வேதாகமம்
ಹಳೆಯ ಒಡಂಬಡಿಕೆ
ಯೆರೆಮೀಯ
22ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ನನಗೆ ಹೀಗೆ ಎಂದು ಆಜ್ಞೆಮಾಡಿದರು: “ನೀನು ಜುದೇಯದ ಅರಸನ ಮನೆಗೆ ಹೋಗು. ಅಲ್ಲಿ ಈ ಮಾತನ್ನು ಹೇಳು:
- Verse 2: ‘ದಾವೀದನ ಸಿಂಹಾಸನಾರೂಢನಾದ ಜುದೇಯದ ಅರಸನೇ, ಸರ್ವೇಶ್ವರನ ಮಾತನ್ನು ಕೇಳು; ನಿನ್ನ ಪರಿವಾರದವರೂ ಈ ಬಾಗಿಲುಗಳಲ್ಲಿ ಪ್ರವೇಶಿಸುವ ನಿನ್ನ ಪ್ರಜೆಗಳೂ ಕೇಳಲಿ;
- Verse 3: ಸರ್ವೇಶ್ವರನ ಸಂದೇಶ ಇದು: ನ್ಯಾಯನೀತಿಯನ್ನು ಆಚರಿಸಿರಿ. ವಂಚಿತನಾದವನನ್ನು ದೋಚಿಕೊಳ್ಳುವವನ ಕೈಯಿಂದ ಬಿಡಿಸಿರಿ. ಪರದೇಶೀಯರಿಗೆ, ಅನಾಥರಿಗೆ, ವಿಧವೆಯರಿಗೆ ಅನ್ಯಾಯಮಾಡಬೇಡಿ, ಅವರನ್ನು ಹಿಂಸಿಸಬೇಡಿ. ನಿರಪರಾಧಿಗಳ ರಕ್ತವನ್ನು ಈ ಸ್ಥಳದಲ್ಲಿ ಸುರಿಸಬೇಡಿ.
- Verse 4: ನೀವು ಈ ಆಜ್ಞೆಗಳನ್ನು ಮನಃಪೂರ್ವಕವಾಗಿ ಕೈಗೊಂಡು ನಡೆದಿರಾದರೆ ದಾವೀದನ ಸಿಂಹಾಸನಾರೂಢರಾದ ಅರಸರು ರಥಾಶ್ವಗಳನ್ನೇರಿ ತಮ್ಮ ಪರಿವಾರದೊಡನೆ ಹಾಗು ಪ್ರಜೆಗಳೊಡನೆ ಈ ಅರಮನೆಯ ಬಾಗಿಲುಗಳಲ್ಲಿ ಪ್ರವೇಶಿಸುವರು.
- Verse 5: ನೀವು ಈ ಮಾತುಗಳನ್ನು ಕೇಳದೆಹೋದರೆ ಈ ಅರಮನೆ ಹಾಳುಬೀಳುವುದು. ಇದನ್ನು ನನ್ನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಇದು ಸರ್ವೇಶ್ವರನಾದ ನನ್ನ ನುಡಿ.”
- Verse 6: ಹೌದು, ಜುದೇಯದ ಅರಸನ ಮನೆತನವನ್ನು ಕುರಿತು ಸರ್ವೇಶ್ವರ ಹೀಗೆನ್ನುತ್ತಾರೆ : “ನನ್ನ ದೃಷ್ಟಿಗೆ ನೀನಿರುವೆ ಗಿಲ್ಯಾದಿನಂತೆ, ಲೆಬನೋನಿನ ಶಿಖರದಂತೆ ಆದರೆ ನಿನ್ನನ್ನು ಮರುಭೂಮಿಯಂತೆ , ನಿರ್ಜನಪ್ರದೇಶದಂತೆ ಮಾಡುವೆನೆಂಬುದು ನಿಶ್ಚಯ.
- Verse 7: ಆಯುಧ ಸನ್ನದ್ಧರಾದ ಸಂಹಾರಕರನ್ನು ನಿನಗೆ ವಿರುದ್ಧ ಏರ್ಪಡಿಸುವೆನು. ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಬೆಂಕಿಗೆ ಕಡಿದು ಹಾಕುವರು.
- Verse 8: ಅನೇಕ ಅನ್ಯಜನಾಂಗದವರು ಈ ನಗರದ ಮಾರ್ಗವಾಗಿ ಹೋಗುತ್ತಾ ಸರ್ವೇಶ್ವರ ಈ ಮಹಾನಗರಕ್ಕೆ ಹೀಗೇಕೆ ಮಾಡಿದರೆಂದು ಮಾತಾಡಿಕೊಳ್ಳುವರು.
- Verse 9: ‘ಈ ನಗರದವರು ತಮ್ಮ ದೇವರಾದ ಸರ್ವೇಶ್ವರನ ಒಡಂಬಡಿಕೆಯನ್ನು ನಿರಾಕರಿಸಿ ಅನ್ಯದೇವತೆಗಳನ್ನು ಪೂಜಿಸಿ ಆರಾಧಿಸಿದ್ದರಿಂದಲೇ ಇದಕ್ಕೆ ಈ ಗತಿಯಾಯಿತು’ ಎಂದು ಹೇಳಿಕೊಳ್ಳುವರು.”
- Verse 10: “ಸತ್ತವನಿಗಾಗಿ (ಯೋಷೀಯನಿಗಾಗಿ) ಅಳಬೇಡಿ ಅವನಿಗಾಗಿ ಗೋಳಾಡಬೇಡಿ. ಬದಲಿಗೆ ಸೆರೆಹೋದವನಿಗಾಗಿ ಬಿಕ್ಕಿಬಿಕ್ಕಿ ಅಳಿರಿ ಇನ್ನು ಅವನು ಹಿಂತಿರುಗನು ಸ್ವಂತ ನಾಡನ್ನು ಮತ್ತೆ ನೋಡನು!
- Verse 11: ಜುದೇಯದ ಅರಸನಾದ ಯೋಷೀಯನ ಮಗನೂ ತನ್ನ ತಂದೆ ಯೋಷೀಯನ ತರುವಾಯ ಪಟ್ಟಕ್ಕೆ ಬಂದವನೂ ಹಾಗು ಇಲ್ಲಿಂದ ಸೆರೆಯಾಗಿ ಹೋದವನೂ ಆದ ಶಲ್ಲೂಮನ ವಿಷಯವಾಗಿ ಸರ್ವೇಶ್ವರ ಹೇಳುವುದು ಏನೆಂದರೆ:
- Verse 12: “ಅವನು ಇಲ್ಲಿಗೆ ಇನ್ನು ಹಿಂದಿರುಗಿ ಬರುವುದಿಲ್ಲ. ಅವನನ್ನು ಎಲ್ಲಿಗೆ ಸೆರೆ ಒಯ್ದರೋ ಅಲ್ಲೇ ಅವನು ಸಾಯುವನು. ಈ ನಾಡನ್ನು ಇನ್ನು ಅವನು ನೋಡುವುದಿಲ್ಲ.”
- Verse 13: “ನೆರೆಯವನಿಗೆ ಕೂಲಿಕೊಡದೆ ಬಿಟ್ಟಿಕೆಲಸ ಮಾಡಿಸಿಕೊಂಡು ಅರಮನೆಯನ್ನು ಕಟ್ಟಿಸಿಕೊಳ್ಳುವವನಿಗೆ ಧಿಕ್ಕಾರ ! ಅವನು ಅರಮನೆಯನ್ನು ಕಟ್ಟಿಸಿಕೊಳ್ಳುವುದು ಅನೀತಿಯಿಂದ ಮಹಡಿಗಳನ್ನು ನಿರ್ಮಿಸಿಕೊಳ್ಳುವುದು ಅನ್ಯಾಯದಿಂದ.
- Verse 14: ‘ಸವಿಸ್ತಾರವಾದ ಅರಮನೆ ನಿರ್ಮಿಸಿಕೊಳ್ಳುವೆನು ವಿಶಾಲವಾದ ಮಹಡಿ ಕಟ್ಟಿಸಿಕೊಳ್ಳುವೆನು’ ಎನ್ನುವನಿಗೆ ಧಿಕ್ಕಾರ ! ಅವನು ಅಗಲಗಲವಾದ ಕಿಟಕಿಗಳನ್ನಿಡಿಸಿಕೊಳ್ಳುತ್ತಾನೆ ಅವುಗಳಿಗೆ ಕೆಂಪು ಬಣ್ಣವನ್ನೂ ಬಳಿಸಿಕೊಳ್ಳುತ್ತಾನೆ.
- Verse 15: ದೇವದಾರಿನ ಕೆಲಸದಲ್ಲಿ, ಬೇರೆಯವರನ್ನು ಮೀರಿಸುವುದರಲ್ಲಿ ಅಡಗಿದೆಯೇ ನಿನ್ನ ದೊರೆತನದ ಹಿರಿಮೆ? ನಿನ್ನ ತಂದೆ ಎಷ್ಟೇ ಕುಡಿದರೂ ತಿಂದರೂ ನ್ಯಾಯನೀತಿಯನ್ನು ಪಾಲಿಸುತ್ತಿದ್ದನಲ್ಲವೆ? ಆಗ ಅವನಿಗೆ ಎಲ್ಲವು ನೆಮ್ಮದಿಯಾಗಿತ್ತಲ್ಲವೆ?
- Verse 16: ಆತ ದೀನದಲಿತರಿಗೆ ನ್ಯಾಯ ದೊರಕಿಸುತ್ತಿದ್ದ ಆಗ ಅವನಿಗೆ ಎಲ್ಲವು ಸುಗಮವಾಗಿತ್ತು. ನನ್ನನ್ನು ಅರಿಯುವುದು ಎಂದರೆ ಇದುವೇ. ಇದು ಸರ್ವೇಶ್ವರನಾದ ನನ್ನ ನುಡಿ.
- Verse 17: ಆದರೆ ನಿನ್ನ ದೃಷ್ಟಿ, ನಿನ್ನ ಮನಸ್ಸು ನೆಲೆಗೊಂಡಿವೆ ದುರ್ಲಾಭದಲ್ಲಿ, ನಿರ್ದೋಷಿಯ ರಕ್ತ ಸುರಿಸುವುದರಲ್ಲಿ ದಬ್ಬಾಳಿಕೆಯಲ್ಲಿ, ಹಿಂಸಾಚಾರಗಳಲ್ಲಿ.”
- Verse 18: ಆದಕಾರಣ ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ವಿಷಯವಾಗಿ ಸರ್ವೇಶ್ವರ ಹೀಗೆನ್ನುತ್ತಾರೆ: “ಇವನಿಗಾಗಿ ಯಾರೂ ‘ಅಯ್ಯೋ ಸೋದರಸೋದರಿಯೇ’ ಎಂದು ಗೋಳಾಡರು ‘ಅಯ್ಯೋ ನಮ್ಮೊಡೆಯಾ, ರಾಜಾಧಿರಾಜ’ ಎಂದು ಪ್ರಲಾಪಿಸರು.
- Verse 19: ಇವನನ್ನು ಜೆರುಸಲೇಮಿನ ಬಾಗಿಲ ಹೊರಗಡೆ ಬಿಸಾಡುವರು ಕತ್ತೆಗೆ ತಕ್ಕ ಮರ್ಯಾದೆಯೊಂದಿಗೆ ಹೂಣುವರು.”
- Verse 20: “ಲೆಬನೋನ್ ಬೆಟ್ಟವನ್ನು ಹತ್ತಿ ಬೊಬ್ಬೆಯಿಡು ! ಬಾಷಾನಿನಲ್ಲಿ ಮೊರೆಯಿಡು ! ಅಬಾರೀಮಿನಲ್ಲಿ ಕಿರುಚಾಡು ! ಏಕೆಂದರೆ ನಿನ್ನ ಮಿಂಡರೆಲ್ಲ ಹಾಳಾಗಿಹೋದರು !
- Verse 21: ನೀನು ನೆಮ್ಮದಿಯಾಗಿದ್ದ ಕಾಲದಲ್ಲಿ ನಿನ್ನೊಡನೆ ಮಾತಾಡಿದೆ ಆದರೆ ನೀನು, “ಕೇಳಲೊಲ್ಲೆ” ಎಂದು ಹೇಳಿಬಿಟ್ಟೆ. ನನ್ನ ಮಾತಿಗೆ ಕಿವಿಗೊಡದಿರುವುದು ನಿನಗೆ ಬಾಲ್ಯದಿಂದಲೆ ವಾಡಿಕೆ !
- Verse 22: ನಿನ್ನನ್ನು ಅಟ್ಟಿ ಮೇಯಿಸುವ ಕುರುಬರನ್ನು ಗಾಳಿ ಅಟ್ಟಿಸಿಕೊಂಡು ಹೋಗುವುದು. ನಿನ್ನ ಮಿಂಡರನ್ನು ಸೆರೆಹಿಡಿದುಕೊಂಡು ಹೋಗುವರು. ಆಗ ಖಂಡಿತವಾಗಿ ನೀನು ಆಶಾಭಂಗಪಡುವೆ ನಿನ್ನ ದುಷ್ಕೃತ್ಯಗಳ ನಿಮಿತ್ತ ಅವಮಾನಕ್ಕೀಡಾಗುವೆ.
- Verse 23: ‘ಲೆಬನೋನ್’ ಅರಮನೆಯಲ್ಲಿ ವಾಸಿಸುವವಳೇ, ದೇವದಾರುಗಳ ನಡುವೆ ಗೂಡುಮಾಡಿಕೊಂಡಿರುವವಳೇ, ಪ್ರಸವವೇದನೆಯಂಥ ಸಂಕಟಗಳು ಸಂಭವಿಸಿದಾಗ ನಿನಗೊದಗುವ ಪರಿಸ್ಥಿತಿ ಎಷ್ಟೋ ದುಃಖಕರ !
- Verse 24: ಸರ್ವೇಶ್ವರನ ಮಾತಿದು - “ನನ್ನ ಜೀವದಾಣೆ, ಯೆಹೋಯಾಕೀಮನ ಮಗನೂ ಜುದೇಯದ ಅರಸನೂ ಆದ ಕೊನ್ಯನೇ, ನೀನು ನನ್ನ ಬಲಗೈ ಮುದ್ರೆಯುಂಗುರವಾಗಿದ್ದರೂ ನಾನು ನಿನ್ನನ್ನು ಅಲ್ಲಿಂದ ಕಿತ್ತುಹಾಕುತ್ತಿದ್ದೆ.
- Verse 25: ನಿನ್ನ ಪ್ರಾಣ ಹುಡುಕುತ್ತಿರುವವರ ಕೈಗೆ, ನಿನ್ನಲ್ಲಿ ಭಯಹುಟ್ಟಿಸುವವರ ಕೈಗೆ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಮತ್ತು ಬಾಬಿಲೋನಿನ ಜನರ ಕೈಗೆ ನಿನ್ನನ್ನು ಕೊಟ್ಟುಬಿಡುವೆನು.
- Verse 26: ನಿನ್ನನ್ನೂ ನಿನ್ನ ಹೆತ್ತ ತಾಯಿಯನ್ನೂ ಜನ್ಮಭೂಮಿಯಲ್ಲದ ಅನ್ಯದೇಶಕ್ಕೆ ಎಸೆದುಬಿಡುವೆನು. ನೀವು ಅಲ್ಲೇ ಸಾಯುವಿರಿ.
- Verse 27: ಹಿಂದಿರುಗಬೇಕೆಂದು ಹಂಬಲಿಸಿದರೂ ತಾಯ್ನಾಡಿಗೆ ಹಿಂದಿರುಗುವುದೇ ಇಲ್ಲ.”
- Verse 28: ಕೊನ್ಯನು ಬಿಸಾಡಲ್ಪಟ್ಟ ಒಡಕು ಕುಡಿಕೆಯೆ? ಯಾರಿಗೂ ಬೇಡವಾದ ಮಣ್ಣಿನ ಮಡಿಕೆಯೆ? ಅವನೂ ಅವನ ಮಡದಿಮಕ್ಕಳೇಕೆ ಬೀದಿಪಾಲಾಗಿದ್ದಾರೆ?
- Verse 29: ನಾಡೇ, ನಾಡೇ, ಎಲೈ ನಾಡೇ, ಸರ್ವೇಶ್ವರನ ಮಾತಿಗೆ ಕಿವಿಗೊಡು.
- Verse 30: ಹೀಗಿದೆ ಸರ್ವೇಶ್ವರನ ನುಡಿ: “ಇವನು ಮಕ್ಕಳನ್ನು ಕಳೆದುಕೊಂಡ ವ್ಯಕ್ತಿ ತನ್ನ ಜನ್ಮವನ್ನು ಸಾರ್ಥಕ ಮಾಡಿಕೊಳ್ಳದ ವ್ಯಕ್ತಿ ಇವನ ಸಂತಾನದಲ್ಲಿ ಇನ್ನು ಯಾವನೂ ದಾವೀದನ ಸಿಂಹಾಸನದಲ್ಲಿ ಕೂರನು, ಜುದೇಯವನ್ನು ಆಳಿ ಬಾಳನು.”