಕು. ಒಂದೊಂದು ಕುಲಕ್ಕೆ ಸೇರಿದ ಕುಟುಂಬಗಳು ಒಂದೇ ಪ್ರದೇಶದಲ್ಲಿರಬೇಕು.
- Verse 55: ನೀವು ಆ ನಾಡಿನ ನಿವಾಸಿಗಳನ್ನು ಹೊರಡಿಸದೆ ಹೋದರೆ ಅವರಲ್ಲಿ ನೀವು ಉಳಿಸಿದವರು ನಿಮಗೆ ಕಣ್ಣುಚುಚ್ಚುವ ಮುಳ್ಳುಗಳಂತೆ ಆಗುವರು; ಪಕ್ಕೆ ತಿವಿಯುವ ಶೂಲಗಳಂತೆ ಆಗುವರು; ನೀವು ವಾಸಿಸುವ ನಾಡಿನಲ್ಲಿ ನಿಮಗೆ ಕಂಠಕಪ್ರಾಯರಾಗುವರು.
- Verse 56: ಅಲ್ಲದೆ, ನಾನು ಅವರಿಗೆ ಮಾಡಯೋಚಿಸಿದಂತೆ ನಿಮಗೇ ಮಾಡುವೆನು’.”