ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಯೊವಾನ್ನ
15ನೇ ಅಧ್ಯಾಯ
- Verse 1: “ನಾನೇ ನಿಜವಾದ ದ್ರಾಕ್ಷಾಬಳ್ಳಿ. ನನ್ನ ಪಿತನೇ ತೋಟಗಾರ.
- Verse 2: ನನ್ನಲ್ಲಿದ್ದೂ ಫಲಕೊಡದ ಕವಲುಬಳ್ಳಿಗಳನ್ನೆಲ್ಲಾ ಅವರು ಕತ್ತರಿಸಿಹಾಕುವರು. ಫಲಕೊಡುವ ಕವಲುಬಳ್ಳಿಗಳು ಮತ್ತಷ್ಟು ಫಲಕೊಡುವಂತೆ ಅವನ್ನು ಸವರಿ ಶುದ್ಧಗೊಳಿಸುವರು.
- Verse 3: ನೀವಾದರೋ, ನಾನು ನಿಮ್ಮೊಡನೆ ಆಡಿದ ಮಾತಿನಿಂದಾಗಿ ಸವರಿದ ಕವಲುಗಳಂತೆ ಶುದ್ಧರಾಗಿದ್ದೀರಿ.
- Verse 4: ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನು ನಿಮ್ಮಲ್ಲಿ ನೆಲೆಗೊಂಡಿರುವೆನು. ಕವಲು ಮೂಲಬಳ್ಳಿಯಲ್ಲಿ ಒಂದಾಗಿ ನೆಲಸದಿದ್ದರೆ ತನ್ನಷ್ಟಕ್ಕೆ ತಾನೇ ಫಲಕೊಡಲಾಗದು. ಹಾಗೆಯೇ ನೀವು ಕೂಡ ನನ್ನಲ್ಲಿ ಒಂದಾಗಿ ನೆಲಸದಿದ್ದರೆ ಫಲಕೊಡಲಾರಿರಿ.
- Verse 5: “ಹೌದು, ನಾನೇ ದ್ರಾಕ್ಷಾಬಳ್ಳಿ; ನೀವೇ ಅದರ ಕವಲುಬಳ್ಳಿಗಳು. ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅಂಥವನು ಸಮೃದ್ಧಿಯಾಗಿ ಫಲಕೊಡುವನು. ಏಕೆಂದರೆ, ನನ್ನಿಂದ ಬೇರ್ಪಟ್ಟು ನಿಮ್ಮಿಂದ ಏನೂ ಮಾಡಲಾಗದು.
- Verse 6: ನನ್ನಲ್ಲಿ ನೆಲಸದವನನ್ನು ಕವಲುಬಳ್ಳಿಯಂತೆ ಕತ್ತರಿಸಿ ಎಸೆಯಲಾಗುವುದು; ಅವನು ಒಣಗಿಹೋಗುವನು. ಒಣಗಿದ ಕವಲುಗಳನ್ನು ಒಟ್ಟುಗೂಡಿಸಿ ಬೆಂಕಿಯಲ್ಲಿ ಸುಟ್ಟುಹಾಕಲಾಗುವುದು.
- Verse 7: “ನೀವು ನನ್ನಲ್ಲಿಯೂ ನನ್ನ ವಾಕ್ಯವು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನು ಬೇಕಾದರೂ ಕೇಳಬಹುದು. ನಿಮಗದು ಸಿಗುವುದು.
- Verse 8: ನೀವು ಸಮೃದ್ಧಿಯಾಗಿ ಫಲಕೊಟ್ಟು ನನ್ನ ಶಿಷ್ಯರಾಗಿ ಬೆಳಗುವುದರಿಂದಲೇ ನನ್ನ ಪಿತನ ಮಹಿಮೆ ಪ್ರಕಟವಾಗುವುದು.
- Verse 9: ಪಿತನು ನನ್ನನ್ನು ಪ್ರೀತಿಸಿದಂತೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಲ್ಲಿರಿ.
- Verse 10: ನನ್ನ ಪಿತನು ಕೊಟ್ಟ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನಾನು ನೆಲೆಗೊಂಡಿರುವ ಹಾಗೆ ನೀವು ಕೂಡ ನಾನು ಕೊಟ್ಟ ಆಜ್ಞೆಗಳನ್ನು ಪಾಲಿಸಿದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.
- Verse 11: “ನನ್ನಲ್ಲಿರುವ ಆನಂದವು ನಿಮ್ಮಲ್ಲಿ ಇರಬೇಕೆಂತಲೂ ನಿಮ್ಮ ಆನಂದವು ತುಂಬಿ ತುಳುಕಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೆ.
- Verse 12: ನಾನು ಕೊಡುವ ಆಜ್ಞೆ ಏನೆಂದರೆ: ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.
- Verse 13: ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ.
- Verse 14: ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು.
- Verse 15: ನಾನಿನ್ನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ. ಧಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು. ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ.
- Verse 16: ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ, ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಲೋಕಕ್ಕೆ ಹೋಗಬೇಕು, ಸಫಲರಾಗಬೇಕು; ಆ ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ಪಿತನಿಂದ ಏನು ಕೇಳಿದರೂ ನಿಮಗೆ ಅದು ಸಿಗುವುದು.
- Verse 17: ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ.
- Verse 18: “ಲೋಕವು ನಿಮ್ಮನ್ನು ದ್ವೇಷಿಸಿದರೆ, ನನ್ನ ಮೇಲೆ ಅದಕ್ಕೆ ಮೊದಲೇ ದ್ವೇಷವಿತ್ತೆಂಬುದನ್ನು ನೆನಪಿನಲ್ಲಿಡಿ.
- Verse 19: ನೀವು ಲೋಕದ ಕಡೆಯವರಾಗಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಮಮತೆಯಿಂದ ಕಾಣುತ್ತಿತ್ತು. ನೀವಾದರೋ ಲೋಕದ ಕಡೆಗೆ ಸೇರಿದವರಲ್ಲ. ನಾನು ನಿಮ್ಮನ್ನು ಆರಿಸಿಕೊಂಡಿರುವುದರಿಂದ ನೀವು ಲೋಕದಿಂದ ಬೇರ್ಪಟ್ಟಿದ್ದೀರಿ ಎಂದೇ ಲೋಕಕ್ಕೆ ನಿಮ್ಮ ಮೇಲೆ ದ್ವೇಷವಿದೆ.
- Verse 20: ಧಣಿಗಿಂತಲೂ ದಾಸನು ದೊಡ್ಡವನಲ್ಲವೆಂದು ನಾನು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿ. ಅವರು ನನ್ನನ್ನು ಹಿಂಸೆಗೆ ಗುರಿಮಾಡಿದಂತೆ ನಿಮ್ಮನ್ನೂ ಹಿಂಸೆಗೆ ಗುರಿಮಾಡುವರು. ನನ್ನ ಬೋಧನೆಯ ಮಾತನ್ನು ಅವರು ಅನುಸರಿಸಿ ನಡೆದರೆ ನಿಮ್ಮ ಬೋಧನೆಯ ಮಾತನ್ನು ಅನುಸರಿಸಿ ನಡೆಯುವರು.
- Verse 21: ನೀವು ನನ್ನವರಾದುದರಿಂದ ಅವರು ನಿಮ್ಮನ್ನು ಹೀಗೆ ಕಾಣುವರು. ಏಕೆಂದರೆ ನನ್ನನ್ನು ಕಳುಹಿಸಿದಾತನನ್ನು ಅವರು ಅರಿಯರು.
- Verse 22: ನಾನು ಬಂದು ಅವರಿಗೆ ಬೋಧನೆ ಮಾಡದೆಹೋಗಿದ್ದರೆ ಅವರು ಪಾಪದೋಷಿಗಳು ಎಂದು ಹೇಳಲಾಗುತ್ತಿರಲಿಲ್ಲ. ಆದರೆ ಈಗ ಅವರ ದೋಷಕ್ಕೆ ಯಾವ ನೆಪವನ್ನೂ ಒಡ್ಡುವಂತಿಲ್ಲ.
- Verse 23: ನನ್ನ ಮೇಲೆ ದ್ವೇಷ ಇದ್ದವನಿಗೆ ನನ್ನ ಪಿತನ ಮೇಲೆಯೂ ದ್ವೇಷ ಇದೆ.
- Verse 24: ಬೇರೆ ಯಾರೂ ಮಾಡದ ಮಹತ್ತಾದ ಕಾರ್ಯಗಳನ್ನು ನಾನು ಅವರ ನಡುವೆ ಮಾಡದೆಹೋಗಿದ್ದರೆ ಅವರು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ. ಆದರೆ ಅವರು ನನ್ನ ಕಾರ್ಯಗಳನ್ನು ನೋಡಿಯು ಸಹ ನನ್ನ ಮೇಲೆ ಹಾಗು ನನ್ನ ಪಿತನ ಮೇಲೆ ದ್ವೇಷ ಬೆಳೆಸಿದ್ದಾರೆ.
- Verse 25: “ನಿಷ್ಕಾರಣವಾಗಿ ಅವರು ನನ್ನನ್ನು ದ್ವೇಷಿಸಿದರು” ಎಂದು ಅವರ ಧರ್ಮಶಾಸ್ತ್ರದಲ್ಲೇ ಬರೆದಿರುವುದು ಹೀಗೆ ನೆರವೇರಿದೆ.
- Verse 26: ಪಿತನಿಂದ ಹೊರಡುವ ಸತ್ಯಸ್ವರೂಪಿಯಾದ ಪವಿತ್ರಾತ್ಮರನ್ನು ನಿಮ್ಮ ಪೋಷಕರನ್ನಾಗಿ ನಾನು ಪಿತನಿಂದಲೇ ಕಳುಹಿಸುವೆನು. ಅವರು ಬಂದು ನನ್ನ ಪರವಾಗಿ ಸಾಕ್ಷಿನೀಡುವರು.
- Verse 27: ಮೊತ್ತಮೊದಲಿನಿಂದಲೂ ನನ್ನ ಸಂಗಡ ಇದ್ದ ನೀವು ಕೂಡ ನನ್ನನ್ನು ಕುರಿತು ಸಾಕ್ಷಿನೀಡುವವರಾಗಿದ್ದೀರಿ.