ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಯೊವಾನ್ನ
12ನೇ ಅಧ್ಯಾಯ
- Verse 1: ಪಾಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿರುವಾಗ ಯೇಸು ಸ್ವಾಮಿ ಬೆಥಾನಿಯಕ್ಕೆ ಬಂದರು. ಅವರು ಲಾಸರನನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಊರದು.
- Verse 2: ಯೇಸುವಿಗೆ ಅಲ್ಲಿ ಒಂದು ಔತಣವನ್ನು ಏರ್ಪಡಿಸಲಾಗಿತ್ತು. ಮಾರ್ತಳು ಬಡಿಸುತ್ತಿದ್ದಳು. ಯೇಸುವಿನೊಡನೆ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದವರಲ್ಲಿ ಲಾಸರನೂ ಒಬ್ಬ.
- Verse 3: ಆಗ ಮರಿಯಳು ಸುಮಾರು ಅರ್ಧ ಲೀಟರಿನಷ್ಟು, ಅತ್ಯಂತ ಬೆಲೆಬಾಳುವ ಅಚ್ಚ ಜಟಾಮಾಂಸಿ ಸುಗಂಧ ತೈಲವನ್ನು ತಂದು ಯೇಸುವಿನ ಪಾದಗಳಿಗೆ ಹಚ್ಚಿ, ತನ್ನ ತಲೆಗೂದಲಿನಿಂದ ಆ ಪಾದಗಳನ್ನು ಒರಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲಾ ಹರಡಿತು.
- Verse 4: ಯೇಸುವನ್ನು ಹಿಡಿದುಕೊಡಲಿದ್ದ ಹಾಗೂ ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೋತಿನ ಯೂದನು,
- Verse 5: “ಈ ಸುಗಂಧ ತೈಲವನ್ನು ಮುನ್ನೂರು ದೆನಾರಿ ನಾಣ್ಯಗಳಿಗೆ ಮಾರಿ, ಬಂದ ಹಣವನ್ನು ಬಡಬಗ್ಗರಿಗೆ ಕೊಡಬಹುದಿತ್ತಲ್ಲಾ?’ ಎಂದನು.
- Verse 6: ಬಡವರ ಹಿತಚಿಂತನೆಯಿಂದೇನೂ ಅವನು ಹೀಗೆ ಹೇಳಲಿಲ್ಲ. ತನ್ನ ವಶದಲ್ಲಿ ಇಡಲಾಗಿದ್ದ ಹಣದ ಚೀಲದಿಂದ ಸ್ವಂತ ಉಪಯೋಗಕ್ಕಾಗಿ ಬಳಸುತ್ತಿದ್ದ ಕಳ್ಳ ಅವನು.
- Verse 7: ಆಗ ಯೇಸು, “ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವಸಂಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ.
- Verse 8: ಬಡಬಗ್ಗರು ನಿಮ್ಮ ಬಳಿಯಲ್ಲಿ ಯಾವಾಗಲೂ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ,” ಎಂದರು.
- Verse 9: ಯೇಸು ಸ್ವಾಮಿ ಅಲ್ಲಿರುವುದನ್ನು ಕೇಳಿ ಯೆಹೂದ್ಯರ ಒಂದು ದೊಡ್ಡ ಗುಂಪು ಬಂದಿತು. ಯೇಸುವನ್ನು ಮಾತ್ರವಲ್ಲ, ಅವರು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಲಾಸರನನ್ನೂ ಕಾಣಲು ಆ ಜನರು ಅಲ್ಲಿಗೆ ಬಂದಿದ್ದರು.
- Verse 10: ಲಾಸರನ ನಿಮಿತ್ತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸುವಿನಲ್ಲಿ ನಂಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆಂದು ಮುಖ್ಯಯಾಜಕರು ಆಲೋಚಿಸಿದರು.
- Verse 11: ಲಾಸರನ ನಿಮಿತ್ತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸುವಿನಲ್ಲಿ ನಂಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆಂದು ಮುಖ್ಯಯಾಜಕರು ಆಲೋಚಿಸಿದರು.
- Verse 12: ಮಾರನೆಯ ದಿನ ಯೇಸು ಸ್ವಾಮಿ ಜೆರುಸಲೇಮಿಗೆ ಬರುತ್ತಿದ್ದಾರೆಂಬ ಸುದ್ದಿ ಹರಡಿತು.ಹಬ್ಬಕ್ಕೆ ಬಂದು ನೆರೆದಿದ್ದ ಜನಸಮೂಹಕ್ಕೆ ಈ ಸುದ್ದಿ ಮುಟ್ಟಿತು.
- Verse 13: ಖರ್ಜೂರದ ಗರಿಗಳನ್ನು ಹಿಡಿದುಕೊಂಡು ಅವರು ಯೇಸುವನ್ನು ಎದುರುಗೊಳ್ಳಲು ಹೊರಟರು. ‘ಸರ್ವೇಶ್ವರನ ನಾಮದಲ್ಲಿ ಬರುವಾತನಿಗೆ ಜಯಜಯವಾಗಲಿ ! ಇಸ್ರಯೇಲಿನ ಅರಸನಿಗೆ ಶುಭವಾಗಲಿ !’ ಎಂದು ಘೋಷಿಸುತ್ತಾ ಅವರನ್ನು ಸ್ವಾಗತಿಸಿದರು.
- Verse 14: ಯೇಸು ದಾರಿಯಲ್ಲಿದ್ದ ಪ್ರಾಯದ ಹೇಸರಗತ್ತೆಯೊಂದನ್ನು ಹತ್ತಿಹೊರಟರು.
- Verse 15: ಇದನ್ನು ಕುರಿತೇ, ‘ಸಿಯೋನ್ ನಗರಿಯೇ, ಅಂಜಬೇಡ. ಇಗೋ ನೋಡು; ಹೇಸರಗತ್ತೆಯನ್ನೇರಿ ಬರುತ್ತಿರುವನು ನಿನ್ನ ಅರಸನು’ ಎಂದಿದೆ ಪವಿತ್ರಗ್ರಂಥ.
- Verse 16: ಇದೆಲ್ಲ ಶಿಷ್ಯರಿಗೆ ಆಗ ಅರ್ಥವಾಗಲಿಲ್ಲ. ಇದೆಲ್ಲವನ್ನೂ ಬರೆದದ್ದು ಅವರನ್ನು ಕುರಿತೇ; ಆ ಪ್ರಕಾರವೇ ನೆರವೇರಿದೆ ಎಂಬುದನ್ನು ಯೇಸು ಮಹಿಮಾಪದವಿಯನ್ನು ಪಡೆದಾದ ಮೇಲೆ ಅವರು ನೆನಪಿಗೆ ತಂದುಕೊಂಡರು.
- Verse 17: ಇದಲ್ಲದೆ ಯೇಸು ಲಾಸರನನ್ನು ಸಮಾಧಿಯಿಂದ ಹೊರಗೆ ಕರೆದು ಸಾವಿನಿಂದ ಜೀವಕ್ಕೆ ಎಬ್ಬಿಸಿದಾಗ ಅವರ ಸಂಗಡ ಇದ್ದವರು ನಡೆದ ವಿಷಯವನ್ನು ಇತರರಿಗೆ ಸಾರುತ್ತಿದ್ದರು.
- Verse 18: ಈ ಸೂಚಕಕಾರ್ಯವನ್ನು ಕೇಳಿದ್ದ ಕಾರಣದಿಂದಲೂ ಜನರು ಯೇಸುವನ್ನು ಎದುರುಗೊಳ್ಳಲು ಹೋಗಿದ್ದರು.
- Verse 19: ಇದನ್ನೆಲ್ಲಾ ಕಂಡ ಫರಿಸಾಯರು ತಮ್ಮತಮ್ಮೊಳಗೆ, “ನೋಡಿದಿರಾ? ನಮ್ಮ ಕೈಯಿಂದ ಏನೂ ಆಗಲಿಲ್ಲ. ಇಡೀ ಜಗತ್ತೇ ಅವನ ಹಿಂದೆ ಹೋಗುತ್ತಿದೆಯಲ್ಲಾ !” ಎಂದುಕೊಂಡರು.
- Verse 20: ಆರಾಧನೆಗೆಂದು ಹಬ್ಬಕ್ಕೆ ಬಂದಿದ್ದವರಲ್ಲಿ ಕೆಲವರು ಗ್ರೀಕರು.
- Verse 21: ಇವರು ಗಲಿಲೇಯದ ಬೆತ್ಸಾಯಿದ ಎಂಬ ಊರಿನವನಾದ ಫಿಲಿಪ್ಪನ ಬಳಿಬಂದು, “ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆ,” ಎಂದು ಕೇಳಿಕೊಂಡರು.
- Verse 22: ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿದನು. ಅವರಿಬ್ಬರೂ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು.
- Verse 23: ಅದಕ್ಕೆ ಯೇಸು, “ನರಪುತ್ರನು ಮಹಿಮೆಯನ್ನು ಹೊಂದುವ ಗಳಿಗೆ ಬಂದಿದೆ.
- Verse 24: ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಗೋದಿಯಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ಒಂಟಿಯಾಗಿ ಉಳಿಯುತ್ತದೆ; ಅದು ಸತ್ತರೆ ಮಾತ್ರ ಸಮೃದ್ಧಿಯಾದ ಫಲವನ್ನು ಕೊಡುತ್ತದೆ.
- Verse 25: ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ತನ್ನ ಪ್ರಾಣವನ್ನು ಈ ಲೋಕದಲ್ಲಿ ದ್ವೇಷಿಸುವವನು ಅದನ್ನು ನಿತ್ಯಜೀವಕ್ಕಾಗಿ ಕಾಯ್ದಿರಿಸಿಕೊಳ್ಳುತ್ತಾನೆ.
- Verse 26: ನನ್ನ ಸೇವೆಮಾಡಬೇಕೆಂದಿರುವವನು ನನ್ನನ್ನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ. ನನ್ನ ಸೇವೆಮಾಡುವವನು ನನ್ನ ಪಿತನಿಂದ ಸನ್ಮಾನಹೊಂದುತ್ತಾನೆ,” ಎಂದರು
- Verse 27: ಯೇಸು ಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ, “ಈಗ ನನ್ನಾತ್ಮ ತತ್ತರಿಸುತ್ತಿದೆ. ನಾನು ಏನೆಂದು ಹೇಳಲಿ? ‘ಪಿತನೇ, ಈ ಗಳಿಗೆಯಿಂದ ನನ್ನನ್ನು ಕಾಪಾಡು ಎನ್ನಲೇ?’ ಇಲ್ಲ, ಅದಕ್ಕೆ ಬದಲಾಗಿ ಇದನ್ನು ಅನುಭವಿಸಲೆಂದೇ ನಾನು ಈ ಗಳಿಗೆಗೆ ಕಾಲಿಟ್ಟಿದ್ದೇನೆ.
- Verse 28: ‘ಪಿತನೇ, ನಿಮ್ಮ ನಾಮ ಮಹಿಮೆಯನ್ನು ಬೆಳಗಿಸಿ’ “ ಎಂದು ನುಡಿದರು. ಆಗ, “ಹೌದು, ಆ ಮಹಿಮೆಯನ್ನು ಬೆಳಗಿಸಿದ್ದೇನೆ, ಪುನಃ ಬೆಳಗಿಸುತ್ತೇನೆ,” ಎಂಬ ಸ್ವರ್ಗೀಯ ವಾಣಿ ಕೇಳಿಸಿತು.
- Verse 29: ಅಲ್ಲಿ ನಿಂತುಕೊಂಡಿದ್ದ ಜನರು ಆ ವಾಣಿಯನ್ನು ಕೇಳಿ, “ಇದೇನು ಗುಡುಗಿನ ಸದ್ದು?” ಎಂದರು. ಕೆಲವರು, “ದೇವದೂತನೊಬ್ಬ ಆತನೊಡನೆ ಮಾತನಾಡಿದನು,” ಎಂದರು.
- Verse 30: ಯೇಸು ಸ್ವಾಮಿ, “ಈ ವಾಣಿಯಾದುದು ನಿಮಗಾಗಿ, ನನಗಾಗಿ ಅಲ್ಲ.
- Verse 31: ಈಗ ಈ ಲೋಕವು ನ್ಯಾಯತೀರ್ಪಿಗೆ ಒಳಗಾಗುವುದು. ಇದೀಗಲೇ ಈ ಲೋಕಾಧಿಪತಿಯನ್ನು ಹೊರದೂಡಲಾಗುವುದು.
- Verse 32: ಆದರೆ ನನ್ನನ್ನು ಭೂಮಿಯಿಂದ ಮೇಲೇರಿಸಿದಾಗ, ನಾನು ಎಲ್ಲರನ್ನು ನನ್ನೆಡೆಗೆ ಸೆಳೆದುಕೊಳ್ಳುತ್ತೇನೆ,” ಎಂದು ನುಡಿದರು.
- Verse 33: ಈ ಮಾತಿನಿಂದ ತಮಗೆಂಥ ಮರಣ ಕಾದಿದೆಯೆಂದು ಸೂಚಿಸಿದರು.
- Verse 34: ನೆರೆದಿದ್ದ ಜನರು ಪ್ರತ್ಯುತ್ತರವಾಗಿ, “ಅಭಿಷಿಕ್ತನಾದ ಲೋಕೋದ್ಧಾರಕ ಸದಾಕಾಲ ಇರುವನೆಂದು ಧರ್ಮಶಾಸ್ತ್ರವೇ ತಿಳಿಸುತ್ತದೆ. ಹೀಗಿರುವಲ್ಲಿ, ನರಪುತ್ರನನ್ನು ಮೇಲೇರಿಸಬೇಕಾಗಿದೆ ಎಂದು ನೀನು ಹೇಳುತ್ತೀಯಲ್ಲಾ, ಅದು ಹೇಗೆ? ಆ ನರಪುತ್ರನು ಯಾರು?” ಎಂದು ಕೇಳಿದರು.
- Verse 35: ಅದಕ್ಕೆ ಯೇಸು, “ಇನ್ನು ತುಸುಕಾಲ ಮಾತ್ರ ಜ್ಯೋತಿ ನಿಮ್ಮ ನಡುವೆ ಇರುತ್ತದೆ. ನಿಮ್ಮನ್ನು ಕತ್ತಲು ಕವಿಯದಂತೆ ಜ್ಯೋತಿಯಿರುವಾಗಲೇ ನಡೆಯಿರಿ. ಕತ್ತಲಲ್ಲಿ ನಡೆಯುವವನಿಗೆ ಗೊತ್ತುಗುರಿ ಕಾಣದು.
- Verse 36: ನಿಮ್ಮೊಡನೆ ಇನ್ನೂ ಜ್ಯೋತಿ ಇರುವುದರಿಂದ ಆ ಜ್ಯೋತಿಯಲ್ಲಿ ನಂಬಿಕೆಯಿಡಿ. ಆಗ ನೀವು ಜ್ಯೋತಿಯ ಮಕ್ಕಳು ಆಗುವಿರಿ,” ಎಂದರು. ಇದನ್ನು ಕೇಳಿದ ತರುವಾಯ ಯೇಸು ಅಲ್ಲಿಂದ ಹೊರಟು ಜನರ ಕಣ್ಣಿಗೆ ಬೀಳದಂತೆ ಮರೆಯಾದರು.
- Verse 37: ಯೇಸು ಸ್ವಾಮಿ ಬಹುತೇಕ ಸೂಚಕಕಾರ್ಯಗಳನ್ನು ಜನರ ಕಣ್ಮುಂದೆ ಮಾಡಿದರೂ ಆ ಜನರು ಅವರನ್ನು ವಿಶ್ವಾಸಿಸದೆಹೋದರು.
- Verse 38: ಹೀಗೆ ಯೆಶಾಯ ಪ್ರವಾದಿಯ ಈ ಮಾತು ನೆರವೇರಿತು: “ಸರ್ವೇಶ್ವರಾ, ನಮ್ಮ ಸಂದೇಶವನ್ನು ನಂಬಿದವರಾರು? ದೇವರ ಶಕ್ತಿಸಾಮರ್ಥ್ಯ ಗೋಚರವಾದುದು ಯಾರಿಗೆ?”
- Verse 39: ಜನರು ವಿಶ್ವಾಸಿಸದೆ ಹೋದುದಕ್ಕೆ ಯೆಶಾಯನು ಮತ್ತೊಂದು ವಚನದಲ್ಲಿ ಕಾರಣವನ್ನು ಸೂಚಿಸಿದ್ದಾನೆ:
- Verse 40: “ತಮ್ಮ ಕಣ್ಣುಗಳಿಂದ ಅವರು ಕಾಣದಂತೆಯೂ ತಮ್ಮ ಮನದಿಂದ ಗ್ರಹಿಸದಂತೆಯೂ ಹಾಗೂ ಮನತಿರುಗಿ ನನ್ನಿಂದ ಗುಣಹೊಂದದಂತೆಯೂ ಅವರ ಕಣ್ಣುಗಳನ್ನು ಕುರುಡಾಗಿಸಿರುವರು; ಅವರ ಮನಸ್ಸನ್ನು ಕಲ್ಲಾಗಿಸಿರುವರು ದೇವರು.”
- Verse 41: ಯೇಸುವಿನ ಮಹಿಮೆಯನ್ನು ಮನಗಂಡು, ಅವರನ್ನು ಕುರಿತು ಮಾತನಾಡುವಾಗ ಯೆಶಾಯನು ಹೇಳಿದ ಮಾತುಗಳಿವು.
- Verse 42: ಯೆಹೂದ್ಯರಲ್ಲಿ ಹಲವುಮಂದಿ ಮುಖಂಡರಿಗೆ ಯೇಸುವಿನಲ್ಲಿ ವಿಶ್ವಾಸಮೂಡಿತು. ಆದರೆ ಫರಿಸಾಯರು ಪ್ರಾರ್ಥನಾಮಂದಿರಗಳಿಂದ ತಮಗೆ ಬಹಿಷ್ಕಾರ ಹಾಕಿಯಾರೆಂಬ ಅಂಜಿಕೆಯ ಕಾರಣ ಅವರು ತಮ್ಮ ವಿಶ್ವಾಸವನ್ನು ಬಯಲುಮಾಡಲಿಲ್ಲ.
- Verse 43: ದೇವರಿಂದ ದೊರಕುವ ಮನ್ನಣೆಗಿಂತ ಮಾನವರಿಂದ ಸಿಗುವ ಮನ್ನಣೆಯೇ ಅವರಿಗೆ ಪ್ರಿಯವಾಗಿತ್ತು.
- Verse 44: ಯೇಸು ಸ್ವಾಮಿ ಗಟ್ಟಿಯಾಗಿ ಕೂಗಿ ಇಂತೆಂದರು : “ನನ್ನಲ್ಲಿ ವಿಶ್ವಾಸವಿಡುವವನು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿದಾತನಲ್ಲೇ ವಿಶ್ವಾಸವಿಡುತ್ತಾನೆ.
- Verse 45: ನನ್ನನ್ನು ಕಾಣುವವನು ನನ್ನನ್ನು ಕಳುಹಿಸಿದಾತನನ್ನೇ ಕಾಣುತ್ತಾನೆ.
- Verse 46: ನನ್ನಲ್ಲಿ ವಿಶ್ವಾಸವಿಡುವವನು ಅಂಧಕಾರದಲ್ಲಿ ಉಳಿಯಬಾರದೆಂದು ನಾನೇ ಜಗಜ್ಯೋತಿಯಾಗಿ ಬಂದಿದ್ದೇನೆ.
- Verse 47: ಯಾವನಾದರೂ ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದೆಹೋದರೆ ಅಂಥವನಿಗೆ ತೀರ್ಪುಕೊಡುವವನು ನಾನಲ್ಲ. ನಾನು ಬಂದುದು ಲೋಕದ ಉದ್ಧಾರಕ್ಕಾಗಿ, ತೀರ್ಪುಕೊಡುವುದಕ್ಕಾಗಿ ಅಲ್ಲ.
- Verse 48: ನನ್ನನ್ನು ನಿರಾಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದೆ ಹೋದವನಿಗೆ ತೀರ್ಪುಕೊಡುವಂಥದ್ದು ಒಂದು ಇದೆ.
- Verse 49: ಅದು ಯಾವುದೆಂದರೆ ನಾನು ಆಡಿದ ಮಾತೇ. ಅಂತಿಮ ದಿನದಂದು ಅದೇ ಅವನಿಗೆ ತೀರ್ಪುಕೊಡುವುದು. ಏಕೆಂದರೆ, ನನ್ನಷ್ಟಕ್ಕೆ ನಾನೇ ಇದನ್ನೆಲ್ಲಾ ಮಾತನಾಡುತ್ತಿಲ್ಲ. ನನ್ನನ್ನು ಕಳುಹಿಸಿದ ಪಿತನೇ, ನಾನು ಏನು ಹೇಳಬೇಕು, ಯಾವ ಮಾತನ್ನು ಆಡಬೇಕು ಎಂದು ನನಗೆ ಆಜ್ಞೆಮಾಡಿದ್ದಾರೆ.
- Verse 50: ಅವರ ಆಜ್ಞೆಯೇ ನಿತ್ಯಜೀವದಾಯಕ ಎಂದು ನಾನು ಬಲ್ಲೆ. ಆದ್ದರಿಂದಲೇ ಪಿತನು ಹೇಳಿದಂತೆಯೇ ನಾನು ಮಾತನಾಡುತ್ತೇನೆ.”