P. O. C ബൈബിള്
ಹಳೆಯ ಒಡಂಬಡಿಕೆ
ಯೆರೆಮೀಯ
23ನೇ ಅಧ್ಯಾಯ
- Verse 1: “ನನ್ನ ಮಂದೆಯ ಕುರಿಗಳನ್ನು ಚದರಿಸಿ ಹಾಳುಮಾಡುವ ಕುರುಬರಿಗೆ ಧಿಕ್ಕಾರ !” ಇದು ಸರ್ವೇಶ್ವರ ಸ್ವಾಮಿಯ ನುಡಿ.
- Verse 2: ಇಸ್ರಯೇಲರ ದೇವರಾದ ಸರ್ವೇಶ್ವರ, ತಮ್ಮ ಜನರೆಂಬ ಕುರಿಗಳನ್ನು ಮೇಯಿಸುವ ಕುರಿಗಾಹಿಗಳ ದ್ರೋಹವನ್ನು ಅರಿತಿದ್ದಾರೆ. ಅಂಥವರನ್ನು ಕುರಿತು ಹೀಗೆನ್ನುತ್ತಾರೆ : “ನೀವು ನನ್ನ ಮಂದೆಯನ್ನು ಚದರಿಸಿ ಓಡಿಸಿಬಿಟ್ಟಿದ್ದೀರಿ. ಅವುಗಳ ಬಗ್ಗೆ ಎಚ್ಚರ ವಹಿಸಲೇ ಇಲ್ಲ. ನಿಮ್ಮ ನೀಚಕಾರ್ಯಗಳ ನಿಮಿತ್ತ ನಿಮ್ಮನ್ನು ವಿಚಾರಣೆಗೆ ಗುರಿಪಡಿಸುವೆನು.
- Verse 3: ನನ್ನ ಮಂದೆಯನ್ನು ಯಾವ ಯಾವ ದೇಶಗಳಿಗೆ ಅಟ್ಟಲಾಗಿದೆಯೋ ಆ ಎಲ್ಲ ದೇಶಗಳಿಂದ ಅಳಿದುಳಿದ ಕುರಿಗಳನ್ನು ಒಟ್ಟುಗೂಡಿಸಿ ತಮ್ಮ ತಮ್ಮ ಹಟ್ಟಿಗಳಿಗೆ ಮರಳಿ ಬರಮಾಡುವೆನು. ಅವು ದೊಡ್ಡ ಪೀಳಿಗೆಯಾಗಿ ಬೆಳೆಯುವುವು.
- Verse 4: ನಾನು ಅವುಗಳ ಮೇಲೆ ಕುರಿಗಾಹಿಗಳನ್ನು ನೇಮಿಸುವೆನು. ಅವರು ಅವುಗಳನ್ನು ಪರಿಪಾಲಿಸುವರು. ಅವು ಇನ್ನು ಹೆದರಬೇಕಾಗಿಲ್ಲ, ಬೆದರಬೇಕಾಗಿಲ್ಲ. ಅವುಗಳಲ್ಲಿ ಒಂದೂ ಕಡಿಮೆಯಾಗುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.”
- Verse 5: ಸರ್ವೇಶ್ವರ ಹೇಳುವುದನ್ನು ಗಮನಿಸಿರಿ: “ದಿನಗಳು ಬರಲಿವೆ; ಆಗ ನಾನು ದಾವೀದನೆಂಬ ಮೂಲದಿಂದ ಒಂದು ‘ಮೊಳಿಕೆ’ಯನ್ನು ಚಿಗುರಿಸುವೆನು. ಆತ ಸತ್ಪುರುಷ; ರಾಜನಾಗಿ ಆಳುವನು. ವಿವೇಕದಿಂದ ಕಾರ್ಯ ಸಾಧಿಸುವನು. ಧರೆಯಲ್ಲಿ ನ್ಯಾಯನೀತಿಯನ್ನು ನಿರ್ವಹಿಸುವನು.
- Verse 6: ಆತನ ಕಾಲದಲ್ಲಿ ಯೆಹೂದ್ಯರು ಸುರಕ್ಷಿತರಾಗಿ ಇರುವರು. ಇಸ್ರಯೇಲರು ನೆಮ್ಮದಿಯಿಂದ ಬಾಳುವರು. ‘ಯೆಹೋವ ಚಿದ್ಕೇನು’ (ಎಂದರೆ ಸರ್ವೇಶ್ವರನೇ ನಮ್ಮ ಸದ್ಧರ್ಮ) ಎಂಬ ಹೆಸರು ಆತನಿಗಿರುವುದು.
- Verse 7: ಬರಲಿರುವ ಆ ಕಾಲದಲ್ಲಿ ಜನರು, ‘ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಉದ್ಧರಿಸಿದ ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡುವ ಪದ್ಧತಿಯನ್ನು ಬಿಟ್ಟುಬಿಡುವರು.
- Verse 8: ಬದಲಿಗೆ ‘ಇಸ್ರಯೇಲ್ ಮನೆತನವೆಂಬ ಸಂತಾನವನ್ನು ಉತ್ತರನಾಡಿನಿಂದಲೂ ಅವರನ್ನು ತಳ್ಳಲಾಗಿದ್ದ ಸಕಲ ಸೀಮೆಗಳಿಂದಲೂ ಬರಮಾಡಿ ಉದ್ಧರಿಸಿದ ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡುವರು. ಅವರು ಸ್ವಂತ ನಾಡಿನಲ್ಲಿ ಸುಖವಾಗಿ ಬಾಳುವರು. ಇದು ಸರ್ವೇಶ್ವರನಾದ ನನ್ನ ನುಡಿ.”
- Verse 9: ಪ್ರವಾದಿಗಳ ವಿಷಯ : ನನ್ನ ಗುಂಡಿಗೆ ಒಡೆದುಹೋಗಿದೆ ನನ್ನೆಲುಬುಗಳು ನಡುನಡುಗುತ್ತಿವೆ ಸರ್ವೇಶ್ವರನಿಗೆ, ಆತನ ಪವಿತ್ರವಾಕ್ಯಕ್ಕೆ ಪರವಶನಾದ ನಾನು ಅಮಲೇರಿದಂತವನಾದೆ. ಹೌದು, ಮದ್ಯಪಾನಕ್ಕೆ ಸೋತ ಮನುಷ್ಯನಂತಾದೆ.
- Verse 10: ದೈವಶಾಪದ ನಿಮಿತ್ತ ದೇಶ ದುಃಖಿಸುತ್ತಿದೆ ವ್ಯಭಿಚಾರದಿಂದ ನಾಡು ತುಂಬಿತುಳುಕುತ್ತಿದೆ ಅಡವಿಯ ಹುಲ್ಲುಗಾವಲು ಬಾಡಿದೆ. ನಾಡಿನ ಜನರು ಹಿಡಿದೋಡುತ್ತಿರುವ ಮಾರ್ಗ ದುರ್ಮಾರ್ಗ ಅನ್ಯಾಯ ಸಾಧನೆಗಾಗಿಯೆ ಅವರ ಅಧಿಕಾರ ಪ್ರಯೋಗ.
- Verse 11: “ಪ್ರವಾದಿಗಳು ಭ್ರಷ್ಟರು, ಯಾಜಕರೂ ಭ್ರಷ್ಟರು ! ನನ್ನಾಲಯದಲ್ಲೆ ಅವರು ನಡೆಸುವ ಕೆಟ್ಟತನವನ್ನು ನಾನು ಕಂಡಿರುವೆನು.
- Verse 12: ಕತ್ತಲೊಳು ಜಾರಿಬೀಳುವ ಇಳುಮೇಡು ಅವರ ಮಾರ್ಗ ತಳ್ಳಲ್ಪಡುವರು, ಅಂಧಕಾರದೊಳು ಬಿದ್ದುಹೋಗುವರು ಕೇಡನ್ನು ಅವರ ಮೇಲೆ ಬರಮಾಡುವೆನು ವಿಚಾರಣೆ ವರುಷದ ಕೇಡನ್ನು ಬರಮಾಡುವೆನು ಸರ್ವೇಶ್ವರನ ನುಡಿ ಇದು.”
- Verse 13: “ಸಮಾರ್ಯದ ಪ್ರವಾದಿಗಳ ಅಸಹ್ಯ ಕಾರ್ಯಗಳನ್ನು ನೋಡಿರುವೆನು ಬಾಳ್ದೇವತೆಯ ಆವೇಶದಿಂದ ಪ್ರವಾದಿಸಿದರವರು ಹೀಗೆ ಇಸ್ರಯೇಲೆಂಬ ನನ್ನ ಜನರನ್ನು ಮಾರ್ಗ ತಪ್ಪಿಸಿದರು.
- Verse 14: ಜೆರುಸಲೇಮಿನ ಪ್ರವಾದಿಗಳಲ್ಲೂ ಭೀಕರವಾದುವನ್ನು ನೋಡಿರುವೆನು ವ್ಯಭಿಚಾರ ಮಾಡುತ್ತಾರೆ, ಸುಳ್ಳು ಹಾದಿಯನ್ನು ಹಿಡಿಯುತ್ತಾರೆ ದುರುಳರು ದುರಾಚಾರವನ್ನು ಬಿಡದಂತೆ ದೃಢಪಡಿಸುತ್ತಾರೆ. ನನ್ನ ದೃಷ್ಟಿಗೆ ಅವರೆಲ್ಲರು ಸೊದೋಮಿನಂತೆ, ಆ ಪುರನಿವಾಸಿಗಳು ನನ್ನ ಕಣ್ಣಿಗೆ ಗೊಮೋರದಂತೆ.”
- Verse 15: ಆದಕಾರಣ ಸರ್ವಶಕ್ತ ಸರ್ವೇಶ್ವರ ಪ್ರವಾದಿಗಳ ವಿಷಯದಲ್ಲಿ ಹೇಳುವುದನ್ನು ಕೇಳಿ: “ಇವರು ಇಟ್ಟಿಕಾಯನ್ನು ತಿನ್ನುವಂತೆ ಮಾಡುವೆನು. ವಿಷಬೆರೆತ ನೀರನ್ನು ಕುಡಿಯುವಂತೆ ಮಾಡುವೆನು ಜೆರುಸಲೇಮಿನ ಈ ಪ್ರವಾದಿಗಳಿಂದ ಭ್ರಷ್ಟತನ ನಾಡಿನಲ್ಲೆಲ್ಲೂ ಹರಡಿರುವುದು.”
- Verse 16: ಸರ್ವಶಕ್ತ ಸರ್ವೇಶ್ವರನ ನುಡಿಯಿದು: “ಪ್ರವಾದಿಗಳು ನಿಮಗೆ ಹೇಳುವ ಮಾತುಗಳನ್ನು ಕೇಳಬೇಡಿ. ಅವರು ನಿಮ್ಮಲ್ಲಿ ವ್ಯರ್ಥವಾದ ನಂಬಿಕೆ ನಿರೀಕ್ಷೆಯನ್ನು ಹುಟ್ಟಿಸುತ್ತಾರಷ್ಟೆ. ಸರ್ವೇಶ್ವರನ ಬಾಯಿಂದ ಹೊರಟದ್ದನ್ನು ನುಡಿಯದೆ ತಮ್ಮ ಸ್ವಂತ ಮನಸ್ಸಿಗೆ ತೋಚಿದ್ದನ್ನೇ ಹೇಳುತ್ತಾರೆ.
- Verse 17: ನನ್ನನ್ನು ಅಸಡ್ಡೆಮಾಡುವವರಿಗೆ, ‘ನಿಮಗೆ ಶುಭವಾಗುವುದು ಎಂದು ಸರ್ವೇಶ್ವರನೇ ನುಡಿದಿದ್ದಾರೆ’ ಎಂದು ಹೇಳುತ್ತಲೇ ಇದ್ದಾರೆ. ಹಟಮಾರಿ ಹೃದಯಿಗಳೆಲ್ಲರಿಗೆ, ‘ನಿಮಗೆ ಯಾವ ಕೇಡೂ ಸಂಭವಿಸದು’ ಎಂದು ನುಡಿಯುತ್ತಾರೆ.”
- Verse 18: ಇವರಲ್ಲಿ ಯಾರು ತಾನೆ ಸರ್ವೇಶ್ವರನ ಆಲೋಚನಾ ಸಭೆಯಲ್ಲಿ ಹಾಜರಿದ್ದರು? ಸರ್ವೇಶ್ವರನ ವಾಕ್ಯವನ್ನು ಕೇಳಿ ತಿಳಿದುಕೊಂಡವನಾರು? ಆ ವಾಕ್ಯಕ್ಕೆ ಲಕ್ಷ್ಯಕೊಟ್ಟು ಗ್ರಹಿಸಿಕೊಂಡವನಾರು?
- Verse 19: ಇಗೋ ಕೇಳಿ: ಸರ್ವೇಶ್ವರನ ಕೋಪವೆಂಬ ಬಿರುಗಾಳಿ ಹೊರಟಿದೆ. ಅದು ದುಷ್ಟರ ತಲೆಯ ಮೇಲೆ ಸುಂಟರಗಾಳಿಯಂತೆ ಬಡಿಯುವುದು.
- Verse 20: ಸರ್ವೇಶ್ವರ ತಮ್ಮ ಅಂತರಾಳದ ಸಂಕಲ್ಪಗಳನ್ನು ನಡೆಸಿ ನೆರವೇರಿಸುವ ತನಕ ಅವರ ಆ ಕೋಪವು ಹಿಂದಿರುಗದು. ಕಟ್ಟಕಡೆಯ ದಿನಗಳಲ್ಲಿ ನೀವು ಇದನ್ನು ಸ್ಪಷ್ಟವಾಗಿ ಗ್ರಹಿಸಿಕೊಳ್ಳುವಿರಿ.
- Verse 21: ಸರ್ವೇಶ್ವರ: “ಈ ಪ್ರವಾದಿಗಳನ್ನು ಕಳುಹಿಸಿದವನು ನಾನಲ್ಲ; ತಾವೇ ಓಡೋಡಿ ಬಂದಿದ್ದಾರೆ. ನಾನು ಇವರಿಗೆ ಏನೂ ಹೇಳಲಿಲ್ಲ; ತಾವೇ ಪ್ರವಾದನೆ ಮಾಡುತ್ತಿದ್ದಾರೆ.
- Verse 22: ಇವರು ನನ್ನ ಆಲೋಚನಾ ಸಭೆಯಲ್ಲಿ ಹಾಜರಿದ್ದಿದ್ದರೆ, ನನ್ನ ವಾಕ್ಯಗಳನ್ನು ನನ್ನ ಜನರ ಕಿವಿಗೆ ಮುಟ್ಟಿಸುತ್ತಿದ್ದರು; ಅವರನ್ನು ದುರ್ಮಾರ್ಗದಿಂದಲೂ ದುಷ್ಕೃತ್ಯಗಳಿಂದಲೂ ತಪ್ಪಿಸುತ್ತಿದ್ದರು.
- Verse 23: “ಹತ್ತಿರದಲ್ಲಿ ಇದ್ದರೆ ಮಾತ್ರ ನಾನು ದೇವರೋ? ದೂರದಲ್ಲಿದ್ದರೆ ನಾನು ದೇವರಲ್ಲವೋ?
- Verse 24: ನನ್ನ ಕಣ್ಣಿಗೆ ಬೀಳದಂತೆ ಯಾವನಾದರು ಗುಪ್ತಸ್ಥಳಗಳಲ್ಲಿ ಮರೆಮಾಚಿಕೊಳ್ಳಲು ಸಾಧ್ಯವೇ? ನಾನು ಭೂಮ್ಯಾಕಾಶಗಳಲ್ಲಿ ವ್ಯಾಪಿಸಿರುವವನಲ್ಲವೆ?
- Verse 25: ‘ನನಗೆ ಕನಸು ಬಿತ್ತು, ಕನಸುಬಿತ್ತು’ ಎಂದು ನನ್ನ ಹೆಸರು ಹೇಳಿ ಸುಳ್ಳು ಪ್ರವಾದನೆ ಮಾಡುವವರ ನುಡಿಯನ್ನು ಕೇಳಿದ್ದೇನೆ.
- Verse 26: ಇವರ ಪೂರ್ವಜರು ಬಾಳ್ದೇವತೆಯನ್ನು ಸೇರಿಕೊಂಡು ನನ್ನ ಹೆಸರನ್ನು ಮರೆತುಬಿಟ್ಟರು. ಅದೇ ಪ್ರಕಾರ ಈ ಪ್ರವಾದಿಗಳು ಸ್ವಕಲ್ಪಿತ ಸುಳ್ಳು ಕನಸುಗಳನ್ನು ಒಬ್ಬರಿಗೊಬ್ಬರು ತಿಳಿಸುವುದರ ಮೂಲಕ ನನ್ನ ಜನರು ನನ್ನ ಹೆಸರನ್ನು ಮರೆಯುವಂತೆ ಮಾಡಬೇಕೆಂದು ಆಲೋಚಿಸುತ್ತಿದ್ದಾರೆ.
- Verse 27: ಇಂಥ ಯೋಚನೆ ಈ ಕಳ್ಳ ಪ್ರವಾದಿಗಳ ಮನದಲ್ಲಿ ಎಲ್ಲಿಯವರೆಗೆ ಇರುವುದು? ಕನಸು ಕಂಡ ಪ್ರವಾದಿ ತನ್ನ ಕನಸನ್ನು ಬೇಕಾದರೆ ತಿಳಿಸಲಿ.
- Verse 28: ಆದರೆ ನನ್ನ ವಾಕ್ಯವನ್ನು ಕೇಳಿದವನು ಅದನ್ನು ಯಥಾರ್ಥವಾಗಿ ನುಡಿಯಲಿ.
- Verse 29: ಹೊಟ್ಟನ್ನು ಕಾಳಿನೊಂದಿಗೆ ಹೋಲಿಸಲಾದೀತೆ? ನನ್ನ ವಾಕ್ಯ ಬೆಂಕಿಗೆ ಸಮಾನ; ಬಂಡೆಯನ್ನು ಪುಡಿಪುಡಿ ಮಾಡುವ ಸುತ್ತಿಗೆಗೆ ಸಮಾನ. ಇದು ಸರ್ವೇಶ್ವರನಾದ ನನ್ನ ನುಡಿ.
- Verse 30: ನನ್ನ ವಾಕ್ಯಗಳನ್ನು ಒಬ್ಬರಿಂದೊಬ್ಬರು ಕದ್ದುಕೊಳ್ಳುವ ಪ್ರವಾದಿಗಳಿಗೆ ನಾನು ವಿರುದ್ಧವಾಗಿ ಇದ್ದೇನೆ. ಇದು ಸರ್ವೇಶ್ವರನಾದ ನನ್ನ ನುಡಿ.
- Verse 31: ತಮ್ಮ ನಾಲಿಗೆಗಳನ್ನು ಆಡಿಸುತ್ತಾ, ‘ಇದು ಸರ್ವೇಶ್ವರನ ನುಡಿ’ ಎಂದು ಹೇಳುವ ಪ್ರವಾದಿಗಳನ್ನು ನಾನು ಪ್ರತಿಭಟಿಸುತ್ತೇನೆ. ಇದು ಸರ್ವೇಶ್ವರನಾದ ನನ್ನ ನುಡಿ.
- Verse 32: ಸುಳ್ಳು ಕನಸುಗಳನ್ನು ಪ್ರಕಟಿಸುತ್ತಾ ಹಾಗು ವಿವರಿಸುತ್ತಾ ತಮ್ಮ ಅಬದ್ಧ ಮಾತುಗಳಿಂದಲೂ ಕಚ್ಚಾಟದಿಂದಲೂ ನನ್ನ ಜನರಿಗೆ ದಾರಿ ತಪ್ಪಿಸುವ ಪ್ರವಾದಿಗಳನ್ನು ನಾನು ಖಂಡಿಸುತ್ತೇನೆ. ನಾನು ಅವರನ್ನು ಕಳುಹಿಸಲಿಲ್ಲ, ಅಥವಾ ಅವರಿಗೆ ಆಜ್ಞಾಪಿಸಲಿಲ್ಲ. ಅವರಿಂದ ಈ ಜನರಿಗೆ ಯಾವ ಪ್ರಯೋಜನವೂ ಇಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.”
- Verse 33: “ಪ್ರವಾದಿಯಾಗಲಿ, ಯಾಜಕನಾಗಲಿ, ಈ ಜನರಲ್ಲಿ ಯಾರೇ ಆಗಲಿ, ‘ಸರ್ವೇಶ್ವರ ದಯಪಾಲಿಸಿರುವ ಹೊರೆ ಏನು?’ ಎಂದು ನಿನ್ನನ್ನು ಕೇಳಿದರೆ ನೀನು ಅವರಿಗೆ ಹೀಗೆಂದು ಹೇಳು: ‘ನೀವೇ ಸರ್ವೇಶ್ವರನ ಹೊರೆ. ನಿಮ್ಮನ್ನು ಅವರು ಎಸೆದುಬಿಡುವರು.’
- Verse 34: “ಸರ್ವೇಶ್ವರನ ಹೊರೆ” ಎಂದು ಒಬ್ಬ ಪ್ರವಾದಿಯಾಗಲಿ, ಯಾಜಕನಾಗಲಿ ಅಥವಾ ಒಬ್ಬ ಜನಸಾಮಾನ್ಯನೇ ಆಗಲಿ, ಹೇಳಿದ್ದೇ ಆದರೆ ನಾನು ಅವನನ್ನೂ ಅವನ ಮನೆಯವರನ್ನೂ ದಂಡಿಸುವೆನು.
- Verse 35: “ಸರ್ವೇಶ್ವರ ಕೊಟ್ಟ ಉತ್ತರವೇನು? ಸರ್ವೇಶ್ವರ ನುಡಿದದ್ದು ಏನು?” ಎಂದು ನಿಮ್ಮ ನಿಮ್ಮ ನೆರೆಹೊರೆಯವರನ್ನು ಮತ್ತು ಅಣ್ಣತಮ್ಮಂದಿರನ್ನು ವಿಚಾರಿಸಬೇಕೇ ಹೊರತು
- Verse 36: ‘ಸರ್ವೇಶ್ವರನ ಹೊರೆ’ ಎಂಬ ಮಾತನ್ನು ಎತ್ತಲೇಕೂಡದು. ಪ್ರತಿಯೊಬ್ಬನ ನುಡಿ ಅವನವನಿಗೊಂದು ಹೊರೆ. ಜೀವಸ್ವರೂಪರಾದ ದೇವರ ನುಡಿಗಳನ್ನು ಹೌದು, ನಮ್ಮ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರನ ನುಡಿಗಳನ್ನು ನೀವು ತಲೆಕೆಳಗಾಗಿಸಿದ್ದೀರಿ.
- Verse 37: “ಸರ್ವೇಶ್ವರನಿಂದ ನಿಮಗೆ ಯಾವ ಉತ್ತರ ದೊರಕಿತು? ಸರ್ವೇಶ್ವರ ಏನು ನುಡಿದಿದ್ದಾರೆ?” ಎಂದು ಪ್ರವಾದಿಯನ್ನು ಕೇಳಿರಿ.
- Verse 38: “ಸರ್ವೇಶ್ವರನ ಹೊರೆ” ಎಂದು ಹೇಳಬೇಡಿ. ಹೇಳಿದರೆ ಸರ್ವೇಶ್ವರ ಇಂತೆನ್ನುತ್ತಾರೆ: “ನಾನು ನಿಮಗೆ ‘ಸರ್ವೇಶ್ವರನ ಹೊರೆ’ ಎಂಬ ಮಾತನ್ನು ಎತ್ತಲೇಕೂಡದೆಂದು, ಹೇಳಿಕಳುಹಿಸಿದರೂ ನೀವು ಎತ್ತಿದ್ದೀರಿ.
- Verse 39: ಈ ಕಾರಣ ನಿಮ್ಮನ್ನು ಮತ್ತು ನಿಮಗೂ ನಿಮ್ಮ ಪೂರ್ವಜರಿಗೂ ನಾನು ಕೊಟ್ಟ ನಗರವನ್ನು ನನ್ನೆದುರಿನಿಂದ ಎತ್ತಿ ಎಸೆದುಬಿಡುವೆನು.
- Verse 40: ನೀವು ನಿಂದೆಗೆ ಗುರಿಯಾಗುವಿರಿ. ಎಂದಿಗೂ ಮರೆಯಲಾಗದ ಶಾಶ್ವತ ಅವಮಾನವನ್ನು ನಿಮಗೆ ಬರಮಾಡುವೆನು.”