ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಮಾರ್ಕ
6ನೇ ಅಧ್ಯಾಯ
- Verse 1: ಯೇಸುಸ್ವಾಮಿ ಅಲ್ಲಿಂದ ಹೊರಟು ತಮ್ಮ ಸ್ವಂತ ಊರಿಗೆ ಹೋದರು. ಶಿಷ್ಯರು ಅವರನ್ನು ಹಿಂಬಾಲಿಸಿದರು.
- Verse 2: ಸಬ್ಬತ್ದಿನ ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಉಪದೇಶ ಮಾಡತೊಡಗಿದರು. ಕಿಕ್ಕಿರಿದು ನೆರೆದಿದ್ದ ಜನರು ಯೇಸುವಿನ ಬೋಧನೆಯನ್ನು ಕೇಳಿ ಬೆರಗಾದರು. “ಇದೆಲ್ಲಾ ಇವನಿಗೆ ಎಲ್ಲಿಂದ ಬಂದಿತು? ಇವನು ಪಡೆದಿರುವ ಜ್ಞಾನವಾದರೂ ಎಂಥಾದ್ದು? ಇವನಿಂದ ಮಹತ್ಕಾರ್ಯಗಳು ಆಗುವುದಾದರೂ ಹೇಗೆ?
- Verse 3: ಇವನು ಆ ಬಡಗಿಯಲ್ಲವೆ? ಮರಿಯಳ ಮಗನಲ್ಲವೆ? ಯಕೋಬ, ಯೋಸೆ, ಯೂದ ಮತ್ತು ಸಿಮೋನ ಇವರ ಸಹೋದರನಲ್ಲವೆ? ಇವನ ಸಹೋದರಿಯರು ಇಲ್ಲಿಯೇ ವಾಸಮಾಡುತ್ತಿಲ್ಲವೆ?” ಎಂದು ಹೇಳುತ್ತಾ ಯೇಸುವನ್ನು ತಾತ್ಸಾರಮಾಡಿದರು.
- Verse 4: ಆಗ ಯೇಸು, “ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು. ಆದರೆ ಸ್ವಗ್ರಾಮದಲ್ಲಿ, ಸ್ವಜನರಲ್ಲಿ, ಸ್ವಗೃಹದಲ್ಲಿ ಗೌರವ ದೊರಕದು,” ಎಂದರು.
- Verse 5: ಕೆಲವು ರೋಗಿಗಳ ಮೇಲೆ ಕೈಗಳನ್ನಿರಿಸಿ, ಅವರನ್ನು ಗುಣಪಡಿಸಿದ್ದನ್ನು ಬಿಟ್ಟರೆ ಇನ್ನಾವ ಮಹತ್ತಾದ ಕಾರ್ಯಗಳನ್ನೂ ಅವರು ಅಲ್ಲಿ ಮಾಡಲಾಗಲಿಲ್ಲ.
- Verse 6: ಆ ಜನರ ಅವಿಶ್ವಾಸವನ್ನು ಕಂಡು ಯೇಸುವಿಗೆ ಬಹಳ ಅಚ್ಚರಿಯಾಯಿತು.
- Verse 7: ಅನಂತರ ಯೇಸುಸ್ವಾಮಿ ಸುತ್ತಮುತ್ತಲಿನ ಊರುಗಳಿಗೆ ಹೋಗಿ ಜನರಿಗೆ ಪ್ರಬೋಧಿಸಿದರು. ಇದಲ್ಲದೆ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ ದೆವ್ವಬಿಡಿಸುವ ಅಧಿಕಾರವನ್ನಿತ್ತು, ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು.
- Verse 8: ಕಳುಹಿಸುವಾಗ, “ಪ್ರಯಾಣ ದಂಡವೊಂದನ್ನು ಹೊರತು ಇನ್ನೇನನ್ನೂ ತೆಗೆದುಕೊಂಡು ಹೋಗಬೇಡಿ.
- Verse 9: ಬುತ್ತಿ, ಜೋಳಿಗೆ, ಜೇಬಿನಲ್ಲಿ ಹಣ, ಯಾವುದೂ ಬೇಡ. ಪಾದರಕ್ಷೆಯನ್ನು ಮೆಟ್ಟಿಕೊಂಡರೆ ಸಾಕು. ಎರಡು ಅಂಗಿಗಳನ್ನೂ ತೊಟ್ಟುಕೊಳ್ಳಬೇಡಿ,” ಎಂದು ಅಪ್ಪಣೆಮಾಡಿದರು.
- Verse 10: ಇದಲ್ಲದೆ, “ನೀವು ಯಾವುದೇ ಒಂದು ಊರಿಗೆ ಹೋದಾಗ ಆ ಊರನ್ನು ಬಿಡುವವರೆಗೂ ಆತಿಥ್ಯ ನೀಡುವ ಯಾವುದಾದರೂ ಒಂದು ಮನೆಯಲ್ಲೇ ಉಳಿದುಕೊಳ್ಳಿ.
- Verse 11: ಯಾವುದೇ ಊರಿನ ಜನರು ನಿಮ್ಮನ್ನು ಸ್ವಾಗತಿಸದೆಯೂ ನಿಮ್ಮ ಬೋಧನೆಗೆ ಕಿವಿಗೊಡದೆಯೂ ಹೋದರೆ, ಆ ಊರನ್ನು ಬಿಟ್ಟುಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅವರ ವಿರುದ್ಧ ಅದು ಸಾಕ್ಷಿಯಾಗಿರಲಿ,” ಎಂದರು.
- Verse 12: ಶಿಷ್ಯರು ಹೊರಟುಹೋಗಿ, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ,” ಎಂದು ಜನರಿಗೆ ಸಾರಿ ಹೇಳಿದರು.
- Verse 13: ದೆವ್ವಹಿಡಿದಿದ್ದ ಅನೇಕರಿಂದ ದೆವ್ವಗಳನ್ನು ಹೊರಗಟ್ಟಿದರು. ತೈಲಲೇಪನಮಾಡಿ ಅನೇಕ ರೋಗಿಗಳನ್ನು ಗುಣಪಡಿಸಿದರು.
- Verse 14: ಇಷ್ಟರಲ್ಲಿ ಯೇಸುಸ್ವಾಮಿಯ ಹೆಸರು ಮನೆಮಾತಾಯಿತು. ಅದು ಹೆರೋದ ಅರಸನ ಕಿವಿಗೂ ಬಿತ್ತು. ಯೇಸುವಿನ ವಿಚಾರವಾಗಿ ಕೆಲವರು, “ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದುದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,” ಎನ್ನುತ್ತಿದ್ದರು.
- Verse 15: ಇನ್ನು ಕೆಲವರು, ‘ಈತನೇ ಎಲೀಯನು’ ಎಂದೂ ಮತ್ತೆ ಕೆಲವರು, “ಪ್ರಾಚೀನ ಪ್ರವಾದಿಗಳಂತೆ ಈತನೂ ಒಬ್ಬ ಪ್ರವಾದಿ,” ಎಂದೂ ಹೇಳುತ್ತಿದ್ದರು.
- Verse 16: ಇದನ್ನೆಲ್ಲಾ ಕೇಳಿದ ಹೆರೋದನು, “ಹೌದು, ನಾನು ಶಿರಚ್ಛೇದನಮಾಡಿದ ಯೊವಾನ್ನನೇ ಮರಳಿ ಜೀವಂತನಾಗಿ ಬಂದಿದ್ದಾನೆ,” ಎಂದನು.
- Verse 17: ಹೆರೋದನು ತಾನು ಇಟ್ಟುಕೊಂಡಿದ್ದ ಹೆರೋದಿಯಳ ನಿಮಿತ್ತ ಯೊವಾನ್ನನನ್ನು ಸೆರೆಹಿಡಿಸಿ ಬಂಧನದಲ್ಲಿರಿಸಿದ್ದನು. ಹೆರೋದಿಯಳು ಹೆರೋದನ ಸಹೋದರ ಫಿಲಿಪ್ಪನ ಧರ್ಮಪತ್ನಿ. ಆದರೂ ಹೆರೋದನು ಆಕೆಯನ್ನು ಹೆಂಡತಿಯಾಗಿ ಇಟ್ಟುಕೊಂಡಿದ್ದನು.
- Verse 18: ಈ ಕಾರಣ ಯೊವಾನ್ನನು, “ನಿನ್ನ ಸಹೋದರನ ಪತ್ನಿಯನ್ನು ನೀನು ಇಟ್ಟುಕೊಂಡಿರುವುದು ನ್ಯಾಯವಲ್ಲ,” ಎಂದು ಪದೇಪದೇ ಅವನನ್ನು ಎಚ್ಚರಿಸುತ್ತಿದ್ದನು.
- Verse 19: ಇದರ ನಿಮಿತ್ತ ಹೆರೋದಿಯಳು ಯೊವಾನ್ನನ ಮೇಲೆ ಹಗೆಯಿಟ್ಟು ಆತನನ್ನು ಕೊಲ್ಲಿಸಬೇಕು ಎಂದಿದ್ದಳು. ಆದರೆ ತನ್ನ ಸೇಡನ್ನು ತೀರಿಸಿಕೊಳ್ಳಲು ಅವಳಿಂದಾಗಿರಲಿಲ್ಲ.
- Verse 20: ಏಕೆಂದರೆ, ಯೊವಾನ್ನನು ಸಂತನು ಹಾಗೂ ಸತ್ಪುರುಷನು ಎಂದು ಹೆರೋದನು ಅರಿತು, ಆತನಿಗೆ ಭಯಪಟ್ಟು ಯಾವ ಅಪಾಯವೂ ಆತನಿಗೆ ಬಾರದಂತೆ ನೋಡಿಕೊಳ್ಳುತ್ತಿದ್ದನು. ಯೊವಾನ್ನನು ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗಲೆಲ್ಲಾ ಹೆರೋದನ ಮನಸ್ಸು ಅಲ್ಲೋಲಕಲ್ಲೋಲವಾಗುತ್ತಿತ್ತು. ಆದರೂ ಆತನ ಮಾತುಗಳನು ಕಿವಿಗೊಟ್ಟು ಕೇಳುತ್ತಿದ್ದನು.
- Verse 21: ಕಡೆಗೊಮ್ಮೆ, ಹೆರೋದಿಯಳಿಗೆ ಅನುಕೂಲವಾದ ಸಂದರ್ಭ ಒದಗಿತು. ಹೆರೋದನು ತನ್ನ ಹುಟ್ಟುಹಬ್ಬದ ದಿನಾಚರಣೆಯಂದು, ಆಸ್ಥಾನಿಕರಿಗೂ ಸೇನಾಧಿಪತಿಗಳಿಗೂ ಗಲಿಲೇಯ ಪ್ರಾಂತ್ಯದ ಪ್ರಮುಖರಿಗೂ ಔತಣಕೂಟವನ್ನು ಏರ್ಪಡಿಸಿದನು.
- Verse 22: ಆ ಸಮಾರಂಭದಲ್ಲಿ ಹೆರೋದಿಯಳ ಮಗಳು ಔತಣ ಶಾಲೆಗೆ ಬಂದು ನರ್ತನಮಾಡಿದಳು. ಹೆರೋದನೂ ಅವನ ಜೊತೆಯಲ್ಲಿ ಭೋಜನಕ್ಕೆ ಕುಳಿತಿದ್ದ ಅತಿಥಿಗಳೂ ಅದನ್ನು ಬಹಳವಾಗಿ ಮೆಚ್ಚಿಕೊಂಡರು.
- Verse 23: ಆಗ ಅರಸ ಹೆರೋದನು ಅವಳಿಗೆ, “ನಿನಗೆ ಏನುಬೇಕಾದರೂ ಕೇಳು, ಕೊಡುತ್ತೇನೆ” ಎಂದನು. “ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಅದನ್ನು ನಿನಗೆ ಕೊಡುತ್ತೇನೆ,” ಎಂದು ಪ್ರಮಾಣ ಮಾಡಿದನು.
- Verse 24: ಅವಳು ತನ್ನ ತಾಯಿಯ ಬಳಿಗೆ ಹೋಗಿ, “ಅಮ್ಮಾ, ನಾನು ಏನನ್ನು ಕೇಳಿಕೊಳ್ಳಲಿ?” ಎಂದು ವಿಚಾರಿಸಿದಳು. “ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು,” ಎಂದು ಆಕೆ ಮಗಳನ್ನು ಪ್ರೇರೇಪಿಸಿದಳು.
- Verse 25: ಕೂಡಲೆ ಅವಳು ಅರಸನ ಬಳಿಗೆ ಧಾವಿಸಿ, “ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೇ ಒಂದು ತಟ್ಟೆಯಲ್ಲಿ ತರಿಸಿಕೊಡಿ; ಇದೇ ನನ್ನ ಬೇಡಿಕೆ,” ಎಂದು ಕೇಳಿಕೊಂಡಳು.
- Verse 26: ಅರಸನಿಗೆ ಅತೀವ ದುಃಖವಾಯಿತು. ಆದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ.
- Verse 27: ಆದುದರಿಂದ ಅವನು ಒಬ್ಬ ಪಹರೆಯವನನ್ನು ಕರೆದು, ಕೂಡಲೇ ಯೊವಾನ್ನನ ತಲೆಯನ್ನು ತರಬೇಕೆಂದು ಅವನಿಗೆ ಆಜ್ಞೆಮಾಡಿ ಕಳುಹಿಸಿದನು.
- Verse 28: ಪಹರೆಯವನು ಸೆರೆಮನೆಗೆ ಹೋಗಿ ಯೊವಾನ್ನನ ತಲೆಯನ್ನು ಕತ್ತರಿಸಿ, ಅದನ್ನು ತಟ್ಟೆಯಲ್ಲಿ ಇಟ್ಟು ಹುಡುಗಿಗೆತಂದುಕೊಟ್ಟನು. ಅವಳು ಅದನ್ನು ತನ್ನ ತಾಯಿಗೆ ಕೊಟ್ಟಳು.
- Verse 29: ಇದನ್ನು ಕೇಳಿದ ಯೊವಾನ್ನನ ಶಿಷ್ಯರು ಅಲ್ಲಿಗೆ ಬಂದು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿಮಾಡಿದರು.
- Verse 30: ಪ್ರೇಷಿತರು ಯೇಸುಸ್ವಾಮಿಯ ಬಳಿಗೆ ಹಿಂದಿರುಗಿ ಬಂದು ತಾವು ಮಾಡಿದ ಸಕಲ ಕಾರ್ಯಕಲಾಪಗಳ ಹಾಗು ನೀಡಿದ ಬೋಧನೆಯ ವರದಿಯನ್ನು ಒಪ್ಪಿಸಿದರು.
- Verse 31: ಜನರು ಗುಂಪು ಗುಂಪಾಗಿ ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಯೇಸುವಿಗೆ ಮತ್ತು ಅವರ ಶಿಷ್ಯರಿಗೆ ಊಟಮಾಡಲೂ ಬಿಡುವಿರಲಿಲ್ಲ.
- Verse 32: ಆದುದರಿಂದ ಯೇಸು, “ಬನ್ನಿ, ಪ್ರತ್ಯೇಕವಾಗಿ ನಾವು ನಿರ್ಜನಪ್ರದೇಶಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಂಡು ಬರೋಣ,” ಎಂದರು. ಅಂತೆಯೇ ಅವರೆಲ್ಲರೂ ಪ್ರತ್ಯೇಕವಾಗಿ ದೋಣಿಯನ್ನು ಹತ್ತಿ ಏಕಾಂತ ಪ್ರದೇಶಕ್ಕೆ ಹೊರಟರು.
- Verse 33: ಆದರೆ ಅವರು ಹೋಗುತ್ತಿರುವುದನ್ನು ಕಂಡು ಗುರುತಿಸಿದ ಅನೇಕರು ಎಲ್ಲಾ ಊರುಗಳಿಂದ ಕಾಲ್ದಾರಿಯಲ್ಲಿ ತ್ವರಿತವಾಗಿ ಸಾಗಿ ಅವರಿಗೆ ಮುಂಚಿತವಾಗಿಯೇ ಆ ಸ್ಥಳವನ್ನು ಸೇರಿದರು.
- Verse 34: ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು.
- Verse 35: ಅಷ್ಟರಲ್ಲಿ ಸಂಜೆಯಾಗುತ್ತಾ ಬಂದಿತು. ಶಿಷ್ಯರು ಯೇಸುವಿನ ಬಳಿಗೆ ಬಂದು,
- Verse 36: “ಈಗಾಗಲೇ ಹೊತ್ತು ಮೀರಿಹೋಯಿತು; ಇದು ನಿರ್ಜನಪ್ರದೇಶ; ಇನ್ನು ಜನರನ್ನು ಕಳುಹಿಸಿಬಿಡಿ. ಅವರು ಸಮೀಪದ ಊರುಕೇರಿಗಳಿಗೆ ಹೋಗಿ ಊಟಕ್ಕೇ ಏನಾದರೂ ಕೊಂಡುಕೊಳ್ಳಲಿ,” ಎಂದರು.
- Verse 37: ಆಗ ಯೇಸು, “ನೀವೇ ಅವರಿಗೆ ಊಟಕ್ಕೇನಾದರೂ ಕೊಡಿ,” ಎಂದರು. ಅದಕ್ಕೆ ಶಿಷ್ಯರು, “ನಾವು ಹೋಗಿ ಇನ್ನೂರು ದೆನಾರಿ ನಾಣ್ಯಗಳ ಬೆಲೆಯಷ್ಟು ರೊಟ್ಟಿಯನ್ನು ಕೊಂಡುತಂದು ಅವರಿಗೆ ಊಟಕ್ಕೆ ಬಡಿಸೋಣವೇನು?” ಎಂದರು.
- Verse 38: ಯೇಸು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿಕೊಂಡು ಬನ್ನಿ,” ಎಂದರು. ಅವರು ವಿಚಾರಿಸಿಕೊಂಡು ಬಂದು, “ನಮ್ಮಲ್ಲಿ ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ,” ಎಂದು ತಿಳಿಸಿದರು.
- Verse 39: ಎಲ್ಲರು ಪಂಕ್ತಿಪಂಕ್ತಿಯಾಗಿ ಹಸಿರು ಹುಲ್ಲಿನ ಮೇಲೆ ಊಟಕ್ಕೆ ಕುಳಿತುಕೊಳ್ಳಬೇಕೆಂದು ಯೇಸು ಅಪ್ಪಣೆಮಾಡಿದರು.
- Verse 40: ಅವರು ಐವತ್ತರಂತೆಯೂ ನೂರರಂತೆಯೂ ಪಂಕ್ತಿಯಲ್ಲಿ ಕುಳಿತರು.
- Verse 41: ಯೇಸು ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ಆ ರೊಟ್ಟಿಗಳನ್ನು ಮುರಿದು ಜನರಿಗೆ ಬಡಿಸುವಂತೆ ಅವನ್ನು ಶಿಷ್ಯರಿಗೆ ಕೊಟ್ಟರು. ಅಂತೆಯೇ ಎರಡು ಮೀನುಗಳನ್ನು ಜನರೆಲ್ಲರಿಗೆ ಹಂಚುವಂತೆ ಮಾಡಿದರು.
- Verse 42: ಎಲ್ಲರೂ ಹೊಟ್ಟೆತುಂಬಾ ತಿಂದು ತೃಪ್ತರಾದರು.
- Verse 43: ಇನ್ನೂ ಉಳಿದಿದ್ದ ರೊಟ್ಟಿ ಮತ್ತು ಮೀನಿನ ತುಂಡುಗಳನ್ನು ಒಟ್ಟುಗೂಡಿಸಿದಾಗ, ಅವು ಹನ್ನೆರಡು ಬುಟ್ಟಿ ತುಂಬ ಆದವು.
- Verse 44: ಊಟಮಾಡಿದವರಲ್ಲಿ ಗಂಡಸರ ಸಂಖ್ಯೆಯೇ ಐದು ಸಾವಿರ.
- Verse 45: ಇದಾದ ಮೇಲೆ ಯೇಸುಸ್ವಾಮಿ, ತಾವು ಜನರ ಗುಂಪನ್ನು ಕಳುಹಿಸಿಬಿಡುವಷ್ಟರಲ್ಲಿ ಶಿಷ್ಯರು ದೋಣಿ ಹತ್ತಿ ತಮಗಿಂತ ಮುಂದಾಗಿ ಸರೋವರದ ಆ ಕಡೆಗಿದ್ದ ಬೆತ್ಸಾಯಿದಕ್ಕೆ ಹೋಗುವಂತೆ ಆಜ್ಞಾಪಿಸಿದರು.
- Verse 46: ಜನರನ್ನು ಬೀಳ್ಕೊಟ್ಟ ಬಳಿಕ ಯೇಸು ಪ್ರಾರ್ಥನೆಮಾಡಲು ಬೆಟ್ಟಕ್ಕೆ ಹೋದರು.
- Verse 47: ಕತ್ತಲೆ ಕವಿದಾಗ ದೋಣಿಯು ಸರೋವರದ ಮಧ್ಯೆ ಸಾಗಿತ್ತು. ಇತ್ತ ಯೇಸು ಒಬ್ಬರೇ ದಡದಲ್ಲಿದ್ದರು.
- Verse 48: ಎದುರುಗಾಳಿ ಬೀಸುತ್ತಿದ್ದುದರಿಂದ ಶಿಷ್ಯರು ಹುಟ್ಟುಹಾಕಿ ದಣಿದುಹೋಗಿದ್ದರು. ಇದನ್ನು ಕಂಡ ಯೇಸು ಸರೋವರದ ನೀರಿನ ಮೇಲೆ ನಡೆದುಕೊಂಡು ಅವರ ಕಡೆಗೆ ಬಂದು, ಅವರನ್ನು ದಾಟಿ ಮುಂದೆ ಹೋಗುವುದರಲ್ಲಿದ್ದರು.
- Verse 49: ಆಗ ಸುಮಾರು ರಾತ್ರಿಯ ಕಡೇ ಜಾವದ ಸಮಯ. ಸರೋವರದ ಮೇಲೆ ನಡೆದು ಬರುತ್ತಿದ್ದ ಯೇಸುವನ್ನು ಶಿಷ್ಯರು ನೋಡಿದರು; ಭೂತವೆಂದು ಭಾವಿಸಿ ಭಯದಿಂದ ಚೀರಿದರು. ಅವರೆಲ್ಲರೂ ಯೇಸುವನ್ನು ನೋಡಿ ದಿಗಿಲುಗೊಂಡಿದ್ದರು.
- Verse 50: ತಕ್ಷಣವೇ ಯೇಸು ಅವರೊಡನೆ ಮಾತನಾಡುತ್ತಾ, “ಭಯಪಡಬೇಡಿ, ಬೇರೆ ಯಾರೂ ಅಲ್ಲ, ನಾನೇ; ಧೈರ್ಯದಿಂದಿರಿ,” ಎಂದು ಅವರೊಡನೆ ಮಾತಾಡಿ ದೋಣಿಯನ್ನು ಹತ್ತಿದರು.
- Verse 51: ಆಗ ಎದುರುಗಾಳಿ ನಿಂತುಹೋಯಿತು. ಶಿಷ್ಯರು ಬೆಕ್ಕಸಬೆರಗಾದರು. ಅವರ ಬುದ್ಧಿ ಮಂದವಾಗಿತ್ತು.
- Verse 52: ರೊಟ್ಟಿಗಳ ಅದ್ಭುತವನ್ನು ಅವರು ಇನ್ನೂ ಗ್ರಹಿಸಿಕೊಂಡಿರಲಿಲ್ಲ.
- Verse 53: ಅವರೆಲ್ಲರು ಸರೋವರವನ್ನು ದಾಟಿ ಗೆನಸರೇತ್ ಊರಿನ ದಡ ಸೇರಿದರು.
- Verse 54: ಅವರು ದೋಣಿಯನ್ನು ಕಟ್ಟಿ, ಅದರಿಂದ ಇಳಿದ ಕೂಡಲೇ ಅಲ್ಲಿಯ ಜನರು ಯೇಸುಸ್ವಾಮಿಯ ಗುರುತು ಹಚ್ಚಿದರು. ಒಡನೆ ಸುತ್ತಮುತ್ತಲೆಲ್ಲಾ ಓಡಾಡಿ, ರೋಗಿಗಳನ್ನು ಹಾಸಿಗೆಗಳ ಸಹಿತ ಹೊತ್ತುಕೊಂಡು, ಯೇಸು ಎಲ್ಲೆಲ್ಲಿ ಇದ್ದಾರೆಂದು ಕೇಳಿದರೋ ಅಲ್ಲೆಲ್ಲಾ ಹೋಗತೊಡಗಿದರು.
- Verse 55: ಯೇಸು ಹಳ್ಳಿಗಳಿಗಾಗಲಿ, ಪಟ್ಟಣಪಾಳೆಯಗಳಿಗಾಗಲಿ ಹೋದಾಗಲೆಲ್ಲಾ ಜನರು ರೋಗಿಗಳನ್ನು ಅಲ್ಲಿಯ ಸಂತೆಬೀದಿ ಚೌಕಗಳಿಗೆ ಕರೆತರುತ್ತಿದ್ದರು.
- Verse 56: ಅವರ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಯೇಸುವನ್ನು ಬೇಡಿಕೊಳ್ಳುತ್ತಿದ್ದರು. ಹಾಗೆ ಮುಟ್ಟಿದವರೆಲ್ಲರೂ ಗುಣಹೊಂದುತ್ತಿದ್ದರು.