P. O. C ബൈബിള്
ಹಳೆಯ ಒಡಂಬಡಿಕೆ
ಪರಮಗೀತೆ
5ನೇ ಅಧ್ಯಾಯ
- Verse 1: ನನ್ನ ಪ್ರಿಯಳೇ, ನನ್ನ ವಧುವೇ, ಇದೋ ನಾ ಬಂದಿರುವೆ ನನ್ನ ತೋಟದೊಳಗೆ ರಕ್ತಬೋಳ ಸುಗಂಧದ್ರವ್ಯಗಳನ್ನು ಕೂಡಿಸಿರುವೆ. ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿರುವೆ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿರುವೆ. ಮಿತ್ರರೇ, ತಿನ್ನಿರಿ; ಪ್ರಿಯರೇ, ಕುಡಿಯಿರಿ ತೃಪ್ತಿಯಾಗುವಷ್ಟು ಪಾನಮಾಡಿರಿ. ನಲ್ಲೆ :
- Verse 2: ನಾ ನಿದ್ರಿಸುತ್ತಿದ್ದರೂ, ಎಚ್ಚರಗೊಂಡಿತ್ತು ನನ್ನ ಹೃದಯ ಇದೋ, ಬಾಗಿಲು ತಟ್ಟುತಿಹನು ನನ್ನ ಇನಿಯ ! ನಲ್ಲ : ನನ್ನ ಪ್ರಿಯಳೇ, ನನ್ನ ಕಾಂತಳೇ, ಪಾರಿವಾಳವೇ, ಪರಿಪೂರ್ಣಳೇ, ಬಾಗಿಲು ತೆಗೆ ನನಗೆ, ನನ್ನ ತಲೆಯೆಲ್ಲಾ ನೆನೆದಿದೆ ಇಬ್ಬನಿಯಿಂದ ನನ್ನ ಕೂದಲು ತೊಯ್ದಿದೆ ರಾತ್ರಿಯ ಮಂಜಿನಿಂದ. ನಲ್ಲೆ :
- Verse 3: ತೆಗೆದುಹಾಕಿರುವೆನಲ್ಲಾ ನನ್ನ ಅಂಗಿಯನ್ನು ಮತ್ತೆ ಅದನು ಹಾಕಿಕೊಳ್ಳುವುದೆಂತು? ತೊಳೆದಿರುವೆನಲ್ಲಾ ನನ್ನ ಪಾದಗಳನು ಮತ್ತೆ ಅವುಗಳನ್ನು ಕೊಳೆಮಾಡಿಕೊಳ್ಳುವುದೆಂತು?
- Verse 4: ನನ್ನ ಕಾಂತನು ಕೈಯೊಡ್ಡಿಹನು ಬಾಗಿಲ ಸಂದಿನಲಿ ನನ್ನ ಮನ ಮಿಡಿಯಿತು ನನ್ನಂತರಂಗದಲಿ.
- Verse 5: ಎದ್ದೆ ನಾನು ನಲ್ಲನಿಗೆ ಬಾಗಿಲ ತೆರೆಯಲೆಂದು ಅಗುಳಿಯ ಮೇಲೆ ತೊಟ್ಟಿಕ್ಕಿತು ಪರಿಮಳ ನನ್ನ ಕೈಗಳಿಂದ ಆ ರಸಗಂಧ ದ್ರವ್ಯ ನನ್ನ ಬೆರಳುಗಳಿಂದ.
- Verse 6: ಬಾಗಿಲ ತೆರೆದು ನೋಡಿದೆ ನನ್ನಿನಿಯನಿಗಾಗಿ ಅಷ್ಟರೊಳಗೆ ಹೋಗಿಬಿಟ್ಟಿದ್ದನವನು ಹಿಂದಿರುಗಿ. ನಿಂತಂತಾಯಿತು ಅವನ ದನಿಗೆ ನನ್ನೆದೆಯ ತುಡಿತ ಎಷ್ಟೋ ಹುಡುಕಿದೆ, ಆದರೆ ಸಿಗಲಿಲ್ಲ ಎಷ್ಟೋ ಕೂಗಿದೆ, ಆದರೆ ಉತ್ತರವೇ ಇಲ್ಲ.
- Verse 7: ಸುತ್ತುತ್ತಿದ್ದರು ಬೀದಿಗಳಲಿ ಪಹರೆಯವರು ನನ್ನನ್ನು ಕಂಡುಹಿಡಿದರು, ಹೊಡೆದು ಗಾಯಗೊಳಿಸಿದರು. ಕಿತ್ತುಕೊಂಡರು ಮೇಲುಹೊದಿಕೆಯನು ಆ ಪೌಳಿಗೋಡೆಯ ಕಾವಲುಗಾರರು.
- Verse 8: ಜೆರುಸಲೇಮಿನ ಮಹಿಳೆಯರೇ, ಆಣೆಯಿಟ್ಟು ಹೇಳುತ್ತೇನೆ ನಿಮಗೆ : “ನೀವು ನನ್ನ ಕಾಂತನನ್ನು ಕಂಡರೆ ಅನುರಾಗದಿಂದ ನಾನು ಅಸ್ವಸ್ಥಳಾಗಿರುವೆ ಎಂದು ತಿಳಿಸಿರಿ ಅವನಿಗೆ” ಮಹಿಳೆಯರು :
- Verse 9: “ಬೇರೆಯವರ ಕಾಂತರಿಗಿಂತ ನಿನ್ನ ಕಾಂತನಲ್ಲಿ ಏನು ವಿಶೇಷ? ಬೇರೆಯವರ ಇನಿಯರಿಗಿಂತ ನಿನ್ನ ಕಾಂತನಲ್ಲಿ ಅದೇನು ಅತಿಶಯ? ಸ್ತ್ರೀರತ್ನವೇ, ಹೇಳು ನಮಗೆಂತು ಈ ಪ್ರಮಾಣ?” ನಲ್ಲೆ :
- Verse 10: ನನ್ನ ನಲ್ಲ, ತೇಜೋಮಯ, ರಕ್ತವರ್ಣ ಹತ್ತುಸಾವಿರ ಜನರಲ್ಲಿ ಶ್ರೇಷ್ಠ.
- Verse 11: ಅವನ ಶಿರ ಅಪ್ಪಟ ಬಂಗಾರವು ಅವನ ಕೂದಲು ಕಾಗೆಕಪ್ಪು
- Verse 12: ಅವನ ಕಣ್ಣುಗಳು ತುಂಬುತೊರೆಗಳ ಬಳಿ ತಂಗುವ ಹಾಲಿನ ಕೊಳದಲಿ ಮೈತೊಳೆವ ಪಾರಿವಾಳಗಳು.
- Verse 13: ಅವನ ಕೆನ್ನೆಗಳು ಕರ್ಣಕುಂಡಲದ ಪಾತಿಗಳು ಸುಗಂಧ ಸಸ್ಯಗಳು ಬೆಳೆಯುವ ದಿಬ್ಬಗಳು ಅವನ ತುಟಿಗಳು ಅಚ್ಚ ಪರಿಮಳ ಸೂಸುವ ಕೆಂದಾವರೆಗಳು.
- Verse 14: ಅವನ ಕೈಗಳು ಪೀತರತ್ನಖಚಿತ ಚಿನ್ನದ ಸಲಾಕೆಗಳು ಅವನ ದೇಹ ಇಂದ್ರನೀಲಮಯವಾದ ದಂತಫಲಕವು.
- Verse 15: ಅವನ ಕಾಲುಗಳು ಅಪರಂಜಿಯ ಸುಣ್ಣಪಾದಗಳ ಮೇಲೆ ನಿಂತಿರುವ ಚಂದ್ರಕಾಂತ ಸ್ತಂಭಗಳು. ಅವನ ಗಾಂಭೀರ್ಯ ಲೆಬನೋನಿಗೆ ಸಮಾನ ದೇವದಾರು ಮರಗಳಂತೆ ರಮಣೀಯ.
- Verse 16: ಅವನ ಮಾತು ಮಧುರ ಅವನು ಸರ್ವಾಂಗ ಸುಂದರ. ಜೆರುಸಲೇಮಿನ ಮಹಿಳೆಯರೇ, ಇವನೇ ನನ್ನ ಪ್ರಿಯನು ಇವನೇ ನನ್ನ ಇನಿಯನು.