ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಮತ್ತಾಯ
27ನೇ ಅಧ್ಯಾಯ
- Verse 1: ಬೆಳಗಾಯಿತು. ಎಲ್ಲ ಮುಖ್ಯಯಾಜಕರೂ ಜನರ ಪ್ರಮುಖರೂ ಸೇರಿ ಯೇಸುವನ್ನು ಕೊಲ್ಲಿಸುವುದಕ್ಕೆ ಸಮಾಲೋಚನೆಮಾಡಿದರು.
- Verse 2: ಅಂತೆಯೇ ಯೇಸುವಿಗೆ ಬೇಡಿ ಹಾಕಿಸಿ, ಅವರನ್ನು ರಾಜ್ಯಪಾಲ ಪಿಲಾತನ ಬಳಿಗೆ ಕರೆದೊಯ್ದು ಅವನ ವಶಕ್ಕೆ ಒಪ್ಪಿಸಿದರು.
- Verse 3: ಯೇಸುಸ್ವಾಮಿ ದಂಡನೆಗೆ ಗುರಿಯಾದರೆಂಬುದನ್ನು ಕಂಡು, ಗುರುದ್ರೋಹಿ ಯೂದನು ಪರಿತಾಪಗೊಂಡನು. ಆ ಮೂವತ್ತು ಬೆಳ್ಳಿನಾಣ್ಯಗಳನ್ನು ಮುಖ್ಯಯಾಜಕರ ಮತ್ತು ಪ್ರಮುಖರ ಬಳಿಗೆ ಮರಳಿ ತಂದನು.
- Verse 4: “ನಾನು ನಿರ್ದೋಷಿಯನ್ನು ಹಿಡಿದುಕೊಟ್ಟು ಪಾಪಕಟ್ಟಿಕೊಂಡೆ,” ಎಂದು ಹೇಳಿದನು. ಅದಕ್ಕೆ ಅವರು, ಅದರಿಂದ ನಮಗೇನು? ಅದನ್ನು ನೀನೇ ನೋಡಿಕೋ,’ ಎಂದುಬಿಟ್ಟರು.
- Verse 5: ಆಗ ಅವನು ಆ ಹಣವನ್ನು ದೇವಾಲಯದಲ್ಲೇ ಎಸೆದು, ಹೊರಟುಹೋಗಿ ನೇಣುಹಾಕಿಕೊಂಡು ಸತ್ತನು.
- Verse 6: ಮುಖ್ಯಯಾಜಕರು ಆ ಹಣವನ್ನು ತೆಗೆದುಕೊಂಡು, “ಇದು ರಕ್ತದ ಕ್ರಯ. ಇದನ್ನು ಕಾಣಿಕೆ ಕೋಶದಲ್ಲಿ ಹಾಕುವುದು ಸರಿಯಲ್ಲ,” ಎಂದುಕೊಂಡರು.
- Verse 7: ಕಡೆಗೆ ಒಂದು ನಿರ್ಧಾರಕ್ಕೆ ಬಂದರು. ಪರದೇಶಿಗಳನ್ನು ಹೂಳುವುದಕ್ಕೋಸ್ಕರ ‘ಕುಂಬಾರನ ಹೊಲ’ವನ್ನು ಆ ಹಣಕೊಟ್ಟು ಕೊಂಡುಕೊಂಡರು.
- Verse 8: ಈ ಕಾರಣದಿಂದಲೇ ಅದನ್ನು ‘ನೆತ್ತರ ನೆಲ’ ಎಂದು ಇಂದಿಗೂ ಕರೆಯಲಾಗುತ್ತಿದೆ. ಹೀಗೆ,
- Verse 9: “ಮೂವತ್ತು ಬೆಳ್ಳಿ ನಾಣ್ಯಗಳನ್ನೆತ್ತಿ ಸರ್ವೇಶ್ವರಸ್ವಾಮಿ ನನಗಿತ್ತ ಆದೇಶದಂತೆ ‘ಕುಂಬಾರನ ಹೊಲ’ ಕೊಳ್ಳಲು ಅದನ್ನು ತೆತ್ತರು. ಅಮೂಲ್ಯ ವ್ಯಕ್ತಿಗೆ ಕಟ್ಟಿದ ಬೆಲೆಯದು, ಇಸ್ರಯೇಲ ಜನರು ಒಪ್ಪಿದ ಮೊತ್ತವದು,” ಎಂದು ವಚನಿಸಿದ ಪ್ರವಾದಿ ಯೆರೆಮೀಯನ ಮಾತುಗಳು ಈಡೇರಿದವು.
- Verse 10: “ಮೂವತ್ತು ಬೆಳ್ಳಿ ನಾಣ್ಯಗಳನ್ನೆತ್ತಿ ಸರ್ವೇಶ್ವರಸ್ವಾಮಿ ನನಗಿತ್ತ ಆದೇಶದಂತೆ ‘ಕುಂಬಾರನ ಹೊಲ’ ಕೊಳ್ಳಲು ಅದನ್ನು ತೆತ್ತರು. ಅಮೂಲ್ಯ ವ್ಯಕ್ತಿಗೆ ಕಟ್ಟಿದ ಬೆಲೆಯದು, ಇಸ್ರಯೇಲ ಜನರು ಒಪ್ಪಿದ ಮೊತ್ತವದು,” ಎಂದು ವಚನಿಸಿದ ಪ್ರವಾದಿ ಯೆರೆಮೀಯನ ಮಾತುಗಳು ಈಡೇರಿದವು.
- Verse 11: ಯೇಸುಸ್ವಾಮಿಯನ್ನು ರಾಜ್ಯಪಾಲನ ಮುಂದೆ ನಿಲ್ಲಿಸಿದರು. “ನೀನು ಯೆಹೂದ್ಯರ ಅರಸನೋ?” ಎಂದು ರಾಜ್ಯಪಾಲ ಪ್ರಶ್ನಿಸಿದನು. ಅದಕ್ಕೆ ಯೇಸು, “ಅದು ನಿಮ್ಮ ಬಾಯಿಂದಲೇ ಬಂದಿದೆ,” ಎಂದು ಮರುನುಡಿದರು.
- Verse 12: ಆದರೆ ಮುಖ್ಯಯಾಜಕರೂ ಊರಪ್ರಮುಖರೂ ಮಾಡಿದ ಆಪಾದನೆಗಳಿಗೆ ಅವರು ಏನೂ ಉತ್ತರಕೊಡಲಿಲ್ಲ.
- Verse 13: ಆಗ ಪಿಲಾತನು, “ಇವರು ನಿನಗೆ ವಿರುದ್ಧ ಇಷ್ಟೆಲ್ಲಾ ಹೇಳುತ್ತಿರುವುದು ನಿನಗೆ ಕೇಳಿಸುತ್ತಿಲ್ಲವೆ?” ಎಂದನು.
- Verse 14: ಯೇಸು ಯಾವುದಕ್ಕೂ ಉತ್ತರಕೊಡಲಿಲ್ಲ. ಇದರಿಂದ ರಾಜ್ಯಪಾಲನಿಗೆ ಅತ್ಯಾಶ್ಚರ್ಯವಾಯಿತು.
- Verse 15: ಪ್ರತಿ ಪಾಸ್ಕ ಹಬ್ಬದ ಸಂದರ್ಭದಲ್ಲಿ ಜನರು ಬಯಸುವ ಒಬ್ಬ ಕೈದಿಯನ್ನು ಬಿಡುಗಡೆಮಾಡುವುದು ರಾಜ್ಯಪಾಲನ ಪದ್ಧತಿಯಾಗಿತ್ತು.
- Verse 16: ಆಗ ಬರಬ್ಬನೆಂಬ ಕುಪ್ರಸಿದ್ಧ ಕೈದಿಯೊಬ್ಬನು ಸೆರೆಯಲ್ಲಿದ್ದನು.
- Verse 17: ಹೀಗಿರಲಾಗಿ, ಪಿಲಾತನು ಅಲ್ಲಿ ಕೂಡಿದ್ದ ಜನರನ್ನು ಉದ್ದೇಶಿಸಿ, “ನಾನು ಯಾರನ್ನು ಬಿಡುಗಡೆ ಮಾಡಬೇಕೆನ್ನುತ್ತೀರಿ? ಬರಬ್ಬನನ್ನೋ ಅಥವಾ ‘ಕ್ರಿಸ್ತ’ ಎಂದು ಕರೆಯಲಾಗುವ ಯೇಸುವನ್ನೋ?’ ಎಂದು ಕೇಳಿದನು.
- Verse 18: ಆ ಜನರು ಅಸೂಯೆಯಿಂದಲೇ ಯೇಸುವನ್ನು ಹಿಡಿದೊಪ್ಪಿಸಿದ್ದಾರೆಂದು ಅವನಿಗೆ ಅರಿವಾಗಿತ್ತು.
- Verse 19: ಅದೂ ಅಲ್ಲದೆ, ಪಿಲಾತನು ನ್ಯಾಯಪೀಠದಲ್ಲಿ ಕುಳಿತಿರುವಾಗ, “ನೀವು ಆ ಸತ್ಪುರುಷನ ತಂಟೆಗೆ ಹೋಗಬೇಡಿ; ಆತನ ದೆಸೆಯಿಂದ ಕಳೆದ ರಾತ್ರಿ ಕನಸಿನಲ್ಲಿ ಬಹಳ ಸಂಕಟಪಟ್ಟಿದ್ದೇನೆ,” ಎಂದು ಅವನ ಪತ್ನಿ ಹೇಳಿಕಳುಹಿಸಿದಳು.
- Verse 20: ಇತ್ತ, ಬರಬ್ಬನನ್ನು ಬಿಡುಗಡೆಮಾಡಿ ಯೇಸುವನ್ನು ಕೊಲ್ಲಬೇಕೆಂದು ಕೇಳಿಕೊಳ್ಳುವಂತೆ ಮುಖ್ಯಯಾಜಕರು ಮತ್ತು ಪ್ರಮುಖರು ಜನರನ್ನು ಪ್ರಚೋದಿಸಿದರು.
- Verse 21: ರಾಜ್ಯಪಾಲನು ಪುನಃ ಜನರ ಗುಂಪನ್ನು ನೋಡಿ, “ಈ ಇಬ್ಬರಲ್ಲಿ ಯಾರನ್ನು ನಿಮಗೆ ಬಿಟ್ಟುಕೊಡಲಿ?” ಎಂದು ಕೇಳಿದನು. ಅದಕ್ಕೆ ಅವರು “ಬರಬ್ಬನನ್ನೇ” ಎಂದು ಉತ್ತರಕೊಟ್ಟರು.
- Verse 22: “ಹಾಗಾದರೆ, ‘ಕ್ರಿಸ್ತ’ ಎಂದು ಕರೆಯಲಾಗುವ ಯೇಸುವನ್ನು ಏನುಮಾಡಲಿ?” ಎಂದು ಪಿಲಾತನು ಮರುಪ್ರಶ್ನೆ ಹಾಕಿದನು. ಅವರೆಲ್ಲರು, “ಅವನನ್ನು ಶಿಲುಬೆಗೇರಿಸಿ,” ಎಂದು ಉತ್ತರಿಸಿದರು.
- Verse 23: “ಏಕೆ? ಇವನೇನು ಕೇಡುಮಾಡಿದ್ದಾನೆ?” ಎಂದು ಪಿಲಾತನು ಕೇಳಲು, “ಶಿಲುಬೆಗೇರಿಸಿ, ಶಿಲುಬೆಗೇರಿಸಿ,” ಎಂದು ಅವರು ಇನ್ನೂ ಹೆಚ್ಚಾಗಿ ಆರ್ಭಟಿಸಿದರು.
- Verse 24: ಪಿಲಾತನು ತನ್ನ ಪ್ರಯತ್ನದಿಂದ ಏನೂ ಫಲಿಸುತ್ತಿಲ್ಲವೆಂದೂ ಅದಕ್ಕೆ ಬದಲಾಗಿ ದಂಗೆ ಏಳುವ ಸೂಚನೆಯಿದೆಯೆಂದೂ ಮನಗಂಡನು. ಆದುದರಿಂದ ನೀರನ್ನು ತರಿಸಿ, “ಈ ನಿರಪರಾಧಿಯ ರಕ್ತಪಾತಕ್ಕೆ ಹೊಣೆ ನಾನಲ್ಲ; ಅದಕ್ಕೆ ನೀವೇ ಹೊಣೆಗಾರರು,” ಎಂದು ಹೇಳಿ ಜನರೆದುರಿಗೆ ಕೈ ತೊಳೆದುಕೊಂಡನು.
- Verse 25: ಅದಕ್ಕೆ ಜನರೆಲ್ಲರೂ, “ಅವನ ರಕ್ತ ನಮ್ಮ ಮೇಲೂ ನಮ್ಮ ಮಕ್ಕಳ ಮೇಲೂ ಇರಲಿ,” ಎಂದು ಕೂಗಿಕೊಂಡರು.
- Verse 26: ಬಳಿಕ ಪಿಲಾತನು ಅವರ ಇಷ್ಟದಂತೆಯೇ ಬರಬ್ಬನನ್ನು ಬಿಟ್ಟುಕೊಟ್ಟನು. ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶಿಲುಬೆಗೇರಿಸಲು ಒಪ್ಪಿಸಿಬಿಟ್ಟನು.
- Verse 27: ರಾಜ್ಯಪಾಲನ ಸೈನಿಕರು ಯೇಸುಸ್ವಾಮಿಯನ್ನು ರಾಜಭವನದ ಒಳಕ್ಕೆ ಕರೆದೊಯ್ದರು. ಅವರ ಸೈನ್ಯಪಡೆಯೆಲ್ಲವು ಸ್ವಾಮಿಯನ್ನು ಸುತ್ತುಗಟ್ಟಿತು.
- Verse 28: ಸೈನಿಕರು ಅವರ ಉಡುಪನ್ನು ಸುಲಿದು, ಕಡುಗೆಂಪು ಮೇಲಂಗಿಯೊಂದನ್ನು ಅವರಿಗೆ ಹೊದಿಸಿದರು.
- Verse 29: ಮುಳ್ಳಿನಿಂದ ಒಂದು ಕಿರೀಟವನ್ನು ಹೆಣೆದು, ಅವರ ತಲೆಯ ಮೇಲೆ ಇರಿಸಿದರು. ಕೈಗೆ ಒಂದು ಕೋಲನ್ನು ಕೊಟ್ಟರು. ಆಮೇಲೆ ಅವರ ಮುಂದೆ ಮೊಣಕಾಲೂರಿ, “ಯೆಹೂದ್ಯರ ಅರಸನಿಗೆ ಜಯವಾಗಲಿ!” ಎಂದು ಹೇಳಿ ಪರಿಹಾಸ್ಯಮಾಡಿದರು.
- Verse 30: ಅವರ ಮೇಲೆ ಉಗುಳಿದರು. ಆ ಕೋಲನ್ನು ಕಿತ್ತುಕೊಂಡು ತಲೆಯಮೇಲೆ ಹೊಡೆದರು.
- Verse 31: ಹೀಗೆ ಪರಿಹಾಸ್ಯಮಾಡಿ ಆದಮೇಲೆ, ಹೊದಿಸಿದ್ದ ಮೇಲಂಗಿಯನ್ನು ತೆಗೆದುಹಾಕಿ, ಅವರ ಉಡುಪನ್ನೇ ಪುನಃ ತೊಡಿಸಿದರು. ಬಳಿಕ ಅವರನ್ನು ಶಿಲುಬೆಗೇರಿಸಲು ಕರೆದೊಯ್ದರು.
- Verse 32: ಸೈನಿಕರು ಯೇಸುಸ್ವಾಮಿಯನ್ನು ಕರೆದುಕೊಂಡು ಊರಹೊರಗೆ ಹೋಗುತ್ತಿದ್ದಾಗ ಸಿರೇನ್ ಪಟ್ಟಣದ ಸಿಮೋನ್ ಎಂಬಾತನನ್ನು ಕಂಡರು. ಯೇಸುವಿನ ಶಿಲುಬೆಯನ್ನು ಹೊತ್ತುಬರುವಂತೆ ಅವನನ್ನು ಬಲವಂತಮಾಡಿದರು.
- Verse 33: ಅವರೆಲ್ಲರು ಗೊಲ್ಗೊಥ ಎಂಬ ಸ್ಥಳಕ್ಕೆ ಬಂದು ಸೇರಿದರು. (ಗೊಲ್ಗೊಥ ಎಂದರೆ ‘ಕಪಾಲ ಸ್ಥಳ’ ಎಂದು ಅರ್ಥ).
- Verse 34: ಅಲ್ಲಿ ಕಹಿಬೆರೆಸಿದ ದ್ರಾಕ್ಷಾರಸವನ್ನು ಯೇಸುವಿಗೆ ಕುಡಿಯಲು ಕೊಟ್ಟರು. ಅವರು ಅದನ್ನು ರುಚಿನೋಡಿ ಕುಡಿಯಲು ಇಚ್ಛಿಸಲಿಲ್ಲ.
- Verse 35: ಯೇಸುವನ್ನು ಶಿಲುಬೆಗೇರಿಸಿದ ಬಳಿಕ ಅವರ ಉಡುಪಿಗಾಗಿ ಸೈನಿಕರು ಚೀಟುಹಾಕಿ ತಮ್ಮತಮ್ಮೊಳಗೇ ಹಂಚಿಕೊಂಡರು.
- Verse 36: ಅನಂತರ ಅಲ್ಲೇ ಕುಳಿತು ಕಾವಲುಕಾಯುತ್ತಾ ಇದ್ದರು.
- Verse 37: “ಈತ ಯೇಸು, ಯೆಹೂದ್ಯರ ಅರಸ” ಎಂದು ಬರೆದಿದ್ದ ದೋಷಾರೋಪಣೆಯ ಫಲಕವನ್ನು ಅವರ ಶಿರಸ್ಸಿನ ಮೇಲ್ಭಾಗದಲ್ಲಿ ಇಟ್ಟರು.
- Verse 38: ಯೇಸುವಿನ ಬಲಗಡೆ ಒಬ್ಬನು, ಎಡಗಡೆ ಒಬ್ಬನು, ಹೀಗೆ ಇಬ್ಬರು ಕಳ್ಳರನ್ನು ಅವರ ಸಂಗಡ ಶಿಲುಬೆಗೇರಿಸಿದರು.
- Verse 39: ಪಕ್ಕದಲ್ಲಿ ಹಾದುಹೋಗುತ್ತಿದ್ದ ಜನರು ತಲೆಯಾಡಿಸುತ್ತಾ
- Verse 40: “ಮಹಾದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟಬಲ್ಲವನೇ, ಈಗ ನಿನ್ನನ್ನು ನೀನೇ ರಕ್ಷಿಸಿಕೋ; ನೀನು ದೇವರ ಪುತ್ರನಾದರೆ ಶಿಲುಬೆಯಿಂದ ಇಳಿದು ಬಾ,” ಎಂದು ಮೂದಲಿಸಿದರು.
- Verse 41: ಅಂತೆಯೇ ಮುಖ್ಯಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಪ್ರಮುಖರು,
- Verse 42: “ಇವನು ಇತರರನ್ನು ರಕ್ಷಿಸಿದ; ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಇವನಿಂದಾಗದು; ಇಸ್ರಯೇಲಿನ ಅರಸನಂತೆ! ಈಗ ಶಿಲುಬೆಯಿಂದ ಇಳಿದು ಬರಲಿ; ಆಗ ಇವನನ್ನು ನಂಬುತ್ತೇವೆ.
- Verse 43: ದೇವರಲ್ಲಿ ಭರವಸೆಯಿಟ್ಟಿದ್ದ; ತಾನು ‘ದೇವರ ಪುತ್ರ’ ಎಂದು ಹೇಳಿಕೊಳ್ಳುತ್ತಿದ್ದ; ದೇವರಿಗೆ ಇಷ್ಟವಾದವನು ಇವನಾಗಿದ್ದರೆ ದೇವರೇ ಬಂದು ಇವನನ್ನು ಬಿಡುಗಡೆಮಾಡಲಿ,” ಎಂದು ಅಪಹಾಸ್ಯಮಾಡುತ್ತಿದ್ದರು.
- Verse 44: ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದ ಕಳ್ಳರು ಕೂಡ ಅದೇ ರೀತಿ ಅಣಕಿಸಿದರು.
- Verse 45: ಆಗ ನಡುಮಧ್ಯಾಹ್ನ. ಆಗಿನಿಂದ ಮೂರು ಗಂಟೆಯವರೆಗೂ ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು.
- Verse 46: ಸುಮಾರು ಮೂರು ಗಂಟೆಯ ಸಮಯದಲ್ಲಿ ಯೇಸುಸ್ವಾಮಿ, “ಏಲೀ, ಏಲೀ, ಲಮಾ ಸಬಕ್ತಾನಿ?” ಅಂದರೆ, “ನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆ ಕೈಬಿಟ್ಟಿರಿ?” ಎಂದು ಗಟ್ಟಿಯಾಗಿ ಕೂಗಿಕೊಂಡರು.
- Verse 47: ಅಲ್ಲಿ ನಿಂತಿದ್ದವರಲ್ಲಿ ಕೆಲವರು ಇದನ್ನು ಕೇಳಿ, “ಇವನು ಎಲೀಯನನ್ನು ಕರೆಯುತ್ತಿದ್ದಾನೆ,” ಎಂದರು.
- Verse 48: ಕೂಡಲೇ ಅವರಲೊಬ್ಬನು ಓಡಿಹೋಗಿ ಸ್ಪಂಜನ್ನು ತೆಗೆದುಕೊಂಡು ಬಂದು, ಅದನ್ನು ಹುಳಿರಸದಲ್ಲಿ ತೋಯಿಸಿ, ಒಂದು ಕೋಲಿನ ತುದಿಗೆ ಸಿಕ್ಕಿಸಿ, ಯೇಸುವಿಗೆ ಕುಡಿಯಲು ಕೊಟ್ಟನು.
- Verse 49: ಮಿಕ್ಕವರು, “ತಾಳು, ಇವನನ್ನು ರಕ್ಷಿಸಲು ಎಲೀಯನು ಬರುವನೋ, ನೋಡೋಣ,” ಎಂದರು.
- Verse 50: ಯೇಸುಸ್ವಾಮಿ ಮತ್ತೊಮ್ಮೆ ಗಟ್ಟಿಯಾಗಿ ಕೂಗಿ ಅಸುನೀಗಿದರು.
- Verse 51: ಆಗ ಇಗೋ, ಮಹಾದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೆ ಇಬ್ಭಾಗವಾಗಿ ಸೀಳಿಹೋಯಿತು; ಭೂಮಿ ನಡುಗಿತು,
- Verse 52: ಬಂಡೆಗಳು ಸಿಡಿದವು; ಸಮಾಧಿಗಳು ತೆರೆದುಕೊಂಡವು. ನಿಧನಹೊಂದಿದ್ದ ಅನೇಕ ಭಕ್ತರ ದೇಹಗಳು ಜೀವಂತವಾಗಿ ಎದ್ದವು.
- Verse 53: ಹೀಗೆ ಎದ್ದವರು ಸಮಾಧಿಗಳಿಂದ ಹೊರಗೆಬಂದು, ಯೇಸು ಪುನರುತ್ಥಾನ ಹೊಂದಿದ ಬಳಿಕ ಪವಿತ್ರನಗರಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು.
- Verse 54: ಶತಾಧಿಪತಿ ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ ನಡೆದುದೆಲ್ಲವನ್ನೂ ಕಂಡು ಭಯಭ್ರಾಂತರಾದರು. “ಸತ್ಯವಾಗಿಯೂ ಈತ ದೇವರ ಪುತ್ರನೇ ಸರಿ,” ಎಂದರು.
- Verse 55: ಯೇಸುವನ್ನು ಗಲಿಲೇಯದಿಂದ ಹಿಂಬಾಲಿಸಿ ಬಂದಿದ್ದ ಹಾಗೂ ಅವರ ಸೇವೆಮಾಡಿದ ಮಹಿಳೆಯರೂ ಅಲ್ಲಿದ್ದರು. ಅವರು ಇದೆಲ್ಲವನ್ನು ದೂರದಿಂದ ನೋಡುತ್ತಾ ಇದ್ದರು.
- Verse 56: ಅವರಲ್ಲಿ ಮಗ್ದಲದ ಮರಿಯಳು, ಯಕೋಬ ಹಾಗೂ ಜೋಸೆಫನ ತಾಯಿ ಮರಿಯಳು ಮತ್ತು ಜೆಬೆದಾಯನ ಮಕ್ಕಳ ತಾಯಿ ಇದ್ದರು.
- Verse 57: ಸಂಜೆಯಾಯಿತು. ಅರಿಮತಾಯ ಊರಿನ ಜೋಸೆಫ್ ಎಂಬ ಒಬ್ಬ ಧನವಂತನು ಅಲ್ಲಿಗೆ ಬಂದನು. ಈತನು ಸಹ ಯೇಸುವಿನ ಶಿಷ್ಯನಾಗಿದ್ದನು.
- Verse 58: ಈತ ಪಿಲಾತನ ಬಳಿಗೆ ಹೋಗಿ ಯೇಸುವಿನ ಪಾರ್ಥಿವ ಶರೀರವನ್ನು ತನಗೆ ಕೊಡಿಸಬೇಕೆಂದು ಬೇಡಿದನು. ಪಿಲಾತನು ಅದನ್ನು ಅವನಿಗೆ ಕೊಡುವಂತೆ ಅಪ್ಪಣೆಮಾಡಿದನು.
- Verse 59: ಜೋಸೆಫ್ ಅದನ್ನು ತೆಗೆದುಕೊಂಡು ಶುದ್ಧವಾದ ನಾರುಮಡಿ ವಸ್ತ್ರದಿಂದ ಸುತ್ತಿದನು.
- Verse 60: ತನಗೆಂದು ಬಂಡೆಯಲ್ಲಿ ಕೊರೆಯಲಾಗಿದ್ದ ಹೊಸ ಸಮಾಧಿಯಲ್ಲಿ ಅದನ್ನು ಇರಿಸಿದನು. ಆ ಸಮಾಧಿಯ ದ್ವಾರಕ್ಕೆ ಒಂದು ದೊಡ್ಡ ಕಲ್ಲನ್ನು ಉರುಳಿಸಿ ಹೊರಟುಹೋದನು.
- Verse 61: ಮಗ್ದಲದ ಮರಿಯಳು ಮತ್ತು ಆ ಇನ್ನೊಬ್ಬ ಮರಿಯಳು ಅಲ್ಲೇ ಸಮಾಧಿಗೆ ಎದುರಾಗಿ ಕುಳಿತುಕೊಂಡಿದ್ದರು.
- Verse 62: ಮಾರನೆಯ ದಿನ, ಅಂದರೆ, ‘ಸಿದ್ಧತೆಯ ದಿನ’ ಕಳೆದ ಮೇಲೆ, ಮುಖ್ಯಯಾಜಕರು ಮತ್ತು ಫರಿಸಾಯರು ಕೂಡಿ ಪಿಲಾತನ ಬಳಿಗೆ ಬಂದರು.
- Verse 63: “ಸ್ವಾಮೀ, ಆ ಮೋಸಗಾರ ಬದುಕಿದ್ದಾಗ, ‘ಮೂರು ದಿನಗಳಾದ ಮೇಲೆ ನಾನು ಪುನರ್ಜೀವಂತನಾಗಿ ಏಳುವೆನು,’ ಎಂದು ಹೇಳಿದ್ದು ನಮಗೆ ಜ್ಞಾಪಕದಲ್ಲಿದೆ.
- Verse 64: ಆದ್ದರಿಂದ ಮೂರನೆಯ ದಿನದ ತನಕ ಅವನ ಸಮಾಧಿಗೆ ಭದ್ರವಾದ ಕಾವಲಿರಿಸಲು ಅಪ್ಪಣೆಯಾಗಬೇಕು; ಇಲ್ಲದಿದ್ದರೆ ಅವನ ಶಿಷ್ಯರು ಅವನನ್ನು ಕದ್ದುಕೊಂಡುಹೋಗಿ, ಸತ್ತವನು ಬದುಕಿಬಂದಿದ್ದಾನೆ ಎಂದು ಜನರಿಗೆ ಹೇಳಬಹುದು; ಆಗ ಮೊದಲನೆಯ ಮೋಸಕ್ಕಿಂತ ಕಡೆಯದೇ ಕಡುಮೋಸವಾದೀತು,” ಎಂದು ಕೇಳಿಕೊಂಡರು.
- Verse 65: ಪಿಲಾತನು ಅವರಿಗೆ, “ಕಾವಲುಗಾರರು ಇದ್ದಾರಲ್ಲವೆ? ಹೋಗಿ ನಿಮಗೆ ಬೇಕಾದಂತೆ ಭದ್ರಪಡಿಸಿಕೊಳ್ಳಿ,” ಎಂದನು.
- Verse 66: ಅವರು ಹೋಗಿ, ಸಮಾಧಿಯ ಕಲ್ಲಿಗೆ ಮುದ್ರೆಹಾಕಿ, ಕಾವಲಿರಿಸಿ, ಸಮಾಧಿಯನ್ನು ಸುಭದ್ರಪಡಿಸಿದರು.