पवित्र बाइबिल
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
7ನೇ ಅಧ್ಯಾಯ
- Verse 1: ಇದಲ್ಲದೆ ಸರ್ವೇಶ್ವರ ಅನುಗ್ರಹಿಸಿದ ಈ ವಾಣಿ ನನಗೆ ಕೇಳಿಸಿತು:
- Verse 2: “ನರಪುತ್ರನೇ, ಸರ್ವೇಶ್ವರನಾದ ದೇವರು ಇಸ್ರಯೇಲ್ ನಾಡಿಗೆ ಹೀಗೆ ನುಡಿಯುತ್ತಾರೆ: ‘ಪ್ರಳಯ, ಪೂರ್ಣಪ್ರಳಯ ನಾಡಿನ ಚತುರ್ದಿಕ್ಕಿನಲ್ಲೂ ಸಂಭವಿಸಿದೆ.’
- Verse 3: “ಈಗಲೇ ನಿನಗೆ ಪ್ರಳಯ ಬಂದುಬಿಟ್ಟಿತು; ನಾನು ನನ್ನ ಕೋಪವನ್ನು ನಿನ್ನ ಮೇಲೆ ಬರಮಾಡಿ, ನಿನ್ನ ನಡತೆಗೆ ತಕ್ಕಂತೆ ನ್ಯಾಯತೀರಿಸಿ, ನಿನ್ನ ಸಮಸ್ತ ಅಸಹ್ಯಕಾರ್ಯಗಳ ಫಲವನ್ನು ನಿನಗೆ ಉಣ್ಣಿಸುವೆನು.
- Verse 4: ನಿನ್ನನ್ನು ಕಟಾಕ್ಷಿಸೆನು, ಉಳಿಸೆನು; ನಿನ್ನ ದುರ್ಮಾರ್ಗದ ಫಲವನ್ನು ನಿನಗೆ ತಿನ್ನಿಸುವೆನು; ನಿನ್ನ ಅಸಹ್ಯಕಾರ್ಯಗಳು ನಿನ್ನ ಅನುಭವಕ್ಕೆ ಬರುವುವು; ಆಗ ನಾನೇ ಸರ್ವೇಶ್ವರ ಎಂದು ನಿನಗೆ ಗೊತ್ತಾಗುವುದು.”
- Verse 5: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಅಯ್ಯೋ, ಕೇಡು, ಎಂದೂ ಕಾಣದ ಕೇಡು, ಇಗೋ ಬಂದಿತು;
- Verse 6: ಪ್ರಳಯ ಬಂದಿತು, ಪೂರ್ಣಪ್ರಳಯ ಬಂದಿತು, ನಿನ್ನನ್ನು ಚಚ್ಚುವುದಕ್ಕೆ ಚಚ್ಚರಗೊಂಡಿದೆ, ಇಗೋ ಬಂದೇ ಬಂತು;
- Verse 7: ದೇಶನಿವಾಸಿಯೇ, ನಿನ್ನ ಗತಿ ಮುಗಿಯಿತು, ಸಮಯ ಬಂದಿತು, ದಿನ ಸಮೀಪಿಸಿತು; ಬೆಟ್ಟಗಳ ಮೇಲೆ ಕೇಳಿಸುವ ಧ್ವನಿ ಉತ್ಸಾಹಧ್ವನಿಯಲ್ಲ , ಅದು ಬರೀ ಗೋಳೇ!
- Verse 8: “ಇನ್ನು ಸ್ವಲ್ಪಕಾಲದೊಳಗೆ ನಾನು ನಿನ್ನ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸುವೆನು, ನನ್ನ ಕೋಪವನ್ನು ತೀರಿಸಿಕೊಳ್ಳುವೆನು; ನಿನ್ನ ನಡತೆಗೆ ತಕ್ಕ ದಂಡನೆಯನ್ನು ವಿಧಿಸಿ, ನಿನ್ನ ಅಸಹ್ಯಕಾರ್ಯಗಳ ಫಲವನ್ನೆಲ್ಲಾ ನಿನಗೆ ತಿನ್ನಿಸುವೆನು.
- Verse 9: ನಿನ್ನನ್ನು ಕಟಾಕ್ಷಿಸುವುದಿಲ್ಲ, ಉಳಿಸುವುದಿಲ್ಲ, ನಿನ್ನ ದುರ್ಮಾರ್ಗಗಳಿಗೆ ತಕ್ಕ ಗತಿಯನ್ನು ಬರಮಾಡುವೆನು. ಆಗ ನಿನ್ನ ಅಸಹ್ಯಕಾರ್ಯಗಳು ನಿನ್ನ ಅನುಭವಕ್ಕೆ ಬರುವುವು; ಸರ್ವೇಶ್ವರನಾದ ನಾನು ದಂಡಿಸುವವನು ಎಂಬುದು ನಿನಗೆ ಚೆನ್ನಾಗಿ ಗೊತ್ತಾಗುವುದು.
- Verse 10: “ಇಗೋ, ದಂಡನೆಯ ದಿನ ಬಂದೆಬಿಟ್ಟಿತು; ನಿನಗೆ ದುರ್ಗತಿ ಅಂಕುರಿಸಿದೆ, ಕೋಲು ಹೂಬಿಟ್ಟಿದೆ, ಹೆಮ್ಮೆ ಚಿಗುರಿದೆ;
- Verse 11: ಹಿಂಸೆ ಬೆಳೆದು ಬೆಳೆದು ಕೆಡುಕಿನ ಕೋಲಾಗಿದೆ; ನಿನ್ನವರಲ್ಲಿ ಯಾರೂ ಉಳಿಯರು. ಆ ಜನಸಮೂಹದಲ್ಲೂ ಅವರ ಆಸ್ತಿಯಲ್ಲೂ ಶೇಷವೇನೂ ಇರದು; ಅವರಲ್ಲಿ ಯಾವ ಶ್ರೇಷ್ಠತೆಯೂ ನಿಲ್ಲದು.
- Verse 12: “ಸಮಯ ಬಂದಿದೆ, ದಿನ ಹತ್ತಿರವಾಗಿದೆ; ಕೊಂಡುಕೊಳ್ಳುವವನು ಹರ್ಷಿಸದಿರಲಿ, ಮಾರುವವನು ದುಃಖಿಸದಿರಲಿ; ರೋಷಾಗ್ನಿ ಆ ಸಮೂಹದವರೆಲ್ಲರ ಮೇಲೆ ಹತ್ತಿದೆ.
- Verse 13: ಮಾರಿದವನು ಎಷ್ಟು ವರ್ಷ ಬದುಕಿದರೂ ಮಾರಿದ ಸೊತ್ತು ಅವನ ವಶಕ್ಕೆ ತಿರುಗಿಬಾರದು; ಉಂಟಾದ ದಿವ್ಯದರ್ಶನ ಸಮಾಜದವರಿಗೆಲ್ಲಾ ಸಂಬಂಧಿಸಿದೆ, ಯಾರೂ ಹಿಂದಿರುಗರು, ಯಾರೂ ತಮ್ಮ ಅಧರ್ಮದಿಂದ ತಮ್ಮ ಜೀವವನ್ನು ಉಳಿಸಿಕೊಳ್ಳರು;
- Verse 14: ಅವರು ಕೊಂಬನ್ನೂದಿ ಸರ್ವಸನ್ನಾಹ ಮಾಡಿದರೂ ಯಾರು ಯುದ್ಧಕ್ಕೆ ಹೊರಡರು; ನನ್ನ ರೋಷಾಗ್ನಿ ಆ ಸಮಾಜದವರೆಲ್ಲರ ಮೇಲೆ ಹತ್ತಿದೆ.
- Verse 15: “ಊರ ಹೊರಗೆ ಖಡ್ಗಕ್ಕೆ, ಊರೊಳಗೆ ವ್ಯಾಧಿ ಕ್ಷಾಮಗಳಿಗೆ ತುತ್ತಾಗುವರು; ಹೊರಗಿರುವವರು ಖಡ್ಗದಿಂದ ಸಾಯುವರು.
- Verse 16: ಅವರಲ್ಲಿ ಪಲಾಯನ ಮಾಡಿದವರು ತಪ್ಪಿಸಿಕೊಂಡು, ತಮ್ಮ ಅಧರ್ಮದಲ್ಲಿಯೇ ಇದ್ದು, ಡೊಂಗರಗಳಲ್ಲಿನ ಪಾರಿವಾಳಗಳಂತೆ ಬೆಟ್ಟಗಳ ಮೇಲೆ ಗೋಳಿಡುತ್ತಿರುವರು.
- Verse 17: ಎಲ್ಲರ ಕೈಗಳು ಜೋಲು ಬಿದ್ದಿರುವುವು; ಎಲ್ಲರ ಮೊಣಕಾಲುಗಳು ನೀರಿನಂತೆ ಅದರುವುವು.
- Verse 18: ಅವರು ಗೋಣಿತಟ್ಟನ್ನು ಸುತ್ತಿಕೊಳ್ಳುವರು, ದಿಗಿಲು ಅವರನ್ನು ಆವರಿಸಿಬಿಡುವುದು; ಎಲ್ಲರ ಮುಖದಲ್ಲೂ ನಾಚಿಕೆ ತುಂಬಿರುವುದು, ಎಲ್ಲರು ತಲೆಬೋಳಿಸಿಕೊಂಡು ಇರುವರು.
- Verse 19: ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರ ಅಶುದ್ಧ ಪದಾರ್ಥದಂತಿರುವುದು; ಸರ್ವೇಶ್ವರ ರೋಷವನ್ನು ತೀರಿಸುವ ದಿನದಲ್ಲಿ ಅವರ ಬೆಳ್ಳಿಬಂಗಾರ ಅವರನ್ನು ರಕ್ಷಿಸಲಾರದು; ಅವರ ಇಷ್ಟಾರ್ಥ ನೆರವೇರದು, ಅವರ ಹೊಟ್ಟೆ ತುಂಬದು; ಏಕೆಂದರೆ ಅವರ ಆಸ್ತಿ ಅವರಿಗೆ ಪಾಪಕ್ಕೆ ಕಾರಣವಾಗಿತ್ತು.
- Verse 20: “ಅವರ ಆಭರಣಗಳ ಚಂದವು ಅವರಿಗೆ ಗರ್ವಕ್ಕೆ ಆಸ್ಪದವಾಯಿತು. ಇದಲ್ಲದೆ ಹೇಯವೂ ಅಸಹ್ಯವೂ ಆದ ತಮ್ಮ ದೇವತೆಗಳ ಪ್ರತಿಮೆಗಳನ್ನು ಬೆಳ್ಳಿಬಂಗಾರದಿಂದ ರೂಪಿಸುತ್ತಿದ್ದರು.
- Verse 21: ಆದಕಾರಣ ಅದನ್ನು ಅವರಿಗೆ ಅಶುದ್ಧ ಪದಾರ್ಥವನ್ನಾಗಿ ಮಾಡುವೆನು. ಅನ್ಯರ ಕೈಯಿಂದ ಕೊಳ್ಳೆ ಹೊಡೆಯಿಸಿ ಲೋಕಕುಖ್ಯಾತ ದುಷ್ಟರಿಂದ ಸೂರೆಮಾಡಿಸುವೆನು; ಅವರು ಅದನ್ನು ಹೊಲೆಗೊಳಿಸುವರು.
- Verse 22: ನಾನು ಅವರ ಕಡೆಯಿಂದ ನನ್ನ ಮುಖವನ್ನು ತಿರುಗಿಸಿಕೊಳ್ಳುವೆನು; ಅವರು ನನ್ನ ಪ್ರಿಯ ಮಂದಿರವನ್ನು ಅಪವಿತ್ರಗೊಳಿಸುವರು. ಕಳ್ಳರು ಅದರಲ್ಲಿ ನುಗ್ಗಿ ಅದನ್ನು ಹೊಲೆಗೆಡಿಸುವರು.
- Verse 23: “ಒಂದು ಸರಪಣಿಯನ್ನು ಮಾಡು; ಏಕೆಂದರೆ ನಾಡು ನರಹತ್ಯಪೂರಿತವಾಗಿದೆ. ಪಟ್ಟಣವು ಹಿಂಸಾಕೃತ್ಯಗಳಿಂದ ತುಂಬಿಹೋಗಿದೆ.
- Verse 24: ಹೀಗಿರಲು ನಾನು ಅತಿ ದುಷ್ಟಜನಾಂಗಗಳನ್ನು ಬರಮಾಡುವೆನು; ಅವು ನನ್ನ ಜನರ ಮನೆಗಳನ್ನು ವಶಮಾಡಿಕೊಳ್ಳುವುವು; ನಾನು ಬಲಿಷ್ಠರ ಸೊಕ್ಕನ್ನು ಅಡಗಿಸುವೆನು, ಅವರ ಪವಿತ್ರಸ್ಥಾನಗಳು ಹೊಲೆಗೆಡುವುವು;
- Verse 25: ಸಂಕಟ ಸಂಭವಿಸುವುದು; ಅಲ್ಪಸ್ವಲ್ಪ ಸಮಾಧಾನವನ್ನು ಹುಡುಕಿದರೂ ಸಿಕ್ಕದು.
- Verse 26: ಉಪದ್ರವದ ಮೇಲೆ ಉಪದ್ರವ, ಸುದ್ದಿಯ ಮೇಲೆ ಸುದ್ದಿ ಹರಡುವುವು; ‘ದಿವ್ಯದರ್ಶನವಾಯಿತೆ’ ಎಂದು ಪ್ರವಾದಿಯನ್ನು ಕೇಳುತ್ತಲೇ ಇರುವರು; ಯಾಜಕರಲ್ಲಿ ಧರ್ಮೋಪದೇಶ ಅಡಗಿಹೋಗುವುದು, ಹಿರಿಯರಲ್ಲಿ ಸಲಹೆ ಸಮಾಲೋಚನೆ ಇಲ್ಲವಾಗುವುದು.
- Verse 27: ರಾಜನು ದುಃಖಿಸುವನು, ದಿಗಿಲು ಒಡೆಯನನ್ನು ಮುಸುಕುವುದು, ಜನಸಾಮಾನ್ಯರ ಕೈಗಳು ತತ್ತರಿಸುವುವು; ನಾನು ಅವರ ದುರ್ನಡತೆಗೆ ತಕ್ಕ ಪ್ರತೀಕಾರವನ್ನು ಮಾಡಿ ಅವರ ದುಷ್ಕರ್ಮಗಳಿಗೆ ಸರಿಯಾದ ದಂಡನೆಯನ್ನು ವಿಧಿಸುವೆನು; ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.”