ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
22ನೇ ಅಧ್ಯಾಯ
- Verse 1: ಅತುಳ ಐಶ್ವರ್ಯಕ್ಕಿಂತ ಒಳ್ಳೆಯ ಹೆಸರು ಉತ್ತಮ; ಬೆಳ್ಳಿಬಂಗಾರಕ್ಕಿಂತ ಪ್ರೀತಿ ವಿಶ್ವಾಸ ಅಮೂಲ್ಯ.
- Verse 2: ಬಡವರು ಬಲ್ಲಿದರು ಸ್ಥಿತಿಯಲ್ಲಿ ಎದುರುಬದುರು; ಅವರೆಲ್ಲರನ್ನು ಸೃಷ್ಟಿಸಿದಾತ ಸರ್ವೇಶ್ವರನು.
- Verse 3: ಜಾಣ ಕೇಡನ್ನು ಕಂಡು ಅಡಗಿಕೊಳ್ಳುತ್ತಾನೆ; ಕೋಣ ಮುನ್ನುಗ್ಗಿ ಹಾನಿಗೆ ಈಡಾಗುತ್ತಾನೆ.
- Verse 4: ಸರ್ವೇಶ್ವರನಲ್ಲಿ ಭಯಭಕ್ತಿ ದೀನಮನೋಭಾವ, ಇವು ನೀಡುವ ಫಲ-ಸಂಪತ್ತು, ಸನ್ಮಾನ, ಆಯುಸ್ಸು.
- Verse 5: ವಕ್ರಬುದ್ಧಿಯುಳ್ಳವನ ಹಾದಿತುಂಬ ಮುಳ್ಳು, ಉರುಳು; ಅದರಿಂದ ದೂರವಿರುವನು ಪ್ರಾಣದಾಸೆಯುಳ್ಳವನು.
- Verse 6: ಬಾಲ್ಯದಲ್ಲೇ ಮಕ್ಕಳನ್ನು ಸರಿದಾರಿಯಲ್ಲಿ ಪಳಗಿಸು; ಮುಪ್ಪಿನಲ್ಲೂ ಅವರು ಆ ಪದ್ಧತಿ ಮೀರಿ ನಡೆಯದಿರಲಿ.
- Verse 7: ಬಲ್ಲಿದನು ಬಡವನಿಗೆ ಒಡೆಯ; ಸಾಲಗಾರನು ಸಾಲಕೊಟ್ಟವನಿಗೆ ಸೇವಕ.
- Verse 8: ಕೆಟ್ಟತನವನ್ನು ಬಿತ್ತುವವನು ಕೇಡನ್ನೆ ಕೊಯ್ಯುವನು; ಅವನ ಸಿಟ್ಟು ಅವನನ್ನೆ ಸುಟ್ಟುಬಿಡುವುದು.
- Verse 9: ಉದಾರ ದೃಷ್ಟಿಯುಳ್ಳವನು ಆಶೀರ್ವದಿತನು; ಆಹಾರವನ್ನು ಬಡವರೊಂದಿಗೆ ಆತ ಹಂಚಿಕೊಳ್ಳುವನು.
- Verse 10: ಕುಚೋದ್ಯನನ್ನು ಓಡಿಸಿಬಿಟ್ಟರೆ ಜಗಳ ನಿಲ್ಲುವುದು, ವ್ಯಾಜ್ಯ ಮುಗಿಯುವುದು, ನಿಂದೆ ಅವಮಾನ ಇಲ್ಲದಾಗುವುದು.
- Verse 11: ಸವಿಮಾತಿನಿಂದ ಅರಸನ ಗೆಳೆತನ ಪಡೆಯಬಹುದು; ಸರ್ವೇಶ್ವರ ಬಯಸುವುದು ಅಂತರಂಗ ಶುದ್ಧಿಯನ್ನು.
- Verse 12: ಸರ್ವೇಶ್ವರನ ದೃಷ್ಟಿ ಸಜ್ಜನರನ್ನು ಕಾಯುವುದು; ವಂಚಕರ ಮಾತನ್ನು ನಿರರ್ಥಕಗೊಳಿಸುವುದು.
- Verse 13: “ಹೊರಗಡೆ ಕಾದಿದೆ ಸಿಂಹ, ಬೀದಿಗೆ ಕಾಲಿಟ್ಟರೆ ತಿಂದುಬಿಡುವುದು!” ಇದು ಮೈಗಳ್ಳನ ಪಿಳ್ಳೆಯ ನೆವ.
- Verse 14: ವ್ಯಭಿಚಾರಿಣಿಯ ಬಾಯಿ ಆಳವಾದ ಬಾವಿ; ಸರ್ವೇಶ್ವರನಿಗೆ ಸಿಟ್ಟೆಬ್ಬಿಸಿದವನು ಬೀಳುವನು ಅದರಲ್ಲಿ.
- Verse 15: ಮಂಕುತನ ಮಕ್ಕಳ ಮನಸ್ಸಿಗೆ ಸಹಜ; ಬೆತ್ತದ ಬಿಸಿಯಿಂದ ಅದನ್ನು ತೊಲಗಿಸಲು ಸಾಧ್ಯ.
- Verse 16: ಹಣ ಹೆಚ್ಚಿಸಲು ಬಡವರನ್ನು ಪೀಡಿಸುವವನಿಗೆ, ಲಂಚಕೊಟ್ಟು ಬಲ್ಲಿದರನ್ನು ಒಲಿಸುವವನಿಗೆ, ಕೊರತೆಯೆ ಕಟ್ಟಿಟ್ಟ ಬುತ್ತಿ.
- Verse 17: ಜ್ಞಾನಿಗಳ ನುಡಿಗಳನ್ನು ಕಿವಿಗೊಟ್ಟು ಕೇಳು; ನನ್ನ ಬೋಧನೆಯನ್ನು ಮನಸ್ಸಿನಲ್ಲಿಡು.
- Verse 18: ಆ ನುಡಿಗಳನ್ನು ನಿನ್ನ ಅಂತರಂಗದಲ್ಲಿ ಕಾದಿಡು; ಅವು ನಿನ್ನ ತುಟಿಯ ಮೇಲೆ ಸಿದ್ಧವಿದ್ದರೆ ಒಳಿತು.
- Verse 19: ಸರ್ವೇಶ್ವರನಲ್ಲಿ ನೀನು ಭರವಸೆ ಇಡುವಂತೆ, ಅವುಗಳನ್ನು ತಿಳಿಸಿರುವೆನು ಇಂದೆ.
- Verse 20: ಉಚಿತಾಲೋಚನೆಯನ್ನೂ ತಿಳುವಳಿಕೆಯನ್ನೂ ನೀಡಬಲ್ಲ ಮೂವತ್ತು ವಚನಗಳನ್ನು ನಿನಗೆ ಈ ಮುಂಚೆಯೆ ಬರೆದಿರುವೆನಲ್ಲಾ.
- Verse 21: ಸತ್ಯವಾದ ಆ ವಚನಗಳು ಎಷ್ಟೋ ಯಥಾರ್ಥವೆಂದು ತಿಳಿದು ನಿನ್ನನ್ನು ಪ್ರಶ್ನಿಸಿದವರಿಗೆ ಅವುಗಳನ್ನು ಅರಿಕೆಮಾಡು.
- Verse 22: ಬಡವರಿಗೆ ದಿಕ್ಕಿಲ್ಲವೆಂದು ಅವರನ್ನು ಶೋಷಣೆಗೆ ಗುರಿಮಾಡಬೇಡ; ನ್ಯಾಯಾಲಯದಲ್ಲಿ ಆ ದಟ್ಟದರಿದ್ರರನ್ನು ಬಾಧಿಸಬೇಡ;
- Verse 23: ಸರ್ವೇಶ್ವರನೇ ಅವರ ಪರವಾಗಿ ವಾದಿಸುವನು; ಸೂರೆಮಾಡಬಂದವರ ಪ್ರಾಣವನ್ನು ಆತನೆ ಸೂರೆ ಮಾಡುವನು.
- Verse 24: ಕೋಪಿಷ್ಠನ ಸಂಗಡ ಸ್ನೇಹ ಬೆಳೆಸಬೇಡ, ಸಿಟ್ಟುಗಾರನ ಸಹವಾಸ ಮಾಡಬೇಡ.
- Verse 25: ಹಾಗೆ ಮಾಡಿದರೆ ಅವರ ದುರ್ನಡತೆಯನ್ನು ಕಲಿತುಕೊಳ್ಳುವೆ, ನಿನ್ನ ಪ್ರಾಣ ಉರುಲಿಗೆ ತುತ್ತಾಗುವುದು, ಎಚ್ಚರಿಕೆ!
- Verse 26: ಬೇರೆಯವರ ಸಾಲಕ್ಕೆ ಹೊಣೆಯಾಗಬೇಡ, ಅದಕ್ಕಾಗಿ ಕೈ ಮೇಲೆ ಕೈ ಇಟ್ಟು ಜಾಮೀನು ನಿಲ್ಲಬೇಡ.
- Verse 27: ಆ ಸಾಲ ತೀರಿಸಲು ನಿನ್ನಿಂದ ಸಾಧ್ಯವಾಗದಿರಲು, ಅವನೇಕೆ ನೀನು ಮಲಗಿರುವ ಹಾಸಿಗೆಯನ್ನೇ ಕಿತ್ತುಕೊಳ್ಳಬೇಕು?
- Verse 28: ನಿನ್ನ ಪೂರ್ವಜರು ಹಾಕಿರುವ ಎಲ್ಲೆ ಗುರುತನ್ನು, ಸ್ಥಳಾಂತರಿಸಬೇಡ ನೀನು.
- Verse 29: ತನ್ನ ಕೆಲಸದಲ್ಲಿ ನಿಪುಣನಾದವನನ್ನು ಗುರುತುಹಚ್ಚು; ಅಂಥವನು ರಾಜರನ್ನಲ್ಲದೆ ನೀಚರನ್ನು ಸೇವಿಸಲಾರನು.