ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
10ನೇ ಅಧ್ಯಾಯ
- Verse 1: “ನನ್ನ ಬಾಳೇ ನನಗೆ ಬೇಸರವಾಗಿದೆ ಎದೆಬಿಚ್ಚಿ ಮೊರೆಯಿಡುತ್ತಿರುವೆ ಕಹಿ ಮನದಿಂದ ನುಡಿಯುತ್ತಿರುವೆ.
- Verse 2: ನಾನು ದೇವರಿಗೆ ಇಂತೆನ್ನುವೆ: ‘ನನ್ನನ್ನು ನಿರ್ಣಯಿಸಬೇಡ ಅಪರಾಧಿಯೆಂದು ನನ್ನ ಮೇಲೆ ನಿನಗಿರುವ ಆಪಾದನೆಯನು ತಿಳಿಸಿಬಿಡು.
- Verse 3: ದುರುಳರ ಯೋಜನೆಯನು ನೀನು ಪುರಸ್ಕರಿಸಬಹುದೆ? ನಿನ್ನ ಕೈಕೃತಿಯಾದ ನನ್ನನು ತಿರಸ್ಕರಿಸಿ ಬಾಧಿಸುವುದು ಸರಿಯೆ?
- Verse 4: ಮನುಜರಂಥ ಕಣ್ಣುಗಳು ನಿನಗಿದೆಯೋ? ಮನುಷ್ಯರಂತೆ ನೀನು ನೋಡುತ್ತೀಯೋ?
- Verse 5: ನಿನ್ನ ದಿನಗಳು ಮನುಷ್ಯನ ಅಲ್ಪದಿನಗಳಂತಿವೆಯೋ? ನಿನ್ನ ವರುಷಗಳು ಮಾನವನ ವರುಷಗಳಷ್ಟೆಯೋ?
- Verse 6: ನನ್ನ ತಪ್ಪುಗಳನ್ನು ಹುಡುಕುವ ನಿನಗೆ ನನ್ನ ಪಾಪಗಳನ್ನು ವಿಚಾರಿಸುವ ನಿನಗೆ
- Verse 7: ನಾನು ಅಪರಾಧಿಯಲ್ಲವೆಂದು ತಿಳಿದಿದೆಯಲ್ಲವೆ? ನಿನ್ನ ಕೈಯಿಂದ ಬಿಡಿಸಬಲ್ಲವರಾರೂ ಇಲ್ಲವಲ್ಲವೆ?
- Verse 8: ನನ್ನನ್ನು ನಿರ್ಮಿಸಿ ರೂಪಿಸಿದಾತ ನೀನು ಆದರೆ ಈಗ ಮುಗಿಸಿಬಿಡುವಿಯೋ ಮಾನಸಾಂತರಗೊಂಡು?
- Verse 9: ಜೇಡಿಮಣ್ಣಿನಿಂದ ನನ್ನನ್ನು ಮಾಡಿದೆಯೆಂದು ನೆನೆಸಿಕೊ ಆದರೆ ಈಗ ಮರಳಿ ಮಣ್ಣಾಗುವಂತೆ ಮಾಡುವಿಯೋ?
- Verse 10: ನನ್ನನ್ನು ಸುರಿಸಿದೆ ಹಾಲಿನಂತೆ ಹೆಪ್ಪುಗಟ್ಟಿಸಿದೆ ಮೊಸರಿನಂತೆ;
- Verse 11: ನನ್ನನ್ನು ಹೆಣೆದೆ ಎಲುಬು ನರಗಳಿಂದ ನನ್ನನ್ನು ಹೊದಿಸಿದೆ ಮಾಂಸ ಚರ್ಮಗಳಿಂದ;
- Verse 12: ಜೀವವಿತ್ತು ಅಚಲ ಪ್ರೀತಿ ತೋರಿಸಿದೆ ನಿನ್ನ ಪರಾಮರಿಕೆಯಿಂದ ನನ್ನ ಪ್ರಾಣವನ್ನು ಕಾಪಾಡಿದೆ.
- Verse 13: ಆದರೂ ನನಗೆ ಚೆನ್ನಾಗಿ ಗೊತ್ತಿತ್ತು; ನಿನ್ನ ಹೃದಯದಲ್ಲಿ ಗುಟ್ಟಾದ ಯೋಜನೆಯೊಂದು ಹುದುಗಿತ್ತು;
- Verse 14: ನಾನು ತಪ್ಪುಮಾಡಿದರೆ ಅದನು ಕಂಡುಹಿಡಿದು ಆ ದೋಷಕ್ಕೆ ಕ್ಷಮೆ ನೀಡಕೂಡದೆಂದು.
- Verse 15: ನಾನು ದುರ್ಮಾರ್ಗಿಯಾದರಂತೂ ನನಗಿಲ್ಲ ಗತಿ ಸನ್ಮಾರ್ಗಿಯಾದರೂ ಕೂಡ ನಡೆವಂತಿಲ್ಲ ತಲೆಯೆತ್ತಿ ಏಕೆಂದರೆ ನಾಚಿ ನಿಂತಿರುವೆ, ಯಾತನೆಯ ಹೊರೆಹೊತ್ತಿ.
- Verse 16: ನಾನು ತಲೆಯೆತ್ತಿದರೆ ಬೇಟೆಯಾಡುವೆ ನನ್ನನ್ನು ಸಿಂಹದಂತೆ ಮತ್ತೆ ನಿನ್ನ ಶಕ್ತಿ ಸಾಮರ್ಥ್ಯವನ್ನು ನನ್ನ ಮೇಲೆ ಪ್ರಯೋಗಿಸುವೆ.
- Verse 17: ನನಗೆ ವಿರುದ್ಧ ಹೊಸ ಹೊಸ ಸಾಕ್ಷಿಗಳನ್ನು ಬರಮಾಡುವೆ ನನ್ನ ಮೇಲೆ ಹೆಚ್ಚುಹೆಚ್ಚಾಗಿ ಸಿಟ್ಟುಗೊಳ್ಳುವೆ ಅಲೆಅಲೆಯಾಗಿ ಹಗೆಗಳನ್ನು ನನ್ನ ಮೇಲೆ ಧಾಳಿಮಾಡ ಬಿಡುವೆ.
- Verse 18: ತಾಯ ಗರ್ಭದಿಂದ ನನ್ನನ್ನೇಕೆ ಹೊರತೆಗೆದೆ? ನಾನು ಸತ್ತುಹೋಗಬಹುದಿತ್ತು ಯಾರೂ ನೋಡುವುದಕ್ಕೆ ಮುಂಚೆ!
- Verse 19: ಆಗ ನಾನು ಇಲ್ಲದವನಾಗುತ್ತಿದ್ದೆ ಗರ್ಭದಿಂದಲೆ ಸಮಾಧಿ ಸೇರುತ್ತಿದ್ದೆ.
- Verse 20: ನನಗುಳಿದಿರುವ ದಿನಗಳು ಕೆಲವೇ ಕಿಂಚಿತ್ತು ವಿಶ್ರಮಿಸಲು ನನ್ನನು ಬಿಟ್ಟುಬಿಡಬಾರದೆ?’
- Verse 21: ಮರಳಿ ಹಿಂದಿರುಗಲಾಗದ ನಾಡನು ನಾನು ಸೇರಲಿರುವೆ ಅಂಧಕಾರವೂ ಗಾಢಾಂಧಕಾರವೂ ಅಲ್ಲಿ ತುಂಬಿವೆ.
- Verse 22: ಕಾರ್ಗತ್ತಲೂ ಗಾಢಾಂಧಕಾರವೂ ಅಲ್ಲಿವೆ ಅರಾಜಕತೆಯೂ ಕಾರಿರುಳೂ ಅದನು ಆವರಿಸಿವೆ ಬೆಳಕೇ ಕಾರಿರುಳಾಗಿ ಆ ನಾಡನ್ನು ಕವಿದಿದೆ.”