ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆರೆಮೀಯ
27ನೇ ಅಧ್ಯಾಯ
- Verse 1: ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಆರಂಭದಲ್ಲಿ ಸರ್ವೇಶ್ವರನಿಂದ ಯೆರೆಮೀಯನಿಗೆ ಈ ವಾಣಿಯಾಯಿತು:
- Verse 2: “ಇದು ಸರ್ವೇಶ್ವರನ ನುಡಿ - ನೊಗವನ್ನೂ ಕಣ್ಣಿಗಳನ್ನೂ ಮಾಡಿ ನಿನ್ನ ಹೆಗಲಿಗೆ ಹಾಕಿಕೊ.
- Verse 3: ಜುದೇಯದ ಅರಸ ಚಿದ್ಕೀಯನನ್ನು ನೋಡಲು ಜೆರುಸಲೇಮಿಗೆ ಬಂದಿರುವ ರಾಯಭಾರಿಗಳ ಮೂಲಕ ಎದೋಮಿನ ರಾಜ, ಮೋವಾಬಿನ ರಾಜ, ಅಮ್ಮೋನ್ಯ ರಾಜ, ಟೈರಿನ ರಾಜ, ಸಿದೋನಿನ ರಾಜ ಇವರುಗಳಿಗೆ ಒಂದು ಸಮಾಚಾರವನ್ನು ಕಳಿಸು.
- Verse 4: ಅವರು ತಮ್ಮ ತಮ್ಮ ರಾಜರುಗಳಿಗೆ ಅದನ್ನು ತಿಳಿಸುವಂತೆ ಆಜ್ಞಾಪಿಸು. ಆ ಸಮಾಚಾರವೇನೆಂದರೆ - ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರನ ಮಾತುಗಳಿವು; ನಿಮ್ಮ ರಾಜರುಗಳು ಅರಿಯಬೇಕಾದ ವಿಷಯವಿದು:
- Verse 5: ನನ್ನ ಮಹಾಶಕ್ತಿಯಿಂದಲೂ ನೀಡುಗೈಯಿಂದಲೂ ಲೋಕವನ್ನೂ ಭೂಮಿಯನ್ನೂ ಅದರ ಮಾನವರನ್ನು ಮತ್ತು ಪ್ರಾಣಿಗಳನ್ನೂ ಸೃಷ್ಟಿಸಿದವನೂ ನಾನೇ. ಈ ನನ್ನ ಸೃಷ್ಟಿಯನ್ನು ನನಗೆ ಸರಿ ತೋಚಿದವನಿಗೆ ಕೊಡಬಲ್ಲೆ.
- Verse 6: ಈಗ ಈ ನಾಡುಗಳನ್ನೆಲ್ಲ ಬಾಬಿಲೋನಿಯದ ಅರಸ ಹಾಗೂ ನನ್ನ ಸೇವಕನಾದ ನೆಬೂಕದ್ನೆಚ್ಚರನ ಕೈವಶಮಾಡಿದ್ದೇನೆ. ಅವನ ಸೇವೆಗಾಗಿ ಕಾಡುಮೃಗಗಳನ್ನೂ ಕೊಟ್ಟಿದ್ದೇನೆ.
- Verse 7: ಅವನ ದೇಶಕ್ಕೆ ನಿಯಮಿತ ಕಾಲ ಬರುವತನಕ ಎಲ್ಲ ರಾಷ್ಟ್ರಗಳು ಅವನಿಗೂ ಅವನ ಮಗನಿಗೂ ಮೊಮ್ಮಗನಿಗೂ ಅಡಿಯಾಳಾಗಿ ಇರಬೇಕು. ಆಮೇಲೆ ಅನೇಕ ರಾಷ್ಟ್ರಗಳೂ ಮಹಾರಾಜರೂ ಅವನನ್ನೇ ಅಡಿಯಾಳನ್ನಾಗಿ ಮಾಡಿಕೊಳ್ಳುವರು.”
- Verse 8: “ಆದರೆ ಯಾವುದಾದರು ರಾಷ್ಟ್ರ ಅಥವಾ ರಾಜ್ಯ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಅಡಿಯಾಳಾಗಲು, ಅದರ ಅರಸನ ನೊಗಕ್ಕೆ ಹೆಗಲುಕೊಡಲು ಒಪ್ಪದೆಹೋದರೆ, ಆ ರಾಷ್ಟ್ರವನ್ನು ನಾನು ಖಡ್ಗ-ಕ್ಷಾಮ-ವ್ಯಾಧಿಗಳಿಂದ ದಂಡಿಸುತ್ತಾ ಬರುವೆನು. ಕೊನೆಗೆ ಆ ಅರಸನ ಕೈಯಿಂದಲೆ ಅದನ್ನು ನಿರ್ಮೂಲಮಾಡಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.
- Verse 9: “ನೀವು ಬಾಬಿಲೋನಿನ ಅರಸನಿಗೆ ಅಡಿಯಾಳುಗಳು ಆಗುವುದಿಲ್ಲ’ ಎಂದು ನಿಮಗೆ ನುಡಿಯುವ ನಿಮ್ಮ ಪ್ರವಾದಿಗಳು ಶಕುನದವರು, ಕನಸಿಗರು, ಕಣಿಯವರು, ಮಾಟಗಾರರು. ಅವರಿಗೆ ಕಿವಿಗೊಡಲೇಬೇಡಿ.
- Verse 10: ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ. ಅವರ ದುರ್ಬೋಧನೆಯ ನಿಮಿತ್ತ ನಾನು ನಿಮ್ಮನ್ನು ಹೊರದೂಡಬೇಕಾಗುವುದು; ನೀವು ದೇಶಭ್ರಷ್ಟರಾಗಿ ನಾಶವಾಗುವಿರಿ.
- Verse 11: ಯಾವ ರಾಷ್ಟ್ರ ಬಾಬಿಲೋನಿಯದ ಅರಸನ ನೊಗಕ್ಕೆ ಹೆಗಲು ಕೊಟ್ಟು ಅವನ ಅಡಿಯಾಳಾಗುವುದೋ ಆ ರಾಷ್ಟ್ರದವರನ್ನು ನಾನು ಅವರ ಸ್ವಂತ ನಾಡಿನಲ್ಲೆ ನೆಲೆಗೊಳಿಸುವೆನು; ಅವರು ಅಲ್ಲೆ ಉತ್ತು, ಬಿತ್ತು ವಾಸಮಾಡುವರು. ಸರ್ವೇಶ್ವರನಾದ ನಾನೇ ಇದನ್ನು ನುಡಿದಿದ್ದೇನೆ.”
- Verse 12: ಜುದೇಯದ ಅರಸನಾದ ಚಿದ್ಕೀಯನಿಗೂ ನಾನು ಅದೇ ಮಾತುಗಳನ್ನು ಹೇಳಿದೆ: “ನೀವು ಬಾಬಿಲೋನಿಯದ ಅರಸನ ನೊಗಕ್ಕೆ ಹೆಗಲು ಕೊಟ್ಟು ಅವನಿಗೂ ಅವನ ಜನರಿಗೂ ಅಡಿಯಾಳಾಗಬೇಕು. ಆಗ ಬದುಕುವಿರಿ.
- Verse 13: ಬಾಬಿಲೋನಿಯದ ಅರಸನ ಅಡಿಯಾಳಾಗಲು ನಿರಾಕರಿಸಿದ ರಾಷ್ಟ್ರವು ಖಡ್ಗಕ್ಷಾಮವ್ಯಾಧಿಗಳಿಂದ ಸಾಯಬೇಕಾಗುವುದೆಂದು ಸರ್ವೇಶ್ವರನೇ ನುಡಿದಿದ್ದಾರೆ. ಅಂಥ ಗತಿ ನಿಮಗೂ ನಿಮ್ಮ ಪ್ರಜೆಗೂ ಏಕೆ ಬರಬೇಕು?
- Verse 14: ‘ನೀವು ಬಾಬಿಲೋನಿಯದ ಅರಸನ ಅಡಿಯಾಳಾಗುವುದಿಲ್ಲ’ ಎಂದು ನಿಮಗೆ ನುಡಿಯುವ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿ; ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ.
- Verse 15: ಅವರನ್ನು ನಾನು ಕಳಿಸಲಿಲ್ಲ; ನನ್ನ ಹೆಸರೆತ್ತಿ ಸುಳ್ಳನ್ನು ಸಾರುತ್ತ ಇದ್ದಾರೆ. ಅವರ ದುರ್ಬೋಧನೆಯ ನಿಮಿತ್ತ ನಾನು ನಿಮ್ಮನ್ನು ಹೊರದೂಡಬೇಕಾಗುವುದು, ನೀವು ನಾಶವಾಗುವಿರಿ, ಎಂದು ಸರ್ವೇಶ್ವರನೇ ನುಡಿದಿದ್ದಾರೆ.”
- Verse 16: ಬಳಿಕ ನಾನು ಯಾಜಕರಿಗೂ ಈ ಜನರೆಲ್ಲರಿಗೂ ಹೀಗೆಂದು ಸಾರಿದೆ: “ಇಗೋ, ಕೇಳಿ ಸರ್ವೇಶ್ವರನ ನುಡಿ: ‘ದೇವಾಲಯದ ಉಪಕರಣಗಳನ್ನು ಬೇಗನೆ ಬಾಬಿಲೋನಿನಿಂದ ಹಿಂದಕ್ಕೆ ತರಲಾಗುವುದು’ ಎಂಬುದಾಗಿ ನಿಮಗೆ ಪ್ರವಾದಿಸುವವರ ಮಾತುಗಳನ್ನು ಕೇಳಬೇಡಿ, ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ.
- Verse 17: ಅವರಿಗೆ ನೀವು ಕಿವಿಗೊಡಲೇಬಾರದು. ಬಾಬಿಲೋನಿಯದ ಅರಸನಿಗೆ ಅಡಿಯಾಳಾಗಿರಿ. ಆಗ ಬದುಕುವಿರಿ. ಈ ನಗರವೇಕೆ ನಾಶವಾಗಬೇಕು?
- Verse 18: ಅವರು ನಿಜವಾದ ಪ್ರವಾದಿಗಳಾಗಿದ್ದರೆ, ಸರ್ವೇಶ್ವರನ ವಾಕ್ಯ ಅವರಲ್ಲಿ ನೆಲೆಸಿದ್ದರೆ, ದೇವಾಲಯದಲ್ಲೂ ಜುದೇಯದ ಅರಸನ ಮನೆಯಲ್ಲೂ ಜೆರುಸಲೇಮಿನಲ್ಲೂ ಇನ್ನು ಉಳಿದಿರುವ ಉಪಕರಣಗಳು ಬಾಬಿಲೋನಿಗೆ ಹೋಗದಂತೆ ಸರ್ವಶಕ್ತ ಸರ್ವೇಶ್ವರನಿಗೆ ವಿಜ್ಞಾಪನೆಮಾಡಿ ಬೇಡಿಕೊಳ್ಳಲಿ.”
- Verse 19: (ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನೂ ಜುದೇಯದ ಅರಸನೂ ಆದ ಯೆಕೊನ್ಯನನ್ನು ಮತ್ತು ಜುದೇಯದ ಹಾಗು ಜೆರುಸಲೇಮಿನ ಎಲ್ಲ ಮಂತ್ರಿಗಳನ್ನು ಜೆರುಸಲೇಮಿನಿಂದ ಬಾಬಿಲೋನಿಗೆ ಸೆರೆ ಒಯ್ದಾಗ ಕೆಲವು ಸಾಮಾನುಗಳನ್ನು, ಅಂದರೆ ಕಂಬಗಳು, ಕಂಚಿನ ಕಡಲು, ಪೀಠಗಳು, ನಗರದಲ್ಲಿ ಉಳಿದಿರುವ ಮತ್ತಿತರ ಉಪಕರಣಗಳು ಇವನ್ನು ತೆಗೆದುಕೊಂಡು ಹೋಗಲಿಲ್ಲ.)
- Verse 20: (ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನೂ ಜುದೇಯದ ಅರಸನೂ ಆದ ಯೆಕೊನ್ಯನನ್ನು ಮತ್ತು ಜುದೇಯದ ಹಾಗು ಜೆರುಸಲೇಮಿನ ಎಲ್ಲ ಮಂತ್ರಿಗಳನ್ನು ಜೆರುಸಲೇಮಿನಿಂದ ಬಾಬಿಲೋನಿಗೆ ಸೆರೆ ಒಯ್ದಾಗ ಕೆಲವು ಸಾಮಾನುಗಳನ್ನು, ಅಂದರೆ ಕಂಬಗಳು, ಕಂಚಿನ ಕಡಲು, ಪೀಠಗಳು, ನಗರದಲ್ಲಿ ಉಳಿದಿರುವ ಮತ್ತಿತರ ಉಪಕರಣಗಳು ಇವನ್ನು ತೆಗೆದುಕೊಂಡು ಹೋಗಲಿಲ್ಲ.)
- Verse 21: ದೇವಾಲಯದಲ್ಲೂ ಜುದೇಯದ ಅರಸನ ಮನೆಯಲ್ಲೂ ಜೆರುಸಲೇಮಿನಲ್ಲೂ ಉಳಿದಿರುವ ಈ ಉಪಕರಣಗಳ ವಿಷಯವಾಗಿ ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಇಂತೆನ್ನುತ್ತಾರೆ:
- Verse 22: “ಅವುಗಳನ್ನು ಬಾಬಿಲೋನಿಗೆ ಒಯ್ಯಲಾಗುವುದು. ನಾನು ಬಿಡಿಸುವ ತನಕ ಅವು ಅಲ್ಲೇ ಇರುವುವು. ಬಳಿಕ ನಾನು ಅವುಗಳನ್ನು ತಂದು ಈ ಸ್ಥಳಕ್ಕೆ ಸೇರಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”