पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
19ನೇ ಅಧ್ಯಾಯ
- Verse 1: ಆಕಾಶಮಂಡಲ ಸಾರುತಿದೆ ದೇವರ ಮಹಿಮೆಯನು I ತಾರಾಮಂಡಲ ತೋರುತಿದೆ ದೇವರ ಕೈಕೃತಿಗಳನು II
- Verse 2: ದಿನವು ಮರುದಿನಕೆ ಮಾಡುತಿದೆ ಈ ಪ್ರಕಟಣೆಯನು I ರಾತ್ರಿ ಮರುರಾತ್ರಿಗೆ ನೀಡುತಿದೆ ಈ ಪ್ರಚಾರವನು II
- Verse 3: ಅವುಗಳಿಗೆ ಮಾತಿಲ್ಲ; ಅವುಗಳಿಗೆ ಶಬ್ದವಿಲ್ಲ I ಅವುಗಳ ಸ್ವರವಂತೂ ಕೇಳಿಬರುವುದಿಲ್ಲ II
- Verse 4: ಆದರೂ ಅವುಗಳ ಧ್ವನಿರೇಖೆ ಹರಡಿದೆ ಬುವಿಯಾದ್ಯಂತ I ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ II
- Verse 5: ನಿರ್ಮಿಸಿಹನಲ್ಲಿ ದೇವನು ಗುಡಾರವೊಂದನು ಸೂರ್ಯನಿಗೆ I ಬರುತಿಹನಾ ರವಿ ವರನಂತೆ ಧಾರಾಗೃಹದಿಂದ ಹೊರಗೆ I ಶೂರನಂತೆ, ಓಟದ ಪಥದಲ್ಲೋಡಲು ಹರುಷದೊಂದಿಗೆ II
- Verse 6: ಏರುತಿಹನು ದಿಗಂತದೊಂದು ಕೊನೆಯಿಂದ ಮತ್ತೊಂದು ಕೊನೆಗೆ I ಮುಚ್ಚುಮರೆಯಾದುದೊಂದೂ ಇರದು, ಆತನಾ ಉರಿಗಣ್ಣಿಗೆ II
- Verse 7: ಪ್ರಭುವಿನ ಆಜ್ಞೆ ಪರಿಪೂರ್ಣ; ಜೀವನಕದು ನವಚೇತನ I ನಂಬಲರ್ಹ; ಪ್ರಭುವಿನ ಶಾಸನ ಮುಗ್ದರಿಗದು ಸುಜ್ಞಾನ II
- Verse 8: ಪ್ರಭುವಿನ ನಿಯಮ ನೀತಿಬದ್ಧ; ಮನಸ್ಸಿಗದು ಒಸಗೆ I ಪ್ರಭುವಿನ ಕಟ್ಟಳೆ ಪರಿಶುದ್ಧ; ಕಣ್ಣಿಗದು ದೀವಿಗೆ II
- Verse 9: ಪ್ರಭುವಿನ ಭೀತಿ ಪವಿತ್ರ; ಅದೆಂದಿಗೂ ಶಾಶ್ವತ I ಪ್ರಭುವಿನ ತೀರ್ಪು ಯಥಾರ್ಥ; ಪರಿಪೂರ್ಣ ನ್ಯಾಯಯುತ II
- Verse 10: ಅಪೇಕ್ಷಣೀಯವಾದುವವು ಚಿನ್ನ ಅಪರಂಜಿಗಿಂತ I ಅತಿಮಧುರವಾದುವು ಅಪ್ಪಟ ಜೇನುತುಪ್ಪಕ್ಕಿಂತ II
- Verse 11: ಜಾಗೃತಗೊಳ್ಳುವನು ನಿನ್ನ ದಾಸನು ಅವುಗಳಿಂದ I ಸಂಭಾವಿತನಾಗುವನು ಅವುಗಳ ಪಾಲನೆಯಿಂದ II
- Verse 12: ತನ್ನ ತಪ್ಪನು ತಾನರಿತುಕೊಳ್ಳುವವನಾರಯ್ಯಾ I ಗುಪ್ತವಾದ ಪಾಪಗಳಿಂದೆನ್ನ ಮುಕ್ತಗೊಳಿಸಯ್ಯಾ II
- Verse 13: ಕಾಪಾಡೆನ್ನನು, ಬೇಕು ಬೇಕೆಂದು ಪಾಪಮಾಡದಂತೆ I ಕಾದಿಡು, ಅಂಥ ಪಾಪಕೆ ನಾ ದಾಸನಾಗದಂತೆ I ನಿರ್ದೋಷಿಯಾಗುವೆನು, ಆ ದ್ರೋಹಕ್ಕೊಳಗಾಗದಂತೆ II
- Verse 14: ನಿನಗೊಪ್ಪಿಗೆಯಾಗಲಿ ನನ್ನ ಬಾಯಮಾತು, ಹೃದಯಧ್ಯಾನ I ನೀನೆನ್ನ ಪ್ರಭು, ನನಗೆ ಉದ್ಧಾರಕ, ನನಗಾಶ್ರಯಧಾಮ II