வேதாகமம்
ಹಳೆಯ ಒಡಂಬಡಿಕೆ
ಆದಿಕಾಂಡ
17ನೇ ಅಧ್ಯಾಯ
- Verse 1: ಅಬ್ರಾಮನಿಗೆ ತೊಂಬತ್ತೊಂಬತ್ತು ವರ್ಷಗಳಾಗಿದ್ದಾಗ, ಸರ್ವೇಶ್ವರ ದರ್ಶನವಿತ್ತು ಇಂತೆಂದರು: “ನಾನು ಸರ್ವಶಕ್ತ ಸರ್ವೇಶ್ವರ. ನೀನು ನನ್ನ ಸಮ್ಮುಖದಲ್ಲಿದ್ದು ನಿರ್ದೋಷಿಯಾಗಿ ನಡೆದುಕೊಳ್ಳಬೇಕು.
- Verse 2: ನಿನ್ನ ಸಂಗಡ ನಾನು ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ: ನಿನಗೆ ಅಧಿಕಾಧಿಕವಾದ ಸಂತತಿಯನ್ನು ಕೊಡುತ್ತೇನೆ,” ಎಂದರು.
- Verse 3: ಅಬ್ರಾಮನು ಅಡ್ಡಬಿದ್ದು ಸಾಷ್ಟಾಂಗ ಪ್ರಣಾಮ ಮಾಡಿದನು.
- Verse 4: ದೇವರು ಅವನಿಗೆ, “ನಾನು ನಿನಗೆ ವಾಗ್ದಾನ ಮಾಡಿ ಹೇಳುತ್ತೇನೆ: ನೀನು ಅನೇಕ ರಾಷ್ಟ್ರಗಳಿಗೆ ಮೂಲಪುರುಷನಾಗುವೆ.
- Verse 5: ಇನ್ನು ಮುಂದೆ ನಿನಗೆ ‘ಅಬ್ರಾಮ’ ಎಂಬ ಹೆಸರಿರುವುದಿಲ್ಲ. ನಿನ್ನನ್ನು ನಾನು ಅನೇಕಾನೇಕ ರಾಷ್ಟ್ರಗಳಿಗೆ ಮೂಲಪುರುಷನನ್ನಾಗಿ ನೇಮಿಸುವುದರಿಂದ ನಿನಗೆ ‘ಅಬ್ರಹಾಮ’ ಎಂಬ ಹೆಸರಿರುವುದು.
- Verse 6: ನಿನ್ನನ್ನು ಅತ್ಯಂತ ಫಲದಾಯಕ ಪುರುಷನನ್ನಾಗಿ ಮಾಡುತ್ತೇನೆ. ನಿನ್ನಿಂದ ರಾಷ್ಟ್ರಗಳೂ ರಾಜರುಗಳೂ ಉತ್ಪತ್ತಿಯಾಗುವರು.
- Verse 7: ನಿನಗೂ ನಿನ್ನ ಸಂತತಿಗೂ ನಾನು ದೇವರಾಗಿರುತ್ತೇನೆ. ಈ ನನ್ನ ಒಡಂಬಡಿಕೆಯನ್ನು ನಿನಗೋಸ್ಕರವೂ ನಿನ್ನ ಸಂತತಿಗೋಸ್ಕರವೂ ತಲತಲಾಂತರದವರೆಗೂ ಚಿರಒಡಂಬಡಿಕೆಯಾಗಿ ಸ್ಥಿರಪಡಿಸುತ್ತೇನೆ.
- Verse 8: ನೀನು ಪ್ರವಾಸವಾಗಿರುವ ಈ ಕಾನಾನ್ ನಾಡೆಲ್ಲವನ್ನು ನಿನಗೂ ನಿನ್ನ ಸಂತಾನಕ್ಕೂ ಶಾಶ್ವತವಾದ ಸೊತ್ತಾಗಿ ಕೊಡುತ್ತೇನೆ. ನಾನು ನಿಮ್ಮ ಕುಲದೇವರಾಗಿರುತ್ತೇನೆ.”
- Verse 9: ಇದಲ್ಲದೆ ದೇವರು ಅಬ್ರಹಾಮನಿಗೆ ಹೀಗೆಂದು ಹೇಳಿದರು: “ನೀನು ಕೂಡ ನನ್ನ ಒಡಂಬಡಿಕೆಯನ್ನು ಕೈಗೊಂಡು ನಡೆಯಬೇಕು ನೀನು ಮಾತ್ರವಲ್ಲ, ನಿನ್ನ ಸಂತತಿಯವರು ತಲತಲಾಂತರಕ್ಕೂ ಅದನ್ನು ಕೈಗೊಂಡು ನಡೆಯಬೇಕು.
- Verse 10: ನೀನೂ ನಿನ್ನ ಸಂತತಿಯವರೂ ಕೈಗೊಳ್ಳಬೇಕಾದ ನನ್ನ ಒಡಂಬಡಿಕೆ ಇದು: ನಿಮ್ಮಲ್ಲಿ ಪ್ರತಿಯೊಬ್ಬ ಗಂಡಸಿಗೂ ಸುನ್ನತಿಯಾಗಬೇಕು.
- Verse 11: ನೀವು ನಿಮ್ಮ ಜನನಾಂಗದ ಮುಂದೊಗಲನ್ನು ಸುನ್ನತಿಮಾಡಿಸಿಕೊಳ್ಳಬೇಕು. ಅದೇ ನಿಮಗೂ ನನಗೂ ಆದ ಒಡಂಬಡಿಕೆಯ ಗುರುತು.
- Verse 12: ಎಲ್ಲ ತಲಾಂತರಗಳಲ್ಲಿ ನಿಮ್ಮಲ್ಲಿರುವ ಪ್ರತಿಯೊಂದು ಗಂಡುಮಗುವಿಗೂ ಜೀತಗಾರರಿಗೂ ಮನೆಯಲ್ಲಿ ಹುಟ್ಟಿದ ಅಥವಾ ಅನ್ಯರಿಂದ ಕ್ರಯಕ್ಕೆ ಕೊಂಡುಕೊಂಡವರಿಗೂ, ಎಂಟು ದಿನಗಳ ವಯಸ್ಸಾದಾಗ ಸುನ್ನತಿ ಮಾಡಿಸಬೇಕು.
- Verse 13: ಮನೆಯಲ್ಲಿ ಹುಟ್ಟಿದವನೇ ಆಗಿರಲಿ, ಕ್ರಯಕ್ಕೆ ಕೊಂಡುಕೊಂಡವನೇ ಆಗಿರಲಿ, ಪ್ರತಿ ಒಬ್ಬನಿಗೂ ತಪ್ಪದೆ ಸುನ್ನತಿಯಾಗಬೇಕು. ನಾನು ಮಾಡುವ ಒಡಂಬಡಿಕೆಯ ಗುರುತು ಹೀಗೆ ನಿಮ್ಮ ದೇಹದಲ್ಲಿ ಇದ್ದು ಶಾಶ್ವತವಾದ ಒಡಂಬಡಿಕೆಯನ್ನು ಸೂಚಿಸುವುದು.
- Verse 14: ಸುನ್ನತಿ ಮಾಡಿಸಿಕೊಳ್ಳದ ಗಂಡಸು ನನ್ನ ಒಡಂಬಡಿಕೆಯನ್ನು ಉಲ್ಲಂಘಿಸಿದವನಾದ ಕಾರಣ, ಅವನು ಕುಲದಿಂದ ಬಹಿಷ್ಕೃತನಾಗಬೇಕು.
- Verse 15: ದೇವರುಅಬ್ರಹಾಮನಿಗೆ ಇನ್ನೂ ಹೇಳಿದ್ದು ಏನೆಂದರೆ: “ನೀನು ಇನ್ನು ಮುಂದೆ ನಿನ್ನ ಹೆಂಡತಿಯನ್ನು ಸಾರಯಳು ಎಂದು ಕರೆಯದೆ ಸಾರಳು ಎಂದು ಕರೆಯಬೇಕು.
- Verse 16: ನಾನು ಆಕೆಯನ್ನು ಆಶೀರ್ವದಿಸಿದ್ದೇನೆ. ಆಕೆ ನಿನಗೊಬ್ಬ ಮಗನನ್ನು ಹೆರುವಳು. ನನ್ನ ಆಶೀರ್ವಾದ ಪಡೆದ ಆಕೆ ರಾಷ್ಟ್ರಗಳಿಗೆ ಮಾತೆಯಾಗುವಳು; ಆಕೆಯಿಂದ ರಾಷ್ಟ್ರಗಳೂ, ರಾಜರುಗಳೂ ಉತ್ಪತ್ತಿಯಾಗುವರು.”
- Verse 17: ಅಬ್ರಹಾಮನು ಅಡ್ಡಬಿದ್ದು ಸಾಷ್ಟಾಂಗ ಪ್ರಣಾಮ ಮಾಡಿದನು. ಆದರೆ, "ನೂರು ವರ್ಷದವನಿಗೆ ಮಗ ಹುಟ್ಟುವುದುಂಟೆ? ತೊಂಬತ್ತು ವರ್ಷದವಳಾದ ಸಾರಳು ಹೆತ್ತಾಳೆ?” ಎಂದು ಅಬ್ರಹಾಮನು ಮನಸ್ಸಿನಲ್ಲೇ ನೆನೆದು ನಕ್ಕು ದೇವರಿಗೆ,
- Verse 18: “ಇಷ್ಮಾಯೇಲನು ಇದ್ದಾನಲ್ಲವೆ? ನಿಮ್ಮ ಸಮ್ಮುಖದಲ್ಲಿ ಅವನು ಬಾಳಿದರೆ ಸಾಕಲ್ಲವೆ?” ಎಂದನು.
- Verse 19: ಅದಕ್ಕೆ ದೇವರು, “ಇಲ್ಲ, ನಿನ್ನ ಹೆಂಡತಿ ಸಾರಳೇ ನಿನಗೊಂದು ಮಗನನ್ನು ಹೆರುವಳು. ಅವನಿಗೆ ಇಸಾಕನೆಂದು ಹೆಸರಿಡಬೇಕು. ನನ್ನ ಒಡಂಬಡಿಕೆಯನ್ನು ಅವನೊಂದಿಗೂ ಅವನ ಸಂತತಿಯೊಂದಿಗೂ ಚಿರವಾದ ಒಡಂಬಡಿಕೆಯಾಗಿ ಸ್ಥಿರಗೊಳಿಸುತ್ತೇನೆ.
- Verse 20: ಇಷ್ಮಾಯೇಲನ ವಿಷಯದಲ್ಲಿ ನೀನು ಮಾಡಿದ ಬಿನ್ನಹವನ್ನು ಕೇಳಿದ್ದೇನೆ. ಅವನನ್ನೂ ಆಶೀರ್ವದಿಸಿದ್ದೇನೆ. ಅವನನ್ನು ಅಭಿವೃದ್ಧಿಮಾಡಿ ಅವನಿಗೆ ಅತ್ಯಧಿಕವಾದ ಸಂತತಿಯನ್ನು ಕೊಡುತ್ತೇನೆ. ಅವನು ಹನ್ನೆರಡು ಮಂದಿ ಅಧಿಪತಿಗಳಿಗೆ ಮೂಲಪಿತನಾಗುವನು. ಅವನ ಸಂತತಿಯನ್ನು ದೊಡ್ಡ ರಾಷ್ಟ್ರವನ್ನಾಗಿ ಮಾಡುತ್ತೇನೆ.
- Verse 21: ಆದರೆ ಆ ನನ್ನ ಒಡಂಬಡಿಕೆಯನ್ನು ಇಸಾಕನಲ್ಲಿಯೇ ಊರ್ಜಿತಗೊಳಿಸುತ್ತೇನೆ.
- Verse 22: ಬರುವ ವರ್ಷ ಇದೇ ಕಾಲದಲ್ಲಿ ಸಾರಳು ಅವನನ್ನು ಹೆರುವಳು,” ಎಂದರು. ಇಷ್ಟನ್ನು ಮಾತಾಡಿ ಮುಗಿಸಿದ ಮೇಲೆ ದೇವರು ಅಬ್ರಹಾಮನಿಂದ ಅದೃಶ್ಯರಾದರು.
- Verse 23: ಅದೇ ದಿನದಂದು ಅಬ್ರಹಾಮನು ದೇವರ ಅಪ್ಪಣೆಯ ಪ್ರಕಾರ ತನ್ನ ಮಗನಾದ ಇಷ್ಮಾಯೇಲನಿಗೂ ತನ್ನ ಮನೆಯಲ್ಲಿದ್ದ ಎಲ್ಲ ಗಂಡಸರಿಗೂ ಮನೆಯಲ್ಲಿ ಹುಟ್ಟಿದ ಹಾಗು ತಾನು ಕ್ರಯಕ್ಕೆ ಕೊಂಡುಕೊಂಡ ಜೀತದಾರರಿಗೂ ಸುನ್ನತಿಮಾಡಿಸಿದನು.
- Verse 24: ಅಬ್ರಹಾಮನಿಗೆ ಸುನ್ನತಿ ಆದಾಗ ಅವನಿಗೆ ತೊಂಬತ್ತೊಂಬತ್ತು ವರ್ಷವಾಗಿತ್ತು.
- Verse 25: ಇಷ್ಮಾಯೇಲನಿಗೆ ಸುನ್ನತಿಯಾದಾಗ ಅವನಿಗೆ ಹದಿಮೂರು ವರ್ಷ ವಯಸ್ಸು.
- Verse 26: ಅಬ್ರಹಾಮನಿಗೂ ಅವನ ಮಗ ಇಷ್ಮಾಯೇಲನಿಗೂ ಒಂದೇ ದಿನದಲ್ಲಿ ಸುನ್ನತಿ ಆಯಿತು.
- Verse 27: ಅವನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ಮನೆಯಲ್ಲಿ ಹುಟ್ಟಿದ ಹಾಗೂ ಅನ್ಯರಿಂದ ಕ್ರಯಕ್ಕೆ ಕೊಂಡುಕೊಂಡಿದ್ದ ಜೀತದಾರರಿಗೂ ಅವನೊಂದಿಗೆ ಸುನ್ನತಿಯಾಯಿತು.