P. O. C ബൈബിള്
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
11ನೇ ಅಧ್ಯಾಯ
- Verse 1: ಕಳ್ಳತಕ್ಕಡಿ ಸರ್ವೇಶ್ವರನಿಗೆ ಅಸಹ್ಯ; ನ್ಯಾಯವಾದ ತೂಕ ಆತನಿಗೆ ಪ್ರಿಯ.
- Verse 2: ಅಹಂಕಾರವಿದ್ದಲ್ಲಿ ಅವಮಾನ; ಸ್ವಾರ್ಥ ನಿಗ್ರಹವಿದ್ದಲ್ಲಿ ಸುಜ್ಞಾನ.
- Verse 3: ಸಜ್ಜನರಿಗೆ ಸರಳತೆ ಮಾರ್ಗದರ್ಶನ, ದುರ್ಜನರಿಗೆ ಅವರ ವಕ್ರತೆ ಸಂಹಾರಕ.
- Verse 4: ತೀರ್ಪಿನ ದಿನ ನೆರವಾಗದು ಆಸ್ತಿಪಾಸ್ತಿ; ಸನ್ನಡತೆಯಿಂದಲೆ ಮರಣದಿಂದ ವಿಮುಕ್ತಿ.
- Verse 5: ನಿರ್ದೋಷಿಯ ಮಾರ್ಗ ಸರಾಗ; ದುಷ್ಟತನದಿಂದ ದುರುಳನ ಪತನ.
- Verse 6: ಸಜ್ಜನರ ಬಿಡುಗಡೆ ಸದಾಚಾರದಿಂದ; ವಂಚಕರ ಬಂಧನ ದುರಾಶೆಯಿಂದ.
- Verse 7: ದುರುಳನೊಂದಿಗೆ ಸಾಯುವುದು ಅವನ ನಿರೀಕ್ಷೆ; ಅಳಿವುದು ಸಾಮರ್ಥ್ಯದ ಮೇಲಿಟ್ಟ ಅವನ ನಂಬಿಕೆ.
- Verse 8: ಸಜ್ಜನನು ಇಕ್ಕಟ್ಟಿನಿಂದ ಪಾರಾಗುವನು; ದುರ್ಜನನು ಅದರೊಳಗೆ ಸಿಕ್ಕಿಬೀಳುವನು.
- Verse 9: ಅನೀತಿವಂತನು ಮಾತಿನಿಂದ ನೆರೆಯವನನ್ನು ನಾಶಮಾಡುವನು; ನೀತಿವಂತನು ತಿಳುವಳಿಕೆಯಿಂದ ಅವನನ್ನು ಉದ್ಧಾರಮಾಡುವನು.
- Verse 10: ಸಜ್ಜನರು ಸುಖಿಗಳಾದರೆ ಊರಿಗೆ ಉಲ್ಲಾಸ; ದುರ್ಜನರು ಹಾಳಾದರೆ ಮಾಡುವರು ಜಯಘೋಷ.
- Verse 11: ಸತ್ಪುರುಷರ ಆಶೀರ್ವಾದದಿಂದ ಪುರೋದ್ಧಾರ; ದುಷ್ಟಜನರ ಕೆಟ್ಟ ಬಾಯಿಂದ ಅದರ ಸಂಹಾರ.
- Verse 12: ನೆರೆಯವನನ್ನು ತೃಣೀಕರಿಸುವವನು ಬುದ್ಧಿಹೀನ; ವಿವೇಕಿಯು ಅದರ ಬಗ್ಗೆ ತಾಳುವನು ಮೌನ.
- Verse 13: ಚಾಡಿಕೋರನು ಗುಟ್ಟನ್ನು ರಟ್ಟುಮಾಡುವನು; ನಂಬಿಕಸ್ತನು ಅದನ್ನು ಮುಚ್ಚಿ ಮರೆಮಾಡುವನು.
- Verse 14: ನಾಯಕನಿಲ್ಲದ ಜನತೆ ನಾಶವಾಗುವುದು; ಹಲವರು ಸುಮಂತ್ರಿಗಳಿರುವಲ್ಲಿ ಸಂರಕ್ಷಣೆ ಇರುವುದು.
- Verse 15: ಅಪರಿಚಿತನಿಗೆ ಜಾಮೀನು ನಿಂತರೆ ಹಾನಿ; ಜಾಮೀನನ್ನು ತೊರೆದುಬಿಟ್ಟರೆ ನೆಮ್ಮದಿ.
- Verse 16: ಸದ್ಗುಣಸ್ತ್ರೀ ಕಾಪಾಡಿಕೊಳ್ಳುತ್ತಾಳೆ ಸನ್ಮಾನವನ್ನು; ಬಲವಂತವ್ಯಕ್ತಿ ಕಾಪಾಡಿಕೊಳ್ಳುತ್ತಾನೆ ಆಸ್ತಿಪಾಸ್ತಿಯನ್ನು.
- Verse 17: ಪರೋಪಕಾರಿ ತನಗೂ ಉಪಕಾರಿ; ಕ್ರೂರಿಯಾದವನು ತನ್ನ ದೇಹಕ್ಕೂ ಕ್ರೂರಿ.
- Verse 18: ದುರುಳನು ಪಡೆವ ಸಂಬಳ ಜೊಳ್ಳು ಸಂಬಳ; ನೀತಿಯನ್ನು ಬಿತ್ತುವವನು ಪಡೆವನು ಸತ್ಫಲ.
- Verse 19: ಧರ್ಮನಿರತನಿಗೆ ದೊರಕುವುದು ಜೀವ; ಅಧರ್ಮಾಸಕ್ತನಿಗೆ ಸಿಗುವುದು ಮರಣ.
- Verse 20: ವಕ್ರಹೃದಯರು ಸರ್ವೇಶ್ವರನಿಗೆ ಅಸಹ್ಯರು; ಸನ್ಮಾರ್ಗಿಗಳು ಆತನ ಕೃಪೆಗೆ ಪಾತ್ರರು.
- Verse 21: ದುಷ್ಟನಿಗೆ ದಂಡನೆ ಕಟ್ಟಿಟ್ಟ ಬುತ್ತಿ; ಶಿಷ್ಟ ಸಂತಾನಕ್ಕೆ ಸಿಗುವುದು ಮುಕ್ತಿ.
- Verse 22: ಲಜ್ಜೆಗೆಟ್ಟು ನಡೆಯುವ ಸೌಂದರ್ಯವತಿ; ಹಂದಿಯ ಮೂತಿಗೆ ಚಿನ್ನದ ಮೂಗುತಿ.
- Verse 23: ಸಜ್ಜನರ ಕೋರಿಕೆ ಕಲ್ಯಾಣ ಸಾಧಕ; ದುರ್ಜನರ ನಿರೀಕ್ಷೆ ಕೋಪಾಗ್ನಿ ಸಾಧಕ.
- Verse 24: ಅಳತೆಯಿಲ್ಲದೆ ಕೊಡುವವನು ಧನಾಢ್ಯನಾಗುವನು; ಕೊಡಬೇಕಾದುದನ್ನೂ ಬಿಗಿಹಿಡಿದವನು ಬಡವನಾಗುವನು.
- Verse 25: ದಾನ ಗುಣವುಳ್ಳವನು ಧನವಂತನಾಗುವನು; ನೀರು ಹಾಯಿಸುವವನಿಗೆ ನೀರು ದೊರಕುವುದು.
- Verse 26: ಧಾನ್ಯವನ್ನು ಕೊಡದೆ ತುಂಬಿಟ್ಟುಕೊಳ್ಳುವವನ ಮೇಲೆ ಜನರ ಶಾಪ; ಧಾನ್ಯವನ್ನು ಮಾರುವವನ ತಲೆಯ ಮೇಲೆ ಆಶೀರ್ವಾದ.
- Verse 27: ಒಳಿತಿಗಾಗಿ ಹಂಬಲಿಸುವವನು ಕೃಪಾರ್ಥಿ; ಕೇಡನ್ನು ಹುಡುಕುವವನಿಗೆ ಕೇಡೇ ಗತಿ.
- Verse 28: ದ್ರವ್ಯವನ್ನು ನಂಬಿದವನು ಉದುರಿಹೋಗುವನು; ದೈವಭಕ್ತನು ಕುಡಿಯಂತೆ ಚಿಗುರುವನು.
- Verse 29: ಮನೆಯವರನ್ನೆ ಬಾಧಿಸುವವನು ಗಳಿಸುವುದು ಗಾಳಿ; ಬಿದ್ದಿರುವನವನು ಜ್ಞಾನಿಗೆ ಊಳಿಗನಾಗಿ.
- Verse 30: ಸಜ್ಜನರು ಈವುದು ಜೀವಫಲ; ದುರ್ಜನರು ಪಡೆವುದು ಅಕಾಲಮರಣ.
- Verse 31: ಸಜ್ಜನರೇ ಜಗದೊಳು ತಮ್ಮ ಕರ್ಮದ ಫಲವನ್ನು ಅನುಭವಿಸುವಲ್ಲಿ; ಹೇಳಬೇಕೆ ಇನ್ನು ದುರ್ಜನರ, ಹಾಗೂ ಪಾಪಿಗಳ ಪರಿಸ್ಥಿತಿ?