पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
121ನೇ ಅಧ್ಯಾಯ
- Verse 1: ಕಣ್ಣೆತ್ತಿ ನಾ ನೋಡುವೆ ಪರ್ವತದತ್ತ I ಕೇಳುವೆ : “ನನಗೆ ಒತ್ತಾಸೆ ಎತ್ತಣಿಂದ?” II
- Verse 2: ನನಗೆ ಒತ್ತಾಸೆ ಪ್ರಭುವಿನಿಂದ I ಭೂಮ್ಯಾಕಾಶ ಸೃಜಿಸಿದವನಿಂದ II
- Verse 3: ನಿನ್ನ ಕಾಲೆಡವದಂತೆ ನೋಡುವನಾತ I ತೂಕಡಿಸಲಾರನು ನಿನ್ನ ಕಾಯುವಾತ II
- Verse 4: ಇಗೋ, ಇಸ್ರಯೇಲನು ಕಾಯುವಾತನು I ನಿದ್ರಿಸಲಾರನು, ತೂಕಡಿಸಲಾರನು II
- Verse 5: ನಿನ್ನನು ಕಾಯುತಿಹನು ಪ್ರಭುವೇ I ಬಲಗಡೆ ನೆರಳಂತಿಹನು ವಿಭುವೇ II
- Verse 6: ನಿನ್ನ ಬಾಧಿಸನು ಸೂರ್ಯನು ಹಗಲೊಳು I ನಿನ್ನ ಪೀಡಿಸನು ಚಂದ್ರನು ಇರುಳೊಳು II
- Verse 7: ಪ್ರಭು ಕಾಯುವನು ನಿನ್ನ ಪ್ರಾಣವನು I ಸಕಲ ಕೇಡಿನಿಂದ ಕಾಪಾಡುವನು II
- Verse 8: ಪ್ರಭು ಕಾಯುವನು ನಿನ್ನ ಆಗುಹೋಗುಗಳನು I ಇಂದಿಗೂ ಎಂದೆಂದಿಗೂ ನಿನ್ನ ಕಾಯುವನು II