வேதாகமம்
ಹೊಸ ಒಡಂಬಡಿಕೆ
ಪ್ರಕಟನೆ
20ನೇ ಅಧ್ಯಾಯ
- Verse 1: ತರುವಾಯ ದೇವದೂತನೊಬ್ಬನು ಸ್ವರ್ಗದಿಂದ ಇಳಿದುಬಂದುದನ್ನು ಕಂಡೆ. ಆತನ ಕೈಯಲ್ಲಿ ಪಾತಾಳದ ಬೀಗದ ಕೈ ಮತ್ತು ದೊಡ್ಡ ಸರಪಣಿ ಇದ್ದವು.
- Verse 2: ಪಿಶಾಚಿಯೂ ಸೈತಾನನೂ ಆಗಿರುವ ಘಟಸರ್ಪವನ್ನು, ಅಂದರೆ ಪುರಾತನ ಸರ್ಪವನ್ನು, ಆತನು ಹಿಡಿದು ಒಂದು ಸಾವಿರ ವರ್ಷಗಳ ಕಾಲ ಬಂಧನದಲ್ಲಿಟ್ಟನು.
- Verse 3: ಆ ಒಂದು ಸಾವಿರ ವರ್ಷಗಳ ಕಾಲದವರೆಗೆ, ಅದು ಜನಾಂಗಗಳನ್ನು ಮರುಳುಗೊಳಿಸದಂತೆ ದೇವದೂತನು ಸೈತಾನನನ್ನು ಪಾತಾಳಕ್ಕೆ ದಬ್ಬಿ, ಬಾಗಿಲು ಮುಚ್ಚಿ, ಅದಕ್ಕೆ ಮುದ್ರೆ ಹಾಕಿದನು. ಆ ಸಾವಿರ ವರ್ಷಗಳ ಕಾಲ ಮುಗಿದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆ ದೊರೆಯುವುದು.
- Verse 4: ಬಳಿಕ ಸಿಂಹಾಸನಗಳನ್ನು ಕಂಡೆ. ಅವುಗಳ ಮೇಲೆ ಕುಳಿತಿದ್ದವರಿಗೆ ತೀರ್ಪುಕೊಡುವ ಅಧಿಕಾರವನ್ನು ಕೊಡಲಾಗಿತ್ತು. ಇದಲ್ಲದೆ, ಕ್ರಿಸ್ತೇಸುವಿನ ಪರವಾಗಿ ಸಾಕ್ಷಿಕೊಟ್ಟು ದೇವರ ವಾಕ್ಯದ ಪ್ರಚಾರಕ್ಕಾಗಿ ತಲೆತೆತ್ತ ಜೀವಾತ್ಮಗಳನ್ನು ಕಂಡೆ. ಇವರು ಆ ಮೃಗವನ್ನಾಗಲಿ, ಅದರ ವಿಗ್ರಹವನ್ನಾಗಲಿ ಪೂಜಿಸಿದವರಲ್ಲ; ತಮ್ಮ ಹಣೆಗಳ ಮೇಲಾಗಲಿ, ಕೈಗಳ ಮೇಲಾಗಲಿ ಅದರ ಗುರುತಿನ ಹಚ್ಚೆಯನ್ನೂ ಚುಚ್ಚಿಸಿಕೊಂಡವರಲ್ಲ. ಇವರು ಜೀವಂತರಾಗಿ ಕ್ರಿಸ್ತೇಸುವಿನೊಡನೆ ಒಂದು ಸಾವಿರ ವರ್ಷಗಳು ಆಳುವರು.
- Verse 5: ಇದೇ ಪ್ರಥಮ ಪುನರುತ್ಥಾನ, ಮರಣಹೊಂದಿದ್ದ ಇನ್ನುಳಿದವರು ಆ ಒಂದು ಸಾವಿರ ವರ್ಷಗಳು ಮುಗಿಯುವವರೆಗೆ ಜೀವಂತರಾಗಲಿಲ್ಲ.
- Verse 6: ಆ ಪ್ರಥಮ ಪುನರುತ್ಥಾನದಲ್ಲಿ ಸೇರಿರುವ ದೇವಜನರು ಭಾಗ್ಯವಂತರು. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಅವರು ದೇವರಿಗೂ ಕ್ರಿಸ್ತೇಸುವಿಗೂ ಯಾಜಕರಾಗಿ ಸೇವೆಸಲ್ಲಿಸುವರು; ಮತ್ತು ಕ್ರಿಸ್ತೇಸುವಿನೊಡನೆ ಒಂದು ಸಾವಿರ ವರ್ಷಗಳ ಕಾಲ ಆಳುವರು.
- Verse 7: ಆ ಒಂದು ಸಾವಿರ ವರ್ಷಗಳು ಮುಗಿದ ನಂತರ ಸೈತಾನನನ್ನು ಬಂಧನದಿಂದ ಬಿಡುಗಡೆ ಮಾಡಲಾಗುವುದು.
- Verse 8: ಅವನು ಬಂದು ಭೂಮಿಯ ಅಷ್ಟದಿಕ್ಕುಗಳಲ್ಲಿರುವ ಗೋಗ್ ಮತ್ತು ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸುವನು. ಯುದ್ಧಮಾಡುವುದಕ್ಕಾಗಿ ಅವರನ್ನು ಒಟ್ಟುಗೂಡಿಸುವನು. ಅವರ ಸಂಖ್ಯೆ ಸಮುದ್ರತೀರದ ಮರಳಿನಷ್ಟಿರುವುದು.
- Verse 9: ಅವರು ದೇಶದಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ದೇವರ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ಸ್ವರ್ಗದಿಂದ ಬೆಂಕಿ ಇಳಿದುಬಂದು ಅವರನ್ನು ದಹಿಸಿಬಿಟ್ಟಿತು.
- Verse 10: ಜನರನ್ನು ಮರುಳುಗೊಳಿಸುತ್ತಿದ್ದ ಪಿಶಾಚಿಯನ್ನು ಗಂಧಕದ ಅಗ್ನಿ ಸರೋವರಕ್ಕೆ ಎಸೆಯಲಾಯಿತು. ಆ ಮೃಗವನ್ನೂ ಕಪಟ ಪ್ರವಾದಿಯನ್ನೂ ಮೊದಲೇ ಅದಕ್ಕೆ ಎಸೆಯಲಾಗಿತ್ತು. ಇವರೆಲ್ಲರೂ ಯುಗಯುಗಾಂತರಗಳವರೆಗೆ ಹಗಲಿರುಳೆನ್ನದೆ ಅಲ್ಲಿಯೇ ಬೇನೆಬೇಗುದಿಗಳಿಂದ ನರಳುವರು.
- Verse 11: ಅನಂತರ ಶ್ವೇತವರ್ಣದ ಒಂದು ಮಹಾಸಿಂಹಾಸನವನ್ನು ಕಂಡೆ. ಅದರಲ್ಲಿ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ತಮ್ಮ ಇರುವಿಕೆಯೇ ಇಲ್ಲದಂತೆ ಕಣ್ಮರೆಯಾಗಿ ಹೋದವು.
- Verse 12: ಇದಲ್ಲದೆ, ಮೃತರಾಗಿದ್ದ ಹಿರಿಯಕಿರಿಯರೆಲ್ಲರೂ ಸಿಂಹಾಸನದ ಸಾನ್ನಿಧ್ಯದಲ್ಲಿ ನಿಂತಿರುವುದನ್ನು ಕಂಡೆ. ಆಗ ಪುಸ್ತಕಗಳನ್ನು ತೆರೆಯಲಾಯಿತು. ಅನಂತರ ಮತ್ತೊಂದು ಪುಸ್ತಕವನ್ನು ತೆರೆಯಲಾಯಿತು. ಅದು ಜೀವಬಾಧ್ಯರ ಪಟ್ಟಿಯುಳ್ಳ ಪುಸ್ತಕ. ಆ ಪುಸ್ತಕದಲ್ಲಿ ಬರೆದಿದ್ದ ಪ್ರಕಾರ ಅವರವರ ಕೃತ್ಯಗಳಿಗೆ ತಕ್ಕಂತೆ ಮೃತರಿಗೆ ನ್ಯಾಯತೀರ್ಪು ಕೊಡಲಾಯಿತು.
- Verse 13: ಸಮುದ್ರವು ತನ್ನಲ್ಲಿದ್ದ ಮೃತರನ್ನು ಒಪ್ಪಿಸಿತು; ಮೃತ್ಯುವು ಪಾತಾಳವೂ ತಮ್ಮ ವಶದಲ್ಲಿದ್ದ ಮೃತರನ್ನು ಒಪ್ಪಿಸಿದವು; ಅವರಲ್ಲಿ ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕಂತೆ ನ್ಯಾಯತೀರ್ಪು ಆಯಿತು.
- Verse 14: ಅನಂತರ ಮೃತ್ಯುವನ್ನೂ ಪಾತಾಳವನ್ನೂ ಅಗ್ನಿಸರೋವರಕ್ಕೆ ಎಸೆಯಲಾಯಿತು. ಆ ಅಗ್ನಿಸರೋವರವೇ ಎರಡನೆಯ ಮರಣ.
- Verse 15: ಯಾರ ಯಾರ ಹೆಸರು ಜೀವಬಾಧ್ಯರ ಪಟ್ಟಿಯಲ್ಲಿ ಲಿಖಿತವಾಗಿಲ್ಲವೋ ಅಂಥವರನ್ನು ಅಗ್ನಿಸರೋವರಕ್ಕೆ ಎಸೆಯಲಾಯಿತು.