P. O. C ബൈബിള്
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
3ನೇ ಅಧ್ಯಾಯ
- Verse 1: ಮಗನೇ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ನಿನ್ನ ಹೃದಯದಲ್ಲಿಡು.
- Verse 2: ಅವು ನಿನ್ನ ದಿನಗಳನ್ನು ಹೆಚ್ಚಿಸುತ್ತವೆ; ನಿನಗೆ ದೀರ್ಘಾಯುಸ್ಸನ್ನು ತರುತ್ತವೆ, ನಿನಗೆ ಸುಕ್ಷೇಮವನ್ನು ಉಂಟುಮಾಡುತ್ತವೆ.
- Verse 3: ಪ್ರೀತಿ ಸತ್ಯತೆಗಳು ನಿನ್ನನ್ನು ಬಿಡದಿರಲಿ; ಅವು ನಿನ್ನ ಕೊರಳಿನ ಪಟ್ಟಿಯಾಗಿರಲಿ, ಹೃದಯದಹಲಗೆಯಲ್ಲಿ ಲಿಖಿತವಾಗಿರಲಿ.
- Verse 4: ಆಗ ದೇವರಿಗೂ ಮಾನವರಿಗೂ ಪ್ರಿಯನಾಗುವೆ, ದಯೆ ದಾಕ್ಷಿಣ್ಯವನ್ನು ಪಡೆಯುವೆ.
- Verse 5: ನಿನ್ನ ಸ್ವಂತ ಬುದ್ಧಿಯನ್ನೇ ನೆಚ್ಚಿಕೊಂಡಿರದಿರು; ಪೂರ್ಣ ಮನಸ್ಸಿನಿಂದ ಸರ್ವೇಶ್ವರನಲ್ಲಿ ನಂಬಿಕೆಯಿಡು.
- Verse 6: ನಿನ್ನ ನಡತೆಯಲ್ಲೆಲ್ಲಾ ನಿವೇದಿಸು ಆತನನ್ನು, ಆಗ ಸರಾಗಮಾಡುವನು ನಿನ್ನ ಮಾರ್ಗವನ್ನು.
- Verse 7: ನೀನೇ ಬುದ್ಧಿವಂತನೆಂದು ಎಣಿಸದಿರು. ಸರ್ವೇಶ್ವರನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು.
- Verse 8: ಆಗ ನಿನಗೆ ದೇಹಾರೋಗ್ಯ ದೊರಕುವುದು, ನಿನ್ನ ಎಲುಬುಗಳಿಗೆ ಶಕ್ತಿಸಾರತ್ವ ಸಿಗುವುದು.
- Verse 9: ನಿನ್ನ ಆಸ್ತಿಯನ್ನರ್ಪಿಸಿ ಸರ್ವೇಶ್ವರನನ್ನು ಸನ್ಮಾನಿಸು, ನಿನ್ನ ಬೆಳೆಯ ಪ್ರಥಮ ಫಲವನ್ನು ಕಾಣಿಕೆಯಾಗಿಕೊಡು.
- Verse 10: ಆಗ ನಿನ್ನ ಕಣಜಗಳು ದವಸಧಾನ್ಯದಿಂದ ಭರ್ತಿಯಾಗುವುವು, ನಿನ್ನ ತೊಟ್ಟಿಗಳು ದ್ರಾಕ್ಷಾರಸದಿಂದ ತುಂಬಿ ತುಳುಕುವುವು.
- Verse 11: ಮಗನೇ, ಸರ್ವೇಶ್ವರನ ಶಿಕ್ಷೆಯನ್ನು ತಾತ್ಸಾರಮಾಡಬೇಡ, ಆತನು ನೀಡುವ ಎಚ್ಚರಿಕೆಗೆ ಬೇಸರಗೊಳ್ಳಬೇಡ.
- Verse 12: ತನ್ನ ಮುದ್ದು ಮಗನನ್ನು ತಂದೆ ಗದರಿಸುವಂತೆ, ಸರ್ವೇಶ್ವರ ತಾನು ಪ್ರೀತಿಸುವವರನ್ನು ಗದರಿಸುತ್ತಾನೆ.
- Verse 13: ಜ್ಞಾನವನ್ನು ಕಂಡು ಹಿಡಿಯುವವನು ಧನ್ಯನು, ವಿವೇಕವನ್ನು ಗಳಿಸುವವನು ಭಾಗ್ಯವಂತನು.
- Verse 14: ಬೆಳ್ಳಿಗಿಂತ ಜ್ಞಾನ ಗಳಿಕೆ ಶ್ರೇಷ್ಠ, ಬಂಗಾರಕ್ಕಿಂತ ಜ್ಞಾನ ಸಂಪಾದನೆ ಉತ್ಕೃಷ್ಟ.
- Verse 15: ಮಾಣಿಕ್ಯಕ್ಕಿಂತ ಜ್ಞಾನದ ಬೆಲೆ ಅಮೂಲ್ಯ. ನಿನಗಿಷ್ಟವಾದುದಾವುದೂ ಅದಕ್ಕೆ ಸಾಟಿಯಿಲ್ಲ.
- Verse 16: ದೀರ್ಘಾಯುಷ್ಯ, ಜ್ಞಾನವೆಂಬ ಆಕೆಯ ಬಲಗೈಯಲ್ಲಿದೆ; ಘನತೆ, ಶ್ರೀಮಂತಿಕೆಯೂ ಆಕೆಯ ಎಡಗೈಯಲ್ಲಿವೆ.
- Verse 17: ಆಕೆಯ ದಾರಿ ಸುಖಕರ, ಆಕೆಯ ಮಾರ್ಗ ಕ್ಷೇಮಕರ.
- Verse 18: ತನ್ನನ್ನು ಅಪ್ಪಿಕೊಂಡವರಿಗೆ ಜ್ಞಾನವು ಜೀವವೃಕ್ಷ; ಅದನ್ನು ಅವಲಂಬಿಸುವ ಪ್ರತಿಯೊಬ್ಬನಿಗೆ ಸೌಭಾಗ್ಯ.
- Verse 19: ಸರ್ವೇಶ್ವರಸ್ವಾಮಿ ಜ್ಞಾನದ ಮೂಲಕ ಜಗವನ್ನು ಸ್ಥಾಪಿಸಿದ ವಿವೇಕದ ಮುಖಾಂತರ ಗಗನವನ್ನು ಸ್ಥಿರಗೊಳಿಸಿದ.
- Verse 20: ಆತನ ಜ್ಞಾನದಿಂದಲೆ ಅಡಿಸಾಗರ ಒಡೆಯುತ್ತದೆ ಆಕಾಶಮಂಡಲ ಇಬ್ಬನಿಯನ್ನು ಸುರಿಸುತ್ತದೆ.
- Verse 21: ಮಗನೇ, ಸುಜ್ಞಾನ, ಸದ್ಬುದ್ಧಿಗಳು ನಿನ್ನಲ್ಲಿ ಸ್ಥಿರವಾಗಿರಲಿ; ನಿನ್ನ ಕಣ್ಣುಗಳಿಂದ ಅವು ಮರೆಯಾಗದಿರಲಿ.
- Verse 22: ಅವು ನಿನ್ನಾತ್ಮಕ್ಕೆ ಜೀವಪ್ರದಾನವಾಗಿವೆ, ನಿನ್ನ ಕೊರಳಿಗೆ ಭೂಷಣವಾಗಿವೆ.
- Verse 23: ಹೀಗೆ ನೀನು ಎಡವದೆ ನಡೆಯುವೆ, ನಿನ್ನ ಮಾರ್ಗದೊಳು ಭಯವಿಲ್ಲದೆ ಸಾಗುವೆ.
- Verse 24: ಮಲಗುವಾಗ ನಿನಗೆ ಹೆದರಿಕೆಯಿರದು, ಮಲಗಿದ ಮೇಲೆ ಸುಖನಿದ್ರೆ ಬರುವುದು.
- Verse 25: ಆಕಸ್ಮಿಕ ಅಪಾಯಕ್ಕೆ ನೀನು ಅಂಜಲಾರೆ, ದುರುಳರಿಗೆ ಬಂದೊದಗುವ ನಾಶಕ್ಕೆ ಹೆದರಲಾರೆ.
- Verse 26: ಸರ್ವೇಶ್ವರನೇ ನಿನಗೆ ಆಧಾರವಾಗಿರುವನು, ನಿನ್ನ ಕಾಲು ಉರುಲಿಗೆ ಸಿಕ್ಕದಂತೆ ಕಾಪಾಡುವನು.
- Verse 27: ನಿನ್ನ ಕೈಲಾದಾಗ ಉಪಕಾರಮಾಡು, ಕೇಳುವವರಿಗೆ ಅದನ್ನು ನಿರಾಕರಿಸಬೇಡ.
- Verse 28: ನೆರೆಯವನಿಗೆ ನೀಡಲು ಇದೀಗಲೇ ನಿನ್ನಲ್ಲಿರುವಾಗ, “ಹೋಗಿ ಬಾ, ನಾಳೆ ಕೊಡುತ್ತೇನೆ” ಎನ್ನಬೇಡ.
- Verse 29: ಕೇಡನ್ನು ಬಗೆಯಬೇಡ ನೆರೆಯವನಿಗೆ, ಪಕ್ಕದಲ್ಲೆ ನಂಬಿಕೆಯಿಂದ ವಾಸಿಸುವವನಿಗೆ.
- Verse 30: ನಿನಗೆ ಕೇಡು ಮಾಡದವನ ಸಂಗಡ, ಕಾರಣವಿಲ್ಲದೆ ಜಗಳವಾಡಬೇಡ.
- Verse 31: ಹಿಂಸಾತ್ಮಕನನ್ನು ನೋಡಿ ಹೊಟ್ಟೆಕಿಚ್ಚು ಪಡಬೇಡ, ಅವನ ನಡತೆಯನ್ನು ಎಷ್ಟುಮಾತ್ರಕ್ಕೂ ಅನುಸರಿಸಬೇಡ.
- Verse 32: ವಕ್ರಬುದ್ಧಿಯವನು ಸರ್ವೇಶ್ವರನಿಗೆ ಅಸಹ್ಯನು, ಸತ್ಯಸಂಧರು ಆತನಿಗೆ ಪ್ರೀತಿಪಾತ್ರರು.
- Verse 33: ದುರುಳರ ಮನೆಯನ್ನು ಸರ್ವೇಶ್ವರ ಶಪಿಸುವನು; ನೀತಿವಂತರ ನಿವಾಸವನ್ನು ಆತ ಆಶೀರ್ವದಿಸುವನು.
- Verse 34: ಅಪಹಾಸ್ಯಮಾಡುವವರನ್ನು ಆತ ಅಪಹಾಸ್ಯ ಮಾಡುವನು; ನಮ್ರರಿಗಾದರೋ ಕೃಪಾಶೀರ್ವಾದವನ್ನು ಅನುಗ್ರಹಿಸುವನು.
- Verse 35: ಜ್ಞಾನಿಗಳಿಗೆ ಲಭಿಸುವುದು ಸನ್ಮಾನ; ಜ್ಞಾನಹೀನರಿಗೆ ಸಿಗುವ ಸಂಭಾವನೆ ಅವಮಾನ.