పరిశుద్ధ గ్రంథము
ಹಳೆಯ ಒಡಂಬಡಿಕೆ
1 ಸಮುವೇಲನು
7ನೇ ಅಧ್ಯಾಯ
- Verse 1: ಆಗ ಕಿರ್ಯತ್ಯಾರೀಮಿನವರು ಬಂದು ಸರ್ವೇಶ್ವರನ ಮಂಜೂಷವನ್ನು ತೆಗೆದುಕೊಂಡು ಹೋದರು. ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮನೆಯಲ್ಲಿ ಅದನ್ನು ಇಟ್ಟು, ಅವನ ಮಗ ಎಲ್ಲಾಜಾರನನ್ನು ಅದರ ಸೇವೆಗಾಗಿ ಪ್ರತಿಷ್ಠಿಸಿದರು.
- Verse 2: ಮಂಜೂಷವು ಕಿರ್ಯತ್ಯಾರೀಮಿಗೆ ಬಂದು ಬಹಳ ದಿವಸಗಳು ಅಂದರೆ, ಇಪ್ಪತ್ತು ವರ್ಷಗಳು ಕಳೆದುಹೋದವು. ಈ ಕಾಲದಲ್ಲಿ ಎಲ್ಲ ಇಸ್ರಯೇಲರು ಸರ್ವೇಶ್ವರನಿಗಾಗಿ ಹಂಬಲಿಸುತ್ತಿದ್ದರು.
- Verse 3: ಆಗ ಸಮುವೇಲನು ಅವರಿಗೆ, “ನೀವು ಪೂರ್ಣಮನಸ್ಸಿನಿಂದ ಸರ್ವೇಶ್ವರನಿಗೆ ಅಭಿಮುಖರಾಗಿ ನಿಮ್ಮ ಮಧ್ಯದಲ್ಲಿರುವ ಅಷ್ಟೋರೆತ್ ಮೊದಲಾದ ಅನ್ಯದೇವತೆಗಳನ್ನು ತೆಗೆದುಹಾಕಿರಿ. ಸರ್ವೇಶ್ವರನ ಮೇಲೆಯೇ ಮನಸ್ಸಿಟ್ಟು ಅವರೊಬ್ಬರಿಗೇ ಸೇವೆಸಲ್ಲಿಸಿರಿ; ಆಗ ಅವರು ನಿಮ್ಮನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವರು,” ಎಂದನು.
- Verse 4: ಹಾಗೆಯೇ ಇಸ್ರಯೇಲರು ಬಾಳ್ ಅಷ್ಟೋರೆತ್ ದೇವತೆಗಳನ್ನು ತೆಗೆದುಹಾಕಿ ಸರ್ವೇಶ್ವರಸ್ವಾಮಿಯೊಬ್ಬರಿಗೆ ಸೇವೆ ಸಲ್ಲಿಸತೊಡಗಿದರು.
- Verse 5: ಸಮುವೇಲನು ಪುನಃ ಅವರಿಗೆ, “ಇಸ್ರಯೇಲರೆಲ್ಲರೂ ಮಿಚ್ಪೆಯಲ್ಲಿ ಕೂಡಿಬರಲಿ; ನಾನು ನಿಮಗೋಸ್ಕರ ಸರ್ವೇಶ್ವರನನ್ನು ಪ್ರಾರ್ಥಿಸುವೆನು,” ಎಂದನು.
- Verse 6: ಅಂತೆಯೇ ಅವರು ಅಲ್ಲಿ ಕೂಡಿಬಂದು, ನೀರು ಸೇದಿ ಸರ್ವೇಶ್ವರನ ಮುಂದೆ ಹೊಯ್ದು, ಆ ದಿವಸ ಉಪವಾಸವಿದ್ದು, ದ್ರೋಹಿಗಳಾಗಿದ್ದೇವೆಂದು ಸರ್ವೇಶ್ವರನಿಗೆ ಅರಿಕೆಮಾಡಿದರು. ಸಮುವೇಲನು ಮಿಚ್ಪೆಯಲ್ಲಿ ಇಸ್ರಯೇಲರ ವ್ಯಾಜ್ಯಗಳನ್ನು ತೀರಿಸಿದನು.
- Verse 7: ಇಸ್ರಯೇಲರು ಮಿಚ್ಪೆಯಲ್ಲಿ ಕೂಡಿಬಂದಿದ್ದಾರೆಂಬುದು ಫಿಲಿಷ್ಟಿಯರಿಗೆ ಗೊತ್ತಾದಾಗ ಅವರ ರಾಜರುಗಳು ಇಸ್ರಯೇಲರಿಗೆ ವಿರುದ್ಧ ಯುದ್ಧಕ್ಕೆ ಹೊರಟರು. ಇದನ್ನು ತಿಳಿದ ಇಸ್ರಯೇಲರು ಬಹಳವಾಗಿ ಭಯಪಟ್ಟರು.
- Verse 8: ಅವರು ಸಮುವೇಲನಿಗೆ, “ನಮ್ಮ ದೇವರಾದ ಸರ್ವೇಶ್ವರ ನಮ್ಮನ್ನು ಫಿಲಿಷ್ಟಿಯರ ಕೈಯಿಂದ ತಪ್ಪಿಸಿ ರಕ್ಷಿಸುವ ಹಾಗೆ ನೀವು ನಮಗೋಸ್ಕರ ಪ್ರಾರ್ಥನೆಮಾಡಿ, ಸುಮ್ಮನಿರಬೇಡಿ,” ಎಂದರು.
- Verse 9: ಆಗ ಸಮುವೇಲನು ಹಾಲುಕುಡಿಯುವ ಒಂದು ಕುರಿಮರಿಯನ್ನು ತಂದು ಸರ್ವೇಶ್ವರನಿಗೆ ದಹನಬಲಿಯಾಗಿ ಸಮರ್ಪಿಸಿ, ಇಸ್ರಯೇಲರ ಪರವಾಗಿ ಪ್ರಾರ್ಥನೆಮಾಡಿದನು. ಸರ್ವೇಶ್ವರ ಸದುತ್ತರವನ್ನು ದಯಪಾಲಿಸಿದರು.
- Verse 10: ಹೇಗೆಂದರೆ, ಸಮುವೇಲನು ಬಲಿಯನ್ನರ್ಪಿಸುವ ವೇಳೆಯಲ್ಲಿ ಫಿಲಿಷ್ಟಿಯರು ಯುದ್ಧಕ್ಕಾಗಿ ಸಮೀಪಿಸಿದರು. ಸರ್ವೇಶ್ವರ ದೊಡ್ಡ ಗುಡುಗಿನಿಂದ ಅವರನ್ನು ಕಳವಳಗೊಳಿಸಿ, ಇಸ್ರಯೇಲರಿಗೆ ಸೋತು ಓಡಿಹೋಗುವಂತೆ ಮಾಡಿದರು.
- Verse 11: ಇಸ್ರಯೇಲರಾದರೋ ಮಿಚ್ಪೆಯಿಂದ ಹೊರಟು ಬೇತ್ಕರಿನ ತಗ್ಗಿನವರೆಗೆ ಅವರನ್ನು ಹಿಂಬಾಲಿಸಿ ಹತಮಾಡಿದರು.
- Verse 12: ಅನಂತರ ಸಮುವೇಲನು ಮಿಚ್ಪೆಗೂ ಶೇನಿಗೂ ಮಧ್ಯದಲ್ಲಿ ಒಂದು ಕಲ್ಲನ್ನು ನಿಲ್ಲಿಸಿ, “ಸರ್ವೇಶ್ವರ ಇಲ್ಲಿಯವರೆಗೆ ನಮಗೆ ಸಹಾಯ ಮಾಡಿದರು,” ಎಂದು ಹೇಳಿ ಅದಕ್ಕೆ, ‘ಎಬನೆಜೆರ್’ ಎಂದು ಹೆಸರಿಟ್ಟನು.
- Verse 13: ಫಿಲಿಷ್ಟಿಯರು ಸೋತುಹೋದುದರಿಂದ ಮತ್ತೆ ಇಸ್ರಯೇಲರ ಪ್ರಾಂತ್ಯದೊಳಗೆ ಬರಲೇ ಇಲ್ಲ. ಸಮುವೇಲನ ಜೀವಮಾನದಲ್ಲೆಲ್ಲಾ ಸರ್ವೇಶ್ವರನ ಹಸ್ತ ಫಿಲಿಷ್ಟಿಯರಿಗೆ ವಿರೋಧವಾಗಿಯೇ ಇತ್ತು.
- Verse 14: ಅವರು ಎಕ್ರೋನ್ ಮೊದಲುಗೊಂಡು ಗತ್ ಊರಿನವರೆಗೆ ಇಸ್ರಯೇಲರಿಂದ ಕಿತ್ತುಕೊಂಡಿದ್ದ ಎಲ್ಲ ಪಟ್ಟಣಗಳು ಇಸ್ರಯೇಲರಿಗೆ ದೊರಕಿದವು. ಅವುಗಳಿಗೆ ಸೇರಿದ ಗ್ರಾಮಗಳನ್ನೂ ಇಸ್ರಯೇಲರು ಫಿಲಿಷ್ಟಿಯರಿಂದ ತೆಗೆದುಕೊಂಡರು. ಇಸ್ರಯೇಲರಿಗೂ ಅಮೋರಿಯರಿಗೂ ಸಮಾಧಾನವಿತ್ತು.
- Verse 15: ಸಮುವೇಲನು ಜೀವದಿಂದಿರುವವರೆಗೆ ಇಸ್ರಯೇಲರನ್ನು ಪಾಲಿಸುತ್ತಿದ್ದನು.
- Verse 16: ಅವನು ಇಸ್ರಯೇಲರ ನ್ಯಾಯಗಳನ್ನು ತೀರಿಸುವುದಕ್ಕಾಗಿ ಪ್ರತಿವರ್ಷವೂ ಬೇತೇಲ್, ಗಿಲ್ಗಾಲ್, ಮಿಚ್ಪೆ ಎಂಬ ಪಟ್ಟಣಗಳನ್ನು ಸುತ್ತಿ ರಾಮಾಕ್ಕೆ ತಿರುಗಿ ಬರುತ್ತಿದ್ದನು.
- Verse 17: ಅಲ್ಲಿ ಅವನ ಸ್ವಂತ ಮನೆ ಇದ್ದುದರಿಂದ ಅಲ್ಲಿಯೇ ಸರ್ವೇಶ್ವರನಿಗೆ ಒಂದು ಬಲಿಪೀಠವನ್ನು ಕಟ್ಟಿಸಿ ಇಸ್ರಯೇಲರನ್ನು ಪಾಲಿಸುತ್ತಿದ್ದನು.