ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
2 ಪೂರ್ವಕಾಲದ ಇತಿಹಾಸ
28ನೇ ಅಧ್ಯಾಯ
- Verse 1: ಅಹಾಜನು ಪಟ್ಟಕ್ಕೆ ಬಂದಾಗ ಇಪ್ಪತ್ತು ವರ್ಷದವನಾಗಿದ್ದನು. ಜೆರುಸಲೇಮಿನಲ್ಲಿ ಅವನು ಹದಿನಾರು ವರ್ಷ ಆಳಿದನು. ಸರ್ವೇಶ್ವರನ ಚಿತ್ತಾನುಸಾರ ಅವನು ನಡೆಯಲಿಲ್ಲ.
- Verse 2: ತನ್ನ ಪೂರ್ವಿಕನಾದ ದಾವೀದನ ಮಾರ್ಗವನ್ನು ಬಿಟ್ಟು, ಇಸ್ರಯೇಲ್ ರಾಜರ ಮಾರ್ಗದಲ್ಲಿ ನಡೆದು, ಅವರಂತೆ ಬಾಳ್ದೇವರುಗಳ ಎರಕದ ವಿಗ್ರಹಗಳನ್ನು ಮಾಡಿಸಿದನು.
- Verse 3: ಅವನು ಬೆನ್ಹಿನ್ನೋಮ್ ಎಂಬ ಕಣಿವೆಯಲ್ಲಿ ಧೂಪ ಹಾಕಿಸಿದ್ದಲ್ಲದೆ ಸರ್ವೇಶ್ವರಸ್ವಾಮಿ ಇಸ್ರಯೇಲರ ನಾಡಿನಿಂದ ಓಡಿಸಿಬಿಟ್ಟ ಜನಾಂಗಗಳ ಅಸಹ್ಯಕಾರ್ಯಗಳನ್ನು ಅನುಸರಿಸಿ ತನ್ನ ಮಕ್ಕಳನ್ನು ಬಲಿಯಗ್ನಿ ಪರೀಕ್ಷೆಗೆ ಗುರಿಪಡಿಸಿದ್ದನು.
- Verse 4: ಪೂಜಾಸ್ಥಳಗಳಲ್ಲೂ, ದಿನ್ನೆಗಳ ಮೇಲೂ ಹಾಗು ಎಲ್ಲ ಹಸಿರು ಮರಗಳ ಕೆಳಗೂ ಬಲಿಗಳನ್ನೂ ಧೂಪಗಳನ್ನೂ ಸಮರ್ಪಿಸುತ್ತಿದ್ದನು.
- Verse 5: ಈ ಕಾರಣ ದೇವರಾದ ಸರ್ವೇಶ್ವರ ಅಹಾಜನನ್ನು ಸಿರಿಯಾದ ಅರಸನ ಕೈಗೆ ಒಪ್ಪಿಸಿದನು. ಸಿರಿಯಾದವರು ಅವನನ್ನು ಸೋಲಿಸಿ ಅವನ ಜನರಲ್ಲಿ ದೊಡ್ಡ ಗುಂಪನ್ನು ಸೆರೆಹಿಡಿದು ದಮಸ್ಕಕ್ಕೆ ಒಯ್ದರು. ಇದಲ್ಲದೆ, ಅವನು ಇಸ್ರಯೇಲ್ ರಾಜನ ಕೈವಶವಾಗಿ ಅವನಿಂದಲೂ ಪೂರ್ಣವಾಗಿ ಅಪಜಯ ಹೊಂದಿದನು.
- Verse 6: ರೆಮಲ್ಯನ ಮಗ ಪೆಕಹ ಎಂಬವನು ಒಂದೇ ದಿವಸ ಯೆಹೂದ್ಯರಲ್ಲಿ ಲಕ್ಷದ ಇಪ್ಪತ್ತು ಸಾವಿರ ಮಂದಿಯನ್ನು ಕೊಲ್ಲಿಸಿದನು. ಇವರೆಲ್ಲರು ರಣವೀರರು. ಯೆಹೂದ್ಯರು ತಮ್ಮ ಪಿತೃಗಳ ದೇವರಾದ ಸರ್ವೇಶ್ವರನನ್ನು ಬಿಟ್ಟದ್ದೇ ಇದಕ್ಕೆ ಕಾರಣವಾಗಿತ್ತು.
- Verse 7: ರಾಜಪುತ್ರನಾದ ಮಾಸೇಯ, ರಾಜಗೃಹಾಧಿಪತಿಯಾದ ಅಜ್ರೀಕಾಮ್, ರಾಜಪ್ರತಿನಿಧಿಯಾದ ಎಲ್ಕಾನ ಎಂಬವರನ್ನು ಎಫ್ರಯಿಮ್ ನಾಡಿನ ಜಿಕ್ರಿಯೆಂಬ ಶೂರನು ಕೊಂದನು.
- Verse 8: ಇದಲ್ಲದೆ, ಇಸ್ರಯೇಲರು ತಮ್ಮ ಬಂಧುಗಳಾದ ಯೆಹೂದ್ಯರಲ್ಲಿ ಎರಡು ಲಕ್ಷ ಮಂದಿ ಹೆಂಗಸರನ್ನೂ ಗಂಡು ಹೆಣ್ಣು ಮಕ್ಕಳನ್ನೂ ಸೆರೆಹಿಡಿದು, ದೊಡ್ಡ ಕೊಳ್ಳೆಯನ್ನೂ ಕೂಡಿಸಿಕೊಂಡು, ಸಮಾರಿಯಕ್ಕೆ ಒಯ್ದರು.
- Verse 9: ಸಮಾರಿಯದಲ್ಲಿ ಸರ್ವೇಶ್ವರನ ಒಬ್ಬ ಪ್ರವಾದಿ ಇದ್ದನು. ಅವನ ಹೆಸರು ಓದೇದ್. ಅವನು ಸಮಾರಿಯಕ್ಕೆ ಬರುತ್ತಿದ್ದ ಸೈನ್ಯದವರನ್ನು ಎದುರುಗೊಂಡು, “ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರನು ಯೆಹೂದ್ಯರ ಮೇಲೆ ಕೋಪಗೊಂಡು ಅವರನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟರು. ಅವರನ್ನು ಸಂಹರಿಸುವುದರಲ್ಲಿ ನಿಮ್ಮ ರೌದ್ರ ಆಕಾಶವನ್ನು ಮುಟ್ಟಿತು.
- Verse 10: ಇದೂ ಸಾಲದೆಂದು ನೀವು ಯೆಹೂದ್ಯರನ್ನೂ ಜೆರುಸಲೇಮನ್ನೂ ಬಲಾತ್ಕರಿಸಿ ದಾಸದಾಸಿಯರನ್ನಾಗಿಯೂ ಮಾಡಿಕೊಳ್ಳಬೇಕೆಂದಿದ್ದೀರಿ. ನಿಮ್ಮ ದೇವರಾದ ಸರ್ವೇಶ್ವರನಿಗೆ ವಿರುದ್ಧ ಅಪರಾಧಗಳನ್ನು ನೀವೂ ಮಾಡಿದ್ದೀರಲ್ಲವೆ?
- Verse 11: ಈಗ ನೀವು ನನ್ನ ಮಾತಿಗೆ ಕಿವಿಗೊಟ್ಟು ನಿಮ್ಮ ಸಹೋದರರಿಂದ ಸೆರೆಯಾಗಿ ತಂದವರನ್ನು ಹಿಂದಕ್ಕೆ ಕಳುಹಿಸಿರಿ; ಸರ್ವೇಶ್ವರನ ಕೋಪಾಗ್ನಿ ನಿಮ್ಮ ಮೇಲೆ ಉರಿಯುತ್ತಾ ಇದೆ!” ಎಂದನು.
- Verse 12: ಆಗ ಎಫ್ರಯಿಮರಲ್ಲಿ ಮುಖಂಡರಾಗಿದ್ದ ಯೆಹೋಹಾನಾನನ ಮಗ ಅಜರ್ಯ, ಮೆಷಿಲ್ಲೇಮೋತನ ಮಗ ಬೆರೆಕ್ಯ, ಶಲ್ಲೂಮನ ಮಗ ಹಿಜ್ಕೀಯ, ಹದ್ಲೈಯನ ಮಗ ಅಮಾಸ ಎಂಬವರು ಯುದ್ಧದಿಂದ ಬರುತ್ತಿದ್ದವರ ಮುಂದೆ ನಿಂತು,
- Verse 13: “ನೀವು ಸೆರೆಹಿಡಿದವರನ್ನು ಇಲ್ಲಿಗೆ ತರಬೇಡಿ; ನೀವು ನಮ್ಮ ಪಾಪಾಪರಾಧಗಳ ಜೊತೆಗೆ ಸರ್ವೇಶ್ವರನಿಗೆ ವಿರುದ್ಧ ಮತ್ತೊಂದು ಅಪರಾಧವನ್ನು ಸೇರಿಸಬೇಕೆಂದಿರುತ್ತೀರೋ? ನಮ್ಮ ಅಪರಾಧ ದೊಡ್ಡದು; ಇಸ್ರಯೇಲರ ಮೇಲಿರುವ ದೈವಕೋಪ ಉಗ್ರವಾಗಿದೆ!” ಎಂದು ಹೇಳಿದರು.
- Verse 14: ಯೋಧರು ಇದನ್ನು ಕೇಳಿ ಸೆರೆಯವರನ್ನೂ ಕೊಳ್ಳೆಯನ್ನೂ ಅಧಿಪತಿಗಳ ಮತ್ತು ಸಮೂಹದವರ ಮುಂದೆಯೇ ಬಿಟ್ಟುಬಿಟ್ಟರು.
- Verse 15: ಆಗ ಮೇಲೆ ಹೇಳಿದ ಪುರುಷರು ಎದ್ದುಬಂದು ಸೆರೆಯವರಲ್ಲಿ ಬೆತ್ತಲೆಯಾದವರೆಲ್ಲರಿಗೆ ಕೊಳ್ಳೆಯಿಂದ ಬಂದ ಬಟ್ಟೆಗಳನ್ನೂ, ಕಾಲಿಗೆ ಕೆರಗಳನ್ನೂ ಕೊಟ್ಟರು; ಅನ್ನಪಾನಗಳನ್ನಿತ್ತು, ತೈಲಹಚ್ಚಿದರು; ಬಳಲಿಹೋದವರನ್ನು ಕತ್ತೆಗಳ ಮೇಲೆ ಕುಳ್ಳಿರಿಸಿ, ಎಲ್ಲರನ್ನೂ ಜೆರಿಕೋ ಎಂಬ ಖರ್ಜೂರ ನಗರಕ್ಕೆ ಕರೆದುಕೊಂಡು ಹೋದರು; ಅಲ್ಲಿ ಅವರ ಬಂಧುಗಳ ಹತ್ತಿರ ಬಿಟ್ಟು, ಸಮಾರಿಯಕ್ಕೆ ಹಿಂದಿರುಗಿದರು.
- Verse 16: ಆ ಕಾಲದಲ್ಲಿ ಅರಸ ಅಹಾಜನು ತನಗೆ ಸಹಾಯ ಮಾಡಬೇಕೆಂದು ಅಸ್ಸೀರಿಯದ ರಾಜರನ್ನು ದೂತರ ಮುಖಾಂತರ ಬೇಡಿಕೊಂಡನು.
- Verse 17: ಏಕೆಂದರೆ ಎದೋಮ್ಯರು ಯೆಹೂದ್ಯರ ಮೇಲೆ ಮರಳಿ ಯುದ್ಧಕ್ಕೆ ಬಂದು ಅವರನ್ನು ಸೋಲಿಸಿ ಅನೇಕ ಜನರನ್ನು ಸೆರೆಗೊಯ್ದಿದ್ದರು.
- Verse 18: ಫಿಲಿಷ್ಟಿಯರು ಜುದೇಯದ ಇಳಕಲಿನ ಪ್ರದೇಶದ ಮತ್ತು ದಕ್ಷಿಣಪ್ರಾಂತದ ಪಟ್ಟಣಗಳ ಮೇಲೆ ದಾಳಿಮಾಡಿ ಬೇತ್ಷೆಮೆಷ್, ಅಯ್ಯಾಲೋನ್, ಗೆದೇರೋತ್ ಇವುಗಳನ್ನೂ ಸೋಕೋ, ತಿಮ್ನಾ, ಗಿಮ್ಜೋ ಇವುಗಳನ್ನೂ ಇವುಗಳಿಗೆ ಸೇರಿದ ಗ್ರಾಮಗಳನ್ನೂ ಸ್ವಾಧೀನಮಾಡಿಕೊಂಡು ಅವುಗಳಲ್ಲಿ ವಾಸವಾಗಿ ಇದ್ದರು.
- Verse 19: ಯೆಹೂದ್ಯರನ್ನು ಅಧರ್ಮಕ್ಕೆ ಪ್ರಚೋದಿಸಿ ಸರ್ವೇಶ್ವರನಿಗೆ ದ್ರೋಹಮಾಡಿದ ಇಸ್ರಯೇಲ ಅರಸ ಅಹಾಜನ ನಿಮಿತ್ತ ಸರ್ವೇಶ್ವರ ಯೆಹೂದ್ಯರನ್ನು ಈ ಪ್ರಕಾರ ತಗ್ಗಿಸಿದ್ದರು.
- Verse 20: ಅಸ್ಸೀರಿಯದ ಅರಸ ತಿಲ್ಗತ್ಪಿಲ್ನೆಸರನು ಬಂದು, ಅವನಿಗೆ ನೆರವಾಗುವುದಕ್ಕೆ ಬದಲಾಗಿ ಅವನು ತಲೆತಗ್ಗಿಸುವಂತೆ ಮಾಡಿದ್ದನು.
- Verse 21: ಅಹಾಜನು, ಸರ್ವೇಶ್ವರನ ಆಲಯದ ಹಾಗು ಅರಮನೆಯ ಅಧಿಪತಿಗಳ ಆಸ್ತಿಯನ್ನು ಸೂರೆಮಾಡಿಕೊಂಡು ಹೋಗಿ, ಅಸ್ಸೀರಿಯದ ಅರಸನಿಗೆ ಕಾಣಿಕೆಯನ್ನಾಗಿ ಕೊಟ್ಟರೂ ಅವನಿಂದ ಏನೂ ಸಹಾಯವಾಗಲಿಲ್ಲ.
- Verse 22: ಕಷ್ಟಬಂದಾಗ ಅರಸ ಅಹಾಜನು ಸರ್ವೇಶ್ವರನಿಗೆ ಮತ್ತಷ್ಟು ದ್ರೋಹಮಾಡಿದನು.
- Verse 23: ಹೇಗೆಂದರೆ, ‘ಸಿರಿಯಾ ರಾಜರ ದೇವತೆಗಳು ಅವರಿಗೆ ಜಯವನ್ನನುಗ್ರಹಿಸಿವೆ; ಅಂತೆಯೇ ನಾನೂ ಅವುಗಳಿಗೆ ಬಲಿಸಮರ್ಪಿಸಿದರೆ ನನಗೂ ಜಯವಾಗುವುದು’, ಎಂದುಕೊಂಡನು; ಅವನು ತನ್ನ ಅಪಜಯಕ್ಕೆ ಕಾರಣವಾಗಿದ್ದ ದಮಸ್ಕದ ದೇವತೆಗಳಿಗೆ ಬಲಿಕೊಟ್ಟನು. ಆದರೆ ಆ ದೇವತೆಗಳಿಂದ ಅವನಿಗೂ ಎಲ್ಲ ಇಸ್ರಯೇಲರಿಗೂ ಕೇಡು ಉಂಟಾಯಿತು.
- Verse 24: ಇದಲ್ಲದೆ, ಅಹಾಜನು ದೇವಾಲಯದ ಸಾಮಗ್ರಿಗಳನ್ನು ಕೂಡಿಸಿ, ಅವುಗಳನ್ನು ಚೂರುಚೂರು ಮಾಡಿಬಿಟ್ಟನು; ಸರ್ವೇಶ್ವರನ ಆಲಯದ ಬಾಗಿಲುಗಳನ್ನು ಮುಚ್ಚಿ ಜೆರುಸಲೇಮಿನ ಪ್ರತಿಯೊಂದು ಮೂಲೆಯಲ್ಲೂ ಯಜ್ಞವೇದಿಗಳನ್ನು ಕಟ್ಟಿಸಿದನು.
- Verse 25: ಅನ್ಯದೇವತೆಗಳಿಗೆ ಧೂಪಹಾಕುವುದಕ್ಕಾಗಿ ಜುದೇಯದ ಎಲ್ಲ ಪಟ್ಟಣಗಳಲ್ಲೂ ಪೂಜಾಸ್ಥಳಗಳನ್ನು ನಿರ್ಮಿಸಿದನು. ಹೀಗೆ ತನ್ನ ಪಿತೃಗಳ ದೇವರಾದ ಸರ್ವೇಶ್ವರನನ್ನು ರೇಗಿಸಿದನು.
- Verse 26: ಅಹಾಜನ ಉಳಿದ ಪೂರ್ವೋತ್ತರ ಚರಿತ್ರೆ ಹಾಗು ಅವನ ಎಲ್ಲ ಪ್ರವರ್ತನೆಗಳು ಯೆಹೂದ್ಯರ ಮತ್ತು ಇಸ್ರಯೇಲರ ರಾಜಗ್ರಂಥದಲ್ಲಿ ಲಿಖಿತವಾಗಿವೆ.
- Verse 27: ಅವನು ಸತ್ತು ತನ್ನ ಪಿತೃಗಳ ಬಳಿಗೆ ಸೇರಲು ಅವನನ್ನು ಇಸ್ರಯೇಲ್ ರಾಜಸ್ಮಶಾನದಲ್ಲಿ ಹೂಣದೆ ಜೆರುಸಲೇಮ್ ಪಟ್ಟಣದೊಳಗಿನ ಒಂದು ಸ್ಥಳದಲ್ಲಿ ಹೂಣಿಟ್ಟರು. ಅವನಿಗೆ ಬದಲಾಗಿ ಅವನ ಮಗ ಹಿಜ್ಕೀಯನು ಅರಸನಾದನು.