ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಆದಿಕಾಂಡ
49ನೇ ಅಧ್ಯಾಯ
- Verse 1: ಯಕೋಬನು ತನ್ನ ಮಕ್ಕಳನ್ನು ಕರೆಯಿಸಿ ಇಂತೆಂದನು: ಕೂಡಿಬನ್ನಿ ನೀವೆಲ್ಲರು, ನುಡಿವೆನು ನಿಮಗೆ ಮುಂದೆ ಸಂಭವಿಸುವುದನ್ನು;
- Verse 2: ಯಕೋಬನ ಮಕ್ಕಳೇ, ಕೂಡಿಬಂದು ಕೇಳಿ ನೀವೆಲ್ಲರು ಆಲಿಸಿ ನಿಮ್ಮ ತಂದೆ ಇಸ್ರಯೇಲನ ಮಾತನ್ನು:
- Verse 3: ರೂಬೇನನೇ, ನೀನೆನ್ನ ಜೇಷ್ಠಪುತ್ರನು ನನ್ನ ಚೈತನ್ಯಸ್ವರೂಪನು, ನನ್ನ ವೀರ್ಯದ ಪ್ರಥಮ ಫಲ ನೀನು ಹಿರಿಮೆಯಲು, ಒಲುಮೆಯಲು ಪ್ರಮುಖನೆನಿಸಿಕೊಳ್ಳುವವನು.
- Verse 4: ಆದರೆ ದಡಮೀರಿದ ಪ್ರವಾಹ ನೀನು ಹತ್ತಿದೆ, ಹೊಲೆಮಾಡಿದೆ, ತಂದೆಯ ಹಾಸಿಗೆಯನು ಪ್ರಮುಖಸ್ಥಾನದಲ್ಲಿರೆ ನನ್ನ ಮಂಚವನ್ನೇರಿದೆ ನೀನು.
- Verse 5: ಅಣ್ಣತಮ್ಮಂದಿರು ಸಿಮೆಯೋನ್ - ಲೇವಿಯರು ಅವರ ಕತ್ತಿಗಳು ಹಿಂಸಾತ್ಮಕ ಆಯುಧಗಳು.
- Verse 6: ನನ್ನ ಮನವೇ, ಒಳಗಾಗಬೇಡ ಅವರ ದುರಾಲೋಚನೆಗೆ ನನ್ನ ಪ್ರಾಣವೇ, ಸೇರಬೇಡ ನೀನವರ ಗುಂಪಿಗೆ ಕೊಂದರವರು ನರರನು ಕೋಪೋದ್ರೇಕದಿಂದ ಊನಪಡಿಸಿದರು ಎತ್ತುಗಳನ್ನು ಮದದಿಂದ.
- Verse 7: ಅವರ ಕೋಪ ಭೀಕರ, ಅದಕ್ಕಿರಲಿ ಧಿಕ್ಕಾರ! ಅವರ ರೌದ್ರ - ಕ್ರೂರ, ಅದಕ್ಕಿರಲಿ ಧಿಕ್ಕಾರ! ವಿಭಾಗಿಸುವೆನವರನು ಯಕೋಬ ಕುಲದಲಿ ಚದರಿಸುವೆನವರನು ಇಸ್ರಯೇಲರಲಿ.
- Verse 8: ಯೆಹೂದನೇ, ವಂದಿಸುವರು ನಿನ್ನನು ಸಹೋದರರು ನಿನ್ನ ಕೈಯಲ್ಲಿರುವುದು ಶತ್ರುಗಳ ಕುತ್ತಿಗೆಯು ಎರಗುವರು ನಿನಗೆ ನಿನ್ನ ಅಣ್ಣತಮ್ಮಂದಿರು.
- Verse 9: ನನ್ನ ಪುತ್ರ ಯೆಹೂದ, ನೀ ಪ್ರಾಯದ ಸಿಂಹದಂತೆ ಬೇಟೆಹಿಡಿದು ಬೆಟ್ಟ ಏರಿದ ಕಂಠೀರವನಂತೆ ಕಾಲು ಮಡಿಚಿ ಹೊಂಚು ಕೂತ ಕೇಸರಿಯಂತೆ ಈ ಸಿಂಹಿಣಿಯನ್ನು ಕೆಣಕುವ ಕೆಚ್ಚು ಯಾರಿಗಿದೆ?
- Verse 10: ರಾಜ್ಯಾಧಿಕಾರ ಪಡೆದವನು ಬರುವ ತನಕ ರಾಷ್ಟ್ರಗಳು ಆತನಿಗೆ ತಲೆಬಾಗುವ ತನಕ ತಪ್ಪದು ರಾಜದಂಡ ಯೆಹೂದನ ಕೈಯಿಂದ ಕದಲದು ಮುದ್ರೆಕೋಲು ಅವನ ವಂಶದಿಂದ.
- Verse 11: ಕಟ್ಟುವನು ತನ್ನ ವಾಹನಪಶುವನು ದ್ರಾಕ್ಷಾಲತೆಗೆ ಬಿಗಿಯುವನು ತನ್ನ ಹೇಸರಕತ್ತೆಯನು ರಾಜದ್ರಾಕ್ಷೆಗೆ ಒಗೆಯುವನು ತನ್ನ ಬಟ್ಟೆಯನು ದ್ರಾಕ್ಷಾರಸದಲಿ ತೊಳೆವನು ಮೇಲಂಗಿಯನು ಆ ರಕ್ತಗೆಂಪು ರಸದಲಿ.
- Verse 12: ಅವನ ಕಣ್ಣು ಕೆಂಪಾಗಿರುವುವು ದ್ರಾಕ್ಷಾರಸದ ಸಮೃದ್ಧಿಯಿಂದ ಅವನ ಹಲ್ಲು ಬೆಳ್ಳಗಿರುವುವು ಹಾಲಿನ ಸಮೃದ್ಧಿಯಿಂದ.
- Verse 13: ಜೆಬುಲೂನನು ವಾಸಿಸುವನು ಸಮುದ್ರದ ಕರಾವಳಿಯಲ್ಲಿ ಹಡಗುಗಳು ಬಂದು ಹೋಗುವ ರೇವಂತೆ ಇರುವನಲ್ಲಿ ಸಿದೋನಿನ ತನಕ ಹರಡಿರುವುದು ಅವನ ಪ್ರಾಂತ್ಯದ ಗಡಿ.
- Verse 14: ಇಸ್ಸಾಕಾರನು ಕುರಿಹಟ್ಟಿಗಳ ನಡುವೆ ಮಲಗಿರುವ ದೊಡ್ಡ ಕತ್ತೆ.
- Verse 15: ಸೂಕ್ತವೆಂದುಕೊಂಡು ತನ್ನ ನಾಡು ವಿಶ್ರಾಂತಿಗೆ, ಸುಖಾನುಭವಕೆ ಬಗ್ಗಿಸುವನು ಬೆನ್ನನು ಹೊರೆ ಹೊರುವುದಕ್ಕೆ, ಬಿಟ್ಟಿಯ ಕೆಲಸಕ್ಕೆ.
- Verse 16: ದಾನನು ತನ್ನ ಜನರನ್ನಾಳುವನು ಇಸ್ರಯೇಲಿನಿತರ ಕುಲಗಳಂತೆ.
- Verse 17: ಇರುವನವನು ದಾರಿಯಲ್ಲಿರುವ ವಿಷಸರ್ಪದಂತೆ, ಕುದುರೆಯ ಹಿಮ್ಮಡಿಕಚ್ಚಿ ರಾಹುತನನು ಕೆಡವುವ ಹಾವಿನಂತೆ.
- Verse 18: ಸರ್ವೇಶ್ವರಾ, ಎದುರುನೋಡುತ್ತಿರುವೆನು ನಿನ್ನಿಂದ ಬರುವಾ ಸಂರಕ್ಷಣೆಯನು.
- Verse 19: ಗಾದನು ಗುರಿಯಾಗುವನು ಸುಲಿಗೆಗಾರರಾಕ್ರಮಣಕೆ ಓಡುವನಾ ದರೋಡೆಗಾರರನ್ನು ಹಿಮ್ಮೆಟ್ಟಿಕೊಂಡೇ.
- Verse 20: ಆಶೇರನಗಿರುವುದು ಸಮೃದ್ಧಿಯಾಗಿ ಧಾನ್ಯ ದೊರಕುವುದವನಲಿ ರಾಜನಿಗೂ ತಕ್ಕ ಭಕ್ಷ್ಯ.
- Verse 21: ನಫ್ತಾಲಿ ಸ್ವಚ್ಛಂದ ಜಿಂಕೆಮರಿಯಂತೆ ಸಿಗುವುದವನಲಿ ಸುಮಧುರವಾದ ಮಾತುಕತೆ.
- Verse 22: ಜೋಸೆಫನು ಫಲಭರಿತ ವೃಕ್ಷದಂತೆ ಒರತೆ ಬಳಿಯಲೆ ಬೆಳೆದ ದ್ರಾಕ್ಷಿಯಂತೆ ಚಾಚಿದೆ ಅದರ ರೆಂಬೆ ಬೇಲಿಯಿಂದಾಚೆ.
- Verse 23: ಬಿಲ್ಲುಗಾರರೆಸಗಿದರು ಅವನ ಮೇಲೆ ಆಕ್ರಮಣ ಸುತ್ತುವರೆದರವನನು ಎಸೆದು ಬಿರುಸುಬಾಣ.
- Verse 24: ಆದರೂ ಯಕೋಬಕುಲದ ಸರ್ವ ಬಲಾಢ್ಯನ ಶಕ್ತಿಯಿಂದ ಇಸ್ರಯೇಲನ ಪೊರೆಬಂಡೆ - ಪರಿಪಾಲಕನ ನಾಮದಿಂದ ನಿಂತಿತು ಸ್ಥಿರವಾಗಿ ಅವನ ಬಿಲ್ಲು ಚುರುಕುಗೊಂಡಿತು ಅವನ ಕೈಗಳ ಬಲ್ಬು.
- Verse 25: ಹೀಗಾಯಿತು ನಿನ್ನ ತ0ದೆಯ ದೇವರಿ0ದ ಸಿಗಲಿ ನಿನಗಾತನ ಸಹಾಯ ಹೀಗಾಯಿತು ಸರ್ವವಲ್ಲಭ ದೇವರಿ0ದ. ದೊರಕಲಿ ನಿನಗಾತನ ಆಶೀರ್ವಾದ. ಮೇಲಣ ಆಕಾಶದಿ0ದ, ಕೆಳಗಣ ಸಾಗರ ಸೆಲೆಗಳಿ0ದ ಸ್ತನ್ಯದಿ0ದ, ಗರ್ಭದಿ0ದ, ಆತ ನೀಡುವ ವರದಾನ.
- Verse 26: ಪ್ರಾಚೀನ ಪರ್ವತಗಳಿಗಿ0ತ, ಚಿರಸ್ಥಾಯಿ ಗುಡ್ಡಗಳಿಗಿಂತ ಉತ್ತಮೋತ್ತಮ ನಿನ್ನ ತಂದೆಯಿಂದ ಬರುವ ಆಶೀರ್ವಾದ. ಇಳಿದು ಬರಲೀ ವರದಾನಗಳು ಜೋಸೆಫನ ಮೇಲೆ ಸೋದರರಿಂದ ಬೇರ್ಪಟ್ಟವನ ಶಿರಸ್ಸಿನ ಮೇಲೆ.
- Verse 27: ಕಿತ್ತು ತಿನ್ನುವ ತೋಳ ಬೆನ್ಯಾಮೀನನು ಬೆಳಿಗ್ಗೆ ತಿನ್ನುವನು ಹಿಡಿದುಕೊಂಡದುದನು ಸಂಜೆ ಹಂಚಿಕೊಳ್ಳುವನು ಕೊಳ್ಳೆಹೊಡೆದುದನು.
- Verse 28: ಇವೇ ಇಸ್ರಯೇಲಿನ ಹನ್ನೆರಡು ಕುಲಗೋತ್ರಗಳು; ಇದೇ ಅವರ ತಂದೆ ಕೊಟ್ಟ ಆಶೀರ್ವಾದ: ಒಂದೊಂದು ಕುಲಕ್ಕೆ ಅವನು ನುಡಿದ ಒಂದೊಂದು ಆಶೀರ್ವಚನ.
- Verse 29: ಯಕೋಬನು ತನ್ನ ಮಕ್ಕಳಿಗೆ ಕೊಟ್ಟ ಆಜ್ಞೆ ಇದು: “ನಾನು ನನ್ನ ದಿವಂಗತ ಪೂರ್ವಜರನ್ನು ಸೇರುವ ಕಾಲ ಸಮೀಪಿಸಿತು. ಹಿತ್ತಿಯನಾದ ಎಫ್ರೋನನ ಭೂಮಿಯಲ್ಲಿರುವ ಗವಿಯೊಳಗೆ, ಪಿತೃಗಳ ಬಳಿಯಲ್ಲಿ ನನ್ನನ್ನು ಸಮಾಧಿಮಾಡಬೇಕು.
- Verse 30: ಆ ಗವಿ ಕಾನಾನ್ ನಾಡಿನ ಮಮ್ರೆಗೆದುರಾಗಿರುವ ಮಕ್ಪೇಲ ಎಂಬ ಬಯಲಿನಲ್ಲಿದೆ. ಅದನ್ನು ಅಬ್ರಹಾಮನು ಅದರ ಸುತ್ತಲಿರುವ ಭೂಮಿಸಹಿತ ಹಿತ್ತಿಯನಾದ ಎಫ್ರೋನನಿಂದ ಸ್ವಂತ ಸ್ಮಶಾನ ಭೂಮಿಗಾಗಿ ಕೊಂಡುಕೊಂಡನು.
- Verse 31: ಅಲ್ಲೇ ಅಬ್ರಹಾಮನಿಗೂ ಅವನ ಪತ್ನಿ ಸಾರಳಿಗೂ ಸಮಾಧಿಯಾಯಿತು. ಅಲ್ಲೇ ಇಸಾಕನಿಗೂ ಅವನ ಮಡದಿ ರೆಬೆಕ್ಕಳಿಗೂ ಸಮಾಧಿ ಆಯಿತು. ಲೇಯಳನ್ನೂ ನಾನು ಅಲ್ಲಿ ಸಮಾಧಿಮಾಡಿದ್ದೇನೆ.
- Verse 32: ಹೊಲದ ಸಮೇತ ಹಿತ್ತಿಯರಿಂದ ಕ್ರಯಕ್ಕೆ ಕೊಂಡುಕೊಂಡ ಆ ಗವಿಯೊಳಗೆ ನನಗೂ ಸಮಾಧಿಯಾಗಲಿ,” ಎಂದನು.
- Verse 33: ಮಕ್ಕಳಿಗೆ ಈ ಆಜ್ಞೆಯನ್ನು ಕೊಟ್ಟು ಮುಗಿಸಿದ ನಂತರ ಯಕೋಬನು ಹಾಸಿಗೆಯಲ್ಲಿ ತನ್ನ ಕಾಲುಗಳನ್ನು ಮಡಚಿಕೊಂಡು ಪ್ರಾಣಬಿಟ್ಟು, ಮೃತರಾದ ಪಿತೃಗಳ ಬಳಿಗೆ ಸೇರಿದನು.