ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
37ನೇ ಅಧ್ಯಾಯ
- Verse 1: “ಇದನ್ನು ನೋಡಿದಾಗ ನನ್ನ ಎದೆ ತತ್ತರಗೊಳ್ಳುತ್ತದೆ. ನನ್ನ ಗುಂಡಿಗೆ ಎದೆಬಿಟ್ಟು ಮಿಡಿಯುತ್ತದೆ.
- Verse 2: ದೇವರ ಧ್ವನಿಯ ಗರ್ಜನೆಯನು ಕಿವಿಗೊಟ್ಟು ಕೇಳು ಆತನ ಬಾಯಿಂದ ಹೊರಡುವ ಮಾತನು ಆಲಿಸು.
- Verse 3: ಅದನ್ನು ಗಗನಮಂಡಲದೊಳು ಹರಡುತ್ತಾನೆ ಜಗದ ಅಂಚಿನ ತನಕ ಮಿಂಚು ಹೊಳೆಯುವಂತೆ ಮಾಡುತ್ತಾನೆ.
- Verse 4: ಮಿಂಚಿನ ಬಳಿಕ ಕೇಳಿಬರುವುದು ಗರ್ಜನೆಯ ಶಬ್ದ ಗುಡುಗಿನಂಥ ಗಂಭೀರವಾದ ಆತನ ಕಂಠನಾದ ಆತನ ಸ್ವರ ಕೇಳುವಾಗ ನಿಲ್ಲದು ಮಿಂಚಿನ ಹೊಳೆತ.
- Verse 5: ದೇವರಕಂಠ ತನ್ನ ಅದ್ಭುತಕಾರ್ಯಗಳನು ಘೋಷಿಸುತ್ತದೆ ನಮ್ಮಿಂದರಿಯಲಾಗದ ಮಹಾತ್ಕಾರ್ಯಗಳನು ಎಸಗುತ್ತಾನೆ.
- Verse 6: ಹಿಮಕ್ಕೆ, ‘ಹದವಾಗಿ ಭೂಮಿಗೆ ಬೀಳು’ ಎನ್ನುತ್ತಾನೆ ಭಾರಿಮಳೆಗೆ, ‘ರಭಸದಿಂದ ಸುರಿ’ ಎನ್ನುತ್ತಾನೆ.
- Verse 7: ಹೀಗೆ ಜನರೆಲ್ಲರು ಕೆಲಸ ನಿಲ್ಲಿಸುವಂತೆ ಮಾಡುತ್ತಾನೆ ತನ್ನ ಕಾರ್ಯವನು ಅರಿಯುವಂತೆ ಮಾಡುತ್ತಾನೆ.
- Verse 8: ಆಗ ಮೃಗಗಳು ಗುಹೆ ಸೇರುತ್ತವೆ ಪ್ರಾಣಿಗಳು ಬಿಲಗಳಲೇ ತಂಗುತ್ತವೆ.
- Verse 9: ದೇವರ ಭಂಡಾರದಿಂದ ಬಿರುಗಾಳಿ ಬೀಸುತ್ತದೆ ಉತ್ತರ ದಿಕ್ಕಿನಿಂದ ಚಳಿ ಹೊರಬರುತ್ತದೆ.
- Verse 10: ದೇವರ ಉಸಿರಿನಿಂದ ನೀರು ಹಿಮಗಡ್ಡೆಯಾಗುತ್ತದೆ ಸವಿಸ್ತಾರದ ಜಲವು ಕೂಡ ಮಂಜುಗಡ್ಡೆಯಾಗುತ್ತದೆ.
- Verse 11: ಮೋಡಗಳ ಮೇಲೆ ಮಂಜನು ಹೇರುತ್ತಾನೆ ಮೇಘಮಂಡಲವು ಆತನ ಮಿಂಚನು ಹರಡುತ್ತದೆ.
- Verse 12: ಜಗದೊಳೆಲ್ಲ ಆತ ವಿಧಿಸಿದಂತೆ ಜರುಗಬೇಕೆಂದು ಸುತ್ತಮುತ್ತಲು ಸಿಡಿಲುಗಳು ಸಂಚರಿಸುವಂತೆ ಮಾಡುತ್ತಾನೆ.
- Verse 13: ಜನರ ಶಿಕ್ಷಣಕ್ಕೆ, ಧರೆಯ ಹಿತಕೆ ತಮ್ಮ ಪ್ರೀತಿಯನ್ನು ತೋರುವುದಕೆ ಇದೆಲ್ಲ ಆಗುವಂತೆ ಮಾಡುತ್ತಾನೆ.
- Verse 14: ಯೋಬನೇ, ಈ ಮಾತುಗಳನು ಕೇಳು ದೇವರ ಅದ್ಭುತಗಳನು ಮೌನದಿಂದ ಧ್ಯಾನಿಸು:
- Verse 15: ದೇವರು ಹೇಗೆ ಮೋಡಗಳನು ನಿಯಂತ್ರಿಸುತ್ತಾನೆಂದು ಅರಿತಿರುವೆಯಾ? ಅವುಗಳಿಂದ ಸಿಡಿಲು ಹೇಗೆ ಹೊಳೆದುಬರುತ್ತದೆಂದು ತಿಳಿದಿರುವೆಯಾ?
- Verse 16: ಮೋಡಗಳ ತೇಲಾಟವನು ಬಲ್ಲೆಯಾ? ಜ್ಞಾನಪೂರ್ಣನಾ ಅದ್ಭುತಕಾರ್ಯಗಳನು ಗ್ರಹಿಸಿರುವೆಯಾ?
- Verse 17: ತೆಂಕಣಗಾಳಿಯಿಂದ ಪೊಡವಿ ತಪಿಸಿ ಸ್ತಬ್ದವಿರುವಾಗಲೆ ನಿನ್ನ ಬಟ್ಟೆಬರೆ ಬಿಸಿಯಿರುವಾಗಲೆ ಆ ಅರಿವು ನಿನಗಿರುತ್ತದೆಯೇ?
- Verse 18: ದೇವರಂತೆ ಆಕಾಶಮಂಡಲವನು ನಿನ್ನಿಂದ ನಿರ್ಮಿಸಲಾದೀತೆ? ಎರಕ ಹೊಯ್ದು ಕನ್ನಡಿಯಂತೆ ಅದನು ಗಟ್ಟಿಮಾಡಲಾದೀತೆ?
- Verse 19: ಆತನಿಗೆ ಹೇಳಬೇಕಾದ ಉತ್ತರವನು ನಮಗೆ ತಿಳಿಸು ಅಂಧಕಾರದಲ್ಲಿರುವ ನಮ್ಮಿಂದ ಏನೊಂದನೂ ಹೇಳಲಾಗದು.
- Verse 20: ನಾನು ಮಾತಾಡಬೇಕೆಂದು ದೇವರಿಗೆ ಹೇಳಿಕಳಿಸಲಾದೀತೆ? ಹಾಗೆ ಮಾಡುವವನು ತನ್ನನ್ನೆ ನಿರ್ಮೂಲ ಮಾಡಿಕೊಂಡಂತೆ!
- Verse 21: ಗಾಳಿಬೀಸಿ ಗಗನವನು ಶುಭ್ರಗೊಳಿಸಲು ಅಲ್ಲಿ ಪ್ರಜ್ವಲಿಸುವ ಬೆಳಕನು ದೃಷ್ಟಿಸಲಾಗದು.
- Verse 22: ಉತ್ತರದಿಂದ ಹೊನ್ನಿನ ಹೊಳಪು ಹೊರಡುವುದು ದೇವರು ವಿಸ್ಮಯಕರ ತೇಜಸ್ಸನು ಧರಿಸಿರುವನು.
- Verse 23: ಕಂಡುಹಿಡಿಯಲಾಗದು ಇಂಥ ಸರ್ವಶಕ್ತನನು ನಮ್ಮಿಂದ ಶಕ್ತಿಯಲೂ ಸತ್ಯದಲೂ ಪರಮ ಪರಾಕ್ರಮಿ ಆತ ನ್ಯಾಯಪೂರ್ಣನಾದ ಆತ ದಬ್ಬಾಳಿಕೆ ನಡೆಸುವವನಲ್ಲ ನ್ಯಾಯಕ್ಕಾಗಲೀ ಧರ್ಮಕ್ಕಾಗಲೀ ಆತ ಧಕ್ಕೆ ತರುವವನಲ್ಲ.
- Verse 24: ಎಂತಲೇ ಜನರಿಗೆ ಆತನಲ್ಲಿದೆ ಭಯಭಕ್ತಿ ತಾವೇ ಜ್ಞಾನಿಗಳೆಂದುಕೊಳ್ಳುವವರಲಿ ದೇವರಿಗಿಲ್ಲ ಲಕ್ಷ್ಯ.”